-->
ಜೀವನ ಸಂಭ್ರಮ : ಸಂಚಿಕೆ - 131

ಜೀವನ ಸಂಭ್ರಮ : ಸಂಚಿಕೆ - 131

ಜೀವನ ಸಂಭ್ರಮ : ಸಂಚಿಕೆ - 131
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
              

ಮಕ್ಕಳೇ.... ಈ ಘಟನೆ ಓದಿ. ಶ್ಯಾಮ ಎಂಬ ತರುಣನಿದ್ದನು. ಒಂದು ಒಳ್ಳೆಯ ಉದ್ಯೋಗದಲ್ಲಿದ್ದನು. ಗಳಿಕೆ ತುಂಬಾ ಜೋರಾಗಿತ್ತು. ಆತ ತುಂಬಾ ದೊಡ್ಡವನಾಗಬೇಕು ಎಲ್ಲರೂ ನನ್ನನ್ನು ಗೌರವಿಸಬೇಕು ಎಲ್ಲರಿಗಿಂತ ನಾನು ಮೇಲೆ ಇರಬೇಕು ಎಂಬ ಮಹದಾಸೆ ಇಟ್ಟುಕೊಂಡಿದ್ದನು. ಆಗ ಒಂದು ಮನೆ ಕಟ್ಟಿಸಲು ಪ್ರಾರಂಭಿಸಿದನು. ತಳಪಾಯ ಆಯಿತು. ಸಮಾಧಾನವಿಲ್ಲ. ಗೋಡೆ ಕಟ್ಟಲು ಪ್ರಾರಂಭಿಸಿದರು, ಆವಾಗ ಆತನ ಮನಸ್ಸಿನಲ್ಲಿ ಇದು ಯಾವಾಗ ಮುಗಿಯುತ್ತದೆ ಎಂಬ ಚಿಂತೆ ಕಾಡುತ್ತಿತ್ತು. ಆರ್‌ಸಿಸಿ ಆಯ್ತು. ಆತನ ಮನಸ್ಸಿನಲ್ಲಿ ಈ ಮನೆಗೆ ಬಣ್ಣ ಯಾವುದನ್ನು ಹಾಕಬೇಕು?. ನೆಲಹಾಸಿಗೆಗೆ ಯಾವ ಮಾರ್ಬಲ್ ತರಬೇಕು?. ಹೀಗೆ ಬರೀ ಚಿಂತೆಯಲ್ಲಿ ಇದ್ದನು. ಗಾರೆ, ಬಣ್ಣ, ನೆಲಹಾಸಿಗೆ ಎಲ್ಲಾ ಮುಗಿದು, ಗೃಹಪ್ರವೇಶ ನಿಗದಿಯಾಯಿತು. ಜನರನ್ನ ಮತ್ತು ಸಂಬಂಧಿಕರನ್ನು ಆಹ್ವಾನಿಸಿದನು. ಬಂದ ಜನರೆಲ್ಲ ಮನೆ ನೋಡಿ ಸಂತೋಷ ಪಡುತ್ತಿದ್ದರು. ಆದರೆ ಆತನ ಮನಸ್ಸು ಸಂತೋಷವಾಗಿರಲಿಲ್ಲ. ಏಕೆಂದರೆ ಆತನ ಮನಸ್ಸು, ಇದಕ್ಕೆ ಏನೇನು ಮಾಡಿದರೆ ಚೆನ್ನಾಗಿರುತ್ತೆ? ಅದಕ್ಕೆ ಯಾರನ್ನು ಸಂಪರ್ಕಿಸಬೇಕು?. ಈಗ ಕಟ್ಟಿಸಿದ ಮನೆ ಆತನಿಗೆ ಸಮಾಧಾನ ತಂದಿರಲಿಲ್ಲ. ಗೃಹಪ್ರವೇಶದ ದಿನ ಸಂಜೆಯಾಯಿತು ಸಂಜೆ ಹೃದಯಘಾತದಿಂದ ದೇಹ ತ್ಯೆಜಿಸಿದನು.
        ಇನ್ನೊಂದು ಘಟನೆ, ರಮೇಶ ಎನ್ನುವ ತರುಣ ಇದ್ದನು. ಆತನು ಒಳ್ಳೆಯ ಉದ್ಯೋಗದಲ್ಲಿದ್ದನು. ಆದರೆ ಆತನ ಗಳಿಕೆ ಸಂಬಳ ಕಡಿಮೆ. ಬಂದುದನ್ನೇ ಸರಿಯಾಗಿ, ಸುಂದರವಾಗಿ ಬಳಸಿ ತೃಪ್ತಿಯಲ್ಲಿದ್ದನು. ಆತನು ಭಡ್ತಿಗೆ ಹೆಸರು ಪ್ರಕಟವಾಯಿತು. ಆದರೆ ಭಡ್ತಿ ನೀಡುವಾಗ, ಕೆಲವರಿಗೆ ಭಡ್ತಿ ನೀಡಿ ಈತನ ಹೆಸರು ಕೈಬಿಟ್ಟಿತು. ಆಗ ಆತನು ಒಂದು ಆಲೋಚನೆ ಮಾಡಿದ. ಆತನ ತಂದೆ ಆತನಿಗಾಗಿ ನಗರದಲ್ಲಿ ಒಂದು ಸಣ್ಣ ಜಾಗ ಖರೀದಿ ಮಾಡಿದ್ದರು. ಈತ ಯೋಚಿಸಿದ, ಭಡ್ತಿಯಾಗಿ ಬೇರೆ ಊರಿಗೆ ಹೋದರೆ ಮನೆ ಕಟ್ಟಲು ಆಗುವುದಿಲ್ಲ. ಈಗಲೇ ಕಟ್ಟೋಣ ಎಂದು ತೀರ್ಮಾನಿಸಿದ. ಆದರೆ ಆತನ ಬಳಿ ಕೇವಲ ಒಂದು ಲಕ್ಷ ಮಾತ್ರ ಇತ್ತು. ಪ್ರಾರಂಭಿಸೋಣ ಎಂದು ಶುರು ಮಾಡಿದ. ತಳಪಾಯಕ್ಕಾಗಿ ನೆಲ ಅಗೆದು ಗುಂಡಿ ಮಾಡಿದರು. ಆ ಆಕೃತಿ ನೋಡಿ ಸಂತೋಷ ಪಟ್ಟನು. ಬ್ಯಾಂಕಿನಿಂದ ಒಂಬತು ಲಕ್ಷ ಸಾಲ ಮಂಜೂರಾಯಿತು. ಅದು ಮೂರು ಹಂತದಲ್ಲಿ ನೀಡುತ್ತಿದ್ದರು. ಆಗ ರಮೇಶನ ಭಾವ ಮೈದ ಎರಡು ಲಕ್ಷ ಸಾಲ ನೀಡಿದನು. ಅದರಲ್ಲಿ ತಳಪಾಯ ಆಯ್ತು. ತಳಪಾಯದ ಮೇಲೆ ಕುಳಿತು ಸಂತೋಷ ಪಡುತ್ತಿದ್ದನು. ತನ್ನ ಕೈಯಲ್ಲಿ ಆಗುವಷ್ಟು ಕೆಲಸ ಮಾಡುತ್ತಿದ್ದನು. ಪ್ರತಿ ಹಂತದಲ್ಲೂ ಸಂತೋಷಪಡುತ್ತಿದ್ದನು. ಹೀಗಿರಬೇಕಾದರೆ ಚುನಾವಣೆ ಕೆಲಸಕ್ಕೆ ಹೋಗಬೇಕಾಯಿತು. ಆ ಸಮಯದಲ್ಲಿ ಗೋಡೆ ಕೆಲಸ ಪ್ರಾರಂಭವಾಗಿತ್ತು. ದೂರವಾಣಿಯಲ್ಲಿ ಕೆಲಸ ಹೇಗೆ ನಡೆಯುತ್ತಿದೆ?. ಹೇಗೆ ಕಾಣುತ್ತದೆ?. ಇದನ್ನೆಲ್ಲ ಕೇಳಿ ಸಂತೋಷ ಪಡುತ್ತಿದ್ದನು. ಚುನಾವಣೆ ಮುಗಿದು ಬರುವ ಹೊತ್ತಿಗೆ ಆರ್‌ಸಿಸಿಗೆ ಸಿದ್ಧವಾಗಿತ್ತು. ಗೆಳೆಯರೆಲ್ಲರೂ ಸೇರಿ ಆರ್‌ಸಿಸಿ ಮುಗಿಸಿದರು. ನಂತರ ಎಲ್ಲರಿಗೂ ಔತಣ ನೀಡಿ ಸಂತೋಷ ಪಟ್ಟನು. ಮನೆ ಮೇಲೆ ಒಂದು ರೂಮ್ ಹಾಕುವ ಯೋಜನೆ ಇತ್ತು. ಆದರೆ ಕಬ್ಬಿಣ ಮತ್ತು ಇಟ್ಟಿಗೆ ಹೆಚ್ಚು ಉಳಿದಿತ್ತು. ಗೆಳೆಯರೆಲ್ಲರೂ ಸೇರಿ ಹೇಳಿದರು. ಪೂರ್ಣ ಆರ್ ಸಿ ಸಿ ಹಾಕಿಸು. ಒಳಗಡೆಯ ಕೆಲಸವನ್ನು ಸಾವಕಾಶವಾಗಿ, ಹಣ ದೊರೆತಂತೆ ಮಾಡಿದರಾಯಿತು ಎಂದು ಹೇಳಿದರು. ಕೆಳಗಡೆ ಪೂರ್ಣ ಮಾಡಿ ವಾಸ ಮಾಡು ಎಂದರು. ಧೈರ್ಯ ಮಾಡಿ ಮೇಲಿನ ಕಟ್ಟಡವನ್ನು ಪೂರ್ಣಗೊಳಿಸಲಾಯಿತು. ಗೆಳೆಯರ ಸಹಕಾರದಿಂದ ನೆಲಹಾಸು, ಬಣ್ಣ ಎಲ್ಲಾ ಆಯಿತು. ಆತ ಪ್ರತಿ ಹಂತದ ಸೌಂದರ್ಯ ಮನಸ್ಸಿನಲ್ಲಿ ತುಂಬಿಕೊಂಡು ಸಂತೋಷಪಡುತ್ತಿದ್ದನು. ಆಗ ಒಬ್ಬರು ಮನೆ ಲೀಸ್ ಗೆ ಕೊಡುತ್ತೀರಾ ಎಂದು ಕೇಳಿಕೊಂಡು ಬಂದರು. ಎರಡೂವರೆ ಲಕ್ಷಕ್ಕೆ ಲೀಸ್ ನೀಡಿ ಮನೆ ಪೂರ್ಣಗೊಳಿಸಿ, ಗೃಹಪ್ರವೇಶವನ್ನು ಎಲ್ಲರನ್ನೂ ಕರೆದು ಔತಣ ನೀಡಿ ಸಂತೋಷಪಟ್ಟನು. ನಾಲ್ಕು ತಿಂಗಳುವಾಸ ಮಾಡಿದ್ದನು. ಅಷ್ಟರಲ್ಲಿ ಭಡ್ತಿ ಬಂದು ಬೇರೆ ಊರಿಗೆ ಹೋದನು. 
         ಭಡ್ತಿ ಹೊಂದಿದ ಸ್ಥಳದಲ್ಲಿ ಒಬ್ಬ ಗೆಳೆಯ ಆದನು. ಆತ ಶಿಕ್ಷಕ. ಶ್ರಮಜೀವಿ. ಮಿತವಾದ ಜೀವನ ಸಾಗಿಸುತ್ತಿದ್ದನು. ಆತನ ಪತ್ನಿಯು ಶಿಕ್ಷಕಿ. ಕಷ್ಟ ಕಾಲಕ್ಕೆ ಆಗುತ್ತದೆ ಎಂದು ಚಿನ್ನ ಖರೀದಿಸಿ ಇಡುತ್ತಿದ್ದರು. ಆದರೆ ಅದನ್ನು ಹಾಕಿಕೊಂಡು ಸಂತೋಷಪಡಲಿಲ್ಲ. ಬರೀ ಖರೀದಿಸಿದ್ದು ಮನೆಯಲ್ಲಿ ಇಟ್ಟಿದ್ದು ಅಷ್ಟೇ. ಒಮ್ಮೆ ದಂಪತಿಗಳು ಕೆಲಸಕ್ಕೆ ಹೋಗಿದ್ದಾಗ ಕಳ್ಳತನವಾಗಿ ಆ ಚಿನ್ನವೆಲ್ಲ ಕಳೆದುಹೋಯಿತು. ದಂಪತಿಗಳು ಬಹಳ ದುಃಖ ಪಡುತ್ತಿದ್ದರು. ಏಕೆಂದರೆ ಅದನ್ನು ಬಳಸಿರಲಿಲ್ಲ.
       ಈ ಮೂರು ಘಟನೆ ವಿಶ್ಲೇಷಣೆ ಮಾಡಿದರೆ ಏನು ಕಂಡು ಬರುತ್ತದೆ ಅಂದರೆ. "ಇದ್ದಾಗ ಇಲ್ಲದ್ದನ್ನು ಬಯಸುವುದು. ಇದ್ದದ್ದು ಹೋದಾಗ ದುಃಖ ಪಡುವುದು". ಇದು ಮನುಷ್ಯನ ಸ್ವಭಾವವಾಗಿದೆ. "ತೃಪ್ತನಾದವನು ಇರುವುದನ್ನು ಸುಂದರವಾಗಿ ಬಳಸಿ ಆನಂದಿಸುತ್ತಾನೆ. ಇಲ್ಲದಕ್ಕೆ ಚಿಂತೆ ಮಾಡುವುದಿಲ್ಲ. ಹೋದದ್ದಕ್ಕೆ ಚಿಂತಿಸುವುದಿಲ್ಲ." ಮಕ್ಕಳೇ... ನಾವು ನಮ್ಮಲ್ಲಿ ನಿಸರ್ಗ ಏನು ಅಳವಡಿಸಿದೆಯೋ ಮತ್ತು ಏನು ದೊರಕಿದೆಯೋ ಅದನ್ನು ಸುಂದರವಾಗಿ ಬಳಸಿಕೊಳ್ಳಬೇಕು ಅಲ್ಲವೇ ಮಕ್ಕಳೇ.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************

Ads on article

Advertise in articles 1

advertising articles 2

Advertise under the article