-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 25

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 25

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 25
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
          

ಪ್ರೀತಿಯ ಮಕ್ಕಳೇ...
ವೈರಸ್‌ಗಳ ವಂಶಾಭಿವೃದ್ಧಿಯ ಬಗ್ಗೆ ತಿಳಿದೆವು. ಇದನ್ನು ವಂಶಾಭಿವೃದ್ಧಿ ಎಂದು ಪರಿಗಣಿಸಿದರೆ ವೈರಸ್ ಒಂದು ಜೀವಿ. ಆದರೆ ವೈರಸ್‌ಗಳನ್ನು ಉಪ್ಪು, ಸಕ್ಕರೆ, ಮೈಲುತುತ್ತುಗಳ ಹಾಗೆ ಹರಳಿನ ರೂಪದಲ್ಲಿ ಪಡೆಯಬಹುದು ಅಂದರೆ ಅದು ಒಂದು ನಿರ್ಜೀವಿ. ಆದ್ದರಿಂದ ಬ್ಯಾಕ್ಟೀರಿಯಾಗಳ ಮಾದರಿಯನ್ನು ಪ್ರಯೋಗಾಲಯದಲ್ಲಿ ಸಂಗ್ರಹಿಸಿಡುವುದಕ್ಕಿಂತ ವೈರಸ್‌ಗಳನ್ನು ಸಂಗ್ರಹಿಸಿಡುವುದು ಸುಲಭ. ಅಂದರೆ ಉಪ್ಪು ಸಕ್ಕರೆಗಳ ಹಾಗೆ ಒಂದು ಬಾಟ್ಲಿಯಲ್ಲಿ ಹಾಕಿಟ್ಟರಾಯಿತು. ಮೇ 8 1980 ರಲ್ಲಿ ನಡೆದ 33 ನೆಯ ವಿಶ್ವ ಆರೋಗ್ಯ ಸಮ್ಮೇಳನವು ಸಿಡುಬು (small pox) ಈ ವಿಶ್ವದಿಂದ ನಿರ್ಮೂಲನಗೊಂಡಿದೆ ಎಂದು ಸಾರಿತು. ಈಗ ಸಿಡುಬಿನ ವೈರಸ್ ಸಿಕ್ಕಿತು ಎಂದರೆ ಅದು ಪ್ರಯೋಗಾಲಯದಲ್ಲಿ ಬಾಟ್ಲಿಯ ಬದಲಾವಣೆಯಿಂದ ಆಗಿರಬೇಕು ಎಂದೇ ಭಾವಿಸಬೇಕು. ವಿಶ್ವದ ನಿದ್ದೆಗಡಿಸಿದ ಕೊರೋನಾ ಕೂಡಾ ಒಂದು ವೈರಸ್ ತಾನೆ.

ವಿಜ್ಞಾನಿಗಳು ಆಲೂಗಡ್ಡೆಯನ್ನು ಕಾಡುವ ಮತ್ತು ಬೆಳೆಗಾರರಿಗೆ ಅಪಾರ ನಷ್ಟವುಂಟು ಮಾಡುವ ಕದಿರಿನ ಗಡ್ಡೆ ರೋಗದ (potato spindle tuber disease) ಬಗ್ಗೆ ಸಂಶೋಧನೆ ನಡೆಸುತ್ತಿದ್ದರು. ಈ ರೋಗಕಾರಕಗಳು ವೈರಸ್‌ಗಳಿಗಿಂತಲೂ ಗಾತ್ರದಲ್ಲಿ ಚಿಕ್ಕದಾಗಿದ್ದವು. ಅದರೆ ವೈರಸ್‌ಗಳಂತೆ ಅವುಗಳನ್ನು ಹರಳು ರೂಪದಲ್ಲಿ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಇವುಗಳು ಪ್ರೋಟೀನ್‌ಗಳ ಪರೀಕ್ಷೆ ನಡೆಸಿದಾಗ ನೇತ್ಯಾರ್ಥಕ (negative) ಫಲಿತಾಂಶ ನೀಡುತ್ತಿದ್ದವು. ಅಂದರೆ ಇವುಗಳು ವೈರಸ್‌ಗಳಲ್ಲ. ಇವುಗಳ ಮೇಲೆ ಕೆಲಸ ಮಾಡುತ್ತಿದ್ದ ಥಿಯೋಡರ್ ಒಟ್ಟೋ ಎನ್ನುವ ಅಮೇರಿಕನ್ ಸಸ್ಯ ರೋಗ ಶಾಸ್ತ್ರಜ್ಞ (plant pathologist) 1971 ರಲ್ಲಿ ಇವುಗಳ ರಾಸಾಯನಿಕ ಅಣುರಚನೆಯನ್ನು ವಿವರಿಸಿದ. ಈತ ಈ ಸರಳ ರಚನೆಗಳನ್ನು ವೈರಾಯ್ಡ್ ಎಂದು ಕರೆದ. ಈ ವೈರಾಯ್ಡ್ ಗಳು ಕೇವಲ ಮುಚ್ಚಿದ ರಚನೆಯ RNA ಅಣುಗಳು. ವೈರಸ್‌ಗಳಂತೆ ಇವುಗಳ ಹೊರ ಭಾಗದಲ್ಲಿ ಪ್ರೋಟೀನ್ ಕವಚ ಇರುವುದಿಲ್ಲ. ಇವುಗಳು ಸಸ್ಯಗಳಿಗೆ ರೋಗ ಉಂಟುಮಾಡುತ್ತವೆ ಮತ್ತು ಹೆಚ್ಚಿನ ಸಸ್ಯ ವೈರಸ್‌ಗಳಂತೆ RNA ಯನ್ನು ತಮ್ಮ ಅನುವಂಶೀಯ ವಸ್ತುವನ್ನಾಗಿ ಹೊಂದಿವೆ ಎಂಬುದು ತಿಳಿದು ಬಂತು. ಇವುಗಳ ಗಾತ್ರ 246 - 467 ನ್ಯೂಕ್ಲಿಯೊಟೈಡ್ಗಳಷ್ಟು ಉದ್ದ (1 ನ್ಯೂಕ್ಲಿಯೊಟೈಡ್ ಅಂದರೆ ಸರಿ ಸುಮಾರು 0.6nm).

