-->
ಹೃದಯದ ಮಾತು : ಸಂಚಿಕೆ - 38

ಹೃದಯದ ಮಾತು : ಸಂಚಿಕೆ - 38

ಹೃದಯದ ಮಾತು : ಸಂಚಿಕೆ - 38
ಲೇಖಕರು : ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ


  
ಬದುಕಿನ ಉನ್ನತ ಗುರಿ ವ್ಯಕ್ತಿಯನ್ನು ಸಾಧಕನಾಗಿ ರೂಪಿಸಬಲ್ಲುದು. ಗುರಿ ಮುಟ್ಟಲು ಸಾಕಷ್ಟು ಸಿದ್ಧತೆ ಹಾಗೂ ಅದಕ್ಕಾಗಿ ಬದ್ಧತೆ ವ್ಯಕ್ತಿಯಲ್ಲಿರಬೇಕು. ಗುರಿಯೆಡೆಗೆ ಸಾಗುವ ಹಾದಿಯಲ್ಲಿ ನಿರಂತರ ಪ್ರಯತ್ನ, ಕ್ಷಣಿಕ ಸುಖಗಳ ತ್ಯಾಗ, ಮುಂದೊಂದು ದಿನ ಮಂದಹಾಸ ಮೂಡಿಸಬಹುದು. ಆ ಮಂದಹಾಸ ಮುಂದಿನ ಪೀಳಿಗೆಗೆ ಇತಿಹಾಸವಾದಾಗ ಬದುಕು ಸಾರ್ಥಕವಾಗುವುದು ನಿಸ್ಸಂಶಯ.

ಭಾರತ ದೇಶದ ಅತ್ಯುನ್ನತ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಸಾಧಕರ ಕನಸನ್ನು ನನಸಾಗಿಸಿದೆ. 2023 ರಲ್ಲಿ ನಡೆದ ಪರೀಕ್ಷೆಯಲ್ಲಿ 1016 ಮಂದಿ ಉನ್ನತ ಹುದ್ದೆಗೆ ಅರ್ಹತೆಯನ್ನು ಪಡೆದು, ಹೆತ್ತ ತಾಯಿಗೆ, ಹೊತ್ತ ಭೂಮಿಗೆ ಗೌರವ ತಂದುಕೊಟ್ಟಿದ್ದಾರೆ. ಉತ್ತರ ಪ್ರದೇಶದ ಲಕ್ನೋದ ಆದಿತ್ಯ ಶ್ರೀವಾಸ್ತವ ದೇಶದಲ್ಲೇ ಪ್ರಥಮನಾಗಿ ಮೂಡಿಬಂದಿದ್ದಾನೆ. ಒಡಿಶಾದ ಅನಿಮೇಶ್ ಪ್ರಧಾನ್ ದ್ವಿತೀಯ ಸ್ಥಾನಿಯಾಗಿದ್ದರೆ, ತೆಲಂಗಾಣದ ಅನನ್ಯ ರೆಡ್ಡಿ ಮೂರನೇ ಸ್ಥಾನಿಯಾಗಿ ನಾಡಿನ ಕೀರ್ತಿಯನ್ನು ಬೆಳಗಿದ್ದಾರೆ.

