-->
ಹಕ್ಕಿ ಕಥೆ : ಸಂಚಿಕೆ - 148

ಹಕ್ಕಿ ಕಥೆ : ಸಂಚಿಕೆ - 148

ಹಕ್ಕಿ ಕಥೆ : ಸಂಚಿಕೆ - 148
ಲೇಖಕರು : ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ


              
    ಎಲ್ಲರಿಗೂ ನಮಸ್ಕಾರ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ.....
     ನಾನು ವಾಸವಾಗಿರುವ ಬಾಡಿಗೆ ಮನೆಯ ಹಿಂದೆ ಒಂದು ಗದ್ದೆ ಇತ್ತು. ಹಲವಾರು ವರ್ಷಗಳಿಂದ ಅದರಲ್ಲಿ ಬೇಸಾಯ ಮಾಡಿರಲಿಲ್ಲ. ಅದರಲ್ಲಿ ಗಿಡಗಂಟಿಗಳು, ಮುಳ್ಳು ಮತ್ತು ಹುಲ್ಲು ಬೆಳೆದಿತ್ತು. ಜನವರಿ ತಿಂಗಳಿನಲ್ಲಿ ಪೂರ್ತಿ ಒಣಗಿದ‌ ಆ ಜಾಗ ಮರಳುಗಾಡಿನಂತೆ ಕಂದು ಬಣ್ಣ ಕಾಣುತ್ತಿತ್ತು. ಆ ಗದ್ದೆಯ ಬದಿಯಲ್ಲೇ ನಾನು ದಿನವೂ ಹಾಲು ತರಲು ಹೋಗುತ್ತಿದ್ದೆ. ಹೀಗೇ ನಡೆದುಕೊಂಡು ಹೋಗುವಾಗ ಒಣಗಿದ ಗದ್ದೆಯ ಮೇಲೆ ಏನೋ ಕಂದು ಬಣ್ಣದ ವಸ್ತು ಓಡಿದ ಹಾಗಾಯಿತು. ಅರೆ ಇದೇನು ಎಂದು ನಿಂತು ನೋಡಿದೆ. ಸರಿಯಾಗಿ ಗಮನಿಸಿದಾಗ ಅಲ್ಲಿ ಎರಡು ಹಕ್ಕಿಗಳಿವೆ ಅಂತ ಖಾತ್ರಿ ಆಯ್ತು
     ಅವುಗಳ ರೆಕ್ಕೆ ಥೇಟ್ ಒಣಗಿದ ಹುಲ್ಲಿನ ಬಣ್ಣ. ತಲೆಯ ಮೇಲೊಂದು ಕಪ್ಪು ಟೊಪ್ಪಿ, ಹಳದಿ ಬಣ್ಣದ ಕಾಲುಗಳು, ಜೊತೆಗೆ ಹಳದಿ ಬಣ್ಣದ ಮೀಸೆ. ಹೊಟ್ಟೆಯ ಭಾಗದ ಬಿಳಿಯ ಬಣ್ಣ ಹಕ್ಕಿ ಓಡಾಡಿದರೆ ಮಾತ್ರ ಕಾಣುತ್ತದೆ. ಹುಲ್ಲಿನ ನಡುವೆ ಗಕ್ಕನೆ ಕುಳಿತರೆ ಹಕ್ಕಿ ಇರುವುದೇ ತಿಳಿಯುವುದಿಲ್ಲ. ಟಿಟ್ಟಿಭ ಜಾತಿಗೆ ಸೇರಿದ ಈ ಹಕ್ಕಿ ಉಳಿದ ಹಕ್ಕಿಗಳಂತೆ ನೀರಿನ ಬದಿಯ ಜಾಗಗಳನ್ನು ಆಶ್ರಯಿಸುವುದು ಕಡಿಮೆ. ಇವುಗಳು