-->
ಜಗಲಿ ಕಟ್ಟೆ : ಸಂಚಿಕೆ - 46

ಜಗಲಿ ಕಟ್ಟೆ : ಸಂಚಿಕೆ - 46

ಜಗಲಿ ಕಟ್ಟೆ : ಸಂಚಿಕೆ - 46
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 


"ಮಕ್ಕಳ ಜಗಲಿಯ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು....."

ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


    ಶೈಕ್ಷಣಿಕ ವರ್ಷದ ಕೊನೆಯ ಭಾಗದಲ್ಲಿ ಶಾಲೆಯಿಂದ ಹೊರ ಹೋಗುವ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಮಾಡೋದು ವಾಡಿಕೆ. ಇತ್ತೀಚೆಗೆ ಆತ್ಮೀಯರೊಬ್ಬರು ತಮ್ಮ ಶಾಲೆಯ ಬೀಳ್ಕೊಡುಗೆ ಸಮಾರಂಭದ ಬಗ್ಗೆ ತಮ್ಮ ಅಳಲನ್ನು ತೋಡಿಕೊಂಡರು. ಎಂದಿನ ವರ್ಷದ ಹಾಗೆ ಈ ವರ್ಷವೂ ವಿದ್ಯಾರ್ಥಿಗಳನ್ನು ತಮ್ಮ ಶಾಲೆಯಿಂದ ಕಳುಹಿಸಿಕೊಡುವ ಪ್ರೀತಿಪೂರ್ವಕ ಕಾರ್ಯಕ್ರಮವನ್ನು ಬಹಳ ಔಚಿತ್ಯಪೂರ್ಣವಾಗಿಯೇ ಆಯೋಜಿಸಿದ್ದರು. ಶಾಲೆಯ ಕೊನೆಯ ಭಾಗವಾದ್ದರಿಂದ, ವಿದ್ಯಾರ್ಥಿಗಳಲ್ಲಿ ಮೊಬೈಲ್ ಫೋನ್ ತರುವುದಾಗಲಿ ಯಾವುದೇ ತರಹದ ಅಸಭ್ಯ ವರ್ತನೆಯನ್ನು ಮಾಡೋದು ಕೂಡದಾಗಿ ಮೊದಲಾಗಿ ತಿಳಿಸಿದ್ದರು. 
       ಕಾರ್ಯಕ್ರಮವೇನೋ ಚೆನ್ನಾಗಿ ನಡೆಯಿತು. ಸಭಾಂಗಣದಿಂದ ಹೊರಬಂದ ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ತಿಳಿಸಿ ಮನೆಗೆ ತೆರಳುವಂತೆ ಸೂಚನೆ ಇತ್ತರು. ಶಿಕ್ಷಕರೆಲ್ಲ ತಮ್ಮ ತಮ್ಮ ಕೆಲಸದಲ್ಲಿ ತೊಡಗಿಕೊಂಡರು. ಸ್ವಲ್ಪ ಹೊತ್ತಿನಲ್ಲಿ ಸಭಾಂಗಣದಲ್ಲಿ ಜೋರು ಬೊಬ್ಬೆ ಸದ್ದು ಗದ್ದಲ ಎಲ್ಲಾ ಕೇಳಿಸಿತು. ವಿದ್ಯಾರ್ಥಿಗಳೆಲ್ಲ ಕೊನೆಯ ದಿನದ ಖುಷಿಯನ್ನು ಆಚರಿಸುತ್ತಿದ್ದಾರೆಂದು ಭಾವಿಸಿಕೊಂಡರು. ಆದರೆ ಏನೊ ಸಂಶಯದಿಂದ ಹೋಗಿ ನೋಡಿದ ಶಿಕ್ಷಕರಿಗೆ ಆಶ್ಚರ್ಯ ಕಾದಿತ್ತು....!! ಸಭಾಂಗಣದಲ್ಲಿದ್ದ ವಸ್ತುಗಳನ್ನು ಅಸ್ತವ್ಯಸ್ತ ಮಾಡಿದ್ದರು. ಟ್ಯೂಬ್ ಲೈಟ್, ಬಲ್ಬ್ , ಸ್ವಿಚ್ ಗಳನ್ನು ಪುಡಿ ಮಾಡಿದ್ದರು. ಫ್ಯಾನಿನ ರೆಕ್ಕೆಗಳು ಬಾಗಿ ಬೆಂಡಾಗಿದ್ದವು. ನೋಡು ನೋಡುತ್ತಿದ್ದಂತೆ ಎಲ್ಲಾ ವಿದ್ಯಾರ್ಥಿಗಳು ಮೌನವಾಗಿ ಬದಿಗೆ ಸರಿದರು. ವಿಚಾರಿಸಲು ಹೋದ ಶಿಕ್ಷಕರಿಗೆ ಮಕ್ಕಳ ಉತ್ತರ, "ಸರ್ ನಾನಲ್ಲ ಸರ್... ನನಗೆ ಗೊತ್ತಿಲ್ಲ ಸರ್... ನಾನು ನೋಡ್ಲಿಲ್ಲ ಸರ್" .
       ಅಷ್ಟೊಂದು ಸೌಜನ್ಯವಾಗಿದ್ದ ವಿದ್ಯಾರ್ಥಿಗಳು ಕೊನೆಯ ದಿನದ ಸಂಭ್ರಮವನ್ನು ಆಚರಿಸಿದ್ದು ಹೀಗೆ....!! ಇದು ಮಕ್ಕಳ ತಪ್ಪೊ..., ಅವರ ತಿಳುವಳಿಕೆಯ ತಪ್ಪೊ..., ಅವರ ಸಂಸ್ಕಾರದ ಕೊರತೆಯೊ....!! ಪ್ರಶ್ನಾರ್ಥಕವಾಗಿತ್ತು..!?
       ಜಿಲ್ಲೆಯ ಅನೇಕ ಭಾಗಗಳ ಶಾಲೆಗಳಲ್ಲಿ ಚಿತ್ರ ಮಾಡುವ, ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವ ಅವಕಾಶದೊಂದಿಗೆ ಹೋಗಿದ್ದಾಗ ಅನೇಕ ಶಿಕ್ಷಕರ ಮಾತುಗಳು ಕೂಡಾ ಇದೇ ರೀತಿ ಪ್ರಶ್ನಾರ್ಥಕವಾಗಿತ್ತು...!! ಆದಿತ್ಯವಾರ ಕಳೆದು ಸೋಮವಾರ ಶಾಲೆಗೆ ಬಂದು ನೋಡಿದಾಗ ಕ್ರಿಕೆಟ್ ಬಾಲಿನ , ವಾಲಿಬಾಲ್ ಬಾಲಿನ ಅಚ್ಚು ಗೋಡೆಗಳಲ್ಲೆಲ್ಲಾ ಚಿತ್ರ ಮೂಡಿಸುತ್ತಿದ್ದವು. ಗೋಡೆಗಳಲ್ಲಿ ಅಸಭ್ಯ ಬರಹಗಳು...!! ಗೋಡೆಗಳಲ್ಲಿ ಅಂದದ ಚಿತ್ರಗಳನ್ನು, ಉತ್ತಮ ಬರಹಗಳನ್ನು ವಿರೂಪ ಗೊಳಿಸುವುದು, ಗಾಜಿನ ಕಿಟಕಿಗಳಿದ್ದರೆ ಪುಡಿಯಾಗುತ್ತಿದ್ದವು...!! ನೀರಿನ ಟ್ಯಾಪ್, ಪೈಪು ಗಳಿದ್ದರೆ ಪುಡಿ ಮಾಡುವ ಮೂಲಕ ಏನೋ ವಿಕೃತ ಸಂತೋಷವನ್ನು ಅನುಭವಿಸುವ ಮನಸ್ಥಿತಿಗಳಿಂದಾಗಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಉಳಿಸಿಕೊಳ್ಳುವುದು ಅಸಾಧ್ಯವಾಗಿದೆ ಎನ್ನುವುದು ಅವರ ವೇದನೆಯ ನುಡಿಗಳಾಗಿತ್ತು....!!
