-->
ಜಗಲಿ ಕಟ್ಟೆ : ಸಂಚಿಕೆ - 45

ಜಗಲಿ ಕಟ್ಟೆ : ಸಂಚಿಕೆ - 45

ಜಗಲಿ ಕಟ್ಟೆ : ಸಂಚಿಕೆ - 45
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 



ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


       ಜಗಲಿಯ ಮಕ್ಕಳ ಬರೆಯುವ ಉತ್ಸಾಹ ಹಾಗೂ ಚಿತ್ರ ಮಾಡುವ ಹವ್ಯಾಸಗಳನ್ನು ನೋಡುತ್ತಾ ಇದ್ದರೆ ಬಹಳಷ್ಟು ಖುಷಿ ಮತ್ತು ನೆಮ್ಮದಿ ಎನಿಸುತ್ತದೆ. ಜಗಲಿಯಲ್ಲಿ ಹೆಚ್ಚು ಹೆಚ್ಚು ಮಕ್ಕಳಿಗಾಗಿ ಸಮಯವನ್ನು ಮೀಸಲಿಡಬೇಕು ಎನ್ನುವ ಆಸೆ ನನ್ನದು. ಶಾಲಾ ಕೆಲಸ ಹಾಗೂ ನನ್ನ ಕಲಾ ಚಟುವಟಿಕೆಯ ಹೊರತಾಗಿ ಸಮಯವನ್ನು ಹೊಂದಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೇನೆ. ಜಗಲಿಯ ಸಂಚಿಕೆಗಳು ಬಂದಾಗ ಫೇಸ್ಬುಕ್ , ಸ್ಟೇಟಸ್ ಹಾಗೂ ಇನ್ನಿತರ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತೇನೆ. ಹೀಗೆ ಹಂಚಿಕೊಂಡಾಗ ಇತ್ತೀಚಿಗೆ ನನ್ನ ಶಾಲೆಯ ಹಿರಿಯ ವಿದ್ಯಾರ್ಥಿಯೊಬ್ಬರು ತಮ್ಮ ಮನದ ಭಾವನೆಯನ್ನು ನನ್ನ ಜೊತೆ ಹಂಚಿಕೊಂಡರು.
         "ಮಕ್ಕಳ ಜಗಲಿಯ - ಪರಿಕಲ್ಪನೆ ಭಿನ್ನವಾಗಿದೆ. ಮಕ್ಕಳಿಗಾಗಿ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿರುವ ಮಕ್ಕಳ ಜಗಲಿ ಸಂಚಿಕೆಗಳನ್ನು ನೋಡುತ್ತಾ ಇದ್ದರೆ ಬಹಳಷ್ಟು ಖುಷಿಯಾಗುತ್ತಿದೆ. ಸುಮಾರು 20 ದಶಕಗಳ ಹಿಂದೆ ಈ ತರಹದ ವ್ಯವಸ್ಥೆ ನಮಗೆ ಸಿಕ್ಕಿರಲಿಲ್ಲ. ನಮಗೆ ಕಲೆ ಸಾಹಿತ್ಯದಲ್ಲಿ ತುಂಬಾ ಆಸಕ್ತಿ ಇದ್ದರೂ ಪ್ರೋತ್ಸಾಹ ಕೊಡುವ ವಾತಾವರಣ ಶಾಲೆಯಲ್ಲಿ ಆಗಲಿ ಅಥವಾ ಮನೆಗಳಲ್ಲಿಯೇ ಆಗಲಿ ಇದ್ದಿದ್ದು ಕಡಿಮೆ. ಬರಿ ಓದು ಮಾರ್ಕು ಇಷ್ಟಕ್ಕೆ ಸೀಮಿತವಾಗಿದ್ದ ನಮ್ಮ ಕಾಲಕ್ಕೆ ಹೋಲಿಸುವಾಗ ಇಂತಹ ಮಕ್ಕಳ ಜಗಲಿ ಎನ್ನುವ ವೇದಿಕೆ ವಿದ್ಯಾರ್ಥಿಗಳ ಪಾಲಿಗೆ ಸುವರ್ಣ ಅವಕಾಶವಾಗಿದೆ. ನಮಗೆ ಚಿತ್ರ ಮಾಡುವ ಹವ್ಯಾಸಕ್ಕೆ ಪ್ರೋತ್ಸಾಹ ಕೊಡುವ ಮನಸ್ಸುಗಳೆ ಇರಲಿಲ್ಲ. ಚಿತ್ರ ಮಾಡಿದ ಸಂದರ್ಭದಲ್ಲಿ ಮೂದಲಿಸುವವರೇ ಅಧಿಕ. ಚಿತ್ರ ಮಾಡುವುದರಿಂದ ಏನು ಲಾಭ ಅದರಲ್ಲಿ ಭವಿಷ್ಯವಿಲ್ಲ ಎನ್ನುವ ನಿಂದನೆಯ ಮಾತುಗಳೇ ಜಾಸ್ತಿಯಾಗಿತ್ತು...." ಹೀಗೆ ತಮ್ಮ ಮಾತುಗಳನ್ನು ಮುಂದುವರಿಸುತ್ತಾ ಮಕ್ಕಳ ಜಗಲಿಯ ಬಗ್ಗೆ ತಮ್ಮ ಕುತೂಹಲದ ಭಾವನೆಗಳನ್ನು ಹೊರಹಾಕಿದರು.

       ನಿಮ್ಮೂರ ಶಾಲೆಯ ಸುದ್ದಿ ಅಂಕಣದಲ್ಲಿ ಕುಮಾರಿ ಸುನೀತ ವೇಣೂರು ಇವರು ತಮ್ಮ ಮೆಚ್ಚಿನ ಶಾಲೆ ಹಾಗೂ ಅಲ್ಲಿನ ಮಾತೃ ಹೃದಯಿ ಶಿಕ್ಷಕಿಯ ಬಗ್ಗೆ ಬರೆದಿದ್ದರು. ಈ ಲೇಖನದ ಬಗ್ಗೆ ಬಹಳಷ್ಟು ಪ್ರತಿಕ್ರಿಯೆಗಳು ಬಂದಿತು. ಹೆಚ್ಚಿನ ಭಾಗಗಳಲ್ಲಿ ತಮ್ಮ ಸೃಜನಶೀಲ ವ್ಯಕ್ತಿತ್ವದಿಂದ ಶಾಲೆಯನ್ನು ಪರಿಸರವನ್ನು ಬದಲಾಯಿಸುವ ಗುಣ ಹೊಂದಿರುವ ಅನೇಕ ಶಿಕ್ಷಕರು ಕೆಲಸ ಮಾಡ್ತಾ ಇದ್ದಾರೆ. ಆದರೆ ಅವರನ್ನು ಗುರುತಿಸುವ, ಪ್ರಶಂಸಿಸುವ, ಹೊರ ಪ್ರಪಂಚಕ್ಕೆ ಪರಿಚಯಿಸುವ ಮನಸುಗಳು ಮಾತ್ರ ವಿರಳ. ಅಂತಹ ವಿಶೇಷ ಗುಣವುಳ್ಳ ವ್ಯಕ್ತಿಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಶಾಲೆಯ ಅಭಿವೃದ್ಧಿಗಾಗಿ ಸಂಪೂರ್ಣ ಬಳಸಿಕೊಂಡು ಅವರ ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವ ಬುದ್ಧಿವಂತಿಕೆ ಎಲ್ಲರಿಗೂ ಇರಬೇಕಾದ ಅವಶ್ಯಕತೆ ಇದೆ. ಹೀಗಾದಾಗ ಮಾತ್ರ ಒಂದು ಶಾಲೆ, ಅಲ್ಲಿಯ ಮಕ್ಕಳು, ಅಲ್ಲಿನ ಪರಿಸರ ಬದಲಾಗಲು ಸಾಧ್ಯ....!!

       ಹತ್ತನೇ ತರಗತಿಯವರನ್ನು ಹೊರತುಪಡಿಸಿ ಉಳಿದೆಲ್ಲ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯನ್ನು ಪೂರ್ಣಗೊಳಿಸಿ ನಿರಾಳರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಬಹಳಷ್ಟು ವಿದ್ಯಾರ್ಥಿಗಳು ಬರಹ ಹಾಗೂ ಚಿತ್ರಗಳನ್ನು ಕಳಿಸಿ ಕೊಡ್ತಾ ಇದ್ದಾರೆ. ಇನ್ನು ಹೇಗೂ ಬೇಸಿಗೆ ರಜೆ ಬಂತು. ಬೇಸಿಗೆ ರಜೆಯಲ್ಲಿ ಅಜ್ಜಿ ಮನೆ, ಶಿಬಿರಗಳು ಇತ್ಯಾದಿ ತಾವು ಪಡೆಯುವ ಸಂಭ್ರಮಕ್ಕೆ ಬರಹದ ರೂಪವನ್ನು ನೀಡಿ ನಮಗೆ ಕಳುಹಿಸಿ. 

      ಚಿತ್ರಗಳ ಸಂಚಿಕೆ 515 ಹಾಗೂ 516 ಕಳೆದ ವಾರ ಪ್ರಕಟವಾಗಿತ್ತು. ಎಲ್ಲಾ ಮಕ್ಕಳ ಚಿತ್ರಗಳು ಅದ್ಭುತವಾಗಿ ಮೂಡಿಬಂದಿತ್ತು. ಉಡುಪಿ ಜಿಲ್ಲೆಯ ಶರ್ಮಿಳ ಕೆ ಎಸ್ ಹಾಗೂ ಗದಗ ಜಿಲ್ಲೆಯ ಪ್ರೇಮ ಎಸ್ ಇವರು ಬರೆದ ಕವನಗಳ ಸಂಚಿಕೆಗಳು ಪ್ರಕಟವಾಗಿತ್ತು. ಇವರು ಬರೆದ ಕವನಗಳು ಸೊಗಸಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಕವನ ರಚನೆಯಾಗುವಂತೆ ಇವರ ಬರಹದ ಶೈಲಿ ಆಸರೆಯಾಗಿದೆ. ಅಭಿನಂದನೆಗಳು ಎಲ್ಲಾ ಮಕ್ಕಳಿಗೆ.

      ಜಗಲಿಯಲ್ಲಿ ಬರೆಯುವ ಹಿರಿಯರ ಎಲ್ಲಾ ಸಂಚಿಕೆಗಳು ಉತ್ತಮವಾಗಿ ಮೂಡಿ ಬರುತ್ತಿದೆ. ಓದುವ ಪ್ರತಿಯೊಬ್ಬರಿಗೂ ವಿಶೇಷ ಅನುಭವವನ್ನು ನೀಡುವಲ್ಲಿ ಪ್ರೇರಣೆಯಾಗಿದೆ. ಜಗಲಿಯ ಎಲ್ಲಾ ಅಂಕಣಕಾರರಿಗೆ ಧನ್ಯವಾದಗಳು. ಜೊತೆಗೆ ಪ್ರತಿ ಬಾರಿ ಲೇಖನಗಳನ್ನು ಓದಿ ಅಭಿಪ್ರಾಯ ಅನಿಸಿಕೆ ನೀಡುವ ನಿವೃತ್ತ ವಿಜ್ಞಾನ ಶಿಕ್ಷಕರು ಶ್ರೀರಾಮಮೂರ್ತಿ ಹಾಗೂ ನನ್ನ ಜಗಲಿಯ ಹಿತೈಷಿಗಳಿಗೆ ಧನ್ಯವಾದಗಳು.
         

ಕಳೆದ ಸಂಚಿಕೆಯ ಜಗಲಿಕಟ್ಟೆ - 44 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ಜಿ ಎಸ್ ಶಶಿಧರ ಹಿರಿಯ ಉಪನ್ಯಾಸಕರು... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....


