ನಿಷ್ಪಾಪಿ ಸಸ್ಯಗಳು : ಸಂಚಿಕೆ - 46
Wednesday, April 17, 2024
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 46
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಹೇಗಿದ್ದೀರಿ...? ಮನೆಯ ಸುತ್ತಮುತ್ತ ಓಡಾಡುವಾಗ, ಅತ್ತಿತ್ತ ವಾಹನಗಳಲ್ಲಿ ಸಾಗುವಾಗ ಕಾಣಸಿಗುವ ಹಸಿರಿನಲ್ಲಿ ಕೆಲವನ್ನಾದರೂ ಗುರುತಿಸಲು ಯಶಸ್ವಿಯಾಗಿರುವಿರಾ?
ಹ್ಹಾಂ... ಇಂದು ನಿಮ್ಮ ಶಾಲೆಯ ಮೈದಾನದ ಅಂಚಿನಲ್ಲಿ , ಮನೆಯ ಹಿತ್ತಲು, ತೋಟ, ಬೇಲಿ, ಕರೆಯ ಅಂಚು ಅಥವಾ ಮಾರ್ಗದ ಬದಿಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಒಂದು ಸಸ್ಯದ ಪರಿಚಯವನ್ನು ಮಾಡಿಕೊಳ್ಳೋಣ.
ಇದು ತನಗೆ ದೊರಕಿದ ಮಣ್ಣು, ನೀರು, ಹವಾಮಾನಕ್ಕೆ ಅನುಗುಣವಾಗಿ ತನ್ನಲ್ಲೆ ಬದಲಾವಣೆ ಮಾಡಿಕೊಂಡು ಬದುಕಲು ಉಪಾಯ ಕಂಡುಕೊಂಡಂತಹ ಸಸ್ಯ. ನೀರಿನ ಬದಿಯಲ್ಲಿದ್ದರೆ ಸಸ್ಯದ ಕಾಂಡ ಟೊಳ್ಳಾಗಿರುತ್ತದೆ. ಮೀಟರಿಗಿಂತಲೂ ಹೆಚ್ಚು ಉದ್ದ ಬೆಳೆದು ತೇಲಬಲ್ಲದು. ಆರ್ದ್ರತೆ ಇರುವಲ್ಲಿ ಸ್ವಲ್ಪ ನೆಟ್ಟಗೆ ನಿಂತು ಅತ್ತಿತ್ತ ಇಣುಕಬಲ್ಲದು. ಒಣ ನೆಲದಲ್ಲಿ ಮಣ್ಣಿನ ಮೇಲೆ ತೆವಳುತ್ತಾ ಗಿಣ್ಣು ಗಿಣ್ಣುಗಳಲ್ಲಿ ಬೇರನ್ನು ಬೆಳೆಸುತ್ತಾ ಭದ್ರವಾಗಿ ಊರಿಕೊಂಡು ಗಟ್ಟಿ ಕಾಂಡವನ್ನು ರೂಪಿಸಿಕೊಳ್ಳುತ್ತಾ 30 ಸೆಂ.ಮೀ ನಷ್ಟೇ ಬೆಳದೀತು. ಸಿಲಿಂಡರಾಕಾರದ ಕಾಂಡ, ಪ್ರವಾಹದೆಡೆ ಟೊಳ್ಳು, ಶುಷ್ಕ ವಾತಾವರಣದಲ್ಲಿ ಗಟ್ಟಿ ಕಾಂಡವಿರುವ ಈ ಬಹುರೂಪೀ ಸಸ್ಯವನ್ನು ಕನ್ನಡದಲ್ಲಿ ಹೊನೆಗನಿ ಸೊಪ್ಪು ಎನ್ನುವರು. ಇದರ ಹೂಗಳು ಮೀನಿನ ಕಣ್ಣಿನಂತೆ ಕಾಣಿಸುವುದರಿಂದ ಸಂಸ್ಕೃತ ದಲ್ಲಿ ಮತ್ಸ್ಯಾಕ್ಷಿ ಎನ್ನುವರು. ಮೀನು ಸೊಪ್ಪು ಎಂಬುದು ಜನಸಾಮಾನ್ಯರಿಟ್ಟ ಹೆಸರು. ತಮಿಳರು ಇದನ್ನು ಪೊನ್ನಗನ್ನಿ ಎಂದು ಕರೆಯುವರು. ಅಂದರೆ ಚರ್ಮಕ್ಕೆ ಬಂಗಾರದ ಹೊಳಪು ನೀಡುವ ಸಸ್ಯವೆಂದು ಅರ್ಥವಂತೆ!