      ಇಲ್ಲಿ ಸ್ಪಷ್ಟವಾದ ಕಾರಣಗಳನ್ನು ಹುಡುಕುವುದು ಕಷ್ಟವಾದರೂ ವಿದ್ಯಾರ್ಥಿಗಳಲ್ಲಿ ಸಂಸ್ಕಾರ, ನೈತಿಕ , ಮಾನವೀಯ ಕಾಳಜಿಯ ಕೊರತೆಯನ್ನಂತು ಕಾಣಬಹುದು. ನನ್ನ ಅನುಭವದ ಪ್ರಕಾರ ಸಂಸ್ಕಾರವನ್ನಾಗಲಿ ಅಥವಾ ನೈತಿಕ ಮೌಲ್ಯಗಳನ್ನಾಗಲಿ ತುಂಬಿಸಲಿರುವ ಸುಲಭ ಮಾಧ್ಯಮಗಳೆಂದರೆ ಲಲಿತ ಕಲೆಗಳು. ಚಿತ್ರಕಲೆ, ಸಂಗೀತ, ನೃತ್ಯ, ನಾಟಕ (ರಂಗಕಲೆ, ಯಕ್ಷಗಾನ ಇತ್ಯಾದಿ), ಸಾಹಿತ್ಯ (ಕಥೆ , ಕವನ , ಲೇಖನ, ಇತ್ಯಾದಿ ಬರಹಗಳು) ಈ ಪ್ರಕಾರದ ಯಾವುದಾದರೂ ಒಂದು ಅಭಿರುಚಿಯನ್ನು ಅಥವಾ ಹವ್ಯಾಸವನ್ನು ಮೂಡಿಸಲು ಸಾಧ್ಯವಾದರೆ ಅರ್ಧ ಭಾಗ ಯಶಸ್ವಿಯಾದಂತೆ. ಇವುಗಳು ವಿದ್ಯಾರ್ಥಿಗಳ ಪ್ರತಿಭೆಗಳನ್ನು ಹೊರ ಸೂಸಲಿರುವ ಮಾಧ್ಯಮಗಳಾಗಿದೆ. ಚಂಚಲ ಮನಸ್ಸಿನ ಪಲ್ಲಟಗಳನ್ನು ಕೇಂದ್ರೀಕರಿಸಲಿರುವ ಸಾಧನವಾಗಿದೆ. ಪ್ರಶಂಸೆಯನ್ನು ಗಳಿಸಲಿರುವ ವೇದಿಕೆಯಂತೆ ಈ ಕಲೆಗಳು ಸಹಕಾರಿಯಾಗಿದೆ. ಹಾಗಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆ ಈ ತರಹದ ಪೂರಕ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಂಡಾಗ ವಿದ್ಯಾರ್ಥಿಗಳ ಮನಸ್ಸುಗಳಲ್ಲಿ ಭಾವನಾತ್ಮಕ ಸಂಬಂಧವನ್ನು ಬೆಸೆಯಲು ಸಾಧ್ಯವಾಗುತ್ತದೆ. ಈ ಎಲ್ಲ ಚಟುವಟಿಕೆಗಳು ಶಾಲೆಯ ಒಂದು ದಿನದ ಮಟ್ಟಿಗೆ ಅಥವಾ ವರ್ಷದ ಕೊನೆಯ ಶಿಬಿರಗಳಲ್ಲಿ ನಡೆದರೆ ಸಾಲದು. ಅದು ನಿತ್ಯ ಹವ್ಯಾಸವಾಗಿ ಶಾಲಾ ಚಟುವಟಿಕೆಯೊಂದಿಗೆ ನಿರಂತರವಾದಾಗ ಮಕ್ಕಳ ಮನಸ್ಸುಗಳು ಅರಳುತ್ತವೆ. ವಿಕೃತ ಮನಸ್ಸುಗಳು ನಾಶವಾಗುತ್ತದೆ.... ನಮಸ್ಕಾರ