     ನಮಸ್ಕಾರಗಳು.... ಮಕ್ಕಳ ಪರೀಕ್ಷೆಗಳ ಸರ್ಕಾರದ ಆದೇಶದ ಇದೆ ಮತ್ತು ಇಲ್ಲ ಗಳ ತಲೆ ನೋವಲ್ಲಿ ಪೋಷಕರಿಗೆ ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ದೊಡ್ಡ ತಲೆ ಭಾರಕ್ಕೆ ಪೂರ್ಣ ವಿರಾಮವೊಂದು ಇಟ್ಟಂತಾಯಿತು. ಅದರ ಜೊತೆಗೆ ಕಳೆದ ವಾರದ ಮಕ್ಕಳ ಜಗಲಿಗೆ ಒಂದು ಸುತ್ತು ಹಾಕಿದೆ...                       
      ಮಾನ್ಯ ಶಿಕ್ಷಣಾಧಿಕಾರಿಯವರ "ಜೀವನ ಸಂಭ್ರಮ" ಸಂಚಿಕೆ ಯಲ್ಲಿ ಮನಸ್ಸಿನ ಪರಿಣಾಮ ದ ಬಗ್ಗೆ ಬಹಳ ಚೆನ್ನಾಗಿ ವಿವರಿಸಿದ್ದಾರೆ. ಪರಿಣಾಮ ಎಂದರೆ ಬದಲಾಗುವುದು ಎಂದರ್ಥ. ಮನಸು ಪ್ರತಿ ಕ್ಷಣ ಚಲಿಸುತ್ತದೆ. ಇದರಿಂದಾಗಿ ವಸ್ತುಗಳ ಜ್ಞಾನ ಮತ್ತು ಅನುಭವ ಉಂಟಾಗುತ್ತದೆ ಎಂಬುದನ್ನು ಸುಮಾರು ಉದಾಹರಣೆಗಳ ಮೂಲಕ ತಿಳಿಸಿದ್ದೀರಿ.. ಧನ್ಯವಾದಗಳು ಸರ್ ನಿಮಗೆ.
     ಸ್ಫೂರ್ತಿಯ ಮಾತುಗಳು ಸಂಚಿಕೆ ಯಲ್ಲಿ "ಸ್ಪರ್ಧೆ" ಎಂಬ ವಿಷಯದಲ್ಲಿ ಮಾನ್ಯ ಶಿಕ್ಷಕರು ಬರೆದ ಲೇಖನ ತುಂಬಾ ಒಳ್ಳೆದಿತ್ತು. ಒಂದು ಸ್ಪರ್ಧೆಯಲ್ಲಿ ಗೆಲುವು ಇಬ್ಬರದೇ ಆದರೂ ಸೋಲು ಉಳಿದ ಎಲ್ಲರದ್ದೂ ಆಗಿರುತ್ತದೆ. ಸೋಲು, ಸೋತವರಿಗೆ ಅನುಭವದ ಪಾಠ ಕಲಿಸುತ್ತದೆ. ಸೋಲು ಮತ್ತು ಗೆಲುವು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಮೊದಲು ಗೆದ್ದು ಮತ್ತೆ ಸೋಲುವುದಕ್ಕಿಂತ, ಸೋತು ಗೆಲ್ಲುವುದೇ ನನ್ನ ಪ್ರಕಾರ ಉತ್ತಮ ವಾಗಿರುತ್ತದೆ. 
       "ಮಕ್ಕಳಿಗಾಗಿ ವಿಜ್ಞಾನ" ದಲ್ಲಿ ಒಮ್ಮೆ ಹಿಂತಿರುಗಿ ನೋಡೋಣ ತುಂಬಾ ಸೊಗಸಾಗಿತ್ತು. ವಿಶ್ವ ಹೇಗೆ ರೂಪು ಗೊಂಡಿತು? ಸೂರ್ಯ ಚಂದ್ರ ಹೇಗೆ ರೂಪು ಗೊಂಡಿತು? ಎಂಬುದನ್ನು ಹಿಂದಿನ ಎಲ್ಲಾ ಸಂಚಿಕೆಗಳ ಮೆಲುಕು ಹಾಕಿದ್ದು ಮಕ್ಕಳ ಜೊತೆಗೆ ನಾವುಗಳು ತಿಳಿದು ಕೊಳ್ಳುವ ಹಾಗೆ ಆಯಿತು. ಹಕ್ಕಿ ಕಥೆಯಲ್ಲಿ ಪರಿಚಯಿಸಿದ  "ಬೂದು ತಲೆ ಕಬ್ಬಕ್ಕಿ" ನೋಡಲು ಆಕರ್ಷಕವಾಗಿತ್ತು. ನಿಷ್ಪಾಪಿ ಸಸ್ಯಗಳು ಸಂಚಿಕೆ ಯಲ್ಲಿ ವಿಜಯಾ ಬಿ ಶೆಟ್ಟಿ ಯವರು ಪರಿಚಯಿಸಿದ 'ಪೆತ್ತ ತಜಂಕ್' ನಮಗೂ ಪರಿಚಯ ವಿರುವ ಸಸ್ಯ. ಆದರೆ ಅಷ್ಟು ಮಾಹಿತಿ ಇದೆ ಎಂದು ನಿಮ್ಮ ಸಂಚಿಕೆ ಓದಿದ ಮೇಲೆ ಗೊತ್ತಾಗಿದ್ದು. ಧನ್ಯವಾದಗಳು ಮೇಡಂ. ಹೃದಯದ ಮಾತು ಸಂಚಿಕೆ ಯಲ್ಲಿ ಲೇಖಕರು ಬರೆದ "ಕನಸಿನ ಸ್ಕೂಟರ್ ನಲ್ಲಿ ವಿಧಿಯಾಟ" ಓದಿ ಮನಸಿಗೆ ತುಂಬಾ ಬೇಸರವಾಯಿತು. ತನ್ನ ಜೀವನಕ್ಕೆ ಆಸರೆ ಯಾಗಿದ್ದ ಒಬ್ಬ ಮಗನನ್ನು ಕಳೆದುಕೊಂಡ ಯಶೋಧ ಳ ಕಥೆ ಓದಿ ವಿಷಾದವಾಯಿತು. ಮಗ ಇಷ್ಟ ಪಟ್ಟಾಗ ಅವನಿಗೆ ಸ್ಕೂಟರ್ ಕೊಡಿಸದೆ ಬೇರೆ ದಾರಿ ಇರಲಿಲ್ಲ ಅವಳಿಗೆ. ಮಗನ ಖುಷಿಯೇ ತನ್ನ ಖುಷಿ ಎಂದುಕೊಳ್ಳುವುದು ಅವಳಂತೆಯೇ ಎಲ್ಲಾ ತಾಯಂದಿರ ಆಸೆ.. ರಮೇಶನ ಆ ಆಸೆಯೇ ಅವನ ಜೀವವನ್ನು ಬಲಿ ತೆಗೆದು ಕೊಂಡಿತು.. ಹೌದು ಸರ್ ನೀವು ಹೇಳಿದಂತೆ ಸಣ್ಣ ವಯಸ್ಸಿನ ಮಕ್ಕಳಿಗೆ ದ್ವಿಚಕ್ರ ಓಡಿಸುವ ಬಗ್ಗೆ ಅರಿವು ಮೂಡಿಸುವುದು ಅತೀ ಅಗತ್ಯ ವಾಗಿದೆ.. ಧನ್ಯವಾದಗಳು.... ನಮಗೂ ಭಾಗವಹಿಸಲು ಅವಕಾಶ ಮಾಡಿ ಕೊಟ್ಟಂತಹ ಸಂಪಾದಕರಿಗೆ ವಂದನೆಗಳು 
................................... ಮಲ್ಲಿಕಾ ಧನಂಜಯ್ 
ತುಂಬೆ. ಬಂಟ್ವಾಳ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 80730 76271
******************************************



