-->
ಜಗಲಿ ಕಟ್ಟೆ : ಸಂಚಿಕೆ - 47

ಜಗಲಿ ಕಟ್ಟೆ : ಸಂಚಿಕೆ - 47

ಜಗಲಿ ಕಟ್ಟೆ : ಸಂಚಿಕೆ - 47
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 


ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ     ಬೇಸಿಗೆ ರಜೆ ಆರಂಭವಾಗಿದೆ... ಮಕ್ಕಳೆಲ್ಲ ರಜೆಯ ಸಂಭ್ರಮವನ್ನು ಆಚರಿಸುತ್ತಿದ್ದಾರೆ. ರಜೆಯ ಸಂಭ್ರಮ ಎನ್ನುವುದು ಎಲ್ಲಾ ಮಕ್ಕಳಿಗೆ ಲಾಭದಾಯಕವಾಗಿರಲಿ ಎನ್ನುವುದನ್ನು ಮನಗಾಣಬೇಕು. ರಜೆಯ ದಿನಗಳಲ್ಲಿ ನಾವು ಕಾಣುವ ಸಂಭ್ರಮದ ಜೊತೆ ಕಲಿಕೆಯ ಏನಾದರೊಂದು ಅಂಶ ದೊರೆತರೆ ರಜೆಯ ಸೌಭಾಗ್ಯ ನಮ್ಮದಾಗುತ್ತದೆ.
     ಈಗ ಎಲ್ಲಾ ಕಡೆ ಬೇಸಿಗೆ ಶಿಬಿರಗಳ ಜಾಹೀರಾತು. ಹೆಚ್ಚು ಕಡಿಮೆ ಪ್ರತಿಯೊಂದು ಊರಿನಲ್ಲೂ ಮಕ್ಕಳ ಬೇಸಿಗೆ ಶಿಬಿರಗಳು ನಡೆಯುತ್ತಾ ಇದೆ. ಇದೊಂದು ಉತ್ತಮ ಬೆಳವಣಿಗೆ. ಈಗ ಮೊದಲಿನ ಹಾಗಲ್ಲ. ಶಿಬಿರದಲ್ಲಿ ಭಾಗವಹಿಸುವ ಮಕ್ಕಳ ಸಂಖ್ಯೆ ಹೆಚ್ಚುತ್ತಾ ಇದೆ. ಮಕ್ಕಳ ಆಸಕ್ತಿ ಪೋಷಕರ ಪ್ರೋತ್ಸಾಹದ ಕಾರಣಕ್ಕೆ ಪ್ರತಿಯೊಂದು ಶಿಬಿರದಲ್ಲೂ ಕೂಡ ಮಕ್ಕಳ ಸಂಖ್ಯೆ ಸಾಕಷ್ಟಿದೆ. ಮೊದಲಾಗಿ ನೋಂದಾವಣೆ ಮಾಡಿಕೊಳ್ಳುವ ಪದ್ಧತಿಯೂ ಆರಂಭವಾಗಿದೆ. ಮಿತಿಮೀರಿದ ಮಕ್ಕಳ ಸಂಖ್ಯೆಯನ್ನು ಮನಗಂಡು ಗುಣಮಟ್ಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರವೇಶಾತಿಯನ್ನು ಸೀಮಿತಗೊಳಿಸುತ್ತಿದ್ದಾರೆ. 
