ಹಕ್ಕಿ ಕಥೆ : ಸಂಚಿಕೆ - 147
Wednesday, April 17, 2024
Edit
ಹಕ್ಕಿ ಕಥೆ : ಸಂಚಿಕೆ - 147
ಲೇಖಕರು : ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಈ ಹಕ್ಕಿ ತಾನು ಬದುಕುವ ಪರಿಸರದ ಜೊತೆಗೆ ಎಷ್ಟು ಸುಂದರವಾಗಿ ತನ್ನ ಬಣ್ಣವನ್ನು ಹೊಂದಿಸಿ ಕೊಂಡಿದೆ ಎಂದರೆ ತನ್ನ ಆವಾಸದಲ್ಲಿರುವಾಗ ಇದನ್ನು ಗುರುತಿಸುವುದು ಬಹಳ ಕಷ್ಟಕರ. ಒಮ್ಮೆ ನಾನು ಕೈಗಾ ಬರ್ಡ್ ಮ್ಯಾರಥಾನ್ ನಲ್ಲಿ ಭಾಗವಹಿಸಲು ಹೋಗಿದ್ದೆ. ಪಕ್ಷಿಗಣತಿ ಮಾಡುತ್ತಾ ನಮ್ಮ ತಂಡ ಗದ್ದೆಗಳ ಮೂಲಕ ಹಾದು ಹೋಗುತ್ತಿತ್ತು. ಗದ್ದೆ ಕೊಯ್ಲು ಆಗಿ ಗದ್ದೆಯೆಲ್ಲ ಒಣಗಿ ಹೋಗಿತ್ತು. ಗದ್ದೆ ಪೂರ್ತಿ ಕಂದು ಬಣ್ಣಕ್ಕೆ ತಿರುಗಿತ್ತು. ಅಲ್ಲಿ ಯಾವುದೇ ಪಕ್ಷಿಗಳು ಇರಬಹುದು ಎಂದು ಅನಿಸಿರಲೇ ಇಲ್ಲ ನಮಗೆ. ಅಷ್ಟರಲ್ಲಿ ನಮ್ಮ ಜೊತೆಗಿದ್ದ ಕೆಲವರು ಥಟ್ಟನೇ ನಿಂತುಬಿಟ್ಟರು. ಏನಾಯಿತು ಎಂದು ನಾವೂ ನಿಂತು ಆ ಕಡೆ ಗಮನಿಸತೊಡಗಿದೆವು.
ಅಲ್ಲೊಂದು ಪುಟಾಣಿ ಗುಬ್ಬಚ್ಚಿ ಗಾತ್ರದ ಹಕ್ಕಿ ನೆಲದಿಂದ ಮೇಲಕ್ಕೆ ನೆಗೆದು ಮತ್ತೆ ನೆಲದ ಮೇಲೆ ಕುಳಿತು ಮರೆಯಾಗುತ್ತಿತ್ತು. ಆನಂತರ ಸೂಕ್ಷ್ಮವಾಗಿ ಗಮನಿಸಿದಾಗಲೇ ತಿಳಿದದ್ದು ಅಲ್ಲಿ ಇನ್ನೂ ಅಂತಹ ಹಕ್ಕಿಗಳಿದ್ದವು ಎಂದು. ನಮ್ಮ ಐದಾರು ಜನರ ಗುಂಪನ್ನು ನೋಡಿ ಅವುಗಳು ಹಾರಿ ಇನ್ನಷ್ಟು ಮುಂದಕ್ಕೆ ಹೋಗಿ ಕುಳಿತುಕೊಂಡವು. ಅರೆ ಇದೇನಿದು ಎಂದು ಕುತೂಹಲದಿಂದ ನಾನು ಸ್ವಲ್ಪ ಮುಂದಕ್ಕೆ ಹೋಗಿ ಕುಳಿತುಕೊಂಡೆ. ಐದಾರು ನಿಮಿಷ ಅಲುಗಾಡದೇ ಕುಳಿತಾಗ ಅವುಗಳಿಗೂ ಸ್ವಲ್ಪ ಧೈರ್ಯ ಬಂದಿರಬೇಕು. ಅವುಗಳಲ್ಲಿ ಒಂದು ಹಕ್ಕಿ ಹಾರಿ ಬಂದು ಹದಿನೈದಡಿ ದೂರದಲ್ಲಿ ಸಣ್ಣ ಕಲ್ಲಿನ ಮೇಲೆ ಕುಳಿತುಕೊಂಡಿತು. ಒಣಗಿದ ಹುಲ್ಲಿಗೂ ಇದರ ಬಣ್ಣಕ್ಕೂ ಸ್ವಲ್ಪವೂ ವ್ಯತ್ಯಾಸ ಇಲ್ಲ. ಥೇಟ್ ಅದೇ ಕಂದು ಬಣ್ಣ. ಆ ಕಂದು ಬಣ್ಣದ ಮೇಲೆ ಸುಂದರವಾದ ಕಡುಕಂದು ಬಣ್ಣದ ಗೀರುಗಳು. ತಲೆಯ ಮೇಲೆ ಚಂದದ ಜುಟ್ಟು. ನೆಲದ ಮೇಲೆ ಮುದುರಿಕೊಂಡು ಕುಳಿತರೆ ಗುರುತಿಸುವುದೇ ಕಷ್ಟ. ಕಾಳು, ಬೀಜ, ಧಾನ್ಯಗಳು ಮತ್ತು ಕೀಟಗಳು ಇದರ ಮುಖ್ಯ ಆಹಾರ. ಮನೆಗೆ ಮರಳಿ ಇದರ ಬಗ್ಗೆ ಹುಡುಕಿದೆ. ನೆಲದ ಮೇಲೆ ಸಣ್ಣ ಹಳ್ಳ ಮಾಡಿ ಹುಲ್ಲಿನಿಂದ ಗೂಡು ಮಾಡಿ ಮೊಟ್ಟೆ ಇಟ್ಟು ಮರಿ ಮಾಡುತ್ತವೆಯಂತೆ. ಸಂತಾನೋತ್ಪತ್ತಿ ಕಾಲದಲ್ಲಿ ಗಂಡು ಹಕ್ಕಿ ನೆಲದಿಂದ ಮೇಲೆ ಜಿಗಿದು ಸಿಳ್ಳೆ ಹಾಕಿ ಕೂಗುತ್ತಾ ಮತ್ತೆ ನೆಲಕ್ಕೆ ಹಿಂದೆ ಬರುತ್ತವೆಯಂತೆ. ನೆಲ, ಕಲ್ಲು, ಕಡ್ಡಿ, ಬೇಲಿಯ ಮೇಲೆ ಕುಳಿತು ಸುಂದರವಾಗಿ ಹಾಡುತ್ತವೆ. ಪಶ್ಚಿಮ ಘಟ್ಟಗಳ ಹುಲ್ಲುಗಾವಲು ಪ್ರದೇಶ ಮತ್ತು ಕರಾವಳಿಯ ಗದ್ದೆ ಬಯಲುಗಳಲ್ಲಿ ಈ ಹಕ್ಕಿಗಳು ಕಾಣಸಿಗುತ್ತವೆ. ನೆಲದಲ್ಲೇ ವಾಸಿಸುವ ಈ ಹಕ್ಕಿಗಳನ್ನು ನೆಲಗುಬ್ಬಿಗಳು ಎಂದು ಕರೆಯುತ್ತಾರೆ. ನಿಮ್ಮ ಸಮೀಪದಲ್ಲಿ ಒಣ ಭೂಮಿ ಇದ್ದರೆ ಈ ಹಕ್ಕಿಗಳು ಕಾಣಸಿಗಬಹುದು.
ಕನ್ನಡದ ಹೆಸರು: ಮಲೆ ನೆಲಗುಬ್ಬಿ
ಇಂಗ್ಲೀಷ್ ಹೆಸರು: Malabar Lark
ವೈಜ್ಞಾನಿಕ ಹೆಸರು: Galerida malabarica
ಚಿತ್ರ : ಅರವಿಂದ ಕುಡ್ಲ
ಮುಂದಿನ ವಾರ ಹೊಸತೊಂದು ಹಕ್ಕಿ ಕಥೆಯೊಂದಿಗೆ ಭೇಟಿ ಮಾಡೋಣ.
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************