     ನಮಸ್ತೇ, ಪತಂಜಲಿ ಮಹರ್ಷಿಯವರ ಸೂತ್ರಗಳನ್ನು ಅಳವಡಿಸಿಕೊಂಡು ಮನಸ್ಸನ್ನು ನಿಯಂತ್ರಣದಲ್ಲಿಡುವ ವಿಧಾನಗಳನ್ನು ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ರವರು ತಮ್ಮ ಈ ಸಲದ ಸಂಚಿಕೆಯಲ್ಲಿ ವಿವರವಾಗಿ ಬಹಳ ಸುಂದರವಾಗಿ ತಿಳಿಸಿದ್ದಾರೆ.
    ಸ್ಪರ್ಧೆಯು ನಮ್ಮಲ್ಲಿರುವ ಸಾಮರ್ಥ್ಯವನ್ನು ಅಳೆಯುವ ಮುಖ್ಯ ಸಾಧನ. ಸ್ಪರ್ಧೆಯಲ್ಲಿ ವಿಜೇತರಾಗುವ ಮೊದಲು ನಾವು ನಮ್ಮಲ್ಲಿರುವ ಷಡ್ವೈರಿಗಳನ್ನು ಜಯಿಸಬೇಕು ಪ್ರತಿಯೊಬ್ಬರೂ ಸ್ಪರ್ಧೆಯಲ್ಲಿ ಭಾಗವಹಿಸಬೇಕೆನ್ನುವ ಉತ್ತಮ ಸಂದೇಶದೊಂದಿಗೆ ಸ್ವರ್ಧಾಳುಗಳಿಗೆ ಮಾತ್ರವಲ್ಲದೆ ಎಲ್ಲರಿಗೂ ಉಪಯುಕ್ತ ಲೇಖನ. ಧನ್ಯವಾದಗಳು ಸರ್.
     ಕಳೆದ 20 ಸಂಚಿಕೆಗಳಲ್ಲಿ ಇರುವ ವಿಷಯಗಳನ್ನು ಪುನರಾವಲೋಕನ ಮಾಡಿಕೊಂಡು ಮತ್ತೊಮ್ಮೆ ನೆನಪು ಮಾಡಿಸಿದ ದಿವಾಕರ್ ಸರ್ ರವರ ವೈಜ್ಞಾನಿಕ ಲೇಖನದ ಈ ಸಲದ ಸಂಚಿಕೆ ಸೊಗಸಾಗಿತ್ತು.
    ಅರವಿಂದ ಸರ್ ರವರ ಹಕ್ಕಿಕತೆಯಲ್ಲಿ ಬೂದು ತಲೆಯ ಕಬ್ಬಕ್ಕಿಯ ಪರಿಚಯವು ತುಂಬಾ ಸೊಗಸಾಗಿ ಮೂಡಿ ಬಂದಿದೆ.
    ಮೊದಲು ಹೆಚ್ಚಿನ ಕಡೆಗಳಲ್ಲಿ ಕಂಡು ಬರುವ ಕಾಡು ಹಾಲೆ ಬಳ್ಳಿ ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಕೆಲವೆಡೆಗಳಲ್ಲಿ ಮಾತ್ರ ಕಂಡುಬರುತ್ತದೆ. ನಿಷ್ಪಾಪಿ ಸಸ್ಯಗಳ ಸಂಚಿಕೆಯಲ್ಲಿ ವಿಜಯ ಮೇಡಂ ರವರು ಈ ಗಿಡದ ಪರಿಚಯವನ್ನು ವಿವರವಾಗಿ ನೀಡಿದ್ದಾರೆ.
     ಯುವಕರು ವಾಹನ ಖರೀದಿಸುವುದು ಮಾತ್ರವಲ್ಲ ಅದರ ಅಜಾಗರೂಕ ಚಾಲನೆಯಿಂದ ಆಗುವ ಅನಾಹುತಗಳ ಕುರಿತಾಗಿ ಇಂದಿನ ಯುವಕರಿಗೆ ಸಂದೇಶ ಸಾರುವ ಸಕಾಲಿಕ ಲೇಖನ ಯಾಕೂಬ್ ಸರ್ ರವರಿಂದ.
     ವಾಣಿಯಕ್ಕನವರ ಪುಸ್ತಕ ಪರಿಚಯದಲ್ಲಿ 'ಮಳೆ ಎಲ್ಲಿ ಬೀಳುತ್ತದೆ' ಎನ್ನುವ ಕುತೂಹಲಕಾರಿಯಾದ ಪುಸ್ತಕದ ಪರಿಚಯ ಸೊಗಸಾಗಿ ಮೂಡಿ ಬಂದಿದೆ.
    ರಮೇಶ್ ಉಪ್ಪುಂದರವರ ಪದದಂಗಳ ಸಂಚಿಕೆ ಚೆನ್ನಾಗಿ ಮೂಡಿ ಬಂದಿದೆ.
    ಮಕ್ಕಳ ಚಿತ್ರಗಳ ಎರಡು ಸಂಚಿಕೆಗಳಲ್ಲಿ ಮಕ್ಕಳು ಸೊಗಸಾಗಿ ಚಿತ್ರಬಿಡಿಸಿದ್ದಾರೆ. ಮಕ್ಕಳ ಕವನಗಳಲ್ಲಿ ಶರ್ಮಿಳಾ ಹಾಗೂ ಪ್ರೇಮಾ ಶಿವಪ್ಪ ರವರು ಪ್ರಬುದ್ಧವಾದ ಕವನಗಳನ್ನು ರಚಿಸಿದ್ದಾರೆ. ಚಿತ್ರ ಬಿಡಿಸಿದ ಮಕ್ಕಳಿಗೆ ಹಾಗೂ ಕವನ ರಚಿಸಿದ ಮಕ್ಕಳಿಗೆ ಅಭಿನಂದನೆಗಳು.
    ಅತಿಥಿ ಶಿಕ್ಷಕಿಯಾದ ಸುನಿತಾರವರು ನಮ್ಮೂರ ಶಾಲೆಯ ಸುದ್ದಿ ಎನ್ನುವ ಸಂಚಿಕೆಯಲ್ಲಿ ಅವರು ಮೊದಲು ಶಿಕ್ಷಕಿಯಾದ ಶಾಲೆಯ ಮುಖ್ಯ ಶಿಕ್ಷಕರಿಗೆ ಕುರಿತಾದ ಅನುಭವದ ಬರಹ ತುಂಬಾನೇ ಸೊಗಸಾಗಿತ್ತು. ಧನ್ಯವಾದಗಳು ಮೇಡಂ.
     ಈ ವಾರದ ಜಗಲಿ ಸೊಗಸಾಗಿ ಮೂಡಿಬರಲು ಕಾರಣರಾದ ಎಲ್ಲರಿಗೂ ನನ್ನ ಮನದಾಳದ ಕೃತಜ್ಞತೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************