ಕರ್ನಾಟಕದ 36 ಮಂದಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಅರ್ಹತೆ ಪಡೆದದ್ದು, ರಾಜ್ಯವೇ ಹೆಮ್ಮೆಪಡುವ ಸಾಧನೆಗೈದಿದ್ದಾರೆ. ಪ್ರತಿಯೊಬ್ಬರ ಸಾಧನೆಯ ಹಾದಿ ಭವಿಷ್ಯದ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಬಲ್ಲುದು ಎಂಬುವುದು ಸಂಶಯಾತೀತವಾದದ್ದು. ವಿಜಯಪುರದ 'ವಿಜೇತ' 100ನೇ ರ್ಯಾಂಕ್ ಪಡೆದು ವಿಜಯದ ನಗೆ ಬೀರಿದ್ದಾರೆ. ಕೋಚಿಂಗ್ ದಂಧೆಯ ಮಧ್ಯೆ, ಯಾವುದೇ ಕೋಚಿಂಗ್ ಪಡೆಯದ ಆಕೆಯ ಸಾಧನೆ ಅದ್ಭುತವಾದದ್ದು. ಮೂರು ಬಾರಿಯ ವೈಫಲ್ಯತೆ ಆಕೆಯನ್ನು ಧೃತಿಗೆಡಿಸಲಿಲ್ಲ. ಶಿಕ್ಷಕಿಯೊಬ್ಬರ ಉಚಿತ ಮಾರ್ಗದರ್ಶನದಿಂದ ಸತತ ಎರಡು ಬಾರಿ ವಿಫಲತೆ ಪಡೆದರೂ ಮೂರನೇ ಪ್ರಯತ್ನದಲ್ಲಿ101ನೇ ರ್ಯಾಂಕ್ ಪಡೆದ ಸೌಭಾಗ್ಯ ನಿಜಕ್ಕೂ ಪ್ರೇರಕಿಯಾಗಿ ಮೂಡಿಬಂದಿದ್ದಾಳೆ.

ರಾಜ್ಯದ ಗಮನ ಸೆಳೆದ ಮತ್ತೊಬ್ಬ ಸಾಧಕ ಶಾಂತಪ್ಪ. ವೃತ್ತಿಯಲ್ಲಿ ಪಿಎಸ್ ಐ ಆಗಿರುವ ಶಾಂತಪ್ಪರ ಪ್ರಯತ್ನ ಅಮೋಘ. ವಿಶ್ರಾಂತಿಯಿಲ್ಲದ ಹುದ್ದೆಯಲ್ಲಿದ್ದು, ಉನ್ನತ ಹುದ್ದೆಯ ಕನಸನ್ನು ಸಾಕಾರಗೊಳಿಸಿದ್ದು ದಿಗ್ಭ್ರಮೆ ಮೂಡಿಸುತ್ತದೆ. ಅದರಲ್ಲೂ ಕನ್ನಡ ಮಾಧ್ಯಮದಲ್ಲೇ ಪರೀಕ್ಷೆ ಬರೆದು, ಸಂದರ್ಶನವನ್ನೂ ಕನ್ನಡದಲ್ಲೇ ಮುಗಿಸಿರುವುದು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ. ಪಿಯುಸಿಯಲ್ಲಿ ಎರಡು ಬಾರಿ ಫೇಲಾಗಿದ್ದ ಶಾಂತಪ್ಪ ಪಡೆದದ್ದು ಗಗನಕುಸುಮವನ್ನು. ಸಾಮಾಜಿಕ ಕಳಕಳಿಯುಳ್ಳ ಹೃದಯವಂತ ಶಾಂತಪ್ಪ ಎಲ್ಲಾ ಸಾಧಕರಿಗೆ ಆದರ್ಶವಾಗಬಲ್ಲರು.

ಹುಬ್ಬಳ್ಳಿಯ ಕಿರಾಣಿ ಅಂಗಡಿಯ ಮಾಲಿಕರೊಬ್ಬರ ಮಗಳು ಕೃಪಾ ಜೈನ್ ಮೂರನೇ ಪ್ರಯತ್ನದಲ್ಲಿ 440ನೇ ರ್ಯಾಂಕ್ ನೊಂದಿಗೆ ಗುರಿ ಮುಟ್ಟಿದ್ದರೆ, ಕನ್ನಡ ಮಾಧ್ಯಮದಲ್ಲಿ ಕಲಿತು ಮೂರನೇ ಪ್ರಯತ್ನದಲ್ಲಿ 731ನೇ ರ್ಯಾಂಕ್ ಪಡೆದ ಚಂದನ್ 5ನೇ ಪ್ರಯತ್ನದಲ್ಲಿ 481 ನೇ ರ್ಯಾಂಕ್ ಪಡೆದ ಶಿಕ್ಷಕಿಯ ಮಗ ಬೀದರ್ ನ ಆಸೀಮ್ ಇವರುಗಳ ಸಾಧನೆಗಳು ನಮ್ಮ ಮಕ್ಕಳಿಗೆ ಪ್ರೇರಣೆ ನೀಡಬಲ್ಲುದು.

