-->
ಜೀವನ ಸಂಭ್ರಮ : ಸಂಚಿಕೆ - 137

ಜೀವನ ಸಂಭ್ರಮ : ಸಂಚಿಕೆ - 137

ಜೀವನ ಸಂಭ್ರಮ : ಸಂಚಿಕೆ - 137
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 

                   

ಮಕ್ಕಳೇ ಇಂದು ನಾವು ಯವಕ್ರೀತನ ಬಗ್ಗೆ ತಿಳಿದುಕೊಳ್ಳೋಣ. ಈ ಕಥೆಯನ್ನು ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರು ಒಂದು ಪ್ರವಚನದಲ್ಲಿ ಹೇಳಿದ ಪುರಾತನ ಕಥೆ.

ಪುರಾಣ ಕಾಲದಲ್ಲಿ ಭಾರದ್ವಾಜ ಎಂಬ ಋಷಿಯಿದ್ದನು. ಈತನ ಮಗನೇ ಯವಕ್ರೀತ. ಭಾರದ್ವಾಜ ಅಂತರ್ಮುಖಿ ಯಾದುದರಿಂದ ತನ್ನ ಮಗನ ಕಡೆ ಗಮನ ಹರಿಸಲಿಲ್ಲ. ಯವಕ್ರೀತನಿಗೆ ವಯಸ್ಸು ಹದಿನೆಂಟು ಸುಂದರನಾಗಿದ್ದನು. ಸದೃಢ ದೇಹ ಇತ್ತು. ತಂದೆ ಗಮನ ಹರಿಸದೆ ಇದ್ದುದ್ದರಿಂದ, ಈತ ದೇಹ, ಬುದ್ಧಿ ಮತ್ತು ಮನಸ್ಸನ್ನು ಬಳಸಲಿಲ್ಲ. ವಿದ್ಯೆ ಪಡೆಯಲಿಲ್ಲ. ನಾವು ದೇಹ, ಮನಸ್ಸು ಮತ್ತು ಬುದ್ಧಿ ಬಳಸದೆ ಇದ್ದರೂ ವಯಸ್ಸು ಆಗುತ್ತದೆ. ಹಾಗೆ ಯವಕ್ರೀತನಿಗೆ ವಯಸ್ಸು ಹದಿನೆಂಟಾಯಿತು. ವಿದ್ಯೆ ಪಡೆಯಲಿಲ್ಲ. ಆಗಿನ ಕಾಲದಲ್ಲಿ ಸದೃಢ ದೇಹಕ್ಕೆ, ಸುಂದರ ದೇಹಕ್ಕೆ ಬೆಲೆ ಕೊಡುತ್ತಿರಲಿಲ್ಲ. ವಿದ್ಯೆಗೆ ಬೆಲೆ ಕೊಡುತ್ತಿದ್ದರು. ಈತನ ಗೆಳೆಯರು ವಿದ್ಯೆ ಪಡೆದಿದ್ದರು. ಹಾಗಾಗಿ ಈತನ ಗೆಳೆಯರನ್ನು ಗೌರವಿಸುತ್ತಿದ್ದರು ಹಾಗೂ ಮಾತನಾಡಿಸುತ್ತಿದ್ದರು. ಯವಕ್ರೀತನನ್ನು ತಿರಸ್ಕಾರದಿಂದ ನೋಡುತ್ತಿದ್ದರು. ಇದರಿಂದ ಯವಕ್ರೀತನಿಗೆ ಚಿಂತೆಯಾಯಿತು. ಯೋಜಿಸಿದ. ಈಗಾಗಲೇ ನನಗೆ ಹದಿನೆಂಟು. ವರ್ಷ. ಈಗ ಕಲಿಯಲು ಹೋದರೆ 12 ವರ್ಷ ಕಲಿಯಬೇಕು. ಇದಕ್ಕೆ ಏಕ್ ದಮ್ ಕಲಿಯಬೇಕು. ಅಂದರೆ ಯಂತ್ರ, ಮಂತ್ರ ತಾಯತ ಕಟ್ಟಿ ಅಥವಾ ತಪಸ್ಸು ಯಾವುದಾದರೂ ಸರಿಯೇ ಏಕ್ ದಂ ವಿದ್ಯಾವಂತನಾಗಬೇಕೆಂದು, ದೊಡ್ಡ ಜ್ಞಾನಿಯಾಗಬೇಕೆಂದು ನಿರ್ಧರಿಸಿದನು. 