     'ಪಂಡಿಂಜೆವಾಳ್ಯ ಶಾಲೆ ಮತ್ತು ಮಾತೃ ಹೃದಯದ ಶಿಕ್ಷಕಿ' ಬರಹ ತುಂಬಾ ಚೆನ್ನಾಗಿದೆ. ನಿಜಕ್ಕೂ ಇಂಥವು ಸುದ್ದಿಯಾಗಬೇಕಾದ ಸಂಗತಿ. ಆದರೆ ಇವು ಹೀಗೆ ಗುರುತಿಸಲ್ಪಡುವುದೂ ಕಡಿಮೆ. ಇದು ಒಂದು ಬರಹವಾಗಬಹುದಾದ ಸಂಗತಿ ಎಂದು ಅರ್ಥೈಸಿ ಪ್ರಾಂಜಲ ಮನದಿಂದ ಸೊಗಸಾಗಿ ಬರೆದ ಸುನೀತಾರವರಿಗೆ ವಂದನೆಗಳು. ಇದನ್ನು ಸುದ್ದಿ ಮಾಡಿದ ಜಗಲಿಗೂ ವಂದನೆಗಳು ಎಂದು ಬೇರೆ ಹೇಳಬೇಕಾಗಿಲ್ಲ ತಾನೇ?
      ಮತ್ತೊಂದು ಸಂತೋಷದ ಸಂಗತಿ ಎಂದರೆ ಇಲ್ಲಿ ಉಲ್ಲೇಖಿಸಿರುವ ಶಿಕ್ಷಕಿ ಫ್ಲೇವಿಯಾರವರು ನಮ್ಮ ಸಮಾಲೋಚನ ಸಭೆಯಲ್ಲಿ ಸಿಗ್ತಾ ಇರ್ತಾರೆ. ಇವರು ಚೆನ್ನಾಗಿ ಅಭಿನಯಗೀತೆ ಹೇಳ್ತಾರೆ ಎಂದು ತಿಳಿದಿತ್ತು. ಆದರೆ ಅವರ ಉಳಿದ ವಿಶೇಷ ಗುಣಗಳು ತಿಳಿದಿರಲಿಲ್ಲ. ಒಬ್ಬರ ವಿಶೇಷತೆಯನ್ನು ಇನ್ನೊಬ್ಬರು ಶುದ್ಧಮನದಿಂದ ಜಗಕೆ ಸಾರುವುದೂ ವಿಶೇಷ ಗುಣವೇ. ಹಾಗೆ ಈ ಬರಹವನ್ನು ಬರೆದ ಶಿಕ್ಷಕಿ ಸುನೀತಾರವರಿಗೆ ನನ್ನ ಮೊದಲ ಅಭಿನಂದನೆಗಳು ಸಲ್ಲುತ್ತವೆ. ಜೊತೆಗೆ ಬರಹದ ಕೇಂದ್ರವಾದ ಫ್ಲೇವಿಯಾ ಮೇಡಂರವರಿಗೂ ಹಾರ್ದಿಕ ಅಭಿನಂದನೆಗಳು. 
.................................. ವಿದ್ಯಾ ಕಾರ್ಕಳ, ಶಿಕ್ಷಕಿ
ಸರಕಾರಿ ಉನ್ನತೀಕರಿಸಿದ ಹಿರಿಯ 
ಪ್ರಾಥಮಿಕ ಶಾಲೆ ಹೊಕ್ಕಾಡಿಗೋಳಿ  
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************


