ಹೃದಯದ ಮಾತು : ಸಂಚಿಕೆ - 36
Thursday, April 4, 2024
Edit
ಹೃದಯದ ಮಾತು : ಸಂಚಿಕೆ - 36
ನಾನು ಹತ್ತು ಹಲವು ಲೇಖನಗಳನ್ನು ಓದುತ್ತಿದ್ದೆ. ಪ್ರತಿಬಾರಿಯೂ "ನನಗೂ ಏನಾದರೂ ಬರೆಯಬೇಕು" ಎಂಬ ಆಸೆ ಮನದೊಳಗೆ ಪುಟಿದೇಳುತ್ತಿತ್ತು. ಪತ್ರಿಕೆಯಲ್ಲಿ ಒಂದು ಲೇಖನವಾದರೂ ಪ್ರಕಟವಾಗಬೇಕೆಂಬ ತುಡಿತ. ಆದರೆ "ಹೇಗೆ ಬರೆಯಲಿ?" ಎಂಬುವುದೇ ಅರ್ಥವಾಗುತ್ತಿರಲಿಲ್ಲ. ಬರವಣಿಗೆಗೆ ಒಂದು ವಿಷಯಬೇಕು. ಅದಕ್ಕೊಂದು ಉತ್ತಮ ಆರಂಭವೂ ಬೇಕು. ಇಲ್ಲಾ ಅಂದರೆ ಅದನ್ನು ಯಾರೂ ಓದುವುದಿಲ್ಲ. ಕೆಲವರ ಬರಹಗಳಂತೂ ಅದ್ಭುತವಿರುತ್ತಿತ್ತು. ಅದರಲ್ಲಿ ಜೀವನದ ಪಾಠಗಳಿರುತ್ತಿತ್ತು. ಬದುಕಿಗೆ ಸಂದೇಶಗಳಿರುತ್ತಿತ್ತು. ಪ್ರಸ್ತುತ ವಿದ್ಯಾಮಾನಗಳ ಉಲ್ಲೇಖವಿರುತ್ತಿತ್ತು.
...................... ಯಾಕೂಬ್ ಎಸ್ ಕೊಯ್ಯೂರು

ನನ್ನ ಲೇಖನಗಳ ಸಂಗ್ರಹ (ಒಟ್ಟು62) ಪುಸ್ತಕದ ರೂಪದಲ್ಲಿ ಲಭ್ಯವಿದೆ. ಆಸಕ್ತಿಯುಳ್ಳ ಓದುಗರು ಸಂಪರ್ಕಿಸಬಹುದು....... ಯಾಕೂಬ್ ಎಸ್ ಕೊಯ್ಯೂರು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ

ಲೇಖಕರು : ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಅನೇಕ ಬಾರಿ ನಾನು ಬರೆಯಬೇಕೆಂದು ಕುಳಿತಿದ್ದೆ. ಆದರೂ ನಾಲ್ಕು ಗೆರೆ ಬರೆಯುವಷ್ಟರಲ್ಲಿ ಸುಸ್ತಾಗಿಬಿಟ್ಟಿದ್ದೆ. ಇವತ್ತು ಒಂದು ದೃಢ ನಿರ್ಧಾರ ತಾಳಿದ್ದೇನೆ. ಏನಾದರೂ ಬರೆಯಲೇ ಬೇಕೆಂದು. ಬರೆಯುವಾಗ ಮನೆಯವರ ಅಡ್ಡಿ ಇರಬಾರದೆಂದು ರಾತ್ರಿ ಅವರೆಲ್ಲಾ ಮಲಗಿದ ಮೇಲೆ ಬರೆಯಲು ಕೂತಿದ್ದೆ. ಮೊಬೈಲ್ ಪ್ಲೈಟ್ ಮೋಡ್ ನಲ್ಲಿಟ್ಟಿದ್ದೆ. ನನ್ನ ಪ್ರಪ್ರಥಮ ಬರಹವನ್ನು ಹೇಗಾದರೂ ಈ ದಿನ ಬರೆಯಲೇಬೇಕೆಂಬ ಹಟ ನನ್ನದಾಗಿತ್ತು.