ಏನು ಮಾಡುವುದು ಎಂದು, ಬಲ್ಲವರನ್ನು ಕೇಳಿದ. ಬಲ್ಲವರು ಹೇಳಿದರು ವಿದ್ಯಾ ದೇವತೆಗಳಾದ ಸರಸ್ವತಿ ಮತ್ತು ಗಣಪತಿ ಒಲಿದರೆ ಆಯ್ತು ಎಂದರು. ಆಗ ಯವಕ್ರೀತ ಒಂದು ನದಿ ದಡದಲ್ಲಿ, ಸುತ್ತ ಅಗ್ನಿ ಹಾಕಿಕೊಂಡು, ತಪಸ್ಸಿಗೆ ಕುಳಿತನು. ಮೊದಲಿಗೆ ಸರಸ್ವತಿ ಕುರಿತು ತಪಸ್ಸು ಶುರು ಮಾಡಿದನು. ಎಂಟು ದಿನ ಆಯ್ತು. ಊಟ ತಿಂಡಿ ಬಿಟ್ಟಿದ್ದಾನೆ. ಆಗಿನ ಕಾಲದಲ್ಲಿ ಜನಸಂಖ್ಯೆ ಕಡಿಮೆ ಇದ್ದು ಹಾಗೂ ಜನರ ಬೇಡಿಕೆ ಕಡಿಮೆ ಇತ್ತು. ತಪಸ್ಸು ಮಾಡಿದರೆ ಕಾಳಜಿಯಿಂದ ದೇವರು ಪ್ರತ್ಯಕ್ಷ ಆಗುತ್ತಿದ್ದರು. ಈಗಿನ ಕಾಲದಲ್ಲಿ ಜನಸಂಖ್ಯೆ ಹೆಚ್ಚು, ಬೇಡಿಕೆ ಯಾರೂ ಪೂರೈಸಲು ಸಾಧ್ಯವಿಲ್ಲದಷ್ಟು ಇರುವುದರಿಂದ, ದೇವರು ಯಾರಿಗೂ ಕಾಣುವುದಿಲ್ಲ. ಹಾಗೆ ಸರಸ್ವತಿ ಪ್ರತ್ಯಕ್ಷ ಆದಳು. ಏನು ಬೇಕು? ಎಂದು ಕೇಳಿದಳು. ಯವಕ್ರೀತ ಹೇಳಿದ, "ನಾನು ಮಹಾಜ್ಞಾನಿಯಾಗಬೇಕು ಹಾಗೆ ಆಶೀರ್ವದಿಸಿ" ಎಂದನು. ಅದಕ್ಕೆ ಸರಸ್ವತಿ, "ಇದು ನನ್ನ ಕೈಯಲ್ಲಿ ಸಾಧ್ಯವಿಲ್ಲ. ವಿದ್ಯೆ ಬೇಕಾದರೆ ಗುರುಗಳ ಹತ್ತಿರ ಹೋಗಿ, ಹತ್ತಿಪ್ಪತ್ತು ವರ್ಷ ಕಲಿಯಬೇಕು" ಎಂದಳು. ಇದಕ್ಕೆ ಯವಕ್ರೀತ ಹೇಳಿದ, "ಇದನ್ನು ಮಾಡೋದಿದ್ರೆ ಆಗಲೇ ಮಾಡುತ್ತಿದ್ದೆ. ಅದು ಬೇಡ ಅಂತ ತಪಸ್ಸು ಮಾಡಿದ್ದು. ಅದು ಬಿಟ್ಟು ಗುರುಗಳ ಹತ್ತಿರ ಅಭ್ಯಾಸ ಮಾಡು ಅಂದ್ರೆ ಹೇಗೆ..?" ಅಂತ ಹೇಳಿದ. ಇದನ್ನು ಕೇಳಿದ ಸರಸ್ವತಿ ಈತ ನನಗೆ ಅಪಮಾನ ಮಾಡುತ್ತಿದ್ದಾನೆ ಅಂತ ತಿಳಿದು ಹೊರಟು ಹೋದಳು. 