ವೆಸ್ಟ್ ಇಂಡೀಸ್, ಮಡಗಾಸ್ಕರ್, ಮಾರಿಷಸ್, ಥೈಲ್ಯಾಂಡ್, ಚೀನಾ, ಮಧ್ಯ ಆಫ್ರಿಕಾ, ಭಾರತ ದಾದ್ಯಂತ ಕಾಣಸಿಗುವ ಈ ನಿಷ್ಪಾಪಿ ಸಸ್ಯವು ನದೀ ದಂಡೆ, ಕೆರೆ, ಹಳ್ಳ, ಮರಳು ದ್ವೀಪ, ಕಲ್ಲು ಮಣ್ಣು, ಅರಣ್ಯ ಪ್ರದೇಶ, ಹೊಲಗಳ ಅಂಚು, ತರಕಾರೀ ತೋಟ, ಮೆಕ್ಕಲು ಮಣ್ಣು, ಸಾವಯವ ಗೊಬ್ಬರವಿರುವಲ್ಲಿ, ಹಿನ್ನೀರು ಪ್ರದೇಶ ಹೀಗೆ ಎಲ್ಲೆಂದರಲ್ಲಿ ಕಾಣಸಿಗುತ್ತದೆ. ಬ್ರೆಜಿಲ್ ದೇಶ ಈ ಸಸ್ಯದ ಮೂಲ ನೆಲ. ಒರಟಾದ ಸಸ್ಯ ಜಾತಿಯಂತೆ ಕಂಡರೂ ಇದು ಕಳೆಗಿಡವಲ್ಲ. ಇದು ವಾರ್ಷಿಕ ಅಥವಾ ದೀರ್ಘಾವಧಿಯ ಸಸ್ಯವಾಗಿಯೂ ಬಾಳಬಹುದು. ಡಿಸೆಂಬರ್ ನಿಂದ ಮಾರ್ಚ್ ವರೆಗೆ ಹೂಗಳಿರುತ್ತವೆ. ನೈಸರ್ಗೀಕರಿಸಿದ ವಿಲಕ್ಷಣ ಪ್ರಕಾರವಾದ ಈ ಸಸ್ಯ ಬುಡದಿಂದಲೇ ಹೆಚ್ಚು ಕವಲೊಡೆಯುವ ಮೂಲಿಕೆಯಾಗಿದೆ. ರಸಭರಿತ, ಸರಳ, ಹೊಳಪಾದ ಹಸಿರು ಎಲೆಗಳು ಕಾಂಡದ ಗಿಣ್ಣುಗಳಲ್ಲಿ ಅಭಿಮುಖವಾಗಿ ಜೋಡಣೆಯಾಗಿರುತ್ತವೆ. ಅಕ್ಷಾ ಕಂಕುಳಲ್ಲಿ ಪುಟ್ಟ ಹಲವು ಸುತ್ತಿನ ಬಿಳಿ ಚೂಪಾದ ದಳಗಳ ಹೂಗಳು ಒಂದು ಅಥವಾ ನಾಲ್ಕೈದು ಕಾಣಿಸಿಕೊಳ್ಳುತ್ತದೆ. ಈ ಹೂ ಗೊಂಚಲ ಸಮೂಹದಿಂದಲೇ ಇದನ್ನು ಗುರುತಿಸಬಹುದು. ಕಡು ಕಂದು ಬಣ್ಣದ ಸೂಕ್ಷ್ಮವಾದ ಬೀಜಗಳಾಗುತ್ತವೆ. ಈ ಸಸ್ಯದಲ್ಲಿ ನಾಲ್ಕೈದು ವಿಧಗಳಿವೆ. ಕೆಂಪು ಬಣ್ಣದ ಹೊನೆಗನಿ ಸೊಪ್ಪೂ ಇದೆ.