     ಪ್ರೀತಿಯೊಂದೇ ಗೆಲ್ಲುವ ಮತ್ತು ಗೆಲ್ಲಿಸುವ ಶಕ್ತಿ.
ಗುರು *ಮಾತೆ* ಯಾಗಿ ತೆರೆದುಕೊಂಡ ಕ್ಷಣಗಳಿಗೆ ಸಾಕ್ಷಿಯಾಗಿ, ಅವರ ಒಲವಿಗೆ ಬರಹದ ಗೌರವವನ್ನಿತ್ತ ಸುನೀತಾ ಮೇಡಂ ಗೆ ಅಭಿನಂದನೆಗಳು. ಫ್ಲೇವಿಯಾ ಮೇಡಂ ಹೀಗೆಯೇ ಎಂದಿಗೂ ಖುಷಿಯಾಗಿರಲಿ. ಅಂಕಣಕ್ಕಿರುವ ಸಾಧ್ಯತೆ ಇತರರಿಗೆ ಸ್ಫೂರ್ತಿಯಾಗುವುದು.
............................ ತೇಜಸ್ವಿ ಅಂಬೆಕಲ್ಲು, ಶಿಕ್ಷಕಿ
ಸರಕಾರಿ ಹಿರಿಯ ಪ್ರಾಥಮಿಕ 
ಶಾಲೆ, ಗೋಳಿತ್ತಟ್ಟು
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************




ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ಮಲ್ಲಿಕಾ ಧನಂಜಯ್ ತುಂಬೆ, ವಿದ್ಯಾ ಕಾರ್ಕಳ ಶಿಕ್ಷಕಿ, ತೇಜಸ್ವಿ ಅಂಬೆಕಲ್ಲು ಶಿಕ್ಷಕಿ ... ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************



Ads on article

Advertise in articles 1

advertising articles 2

Advertise under the article