ಜೀವನ ಸಂಭ್ರಮ : ಸಂಚಿಕೆ - 132
Sunday, April 7, 2024
Edit
ಜೀವನ ಸಂಭ್ರಮ : ಸಂಚಿಕೆ - 132
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ಹಿಂದೆ ಋಷಿಗಳ ಆಶ್ರಮದಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರು. ಗುರು ಅನುಭಾವಿಯಾಗಿದ್ದನು. ವಿದ್ಯಾರ್ಥಿಗಳ ಕಣ್ಣಲ್ಲಿ ಕಲಿಯುವ ಹಂಬಲ ಉಕ್ಕುತ್ತಿತ್ತು. ಅಷ್ಟು ಆಸಕ್ತಿ ಆ ಮಕ್ಕಳಲ್ಲಿ. ಆಗ ವಿದ್ಯಾರ್ಥಿಗಳು ಗುರುಗಳನ್ನು ಕೇಳುತ್ತಾರೆ. "ಗುರುಗಳೇ ಈಗ ನಾವು ಹುಡುಗರು, ಮುಂದೆ ಈ ಲೋಕದಲ್ಲಿ ಸಮೃದ್ಧ ಜೀವನ ಸಾಗಿಸಬೇಕಾಗಿದೆ .ಅದನ್ನು ಹೇಗೆ ಸಾಧಿಸುವುದು ಗುರುಗಳೇ" ಆಗ ಗುರುಗಳು ಮೂರು ಸೂತ್ರ ಹೇಳುತ್ತಾರೆ.
1. ನೋಡಿ ಮಕ್ಕಳೇ ಜೀವನದಲ್ಲಿ ಎಲ್ಲವನ್ನೂ ತಿಳಿದುಕೊಳ್ಳಲು ಸಾಧ್ಯವಿಲ್ಲ.
2. ಜೀವನದಲ್ಲಿಎಲ್ಲವನ್ನು ಗಳಿಸಲು ಸಾಧ್ಯವಿಲ್ಲ.
3. ಜೀವನದಲ್ಲಿ ಎಲ್ಲವನ್ನು ಮಾಡಲು ಸಾಧ್ಯವಿಲ್ಲ ಎಂದರು.
ಆಗ ವಿದ್ಯಾರ್ಥಿಗಳು ಕೇಳಿದರು. ಹಾಗಾದರೆ ನಾವೇನು ಮಾಡಬೇಕು ಎಂದು ಪ್ರಶ್ನಿಸಿದರು. ಗುರುಗಳು ಹೇಳಿದರು.
1. ನಾವು ಸ್ವಲ್ಪ ಸ್ವಲ್ಪ ತಿಳಿದುಕೊಳ್ಳಬಹುದು.
2. ನಾವು ಸ್ವಲ್ಪ ಸ್ವಲ್ಪ ಗಳಿಸಬಹುದು.
3. ನಾವು ಸ್ವಲ್ಪ ಸ್ವಲ್ಪ ಮಾಡಬಹುದು.
ಆಗ ವಿದ್ಯಾರ್ಥಿಗಳು ಪ್ರಶ್ನಿಸಿದರು. ಸ್ವಲ್ಪ ಸ್ವಲ್ಪ ಮಾಡಿದರೆ ಜೀವನ ಹೇಗೆ ಸಮೃದ್ಧವಾಗುತ್ತದೆ. ಆಗ ಗುರುಗಳು ಹೇಳಿದರು ನಾನು ಈಗಾಗಲೇ ಹೇಳಿದ್ದೇನೆ
1. ನಾವು ಎಲ್ಲವನ್ನೂ ತಿಳಿದುಕೊಳ್ಳಲು ಸಾಧ್ಯವಿಲ್ಲ ಆದರೆ ಸ್ವಲ್ಪ ಸ್ವಲ್ಪ ತಿಳಿದುಕೊಳ್ಳಬಹುದು. ತಿಳಿದುಕೊಂಡಿದ್ದರಲ್ಲಿ ಸಂತೋಷಪಡಬೇಕು ಅದು ಜೀವನ.
2. ನಾವು ಎಲ್ಲವನ್ನು ಗಳಿಸಲು ಸಾಧ್ಯವಿಲ್ಲ. ಸ್ವಲ್ಪ ಸ್ವಲ್ಪ ಗಳಿಸುತ್ತೇವೆ, ಗಳಿಸಿದ್ದನ್ನೇ ಸುಂದರವಾಗಿ ಬಳಸಿ ಸಂತೋಷಪಡಬೇಕು.
3. ನಾವು ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಆದರೆ ಸ್ವಲ್ಪ ಸ್ವಲ್ಪ ಮಾಡುತ್ತೇವೆ. ಮಾಡುವುದನ್ನೇ ಸುಂದರವಾಗಿ ಸಂತೋಷವಾಗುವಂತೆ ಮಾಡಬೇಕು.
ಹೀಗೆ ಬದುಕಿರುವವರೆಗೆ ಸ್ವಲ್ಪ ಸ್ವಲ್ಪ ತಿಳಿದುಕೊಳ್ಳುವುದು. ಸ್ವಲ್ಪ ಸ್ವಲ್ಪ ಗಳಿಸುತ್ತಾ ಇರುವುದು. ಸ್ವಲ್ಪ ಸ್ವಲ್ಪ ಮಾಡುತ್ತಾ ಇದ್ದರೆ ಅದೇ ಸ್ವಲ್ಪ ಸ್ವಲ್ಪ ಸೇರಿ ಸಮೃದ್ಧವಾಗುತ್ತದೆ. ನಾವು ಎಷ್ಟೆಷ್ಟು ಗಳಿಸಿದ್ದೇವೆಯೋ ತಿಳಿದುಕೊಳ್ಳುತ್ತೇವೆಯೋ ಮಾಡುತ್ತೇವೆಯೋ, ಪ್ರತಿ ಹಂತದಲ್ಲಿ ಸಂತೋಷ ಪಡೆಯುವುದನ್ನು ಮರೆಯಬಾರದು. ಸಂತೋಷ ತುಂಬಿದ ಮನಸ್ಸು ಸಮೃದ್ಧ. ಮನಸ್ಸು ಸಮೃದ್ಧವಾದರೆ ಜೀವನ ಸಮೃದ್ಧ. ಹೀಗೆ ಜೀವನ ಸಾಗಿಸಬೇಕು ಅಲ್ವಾ ಮಕ್ಕಳೇ.
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*******************************************