ಒಂದು ವಿಚಿತ್ರ ಕಾಯಿಲೆ ಇದೆ ಅದರಲ್ಲಿ ಒಬ್ಬ ವ್ಯಕ್ತಿ ತನ್ನ ನೆನಪಿನ ಶಕ್ತಿಯನ್ನು, ದೇಹದ ಮೇಲೆ ನಿಯಂತ್ರಣವನ್ನು, ತನ್ನ ವ್ಯಕ್ತಿತ್ವವನ್ನು (personality) ಕಳೆದುಕೊಳ್ಳುತ್ತಾನೆ. ಇದು ಒಂದು ಸೋಂಕು ರೋಗ. ಇದನ್ನು Creutzfeldt-Jakob disease (CJD) ಎನ್ನುತ್ತಾರೆ. ಆದರೆ ಇದು ಯಾವುದೇ ಬ್ಯಾಕ್ಟೀರಿಯಾ ಮತ್ತು ವೈರಸ್ ಪರೀಕ್ಷೆಗಳಿಗೆ ಉತ್ತರಿಸುತ್ತಿರಲಿಲ್ಲ. ಹಾಗಾದರೆ ಇದರ ಸೋಂಕು ಉಂಟಾಗುವುದಾದರೂ ಹೇಗೆ ಎಂಬುದು ವಿಜ್ಞಾನಿಗಳ ಮುಂದಿನ ಸವಾಲಾಗಿತ್ತು. 1981 ರಲ್ಲಿ ಸ್ಟ್ಯಾನ್ಲಿ ಬಿ ಪ್ರುಸಿನರ್ ಇದು ವಿಚಿತ್ರವಾಗಿ ತಿರುಚಿಕೊಂಡ ಪ್ರೋಟೀನ್‌ಗಳಿಂದ ಉಂಟಾಗುತ್ತದೆ ಎಂದ ಮತ್ತು ಈ ಪ್ರೋಟೀನ್‌ಗಳಿಗೆ ಪ್ರಿಯಾನ್ ಗಳು (prions) ಎಂದು ಕರೆದ. ಪ್ರಿಯಾನ್ ಎಂದರೆ “proteinaceous infectious particle” ಎಂದು ಅರ್ಥ. ಅಸಾಮಾನ್ಯವಾಗಿ ತಿರುಚಿಕೊಂಡ ಈ ಪ್ರೋಟೀನ್‌ಗಳು ಮೆದುಳಿನಲ್ಲಿರುವ ಪ್ರೋಟೀನ್‌ಗಳನ್ನು ತಿರುಚಿಕೊಳ್ಳುವಂತೆ ಮಾಡಿ ರೋಗವನ್ನುಂಟು ಮಾಡುತ್ತಿದ್ದವು. ವೈರಾಯ್ಡ್ ಗಳು ಸಸ್ಯ ಬಾಧಕಗಳಾದರೆ ಪ್ರಿಯಾನ್ ಗಳು ಪ್ರಾಣಿ ಬಾಧಕಗಳು. ಇವುಗಳ ಗಾತ್ರ ಕೇವಲ 15 nm ಗಳು.

ಬರಿಯ ಪ್ರೋಟೀನ್‌ಗಳಾದರೆ ಅವು ಪ್ರಿಯಾನ್ ಗಳು, ಕೇವಲ RNA ಇದ್ದರೆ ಅವು ವೈರಾಯ್ಡ್ ಗಳು ಪ್ರೋಟೀನ್ ಮತ್ತು RNA ಎರಡೂ ಇದ್ದರೆ ಅವು ವೈರಸ್‌ಗಳು. ಹೇಗಿದೆ ಸಂಕೀರ್ಣತೆ. ಇವು ಮೂರು ಜೀವಿಗಳೇ ಎಂದು ನನ್ನನ್ನು ಕೇಳಬೇಡಿ. ಅದು ನೀವು ಉತ್ತರಿಸಬೇಕಾದ ಪ್ರಶ್ನೆ. ಆದರೆ ನನ್ನ ಪ್ರಕಾರ ಅಲ್ಲ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 




Ads on article

Advertise in articles 1

advertising articles 2

Advertise under the article