ನನ್ನ ಬರಹಕ್ಕೆ ಒಂದು ವಿಷಯಬೇಕಿತ್ತು. ಎಷ್ಟೇ ಯೋಚಿಸಿದರೂ ಹೊಳೆಯುತ್ತಿಲ್ಲ. ಶೀರ್ಷಿಕೆ ಕೊನೆಗೆ ಕೊಟ್ಟರೆ ಸಾಕಿತ್ತು. ಆದರೆ ವಿಷಯ ಬೇಕಲ್ವಾ? ತುಂಬಾ ಯೋಚಿಸಿದೆ. ಅದಾಗಲೇ ಅರ್ಧ ಗಂಟೆ ಕಳೆದು ಹೋಗಿತ್ತು. "ಪ್ರಸ್ತುತ ರಾಜಕೀಯದ ಬಗ್ಗೆ ಬರೆದರೇನು?" ಎಂದು ಹೊಳೆದದ್ದೇ ತಡ ಬರೆಯಲು ಆರಂಭಿಸಿದೆ. ಎರಡು ವಾಕ್ಯ ಬರೆದಿದ್ದೆ. ತಲೆಯೊಳಗೆ ಸಾಮಾಜಿಕ ಮಾಧ್ಯಮದಲ್ಲಿ ಓದಿದ ಲೇಖನವೊಂದು ನೆನಪಾಯಿತು. ಅದನ್ನು ಬರೆದ ಲೇಖಕ ವಾಸ್ತವಿಕತೆಯ ಬಗ್ಗೆನೇ ಬರೆದಿದ್ದ. ಆದರೂ ಓದುಗರು ಅವನನ್ನು ಹಿಗ್ಗಾ ಮುಗ್ಗಾ ಜಾಡಿಸಿದ್ದರು. ಅದೂ ಅಶ್ಲೀಲ ಪದಗಳಿಂದ. ಅದರ ಬಗ್ಗೆ ಬೆರಳೆಣಿಕೆಯ ಮಂದಿಯ ಪ್ರಶಂಸೆ ಮಾತ್ರ ಇತ್ತು. ನನಗೆ ಭಯ ಕಾಡತೊಡಗಿತು. ಎಲ್ಲರನ್ನೂ ಮೆಚ್ಚಿಸುವ ಬರಹ ರಾಜಕೀಯ ವಿಷಯದಲ್ಲಿ ಅಸಾಧ್ಯ ಎಂದು ಮನವರಿಕೆಯಾಯಿತು.
ಬರೆದ ಗೆರೆಗಳನ್ನು ಅಳಿಸಿದೆ. ಅದಾಗಲೇ ಐದಾರು ಪೇಪರ್ ಗಳು ಕಸದಬುಟ್ಟಿ ಸೇರಿ ಆಗಿತ್ತು. ನನಗೆ ಮತ್ತೆ ಹೊಳೆದದ್ದು "ಜಾತೀಯತೆ, ಕೋಮುವಾದ" ಇವುಗಳಿಗೆ ಸಂಬಂಧಿಸಿದ ಬಗ್ಗೆ ಬರೆದರೇನು? ಎಂದು ಯೋಚಿಸಿದೆ. ನಾನು ಅವುಗಳ ವಿರುದ್ಧವೇ ಬರೆಯಬೇಕಿತ್ತು. ಆ ಎರಡು ವಿಷಯಗಳು ಬಹುಕಾಲದಿಂದ ನನ್ನ ಮನಸ್ಸನ್ನು ಕದಡಿದ ವಿಷಯಗಳಾಗಿತ್ತು. ನಾವೆಲ್ಲಾ "ಮನುಷ್ಯರು ತಾನೇ?" ಮತ್ತೇಕೆ ನಮ್ಮೊಳಗೆ ಭೇದಭಾವ ಎಂದು ಸದಾ ನನಗನಿಸುತ್ತಿತ್ತು. ನಮ್ಮೊಳಗಿನ ದ್ವೇಷ ಬದಿಗಿಟ್ಟು ಒಟ್ಟಾಗಿ, ಒಂದಾಗಿ ಬಾಳಬಾರದೇ? ಎಂದನ್ನಿಸುತ್ತಿತ್ತು. ಪ್ರಾಥಮಿಕ ಶಾಲೆಯ ಬೆಂಚಿನಲ್ಲಿ ಒಟ್ಟಿಗೆ ಕುಳಿತು ಒಂದಾಗಿ ಆಟವಾಡುತ್ತಿದ್ದಾಗ ಜಾತಿ, ಧರ್ಮಗಳ ಎಲ್ಲೆ ಮೀರಿ ಕಳೆದ ದಿನಗಳು ನೆನಪಾಗುತ್ತಿತ್ತು. "ಹೌದು ಈ ಬಗ್ಗೆನೇ ಬರೆಯಬೇಕು. ಅದು ಪ್ರಸ್ತುತ ಸಮಾಜಕ್ಕೆ ಸಂದೇಶವಾಗಬೇಕು" ಎಂದು ಬರೆಯಲು ಆರಂಭಿಸಿದೆ. ಇನ್ನೂ ನಾಲ್ಕು ಗೆರೆ ಬರೆದಿದ್ದೆನಷ್ಟೇ!. ಇದೇ ರೀತಿಯ ಬರಹವೊಂದಕ್ಕೆ ನೆಟ್ಟಿಗರ ಪ್ರತಿಕ್ರಿಯೆಗಳನ್ನು ಓದಿದ್ದು ನೆನಪಾಯಿತು. ಕೈ ನಡುಗತೊಡಗಿತು. ಬರಹ ನಾಲ್ಕು ವಾಕ್ಯ ಮೀರಲೇ ಇಲ್ಲ.
ಆದರೂ ಬರೆಯಬೇಕೆಂಬ ಹಟ ಕಡಿಮೆಯಾಗಲಿಲ್ಲ. ಪ್ರೀತಿ ಪ್ರೇಮದ ಬಗ್ಗೆ ಬರೆದರೇನು? ಎಂದು ಯೋಚಿಸಿದೆ. ಅಲ್ಲೂ ಒಂದು ಪ್ಯಾರ ಹೇಗೂ ಬರೆದೆ. ಮತ್ತೆ ಮುಂದುವರೆಯಲು ಸಾಧ್ಯವಾಗಲೇ ಇಲ್ಲ. ಏಕೆಂದರೆ ನನ್ನ ವಯಸ್ಸು ಆ ಹಂತವನ್ನು ಮೀರಿ ಆಗಿತ್ತು. ನಾನೀಗ ಬರೆಯುವಾಗ ಆಂಟಿ, ಅಂಕಲ್ ಗಳ ಪ್ರೇಮ ಕಥೆಗಳನ್ನೇ ಬರೆಯಬೇಕು. ಹಾಗೇನಾದರೂ ಬರೆದರೆ, "ಇದು ನಿಮ್ಮ ಅನುಭವವೇ?" ಎಂದು ಕೆಲವು ಮಂದಿಯಾದರೂ ಕೇಳುತ್ತಾರೆ. ಅದಕ್ಕಿಂತಲೂ ಮಿಗಿಲಾಗಿ ಮಡದಿ ಓದಿ ನನ್ನನ್ನು ಜಾಡಿಸಿದರೆ! ಅಲ್ಲೂ ಮುಂದಕ್ಕೆ ಬರೆಯಲಾಗಲಿಲ್ಲ.