ಮತ್ತೆ ಗಣಪತಿ ಕುರಿತು ತಪಸ್ಸು ಶುರು ಮಾಡಿದನು. ಎಂಟತ್ತು ದಿನಗಳಾದವು. ಊಟ, ತಿಂಡಿ, ನೀರು ಕುಡಿದಿಲ್ಲ. ಈತನ ತಪಸ್ಸು ಉಗ್ರವಾಗಿತ್ತು. ಆಗ ಗಣಪತಿ ಪ್ರತ್ಯಕ್ಷನಾಗಿ, ಏನು ಬೇಕು...? ಎಂದನು. ಆಗ ಯವಕ್ರೀತ ಹೇಳಿದ, "ನಾನು ಮಹಾಜ್ಞಾನಿಯಾಗಬೇಕು ವರ ಕೊಡು" ಎಂದನು. ಅದಕ್ಕೆ ಗಣಪತಿ ಹೇಳಿದ. ಓದು ಎಂದನು. ಇದನ್ನು ಕೇಳಿದ ಯವಕ್ರೀತ ಸಿಟ್ಟಿಗೆದ್ದನು. ನೀವು ಇರುವುದಾದರೂ ಏತಕ್ಕೆ?. ನಾವು ತಪಸ್ಸು ಮಾಡಿದ ಬಳಿಕ ಅನುಗ್ರಹ ಮಾಡಬೇಕು. ಅದು ಬಿಟ್ಟು ಓದು ಅಂದ್ರೆ ಹೇಗೆ...? ಅಂದನು. ಆಗ ಗಣಪತಿ ಹೇಳಿದ, ವಿದ್ಯೆ ಮಾತ್ರ ಹಾಗೆ ಬರುವುದಿಲ್ಲ. ನೀನು ಕಲಿಯಬೇಕು. ಕಷ್ಟಪಟ್ಟು ಪಡೆಯಬೇಕು ಎಂದನು. ಆಗ ಯವಕ್ರೀತ ಹೇಳಿದ, ನೀನು ಉಪಯೋಗ ಇಲ್ಲ. ಹೋಗು ಎಂದನು. ನಂತರ ಬೇರೆ ದೇವರ ಕುರಿತು ತಪಸ್ಸು ಮಾಡಲು ನಿರ್ಧರಿಸಿದ. ವಿಷ್ಣು 10 ಅವತಾರ ಎತ್ತಿದ್ದಾನೆ. ಅಂದಮೇಲೆ ಆತ ನನಗೆ ವರ ಕೊಟ್ಟೆ ಕೊಡುತ್ತಾನೆ ಎಂದು ವಿಷ್ಣು ಕುರಿತು ತಪಸ್ಸು ಶುರು ಮಾಡಿದನು. 

