-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 24

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 24

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 24
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
          

ಪ್ರೀತಿಯ ಮಕ್ಕಳೇ..... ಕಳೆದ ವಾರ ವೈರಸ್‌ಗಳ ಉತ್ಪಾದನೆ ನಡೆಯುತ್ತದೆ ಹೊರತು ಅವುಗಳು ವಂಶಾಭಿವೃದ್ಧಿ ನಡೆಸುವುದಿಲ್ಲ ಎಂದು ಹೇಳಿದ್ದೇನಲ್ಲ. ಜೀವಿಗಳಲ್ಲಿ ಒಂದು ಕೋಶ ಎರಡಾಗಿ ಒಡೆಯುತ್ತವೆ. ಎರಡು ನಾಲ್ಕಾಗುತ್ತವೆ. ನಾಲ್ಕು ಎಂಟಾಗುತ್ತವೆ ಹೀಗೆ. ವೈರಸ್‌ಗಳು ಅತ್ಯಂತ ಸರಳ. ಅವುಗಳಲ್ಲಿ ಒಂದು RNA ಅಥವಾ DNA ತುಂಡು ಅದನ್ನು ಸುತ್ತುವರಿದಿರುವ ಒಂದು ಪ್ರೋಟೀನ್ ಅಥವಾ ಒಂದು ಕೊಬ್ಬಿನ ಪದರ. ಇದು ಎರಡಾಗಿ ಒಡೆದರೆ ಏನಾಗುತ್ತದೆ. ಅದು ಇನ್ನೂ ಸರಳವಾಗುತ್ತದೆ. ಅಂದರೆ ಹೊಸದಾಗಿ ಬಂದ ಚೂರಿನ ಲಕ್ಷಣಗಳೇ ಬೇರಾಗಿ ಬಿಡುತ್ತದೆ. ಹಾಗಾದರೆ ಹೆಚ್ಚುವರಿ ಸಾಮಗ್ರಿ ಇಲ್ಲದೇ ಅಂತಹುದೇ DNA ಪ್ರತಿ ತಯಾರಾಗುವುದದರೂ ಹೇಗೆ? ಈ ಸಾಮರ್ಥ್ಯ ವೈರಸ್‌ಗಳಿಗಿಲ್ಲ. ಅದಕ್ಕಾಗಿ ಅವುಗಳು ಒಂದು ಆತಿಥೇಯ (host) ಕೋಶವನ್ನು ಅವಲಂಬಿಸಬೇಕಾಗುತ್ತದೆ. ಅಂದರೆ ಸರಳವಾದ ವೈರಸ್‌ಗಳು ಜೀವೋದ್ಭವವಾಗುವ ಮೊದಲೇ ಇದ್ದವು ಎಂದರೆ ಅದು ಒಪ್ಪಲಾಗದು. ಈ ವೈರಸ್‌ಗಳ ಉತ್ಪಾದನೆಯಾಗಬೇಕಾದರೆ ಈಗಾಗಲೇ ಅಸ್ತಿತ್ವದಲ್ಲಿರುವ ಒಂದು ಜೀವಿ (ಕೋಶ) ಬೇಕೇ ಬೇಕು. ಹಾಗಾದರೆ ವೈರಸ್ ಉತ್ಪಾದನೆ ಹೇಗಾಗುತ್ತದೆ ನೋಡೋಣ.

ವೈರಸ್ ಉತ್ಪಾದನೆಯ ಸರಣಿಯಲ್ಲಿ ಅಧ್ಯಯನದ ಅನುಕೂಲಕ್ಕಾಗಿ 7 ಹಂತಗಳನ್ನು ಗುರುತಿಸಲಾಗಿದೆ. ಮೊದಲನೆಯದು ವೈರಸ್ ಒಂದು ಸೂಕ್ತವಾದ ಆತಿಥೇಯ ಕೋಶದ ಮೇಲೆ ಹೋಗಿ ನೆಲೆಗೊಳ್ಳುವುದು (Attachment). ಇದು ನಾವು ಹೋಗಿ ಪಾರ್ಕಿನಲ್ಲಿ ಕುಳಿತ ಹಾಗೆ ಅಲ್ಲ. ಕಲ್ಲು ಬೆಂಚಿನ ಮೇಲೆ, ದಂಡೆಯ ಮೇಲೆ, ಮರಳಿನ ರಾಶಿಯ ಮೇಲೆ ಎಲ್ಲೆಂದರಲ್ಲಿ ಅಲ್ಲ. TMV ನನ್ನ ಕೈ ಮೇಲೆ ಬಂದು ಕುಳಿತರಾಗುವುದಿಲ್ಲ. ತಂಬಾಕಿನ ಗಿಡದ ಕೋಶದ ಮೇಲೆ ಅವತರಣಿಸಬೇಕು. ಸಾಮಾನ್ಯ ಶೀತದ (common cold) ವೈರಸ್ ಚರ್ಮದ ಮೇಲೆ ಬಂದು ಕುಳಿತರಾಗದು ಮೂಗಿನ ಒಳಗೋಡೆಯ ಕೋಶದ ಮೇಲೆ ಕುಳಿತುಕೊಳ್ಳಬೇಕು. ಅಂದರೆ ಇಲ್ಲಿ ವೈರಸ್ ಮತ್ತು ಆತಿಥೇಯ ಕೋಶಗಳ ನಡುವೆ ಪ್ರೋಟೀನ್ ಹೊಂದಾಣಿಕೆಯಾಗಬೇಕು. ಇದು ಒಂದು ಅಧ್ಯನದ ವಿಷಯವೇ.

ಈಗ ವೈರಸ್ ತನ್ನ ಘಟಕವನ್ನು ಕೋಶದ ಒಳಗೆ ಸೇರಿಸಬೇಕು. ಇದು ಒಳ ಸೇರಿಕೊಳ್ಳುವಿಕೆ (penetration). ಇದು ಸುಲಭ ನನಗೆ ಇಂಜೆಕ್ಷನ್ ಮೂಲಕ ಔಷಧಿ ಚುಚ್ಚುತ್ತಾರಲ್ಲ ಹಾಗೆ ಎಂದುಕೊಳ್ಳಬೇಡಿ. ಇಂಜೆಕ್ಷನ್ ಚುಚ್ಚಲು ವೈರಸ್ ಸೊಳ್ಳೆಯಲ್ಲ. ಕೋಶ ಪೊರೆ ಎರಡು ಪದರಗಳಿಂದ ಮಾಡಲ್ಪಟ್ಟಿದೆ ಮತ್ತು ಯಾವ ವಸ್ತುಗಳನ್ನು ತನ್ನ ಮೂಲಕ ಹಾದು ಹೋಗಲು ಬಿಡಬೇಕೆಂಬ ಆಯ್ಕೆಯನ್ನೂ ಹೊಂದಿದೆ. ಆದ್ದರಿಂದ ವೈರಸ್ ಯಾವ ಮಂತ್ರದಂಡ ಬಳಸಿ ಕೋಶ ಪೊರೆಯ ಮೂಲಕ ತನ್ನ ವಸ್ತುವನ್ನು ಕೋಶದ ಒಳ ಕಳುಹಿಸುತ್ತದೆ ಎಂಬ ಸ್ಪಷ್ಟ ಚಿತ್ರಣ ನೀವು ವಿಜ್ಞಾನಿಗಳಾದ ಮೇಲಷ್ಟೇ ತಿಳಿಯಬೇಕಿದೆ. ಇಲ್ಲಿ ವೈರಸ್ ಇಡಿಯಾಗಿ ಕೋಶದೊಳಗೆ ತೂರಿಕೊಳ್ಳುವುದಿಲ್ಲ. ಅದರ ಹೊರ ಕವಚ ಕೋಶದ ಹೊರಗೆ ಉಳಿದು ಹೋಗುತ್ತದೆ.