ನಮ್ಮ ಮಕ್ಕಳಲ್ಲಿ ಧನಾತ್ಮಕ ಕನಸು ಬಿತ್ತಿದಾಗ ಸಾಧನೆಗಳು ಹೊರಹೊಮ್ಮುತ್ತದೆ. ಕೆಲವು ದಿನಗಳ ಪ್ರಯತ್ನ ಮಾತ್ರವೇ ಗುರಿಯನ್ನು ಮುಟ್ಟಿಸದು. ದಿನದ 14ಗಂಟೆಗೂ ಮೀರಿದ ನಿರಂತರ ಪ್ರಯತ್ನ ಅವರನ್ನು ದಡಮುಟ್ಟಿಸಿದೆ. "ಕರ್ಮಣ್ಯೇ ವಾಧಿಕಾರಸ್ತೇ, ಮಾ ಫಲೇಶು ಕದಾಚನ" ಎಂಬ ಗೀತೆಯ ನುಡಿ ಸುಳ್ಳಾಗಲು ಸಾಧ್ಯವೇ ಇಲ್ಲ. 

ಅವಿಭಜಿತ ಕರಾವಳಿ ಜಿಲ್ಲೆ ಬುದ್ಧಿವಂತರ ನಾಡು. ಆದರೆ ಉನ್ನತ ಪರೀಕ್ಷೆಯಲ್ಲಿ ನಮ್ಮ ಸಾಧನೆ ಶೂನ್ಯವಾಗಿರುವುದು ಖೇದಕರ. ಕೇವಲ ವೈದ್ಯಕೀಯ ಹಾಗೂ ತಾಂತ್ರಿಕ ಶಿಕ್ಷಣಗಳಿಂದ ಮಾತ್ರವೇ ಬದುಕು ಕಟ್ಟಲು ಸಾಧ್ಯವೆಂಬ ಭ್ರಮೆ ನಮ್ಮ ಜೀನಿಯಸ್ ಮಕ್ಕಳದ್ದು. ಅದಕ್ಕಾಗಿಯೇ ಅಣಬೆಗಳಂತೆ ತಲೆಯೆತ್ತಿರುವ ತಲೆಯೆತ್ತಿರುವ ಕಾಲೇಜುಗಳು ಮಕ್ಕಳನ್ನು ಸಿದ್ಧಗೊಳಿಸುತ್ತಿರುವುದು ನಗ್ನ ಸತ್ಯ. ಬಹುಶ: ನಮ್ಮ ಪೋಷಕರು ತಮ್ಮ ದೃಷ್ಟಿಕೋನವನ್ನು ಒಂದಷ್ಟು ಬದಲಾಯಿಸಿದರೆ, ರಾಜ್ಯ ಮಾತ್ರವಲ್ಲದೆ ದೇಶಕ್ಕೇ ಟಾಪರ್ ಆಗುವ 'ಜೀನಿಯಸ್' ಮಕ್ಕಳು ನಮ್ಮ ಮಕ್ಕಳೆಂಬುವುದು ನಿಸ್ಸಂಶಯ.
...................... ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************



ನನ್ನ ಲೇಖನಗಳ ಸಂಗ್ರಹ (ಒಟ್ಟು62) ಪುಸ್ತಕದ ರೂಪದಲ್ಲಿ ಲಭ್ಯವಿದೆ. ಆಸಕ್ತಿಯುಳ್ಳ ಓದುಗರು ಸಂಪರ್ಕಿಸಬಹುದು....... ಯಾಕೂಬ್ ಎಸ್ ಕೊಯ್ಯೂರು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ 
ಮುಖ್ಯ ಶಿಕ್ಷಕರು, 
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************

Ads on article

Advertise in articles 1

advertising articles 2

Advertise under the article