       ಹತ್ತಿಪ್ಪತ್ತು ವರ್ಷಗಳ ಹಿಂದೆ ರಜೆ ಸಿಕ್ಕಾಗ ಅಜ್ಜಿ ಮನೆ, ಅಜ್ಜನ ಮನೆಯೆಂದು ರಜೆಯ ಸಂಭ್ರಮವನ್ನು ಸವಿಯುವ ಅವಕಾಶ ಸಾಮಾನ್ಯವಾಗಿತ್ತು. ಅವಿಭಕ್ತ ಕುಟುಂಬ ಪದ್ಧತಿ ನಾಶವಾಗುತ್ತಾ ಹೋದಾಗ ಕುಟುಂಬ, ಬಾಂಧವ್ಯ, ಮಾನವೀಯ ಸಂಬಂಧಗಳು ತನ್ನಿಂತಾನೆ ಕಳೆಗುಂದುತ್ತಾ ಹೋಗುತ್ತಿರುವುದು ವಿಷಾದದ ಸಂಗತಿ. ಏನೆ ಆಗಲಿ ಈಗ ಕಾಲ ಬದಲಾಗಿದೆ ಅನ್ನುವುದಕ್ಕಿಂತ ನಾವು ತುಂಬಾನೆ ಬದಲಾಗಿದ್ದೇವೆ. ಪುರುಸೊತ್ತಿಲ್ಲದ ಕಾಲದಲ್ಲಿ ಜಂಜಾಟದ ಬದುಕನ್ನು ಸಾಗಿಸುತ್ತಿದ್ದೇವೆ. ವ್ಯಾವಹಾರಿಕ ಬದುಕಿನಲ್ಲಿ ಎಲ್ಲವೂ ಲೆಕ್ಕಾಚಾರದ ಮಿತಿಯೊಳಗೆ ಬದುಕುತ್ತಿದ್ದೇವೆ.
         ಆದರೆ ಮಕ್ಕಳಿಗಾಗಿ ನಾವು ಸಮಯ ಮೀಸಲಿಡಲೇಬೇಕಾಗಿದೆ. ಶಿಬಿರಗಳಿಗೆ ಮಕ್ಕಳನ್ನು ಕಳುಹಿಸಿದ ಮಾತ್ರಕ್ಕೆ ಜವಾಬ್ದಾರಿ ಮುಗಿಯುವುದಿಲ್ಲ. ಮಕ್ಕಳ ದಿನ ನಿತ್ಯದ ಚಟುವಟಿಕೆಗಳನ್ನು ತಿಳಿಯಬೇಕಾಗಿದೆ. ಸಮಯ ಸಿಕ್ಕರೆ ಸ್ವಲ್ಪ ಹೊತ್ತಾದರೂ ಮಕ್ಕಳ ಶಿಬಿರದ ಸ್ಥಳದಲ್ಲಿ ತನ್ನ ಮಗುವಿನ ಚಟುವಟಿಕೆಗಳನ್ನು ಗಮನಿಸಿದರೆ ಆ ಮಗುವಿಗೆ ತುಂಬಾ ಖುಷಿ ಅನ್ನಿಸುವುದು. ಶಿಬಿರಗಳೂ ಅಷ್ಟೇ ಮಕ್ಕಳ ಸ್ನೇಹಿಯಾಗಿ ಮಕ್ಕಳ ಮನೋವಿಕಾಸಕ್ಕೆ ಪೂರಕವಾದ ಚಟುವಟಿಕೆ ಇರುವುದನ್ನು ಗಮನಿಸಬೇಕು. ಶಾಲೆಗಿಂತಲೂ ಬಿಗಿಯಾದ ಒತ್ತಡ ತುಂಬಿದ ಶಿಬಿರಗಳಾದರೆ ಮಕ್ಕಳ ಬೆಳವಣಿಗೆಗೆ ಮಾರಕವಾಗಬಹುದು. ಅದೇ ರೀತಿ ಅಸಭ್ಯ ವರ್ತನೆಯ ಗೆಳೆಯರ ಸಹವಾಸ, ಮೊಬೈಲ್, ಟಿವಿ, ವಿಡಿಯೋ , ಕಂಪ್ಯೂಟರ್ ಗೇಮ್ ಗಳ ಹವ್ಯಾಸ ಮಕ್ಕಳ ವರ್ತನೆಗೆ ದೊಡ್ಡ ಏಟಾಗಬಹುದು. ರಜೆಯಲ್ಲಿ ಎಲ್ಲಾ ತರದ ಚಟುವಟಿಕೆಗಳಿಗೆ ಒತ್ತು ನೀಡಿದರೆ ಉತ್ತಮ. ಈಜು, ಆಟ, ಮಕ್ಕಳ ಸಿನಿಮಾ, ಸರ್ಕಸ್ ನೋಡುವುದು, ಯಕ್ಷಗಾನ, ನಾಟಕಗಳನ್ನು ನೋಡುವುದು, ಪ್ರವಾಸ ಹೀಗೆ ಮಕ್ಕಳ ಜೊತೆ ಸಮಯ ಕಳೆಯುವ - ಕಲಿಯುವ ಹವ್ಯಾಸ ಹಿರಿಯರದ್ದಾಗಬೇಕು. ನಮಸ್ಕಾರ