ಅಷ್ಟರಲ್ಲಾಗಲೇ ಕಸದ ಬುಟ್ಟಿ ಭರ್ತಿಯಾಗಿತ್ತು. ಎಷ್ಟೇ ಯೋಚಿಸಿದರೂ ಬರೆಯಲು ಸಾಧ್ಯವೇ ಆಗುತ್ತಿಲ್ಲ. ಬರೆದರೂ ಅದು ನಾಲ್ಕೈದು ವಾಕ್ಯಕ್ಕಿಂತ ಮುಂದಕ್ಕೆ ಹೋಗಲಿಲ್ಲ. ನನ್ನ ವೃತ್ತಿಯ ಬಗ್ಗೆ ಬರೆಯೋಣವೇ? ಎಂದು ಯೋಚಿಸಿದೆ. ಆದರೆ ಅಲ್ಲಿರುವ ವ್ಯವಸ್ಥೆಗಳ ಬಗ್ಗೆ ಸತ್ಯ ಬರೆದರೆ ಅದರ ಮುಂದಿನ ಪರಿಣಾಮ ಎದುರಿಸಲು ನನಗೆ ಧೈರ್ಯವಿರಲಿಲ್ಲ. ಉಳಿದಂತೆ ಒಂದಷ್ಟು ವಿಚಾರಗಳು ಚಿತ್ತದೊಳಗೆ ಸುತ್ತಿದವು. ಆದರೂ ಅವುಗಳನ್ನು ನಾಲ್ಕು ವಾಕ್ಯಗಳಿಗಿಂತ ಹೆಚ್ಚು ಮುಂದುವರೆಯಲೇ ಇಲ್ಲ. ಗಡಿಯಾರದಲ್ಲಿ ಗಂಟೆ ಹನ್ನೆರಡು ದಾಟಿತ್ತು. ಸತತ ಎರಡು ಗಂಟೆ ಯೋಚಿಸಿದರೂ ನನಗೊಂದು ಪುಟ್ಟ ಬರಹವನ್ನೂ ಬರೆಯಲು ಸಾಧ್ಯವಾಗಲಿಲ್ಲ.
ಕಡೆಗೂ ನನ್ನಿಂದ ಬರೆಯಲು ಅಸಾಧ್ಯವೆಂದು ಮನದಟ್ಟಾಯಿತು. ಹಿಂದೆ ಅದೆಷ್ಟೋ ಬರಹಗಳನ್ನು ಓದಿ ಪ್ರತಿಕ್ರಿಯೆ ನೀಡಿದ್ದೆ. ಬರಹಗಾರರನ್ನು ಮನೋ ಇಚ್ಚೆ ಬೈದಿದ್ದೆ. ಆದರೆ ಇದೀಗ ಬರೆಯುವುದು ಅದೆಷ್ಟು ಕಷ್ಟ? ಎಂದು ಅರ್ಥವಾಗಿತ್ತು. ಅದೂ ಕೆಲವರು ನಿರಂತರ ಬರೆಯುವುದು ಅಸಾಮಾನ್ಯವೇ ಸರಿ. ನನ್ನಿಂದ ಬರೆಯಲಾಗದಿದ್ದರೂ, ಬರೆಯುವವರನ್ನು ಪ್ರೋತ್ಸಾಹಿಸಬೇಕೆಂದು ತೀರ್ಮಾನ ಮಾಡಿದೆ. ಅವರು ಕಷ್ಟಪಟ್ಟು ಬರೆದ ಬರಹಗಳನ್ನು ಓದಲೇ ಬೇಕೆಂದು ತೀರ್ಮಾನಿಸಿದೆ.
ಬರೆಯುವುದು ಅಷ್ಟೊಂದು ಸುಲಭವಲ್ಲ. ಆದರೆ ಅಸಾಧ್ಯವಂತೂ ಅಲ್ಲ. ಅದಕ್ಕೆ ಯೋಚನೆ ಬೇಕು. ಸಾಹಿತ್ಯದ ಅಭಿರುಚಿ ಇರಬೇಕು. ಪದಪುಂಜಗಳ ಸಂಗ್ರಹವಿರಬೇಕು. ಧನಾತ್ಮಕ ಹಾಗೂ ಗುಣಾತ್ಮಕ ಚಿಂತನೆಗಳಿರಬೇಕು. ಬರಹದಲ್ಲಿ ಒಂದಷ್ಟು ಸಂದೇಶವಿರಬೇಕು. ಇವೆಲ್ಲಾ ಒಟ್ಟುಗೂಡಿಸಲು ನನ್ನಿಂದ ಅಷ್ಟು ಸುಲಭವಲ್ಲ ಎಂಬ ಅರಿವು ಮೂಡಿತು. ಮಧ್ಯರಾತ್ರಿ ದಾಟುತ್ತಿದ್ದಂತೆ ಬರೆಯಬೇಕೆಂಬ ನನ್ನಾಸೆ ಕೈಚೆಲ್ಲಿದೆ. ಬರೆಯಲಾಗದಿದ್ದರೂ, ಜೀವನಕ್ಕೊಂದು ಪಾಠ ಕಲಿತೆ.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************
ಮುಖ್ಯ ಶಿಕ್ಷಕರು,
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************