ಒಳ ಸೇರಿದ ವೈರಸ್ ವಸ್ತುವಿನಿಂದ ಅದರ ನ್ಯೂಕ್ಲಿಯಿಕ್ ವಸ್ತು (nuclear material) ಕೋಶ ದ್ರವ್ಯದಲ್ಲಿ ತೆರೆದುಕೊಳ್ಳುತ್ತದೆ. ಇದು ಅನಾವರಣ (uncoating). ಇಲ್ಲಿಯವರೆಗೆ ವಾಮನನ ಹಾಗಿದ್ದ ವೈರಸ್ ತನ್ನ ವಿರಾಟ ರೂಪ ತೋರಿಸಲಾರಂಭಿಸುತ್ತದೆ. ಬ್ರಿಟಿಷರ ಹಾಗೆ. ವ್ಯಾಪಾರಕ್ಕೆಂದು ಬಂದು ದೇಶದ ಆಡಳಿತವನ್ನೇ ಕೈಗೆತ್ತಿಕೊಂಡ ಹಾಗೆ. ಇಲ್ಲಿಯ ವರೆಗೆ ತನಗೆ ಬೇಕಾದ ಪ್ರೋಟೀನ್ ತನ್ನ ನ್ಯೂಕ್ಲಿಯಿಕ್ ಆಮ್ಲಗಳನ್ನು ಉತ್ಪಾದಿಸುತ್ತಿದ್ದ ಕೋಶ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ವೈರಸ್ ನ್ಯೂಕ್ಲಿಯಿಕ್ ವಸ್ತುಗಳನ್ನು ಮತ್ತು ಅದರ ಕವಚಕ್ಕೆ ಬೇಕಾದ ಕೊಬ್ಬು ಅಥವಾ ಪ್ರೋಟೀನ್ ಗಳನ್ನು ಉತ್ಪಾದಿಸಲು ಆರಂಭಿಸುತ್ತದೆ. ಇದೇ ಉತ್ಪಾದನೆ (replication). ಆ ಪುಟ್ಟ ವೈರಸ್ DNA/RNA ಆತಿಥೇಯ ಕೋಶವನ್ನು ಹೇಗೆ ನಿಯಂತ್ರಿಸುತ್ತದೆ ಯಾರಿಗೂ ಗೊತ್ತಿಲ್ಲ. ನಿಯಂತ್ರಿಸುತ್ತದೆ ಎಂಬುದು ವಾಸ್ತವ. ಈಗ ಇಲ್ಲಿರುವ ವೈರಸ್ ನ್ಯೂಕ್ಲಿಯಿಕ್ ಆಮ್ಲಗಳನ್ನು ಪ್ರೋಟೀನ್/ಕೊಬ್ಬಿನ ಚೀಲದೊಳಗೆ ಸೇರಿಸಿ ಹೊಲಿದು ವೈರಸ್ ತಯಾರಿ ಶುರುವಾಗುತ್ತದೆ. ಬೇರೆ ಬೇರೆ ಬಿಡಿ ಭಾಗಗಳನ್ನು ಸೇರಿಸಿ ನಿಮ್ಮ ಆಟಿಕೆಗಳನ್ನು ತಯಾರಿಸಿದ ಹಾಗೆ. ಇದೇ ಜೋಡಣೆ (assembly). ಇಲ್ಲಿಯೂ ಕೂಡಾ ಹಾಗೆ. ಕೋಶ ತನಗೆ ತೊಂದರೆಯಾಗುತ್ತದೆ ಎಂದು ಗೊತ್ತಿದ್ದರೂ ಕೂಡಾ ಈ ಕೆಲಸ ನಿಲ್ಲಿಸುವುದಿಲ್ಲ. ವೈರಸ್ ನಿಯಂತ್ರಣಕ್ಕೆ ಸಿಕ್ಕ ಹಡಗಿನಂತೆ. ಡಿವಿಜಿಯವರು ಹೇಳಿದಂತೆ "ಮದುವೆಗೋ ಮಸಣಕೋ ಅವನೆಂದ ಕಡೆಗೋಡು..." ಇಲ್ಲಿಂದ ಸ್ವಲ್ಪ ವಿರಾಮ (maturation). ಈ ಬಗ್ಗೆ ನಾನು ಯಾವ ವಿವರಣೆ ಕೊಡುತ್ತಿಲ್ಲ ಏಕೆಂದರೆ ಅಲ್ಲಿ ಒಂದು ಹಂತವಿದೆ ಎಂದು ಗೊತ್ತು ಆಗುತ್ತಿರುವ ಬದಲಾವಣೆಗಳೇನು ಎಂಬ ಬಗ್ಗೆ ನನಗೆ ಯಾವುದೇ ಅರಿವಿಲ್ಲ.