ಹೆಚ್ಚಾಗಿ ಒಣಭೂಮಿಯನ್ನು ಆಶ್ರಯಿಸುವುದೇ ಹೆಚ್ಚು. ಇವು ಗೂಡನ್ನು ಸಹ ಮಾಡುವುದಿಲ್ಲ. ಸೂಕ್ತವಾದ ಜಾಗವನ್ನು ಹುಡುಕಿ ನೆಲದ ಮೇಲೆಯೇ ಮೊಟ್ಟೆ ಇಟ್ಟು ಕಾವು ಕೊಡುತ್ತವೆ. ಗಂಡು ಮತ್ತು ಹೆಣ್ಣು ಹಕ್ಕಿಗಳೆರಡೂ ನೋಡಲು ಸಮಾನವಾಗಿರುತ್ತವೆ. ಮರಿಗಳನ್ನು ಬೆಳೆಸುವ ಕೆಲಸವನ್ನು ಎರಡೂ ಸಮಾನವಾಗಿ ಹಂಚಿಕೊಳ್ಳುತ್ತವೆ. ನಮ್ಮ ಮನೆಯ ಹಿಂದಿನ ಗದ್ದೆಯಲ್ಲಿ ಆ ಜಮೀನಿನ ಮಾಲಕರು ಬೋರ್ ವೆಲ್ ತೆಗೆಸಿ ಈಗ ಅಡಿಕೆ ಸಸಿ‌ ನೆಟ್ಟು ತೋಟ ಮಾಡಿದ್ದಾರೆ. ಪ್ರತಿನಿತ್ಯ ಬೇಸಗೆಯಲ್ಲಿ ನೀರು ಹಾಯಿಸುತ್ತಾರೆ. ಹಾಗಾಗಿ ಆ ಜಾಗ ಒಣ ಭೂಮಿಯಾಗಿ ಉಳಿದಿಲ್ಲ, ಹಚ್ಚ ಹಸುರಿನ ತೋಟವಾಗಿದೆ. ಹಾಗಾಗಿ ಹಳದಿ ಟಿಟ್ಟಿಭ ಹಕ್ಕಿ ಅಲ್ಲಿ ಕಾಣಿಸದೇ ವರ್ಷಗಳೇ ಆದವು.  
      ಇತ್ತೀಚೆಗೆ ತರಬೇತಿಗೆ ಅಂತ ಕಲಬುರಗಿ ಕಡೆ ಹೋಗಿದ್ದಾಗ ಅಲ್ಲಿ ಈ ಹಕ್ಕಿಗಳನ್ನು ಮತ್ತೆ ನೋಡುವ ಅವಕಾಶ ಸಿಕ್ಕಿತು. ಒಣಭೂಮಿ ಇಲ್ಲೇನೂ ಇಲ್ಲ, ವೇಸ್ಟ್ ಲ್ಯಾಂಡ್ ಎಂದು ಕರೆಯುವಲ್ಲಿಯೂ ಇಂತಹ ಹಲವಾರು ಜೀವಿಗಳು ಬದುಕಿ ತಮ್ಮ ಜೀವನ ಸಾಗಿಸುತ್ತವೆ. ಯಾವ ಜಾಗವೂ ವೇಸ್ಟ್ ಅಲ್ಲ ಅಲ್ಲವೇ ? ನಿಮ್ಮ ಆಸುಪಾಸಿನಲ್ಲಿ ಒಣಗಿದ ಗದ್ದೆ ಅಥವಾ ಹುಲ್ಲು ಬೆಳೆದಿರುವ ಜಾಗಗಳಿದ್ದರೆ ಈ ಹಕ್ಕಿ ಅಲ್ಲಿರಬಹುದು. 
ಕನ್ನಡದ ಹೆಸರು: ಹಳದಿ ಟಿಟ್ಟಿಭ
ಇಂಗ್ಲಿಷ್ ಹೆಸರು: Yellow-wattled Lapwing
ವೈಜ್ಞಾನಿಕ ಹೆಸರು: Vanellus malabaricus
ಚಿತ್ರ : ಅರವಿಂದ ಕುಡ್ಲ
ಮುಂದಿನ ವಾರ ಹೊಸತೊಂದು ಹಕ್ಕಿ ಕಥೆಯೊಂದಿಗೆ ಭೇಟಿ ಮಾಡೋಣ.