ಅಲ್ಟರ್ ನ್ಯಾಂಥೀರ ಸೆಸ್ಸಿಲಿಸ್ ( Alternantera Sessilis ) ಎಂಬ ಸಸ್ಯ ಶಾಸ್ತ್ರೀಯ ಹೆಸರುಳ್ಳ ಹೊನೆಗೊನೆ ಸೊಪ್ಪು ಅಮರಂಥೇಸಿ (Amaranthaceae) ಕುಟುಂಬಕ್ಕೆ ಸೇರಿದೆ. ಸೆಕೆಗಾಲದ ಈ ಬಿರು ಬೇಸಗೆಯಲ್ಲಿ ದೇಹದ ಹಾಗೂ ಕಣ್ಣಿನ ಬಿಸಿಯನ್ನು ಈ ಸಸ್ಯವು ಕಡಿಮೆ ಮಾಡುವುದಲ್ಲದೇ ಆಯಾಸ ಪರಿಹರಿಸಿ ಬಲ ಮತ್ತು ತೇಜಸ್ಸನ್ನು ನೀಡಿ, ತಂಪಿನ ಜೊತೆ ಉದ್ದೀಪಿಸುವ ಗುಣ ಹೊಂದಿದೆ.
ಹೊನೆಗೊನೆಸೊಪ್ಪು ಒಂದು ಕಳೆಸಸ್ಯವಾಗಿ ಕಂಡರೂ ಅದರ ಮಹತ್ವ ಅರಿತಾಗ ಶ್ರೇಷ್ಠತೆಯ ಅರಿವಾಗದಿರದು. ಸಾಂಪ್ರದಾಯಿಕ ವಾಗಿ ಈ ಸಸ್ಯ ಹಲವಾರು ರೋಗಬಾಧೆಗಳಿಗೆ ಶಮನ ನೀಡುವುದೆಂದು ಹೇಳಲಾಗುತ್ತದೆ. ಇದರ ಹೂಗಳು ಇರುಳು ಕುರುಡುತನಕ್ಕೆ ಉತ್ತಮ ಔಷಧಿಯಾಗಿರುವುದು ಮಾತ್ರವಲ್ಲದೇ ಮೂಲವ್ಯಾಧಿ ಮಲಬದ್ಧತೆ, ಕಜ್ಜಿ, ತುರಿಕೆ, ನೆನಪಿನ ಶಕ್ತಿ ವೃದ್ಧಿ, ಕೆಮ್ಮು, ನೆಗಡಿ, ಸಕ್ಕರೆ ಕಾಯಿಲೆ, ಕೂದಲು ಉದುರುವಿಕೆ, ಉರಿಮೂತ್ರ, ಬೆಂದಗಾಯ, ರಕ್ತಶುದ್ಧಿ, ನಾಲಿಗೆಯ ರುಚಿ ಹೆಚ್ಚಿಸಲು ಬಳಸುತ್ತಾರೆ. ಈ ಸಸ್ಯದಿಂದಲೇ ವಿಶೇಷವಾದ ಕಾಡಿಗೆಯನ್ನೂ ತಯಾರಿಸಿ ಕಣ್ಣಿಗೆ ಹಾಕುತ್ತಾರೆ.
ಮಾರುಕಟ್ಟೆಯಲ್ಲಿ ದೊರೆಯುವ ಹೊನೆಗನಿ ಎಲ್ಲಿ ಬೆಳೆಸಿರುವರೋ ನಮಗೆ ತಿಳಿಯದು .5% ಪ್ರೊಟೀನ್,16% ಕಬ್ಬಿಣಾಂಶ ಇರುವ ಈ ಸೊಪ್ಪನ್ನು ಬೆಳಸಲೂ ಸುಲಭ. ಸುತ್ತಲೂ ಹುಡುಕಿದರೂ ಸಿಕ್ಕೀತು. ಹುಡುಕುವಿರಾ? ಮನೆಯ ಹಿರಿಯರಲ್ಲಿ ಈ ಗಿಡದ ಬಗ್ಗೆ ಪರಿಚಯ ಕೇಳಿ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಿರಿ... ಆಗಬಹುದೇ?
ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.. ನಮಸ್ಕಾರ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************