ಕಳೆದ ಸಂಚಿಕೆಯ ಜಗಲಿಕಟ್ಟೆ - 46 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ವಿದ್ಯಾ ಗಣೇಶ್ ಚಾಮೆತ್ತಮೂಲೆ ತರವಾಡುಮನೆ, ವಿಜಯಾ ಬಿ ಶೆಟ್ಟಿ ಸಾಲೆತ್ತೂರು ಶಿಕ್ಷಕಿ... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....


ಎಲ್ಲರಿಗೂ ನಮಸ್ಕಾರಗಳು,
    ಇದ್ದುದರಲ್ಲೇ ಸಂತೃಪ್ತಿಯಿಂದ ಜೀವನ ನಡೆಸಿದಾಗ ಸಿಗುವ ಆನಂದ ಇನ್ನೆಲ್ಲೂ ಸಿಗಲಾರದು. ಚಿಕ್ಕದಾದರೂ ಸುಂದರ ಸಂಚಿಕೆ ಶಿಕ್ಷಣಾಧಿಕಾರಿ ಜ್ಞಾನೇಶ್ ಸರ್ ರವರಿಂದ.
    ರಮೇಶ್ ಸರ್ ರವರು ಈ ಸಲದ ಸಂಚಿಕೆಯಲ್ಲಿ ಹುಡುಕಾಟದ ವಿವಿಧ ಹಂತಗಳನ್ನು ಉದಾಹರಣೆ ಸಹಿತ ವಿವರಿಸಿದ್ದಲ್ಲದೆ ಪ್ರತಿಯೊಂದು ಹುಡುಕಾಟದ ಫಲವನ್ನು ಪಡೆಯಲು ಪ್ರಯತ್ನದ ಅಗತ್ಯತೆಯನ್ನು ಕೂಡ ಸೊಗಸಾಗಿ ತಿಳಿಸಿದ್ದಾರೆ. ಧನ್ಯವಾದಗಳು ಸರ್...
    ದಿವಾಕರ ಸರ್ ರವರ ವೈಜ್ಞಾನಿಕ ಲೇಖನದಲ್ಲಿ ವೈರಸ್ ಗಳು ಎನ್ನುವ ಅತಿ ಸೂಕ್ಷ್ಮ ಕಣಗಳ ಕುರಿತಾದ ಸವಿವರವಾದ ಮಾಹಿತಿ ಸಿಕ್ಕಿತು.
     ಈ ವಾರ ಅರವಿಂದರ ಹಕ್ಕಿ ಕಥೆಯಲ್ಲಿ ಹೆಮ್ಮಿಂಚುಳ್ಳಿ ಹಕ್ಕಿಯ ಪರಿಚಯ ಸೊಗಸಾಗಿತ್ತು.
     ಗೋರಂಟಿ ಗಿಡವು ಮಾನವನ ಅಲಂಕಾರಿಕ ಬಳಕೆಗೆ ಹೆಚ್ಚಾಗಿ ಉಪಯೋಗವಾದರೂ ಅದರ ಅದ್ಭುತ ಔಷಧೀಯ ಗುಣಗಳ ಪರಿಚಯ ಸಿಕ್ಕಿದ ಹಾಗಾಯಿತು. ಧನ್ಯವಾದಗಳು ವಿಜಯಾ ಮೇಡಂ.
    ಈಗಾಗಲೇ ಪಿ.ಯು.ಸಿ ಫಲಿತಾಂಶ ಪ್ರಕಟಗೊಂಡಿದ್ದು ಮುಂದಿನ ವಿದ್ಯಾಭ್ಯಾಸಕ್ಕಾಗಿ ತೆರಳುವ ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯವನ್ನು ರೂಪಿಸುವಲ್ಲಿ ನೆರವಾಗುವ ಸಕಾಲಿಕ ಲೇಖನ ಯಾಕೂಬ್ ಸರ್ ರವರಿಂದ. 
    ವಾಣಿಯಕ್ಕನವರಿಂದ 'ಏಡಿ ಶಿಕಾರಿ' ಎನ್ನುವ ಸುಂದರ ಪುಸ್ತಕದ ಪರಿಚಯ. ಧನ್ಯವಾದಗಳು ವಾಣಿಯಕ್ಕ.
    ಕಳ್ಳಿ ಗಿಡಕ್ಕಂಟಿದ ಜೇನು ತೆಗೆದು ಸವಿಯುವ ಭರದಲ್ಲಿ ಕಳ್ಳಿಗಿಡದ ರಸವೂ ದೇಹವನ್ನು ಸೇರಿ ಆದ ಪರಿಣಾಮಗಳ ಅನುಭವವನ್ನು ನಾಗೇಂದ್ರರವರು ಬಹಳ ಸೊಗಸಾಗಿ ತಮ್ಮ ಸಂಚಿಕೆಯಲ್ಲಿ ವಿವರಿಸಿದ್ದಾರೆ.
     ಹೊಸ ಹೊಸ ಪದಗಳ ಹುಡುಕಾಟಕ್ಕೆ ಕಾರಣವಾದ ಪದದಂಗಳ ಸಂಚಿಕೆ ಚೆನ್ನಾಗಿ ಮೂಡಿ ಬಂದಿದೆ. ಧನ್ಯವಾದಗಳು ರಮೇಶ್ ಉಪ್ಪಂದರವರಿಗೆ.
    ಈ ವಾರದ ಜಗಲಿಯಲ್ಲಿ ಲೇಖನಗಳನ್ನು ಕಳುಹಿಸಿ ಜಗಲಿಯ ಅಂದ ಹೆಚ್ಚಿಸಿದ ಎಲ್ಲರಿಗೂ ನನ್ನ ಆತ್ಮೀಯ ನಮನಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
********************************************
ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ವಿದ್ಯಾ ಗಣೇಶ್ ಚಾಮೆತ್ತಮೂಲೆ ತರವಾಡುಮನೆ, ವಿಜಯಾ ಬಿ ಶೆಟ್ಟಿ ಸಾಲೆತ್ತೂರು ಶಿಕ್ಷಕಿ ... ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************


Ads on article

Advertise in articles 1

advertising articles 2

Advertise under the article