-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 44

ನಿಷ್ಪಾಪಿ ಸಸ್ಯಗಳು : ಸಂಚಿಕೆ - 44

ನಿಷ್ಪಾಪಿ ಸಸ್ಯಗಳು : ಸಂಚಿಕೆ - 44
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

      
ಪ್ರೀತಿಯ ಮಕ್ಕಳೇ ಹೇಗಿದ್ದೀರಿ.....?
       ನಾವು ನಮ್ಮ ಬಾಲ್ಯದಲ್ಲಿ ಸಂಜೆ ಶಾಲೆಬಿಟ್ಟು ಮನೆಗೆ ಬಂದರೆ ದನಕರುಗಳನ್ನು ಮೇಯಿಸಬೇಕಾದ ಕೆಲಸ ಕಾದಿರುತ್ತಿತ್ತು. ಬೆಳಗ್ಗೆ ಶಾಲೆಗೆ ಹೊರಡುವ ಮೊದಲು ಹಟ್ಟಿಗೆ ಸೊಪ್ಪು ತರಬೇಕಾದ ಅನೌಪಚಾರಿಕ ಕಟ್ಟಳೆಯಿತ್ತು. ಸಂಜೆಗೆ ಜಾನುವಾರುಗಳ ಜೊತೆಗೆ ಖುಷಿ ಪಟ್ಟರೆ ಬೆಳಗ್ಗಿನದ್ದು ಧಾವಂತದ ಕೆಲಸ. ಸೊಪ್ಪು ಸುಲಲಿತವಾಗಿ ಕೈಗೆ ಸಿಕ್ಕರೆ ಸರಸರನೆ ಕೊಯ್ದು ಕಟ್ಟು ಮಾಡಲು ಬಹಳ ಮಜಾ ಅನಿಸುತ್ತಿತ್ತು. ಎಲ್ಲಾದರು ಎಂಜಿರ್ ಸೊಪ್ಪು ಸಿಕ್ಕರೆ ಅದರ ಸಂತಸ ಹೇಳಲಾಗದು. 
    ಎಂಜಿರ್ ಬಳ್ಳಿ ಒಂದು ಪೊದೆ ಸಸ್ಯವಾಗಿದ್ದರೂ ಸಣ್ಣ ಪುಟ್ಟ ಮರಗಿಡಗಳು ಜೊತೆಗಿದ್ದರೆ ಮೇಲೇರಿ ಹಬ್ಬುವುದು ಅದರ ರೂಢಿ. ಹೀಗಾಗಿ ಒಂದು ಬುಡ ಸಿಕ್ಕರೂ ಸಾಕಷ್ಟು ಸೊಪ್ಪು ಸಿಕ್ಕಿತೆಂದೇ ಅರ್ಥ. ಈ ಸೊಪ್ಪು ಬಹಳ ಮೃದು. ಎಲೆಗಳಲಿ ಮೃದುವಾದ ಕೂದಲುಗಳಿದ್ದು ತುಪ್ಪಳದಂತೆ ಕೈಗೆ ಮಧುರ ಅನುಭೂತಿ ನೀಡುತ್ತವೆ. ಅದನ್ನು ಹಟ್ಟಿಗೆ ಹಾಕಿ ಅದರ ಮೇಲೆ ದನಗಳು ಮಲಗಿ ನಿದ್ರಿಸುವುದನ್ನು ಕಂಡರೆ ಅವುಗಳಿಗೂ ಸ್ವರ್ಗ ಸುಖ ನೀಡುತ್ತದೆಯೇನೋ ಅಂದುಕೊಳ್ಳುತ್ತಿದ್ದೆವು. ಭಾನುವಾರ ಸೊಪ್ಪಿಗೊ, ಕಟ್ಟಿಗೆಗೋ ಕಾಡುಹೊಕ್ಕು ಹೊತ್ತೇರಿ ಬಾಯಾರಿದರೆ ಈ ಎಂಜಿರ್ ಬಳ್ಳಿಯನ್ನೇ ಕಡಿದು ಅದರೊಳಗಿನ ನೀರನ್ನು ಸವಿಯುತ್ತಿದ್ದೆವು. ಕಣ್ಣಿಗೆ ಕಸ ಬಿದ್ದರೂ ಇದರ ನೀರನ್ನೇ ಕಣ್ಣಿಗೂ ಹಾಕುತ್ತಿದ್ದರು. ಹೂವಾಗುವ ಸಮಯದಲ್ಲಿ ಗೊಂಚಲು ಗೊಂಚಲಾಗಿ ಅರಳಿದ ಅವುಗಳ ಶಾಖೆಗಳನ್ನೇ ಕತ್ತರಿಸಿ ತಂದು ಸ್ವಲ್ಪ ನೀರು ಹಾಕಿದ ಲೋಟ, ಗ್ಲಾಸುಗಳಲ್ಲಿ ಇಟ್ಟು ಮನೆಯೊಳಗೇ ನೋಡಿ ಖುಷಿಪಡುತ್ತಿದ್ದೆವು.
      ಪಾಳು ಭೂಮಿ, ನಿತ್ಯಹರಿದ್ವರ್ಣ ಕಾಡು, ಪಶ್ಚಿಮ ಘಟ್ಟಗಳಲ್ಲಿ ಸಾಮಾನ್ಯವಾಗಿರುವ ಈ ಎಂಜಿರ್ ಎಂಬ ತುಳು ಭಾಷೆಯ ಹೆಸರುಳ್ಳ ನಿಷ್ಪಾಪಿ ಸಸ್ಯವು ಗೆಟೊನಿಯಾ ಫ್ಲೋರಿಬಂಡ (Getonia floribunda) ಎಂಬ ಶಾಸ್ತ್ರೀಯ ಹೆಸರು ಪಡೆದಿದೆ. ಕಾಂಬ್ರೆಟೇಸಿ ಕುಟುಂಬಕ್ಕೆ ಸೇರಿದೆ. ಪೇಪರ್ ಫ್ಲವರ್ ಕ್ಲೈಂಬರ್ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಈ ಸಸ್ಯವನ್ನು ಕನ್ನಡದಲ್ಲಿ ಹಂಜರಿಕೆ ಕುಚ್ಚು, ಮರಸಡ ಚೆಂಡು, ಉಕ್ಷಿ ಹಾಗೆಯೇ ಸಂಸ್ಕೃತ ದಲ್ಲಿ ಶ್ವೇತ ಧಾತಕಿ ಎಂದೂ ಕರೆಯುವರು. ದಕ್ಷಿಣ ಹಾಗೂ ಆಗ್ನೇಯ ಏಷ್ಯಾ, ಭಾರತ, ಬಾಂಗ್ಲಾ, ಬರ್ಮಾ, ಥೈಲ್ಯಾಂಡ್, ದ.ಚೀನ, ಮಲೇಷ್ಯಾ ಭೂಭಾಗದ ತುಂಬಾ ಇದು ಹರಡಿದೆ. ಐದರಿಂದ ಹತ್ತು ಮೀಟರ್ ಉದ್ದ ಬೆಳೆಯಬಲ್ಲ ಈ ಸಸ್ಯ ಹತ್ತಿಪ್ಪತ್ತು ಸೆಂಟಿಮೀಟರ್ ವ್ಯಾಸದ ಬಳ್ಳಿಯಾಗಬಲ್ಲದು. ಕೆಲವೊಮ್ಮೆ ಸಣ್ಣ ಪುಟ್ಟ ಮರಗಳು ಈ ಬಳ್ಳಿಯ ಸೊಪ್ಪಿನ ಭಾರಕ್ಕೆ ತಾನು ಬೆಳೆಯಲಾರದೆ ಹೈರಾಣಾಗಿ ಹೋಗುವುದುಂಟು. ಕೆಲವೊಮ್ಮೆ ಜೋರಾಗಿ ಬೀಸುವ ಮಳೆಗಾಳಿಗೆ ಮರವೇ ಧರೆಗುರುಳುತ್ತವೆ. ಅರಣ್ಯವಾಸಿಗಳು ಈ ಸಸ್ಯವು ನೀರನ್ನು ಹಿಡಿದಿಟ್ಟುಕೊಳ್ಳುವುದರಿಂದ 'ಜೀವರಕ್ಷಕ' ಎಂದು ಪೂಜಿಸುತ್ತಾರೆ. ಕೇರಳದ ಕಾವು ಗಳಲ್ಲಿ ಅಥವಾ ಪವಿತ್ರ ತೋಪುಗಳಲ್ಲಿ ಈ ಸಸ್ಯವನ್ನು ಕಾಣಬಹುದು. ಇತ್ತೀಚೆಗೆ ಈ ಗಿಡವನ್ನು ನರ್ಸರಿಗಳಲ್ಲೂ ಬೆಳೆಸುತ್ತಾರೆ. ಮಾತ್ರವಲ್ಲದೆ ಕೊರಿಯರ್ ಮೂಲಕ ಆನ್ಲೈನ್ ವ್ಯಾಪಾರವೂ ನಡೆಯುತ್ತಿದೆ.
     ನೀವು ಪ್ರಸ್ತುತ ಕಾಲದಲ್ಲಿ ಅಂದರೆ ಮಾರ್ಚ್, ಎಪ್ರಿಲ್ , ಮೇ ತಿಂಗಳುಗಳಲ್ಲಿ ಸುಲಭವಾಗಿ ಈ ಗಿಡವನ್ನು ಗುರುತಿಸಬಲ್ಲಿರಿ. ಈ ಕಾಲದಲ್ಲಿ ತಿಳಿ ಹಸಿರಿನಿಂದ ಮುದ್ದಾಗಿ ಕಂಗೊಳಿಸುವ ಗಿಡಗಳೆಲ್ಲ ಮದುಮಗಳಂತೆ ತಲೆ ತುಂಬಾ ಹೂಮಾಲೆ ಮುಡಿದು ಕಂಗೊಳಿಸುತ್ತಿವೆ. ಹೂಗಳೆಂದರೆ ಒಂದೋ ಎರಡೋ ಗೊಂಚಲುಗಳಲ್ಲ. ಗಿಡದ ಅಥವಾ ಬಳ್ಳಿಯಾಗಿ ಹಬ್ಬಿದ್ದರೆ ಇಡೀ ಬಳ್ಳಿಯಲ್ಲಿ ಮೂಡಿ ಬೆಳೆದ ಎಲ್ಲಾ ಶಾಖೆಗಳ ತುದಿ ಭಾಗಗಳು ಹೆಚ್ಚು ಕವಲೊಡೆದ ಹೂ ಗೊಂಚಲುಗಳಿಂದ ಬಾಗಿರುತ್ತವೆ.
     ಈ ಹೂವುಗಳು ಬರಿಯ ಹೂವುಗಳಲ್ಲ ಎಂಬುದನ್ನು ನಾವಿಲ್ಲಿ ಗಮನಿಸಬೇಕು. ಪ್ರತಿ ಗೊಂಚಲಲ್ಲಿ ಕಡಿಮೆ ಎಂದರೂ 20 ರಿಂದ 50 ಹೂಗಳಿದ್ದು ಇಂತಹ ನೂರಾರು ಗೊಂಚಲುಗಳು ಗಿಡವನ್ನೇ ಮರೆಮಾಡಿ ಬಿಡುತ್ತವೆ. ಈ ಗಿಡ ಎಷ್ಟೊಂದು ಅಲಂಕಾರಪ್ರಿಯ ವೆಂದರೆ ಹೂಗಳು ಎಲೆಗಳ ಅಕ್ಷಾ ಕಂಕುಳಲ್ಲೇ ಮೂಡುತ್ತಾ ಎಲೆಯದ್ದೇ ಬಣ್ಣವನ್ನು ಹೊಂದಿರುತ್ತದೆ. ನಸು ಹಳದಿ ಮಿಶ್ರ ಹಸಿರು ಬಣ್ಣದ ಹೂಗಳು ದೂರಕ್ಕೆ ಎಲೆಗಳೋ ಹೂವುಗಳೋ ಎಂದು ಕಣ್ಣರಳಿಸುವಂತೆ ಮಾಡುತ್ತವೆ. ಹತ್ತಿರಕ್ಕೆ ಹೋದಾಗ ಐದೈದು ಎಸಳಿನ ನಡುವೆ ಕೇಸರಗಳ ಗುಂಪೊಂದನ್ನು ಕಾಣಬಹುದು. ಮೇಲ್ನೋಟಕ್ಕೆ ಕಾಣುವ ಎಸಳಿನಂತಹ ಭಾಗಗಳು ನಿಜದ ಹೂ ದಳಗಳಲ್ಲ. ಅವೇನಿದ್ದರೂ ತನ್ನ ಮೂಲಕ್ಕೆ ಅಂಟಿ ಬೆಳೆಯುವ ಬೀಜವೊಂದನ್ನು ತಾಯಿ ಸಸ್ಯದಿಂದ ದೂರ ಸಾಗಿಸಲು ಇರುವ ಸಾಧನ!. ಆ ನಯವಾದ ಐದು ದಳಗಳು ಅಥವಾ ರೆಕ್ಕೆಗಳು ಗಿಡದಲ್ಲೇ ಒಣಗಿ ನಿಧಾನಕ್ಕೆ ಉದುರಿ ಗಿರಿಗಿಟ್ಟಿಯಂತೆ ಹಾರುತ್ತಾ ದೂರ ಸಾಗುತ್ತವೆ. ನೀರಿನಲ್ಲೂ ಇವು ತೇಲುತ್ತಾ ಬೀಜ ಮೊಳಕೆಯೊಡೆಯಲು ಯೋಗ್ಯ ಸ್ಥಾನ ದೊರಕುವವರೆಗೂ ಜೊತೆಗಿರುತ್ತವೆ. ಒಟ್ಟಿನಲ್ಲಿ ಎಷ್ಟು ಸುಂದರವಾದ ರಚನಾತ್ಮಕ ಸಂಯೋಜನೆ ಅಲ್ಲವೇ? 
         ಮುಂಬಯಿ ಯ ಕೊಳೆಗೇರಿಗಳಲ್ಲೂ ಹಬ್ಬಿ ನಗುವ ಈ ಸಸ್ಯ ಆಯುರ್ವೇದ, ಜಾನಪದ, ಯುನಾನಿ ಪದ್ದತಿಗಳಲ್ಲಿ ಗಿಡಮೂಲಿಕೆಯಾಗಿದೆ. ಗಾಯ ಬೇಗನೆ ಒಣಗಲು, ಮಲೇರಿಯಾ, ಕುಷ್ಠ, ಭೇದಿ, ಹುಣ್ಣು, ವಾಂತಿ, ಕರುಳಿನ ಸಮಸ್ಯೆ , ಹಾವಿನ ವಿಷ ಇಳಿಕೆಗೆ ಸಹಾಯಕವಾಗಿದೆ. ಬುಟ್ಟಿ ಹೆಣೆಯಲು ಬೆತ್ತವನ್ನು ಬಳಸುವ ಕಾಲವೊಂದಿತ್ತು. ಇಂದು ಘಟ್ಟದ ಇಳಿಜಾರುಗಳಲ್ಲಿ ಹಬ್ಬಿದ್ದ ಬೆತ್ತದ ಗಿಡಗಳು ಮಾಯವಾಗಿ ಅಳಿದುಳಿದ ಕೃಷಿ ಕಾರ್ಯಕ್ಕೆ ಬುಟ್ಟಿಗಳು ಬೇಕಿದ್ದರೆ ಈ ಎಂಜಿರ್ ಬಳ್ಳಿಯನ್ನೇ ಬಳಸುವ ಅನಿವಾರ್ಯತೆ ಎದುರಾಗಿದೆ.
        ಮಕ್ಕಳೇ, ರಜೆಯಲ್ಲಿ ಈ ಗಿಡವನ್ನು ಹುಡುಕಿ ಅದರ ವೆಲ್ವೆಟ್ ನಂತೆ ಮೃದುವಾಗಿರುವ ಎಲೆಗಳ ಮೇಲೊಮ್ಮೆ ಕೈಯಾಡಿಸಿ. ನಿಮ್ಮನ್ನದು ಆಪ್ತತೆಯಿಂದ ಕಣ್ಣರಳಿಸಿ ನೋಡುವುದನ್ನು ಗಮನಿಸಿ. ಗಿಡದ ಜೊತೆ ಮಾತನಾಡಲು ಕಲಿಯಿರಿ. ಅದರ ಕಷ್ಟ ಸುಖಗಳನ್ನು ವಿಚಾರಿಸಿ. ಗಿಡದ ಭಾಷೆ ಅರ್ಥೈಸಿಕೊಳ್ಳುತ್ತಾ ಸ್ನೇಹ ಬೆಳೆಸಿರಿ...
        ಸರಿ ಮಕ್ಕಳೇ.. ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.. ನಮಸ್ಕಾರ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************



Ads on article

Advertise in articles 1

advertising articles 2

Advertise under the article