ಈಗ ವೈರಸ್‌ಗಳ ಬಿಡುಗಡೆ ಸಮಾರಂಭ (release) ಕೈಗಾರಿಕಾ ಕ್ಷೇತ್ರದಲ್ಲಿಯಾದರೆ ಇದಕ್ಕೆ ಅತಿಥಿಗಳನ್ನು ಕರೆದು ಸಿಹಿ ಹಂಚಿ ಸಂಭ್ರಮಿಸುತ್ತಿದ್ದೆವು. ಇಲ್ಲಿ ಸಂಭ್ರಮ ಉತ್ಪಾದಕನಿಗಲ್ಲ ಬದಲಾಗಿ ಉತ್ಪನ್ನಕ್ಕೆ ಅಂದರೆ ವೈರಸ್ ಗೆ. ಉತ್ಪಾದಕ ಅಂದರೆ ಕೋಶ ಹೊಟ್ಟೆ ಒಡೆದು ಸಾಯುತ್ತದೆ. ಸಹಸ್ರ ಸಹಸ್ರ ವೈರಸ್‌ಗಳು ಹೊರಬರುತ್ತದೆ. ಸೋಂಕು ಕಾಡ್ಗಿಚ್ಚಿನಂತೆ ಹಬ್ಬುತ್ತದೆ. ತಾನೇ ಕಿಚ್ಚನ್ನು ಸ್ವಾಗತಿಸಿ ಕಾಡೇ ಉರಿದು ಬೂದಿಯಾಗುವ ಸಂಭ್ರಮ. ವೈರಸ್‌ಗಳಿಗೆ ಹುಟ್ಟಿನ ಸಂಭ್ರಮವಾದರೆ ಕೋಶಗಳಿಗೆ ಮಸಣದುರಿ.

ಮಕ್ಕಳೇ ಮುಂದಿನ ವಾರ ಹೊಸ ವಿಷಯದೊಂದಿಗೆ ನಾನು ನಿಮ್ಮ ಜೊತೆಗಿರುತ್ತೇನೆ. ಆದರೆ ಇದನ್ನು ಓದುತ್ತಾ ಓದುತ್ತಾ ನಿಸ್ಸಹಾಯಕತೆಯ ಭಾವ ನಿಮ್ಮನ್ನು ಆವರಿಸಿರಬಹುದು. ಆ ವೈರಸ್ ಗೆ ನೆಲೆಯೂರಲು ಸೂಕ್ತ ಪ್ರೋಟೀನ್ ಸಿಗದಂತೆ ಮಾಡಿದರೆ ವೈರಸ್ ಸೋಂಕು ಉಂಟಾಗುತ್ತಿರಲಿಲ್ಲ, ಕೋಶ ಪೊರೆ ವೈರಸ್ ಅನ್ನು ವಿರೋಧಿಸುವುದು ಸಾಧ್ಯವಾಗಿದ್ದರೆ ‌ವೈರಸ್ ಕೋಶದ ಒಳಗೆ ಹೋಗುತ್ತಿರಲಿಲ್ಲ, ಸಹಜ ಕ್ರಿಯೆಯಲ್ಲಿ ತೊಡಗಿದ್ದ ನಮ್ಮ ಕೋಶ ವೈರಸ್ ನಿಯಂತ್ರಣಕ್ಕೆ ಬಾರದೇ ಇದ್ದಿದ್ದರೆ ವೈರಸ್ ಬಹುಗುಣಗೊಳ್ಳುತ್ತಲೇ ಇರಲಿಲ್ಲ. ಛೇ ಏಕೆ ಹೀಗಾಗುತ್ತದೆ ಅಂತೆಲ್ಲ ನಿಮಗೆ ಅನ್ನಿಸಿರಬಹುದು. ಇದನ್ನು ನಾನು ನಿಯಂತ್ರಿಸಬೇಕು ಎಂ ರೋಷ ಉಕ್ಕಿರಬಹುದು. ಹೌದು ಇದಕ್ಕಾಗಿ ನೀವು. ವಿಜ್ಞಾನ ಅದರಲ್ಲೂ ಜೀವಶಾಸ್ತ್ರ ಅಧ್ಯಯನ ಮಾಡಬೇಕು. ಸಂಶೋಧನೆಯಲ್ಲಿ ತೊಡಗಬೇಕು. ವಿಜ್ಞಾನಿಗಳಾಗಬೇಕು. ಮನುಕುಲದ ಕ್ಲೇಶಗಳನ್ನು ನಿವಾರಿಸಬೇಕು. ವಿಜ್ಞಾನ ವಿದ್ಯಾರ್ಥಿಗಳಾಗುತ್ತೀರಿ ತಾನೇ?
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 


Ads on article

Advertise in articles 1

advertising articles 2

Advertise under the article