ವಿಷ್ಣು ಜಾಣ. ನಿಜವಾದ ರೂಪದಲ್ಲಿ ಪ್ರತ್ಯಕ್ಷನಾಗಲಿಲ್ಲ. ಒಬ್ಬ ಮುದುಕನ ರೂಪದಲ್ಲಿ ಬಂದನು. ಈತ ತಪಸ್ಸು ಆಚರಿಸುತ್ತಿದ್ದ ನದಿ ಹತ್ತಿರ, ಈತನ ಸಮೀಪಕ್ಕೆ ಬಂದು, ಹಿಂದೆ ಮುಂದೆ, ಆ ಕಡೆ ಈ ಕಡೆ, ಅಳತೆ ಮಾಡಿ ಒಂದು ಬೊಗಸೆ ಮರಳನ್ನು ನದಿಗೆ ಹಾಕಿದನು. ಅದು ದೊಡ್ಡ ನದಿ. ತುಂಬಾ ನೀರಿತ್ತು ಮತ್ತು ಆಳವಾಗಿತ್ತು. ಒಂದು ಸಲ ಹಾಕಿದ. ಎರಡು ಸಲ ಹಾಕಿದ. ಮೂರು ಸಲ ಹಾಕಿದ. ಹೀಗೆ ಮಾಡುತ್ತಲೇ ಇದ್ದನು. ಇದನ್ನು ಯವಕ್ರೀತ ನೋಡಿದನು. ಇದನ್ನು ನೋಡಿ ನೋಡಿ. ಯವಕ್ರೀತನಿಗೆ ತಾಪ ಆಯಿತು. ಏನು ಮಾಡ್ತಾ ಇದ್ದೀರಿ ಅಂದನು. ಆವಾಗ ಮುದುಕ ಹೇಳಿದ, "ಏನು ಮಾಡ್ತಾ ಇದ್ದೀನಿ ಕಾಣಿಸೋದಿಲ್ಲ ಏನು? ಇಲ್ಲಿ ಒಂದು ಸೇತುವೆ ಕಟ್ಟಬೇಕು" ಎಂದನು. ಇದೇನು ದೊಡ್ಡ ಹೊಳೆ ಇದೆಯಲ್ಲ ಇಲ್ಲಿ ಸೇತುವೆ ಕಟ್ಟಿ, ನಾನು ಆ ಕಡೆ ಹೋಗಬೇಕು. ಅದಕ್ಕೆ ನನಗೆ ಅವಸರ. ಮಾತನಾಡಿಸಬೇಡ ಎಂದನು. ಯವಕ್ರೀತ ಹೇಳಿದ, ಹೀಗಾ ಸೇತುವೆ ಕಟ್ಟೋದು ಎಂದನು. ಮುದುಕ ಹೇಳಿದ ಮತ್ತೆ ಹೀಗೆ ಮರಳು ತೆಗೆದುಕೊಳ್ಳುವುದು, ಹಾಕುವುದು, ಹೀಗೆ ಹಾಕುತ್ತ ಇದ್ದರೆ, ದೊಡ್ಡ ಸೇತುವೆ ಆಗ್ತದೆ. ಆಗ ನಾನು ಆ ಕಡೆ ಹೋಗ್ತೀನಿ. ಯವಕ್ರೀತ ಹೇಳಿದ ಹುಚ್ಚು ಇದ್ದೀಯ ನೀನು ಎಂದನು. ಆಗ ಮುದುಕ ಹೇಳಿದ. ಮತ್ತೆ ನೀನೇನು ಜಾಣ ಇದ್ದೀಯೆ ಹೇಳು. ಇದು ಸಾಧ್ಯ ಇಲ್ಲದೆ ಇದ್ದರೆ, ನಿನ್ನದು ಹೇಗೆ ಸಾಧ್ಯವಾಗುತ್ತದೆ?. ನೀನು ಊಟ, ತಿಂಡಿ ಬಿಟ್ಟು ಕುಳಿತರೆ ಜ್ಞಾನ ಹೇಗೆ ಬೆಳೆಯುತ್ತದೆ...? ಹೇಳು. ಊಟ ಬಿಟ್ಟರೆ ಹೊಟ್ಟೆಗೆ ತಾಪ ಆಗುತ್ತದೆ. ಜ್ಞಾನ ಹೇಗೆ ಬೆಳೆಯುತ್ತದೆ?. ಏನಾರಾ ಮಾಡಿದರೆ ಏನಾರ ಆಗುತ್ತದೇನು? ನಿನಗೆ ಸಾಧ್ಯ ಇದೆ ಅಂದಾಗ, ನನಗೆ ಏಕೆ ಸಾಧ್ಯವಿಲ್ಲ? ಎಂದನು. ನಿನ್ನದನ್ನು ನೀ ಮಾಡು ನನ್ನದನ್ನು ನಾ ಮಾಡುತ್ತೇನೆ ಎಂದನು. 

ಆಗ ಯವಕ್ರೀತನಿಗೆ ಹೊಳೆಯಿತು. ನಾವು ಸರಿಯಾಗಿ ಬಳಸಬೇಕು. ಪ್ರಯತ್ನ ಮಾಡದೆ ಏನೂ ಆಗುವುದಿಲ್ಲ. ಕಲಿಯಬೇಕು. ಗುರುಗಳ ಹತ್ತಿರ ಹೋಗಬೇಕು. ಸತ್ಸಂಗ ಮಾಡಬೇಕು. ಕಷ್ಟ ಪಡಬೇಕು. ಆಗ ಜ್ಞಾನ ಫಲಿಸುತ್ತದೆ, ಜ್ಞಾನ ಹರಿಯುತ್ತದೆ. ಇದು ಸಾಧ್ಯವಾಗುವುದು ಕಷ್ಟಪಟ್ಟು ಮಾಡಿದರೆ ಮಾತ್ರ. ಪ್ರಯತ್ನ ಬಹಳ ಮುಖ್ಯ. ಇದಾದ ಮೇಲೆ ಮುಂದೆ ಯವಕ್ರಿತ ದೊಡ್ಡ ಋಷಿಯಾದ. ಪ್ರಯತ್ನ ಬಹಳ ಮುಖ್ಯ ಅಲ್ಲವೇ ಮಕ್ಕಳೆ...
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************


Ads on article

Advertise in articles 1

advertising articles 2

Advertise under the article