ಕಳೆದ ಸಂಚಿಕೆಯ ಜಗಲಿಕಟ್ಟೆ - 45 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ಮಲ್ಲಿಕಾ ಧನಂಜಯ್ ತುಂಬೆ, ವಿದ್ಯಾ ಕಾರ್ಕಳ ಶಿಕ್ಷಕಿ, ತೇಜಸ್ವಿ ಅಂಬೆಕಲ್ಲು ಶಿಕ್ಷಕಿ... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....

ಎಲ್ಲರಿಗೂ ನಮಸ್ಕಾರಗಳು...
           ತೃಪ್ತಿ ಹಾಗೂ ಅತೃಪ್ತಿಗಳೆಂಬ ಕವಲು ದಾರಿಗಳಲ್ಲಿ ನಾವು ಆರಿಸಿಕೊಳ್ಳಬೇಕಾದ ದಾರಿ ಯಾವುದೆಂಬ ಜಾಣ್ಮೆ ನಮ್ಮಲ್ಲಿದ್ದರೆ ಬದುಕು ಸುಂದರವಾಗಿರುತ್ತದೆ ಎಂಬ ಸಂದೇಶಯುಕ್ತವಾದ ಜ್ಞಾನೇಶ್ ಸರ್ ರವರ ಲೇಖನ ಚೆನ್ನಾಗಿತ್ತು.
      ಪಾಶ್ಚಾತ್ಯರ ಅನುಕರಣೆಯಿಂದ ನಮ್ಮ ಪವಿತ್ರವಾದ ಸಂಸ್ಕೃತಿಗಳನ್ನು ಅವನತಿಯತ್ತ ನೂಕುತ್ತಾ ನಡೆಯುತಿರುವ ನಾವು ನಿಜಕ್ಕೂ ಮುರ್ಖರಾಗುತ್ತಿದ್ದೇವೆ , ಕೇವಲ ಏಪ್ರಿಲ್ 1 ನೆಪವಷ್ಟೇ ಎಂಬ ಒಳಾರ್ಥವಿರುವ ಲಿಖಿತಾ ರವರ ಲೇಖನ ಚೆನ್ನಾಗಿತ್ತು.
       ಮನುಷ್ಯನಿಗೆ ಸ್ವಂತ ಜ್ಞಾನವಿರಬೇಕು. ಯಾವುದೇ ಸಮಯ -ಸಂದರ್ಭಗಳಿಗೂ ತಕ್ಕಂತೆ ವ್ಯವಹರಿಸುವ ಬುದ್ಧಿಶಕ್ತಿ ನಮ್ಮದೇ ಆಗಿರಬೇಕೇ ವಿನಃ ಇನ್ನೊಬ್ಬರ ಮಿತಿ ಮೀರಿದ ಸಲಹೆಗಳು ನಮಗೆ ಯೋಗ್ಯವಲ್ಲ ಎಂಬ ನೀತಿ ಸಾರುವ ರಮೇಶ್ ಸರ್ ರವರ ಮತಿ ಮಾರ್ಜನ ಲೇಖನ ಸೊಗಸಾಗಿತ್ತು.
         ಮಕ್ಕಳಿಗಾಗಿ ವಿಜ್ಞಾನ ಎಂಬ ಲೇಖನದಲ್ಲಿ ಮೂಡಿಬಂದ ದಿವಾಕರ ಸರ್ ರವರು ಬರೆದಿರುವ ಜೀವಾಂಕುರ ಇನ್ನೂ ನಿಗೂಢ ಎಂಬ ಸಂಚಿಕೆ, ಜೀವಸಂಕುಲಗಳ ಸೃಷ್ಟಿ, ಕಾರ್ಯ, ಲಯಗಳ ನಿಗೂಢತೆಯ ಲೋಕವನ್ನು ಪರಿಚಯಿಸುವಂತಿತ್ತು.
       ಸವಿ ಜೇನು ಎಂಬ ಹೊಸ ಲೇಖನದಲ್ಲಿ ನಾಗೇಂದ್ರ ಸರ್ ರವರು ಬರೆದ ಜೇನಿನೊಂದಿಗೆ ತಮ್ಮ ಅನುಭವದ ಮೊದಲ ಪಯಣ ಸೊಗಸಾಗಿತ್ತು.
      ಯಾಕೂಬ್ ಸರ್ ರವರ "ಬರೆಯಬೇಕೆಂಬ ನನ್ನಾಸೆ" ಲೇಖನವನ್ನು ಓದುತ್ತಾ ಹೋದಂತೆ, ಇಂತಹುದೇ ಅನಿಸಿಕೆಗಳು ನನ್ನಲ್ಲೂ ಹಲವು ಸಲ ಪುನರಾವರ್ತಿಸಿರುವುದನ್ನು ನೆನಪಿಸಿತು.
       ರಿಧಾ ಡೋರಳ್ಳಿಯವರ ಕವನಗಳು ಹಾಗೂ ಸಾತ್ವಿಕ್ ರವರ ಚಳಕದಲ್ಲಿ ಮೂಡಿ ಬಂದ ಚಿತ್ರಗಳು ಚೆನ್ನಾಗಿದ್ದವು.
       ರಮೇಶ್ ಸರ್ ರವರ ಪದದಂಗಳ , ವಾಣಿಯಕ್ಕನ ಪುಸ್ತಕ ಪರಿಚಯ, ಅರವಿಂದ್ ಸರ್ ರವರ ಹಕ್ಕಿಕತೆ, ವಿಜಯಾ ಮೇಡಂ ರವರ ಎಂಜಿರ್ ಬಳ್ಳಿಯ ಮಹತ್ವವುಳ್ಳ ಲೇಖನಗಳು ಸೊಗಸಾಗಿದ್ದವು.
         ಯುಗ-ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ........ ಬೇವು- ಬೆಲ್ಲದ ಸವಿಗಳಂತೆ ಜೀವನದ ಸಿಹಿ ಕಹಿಗಳನ್ನು ಸಮಾನವಾಗಿ ಸ್ವೀಕರಿಸಿ ಬಾಳುವವರಾಗೋಣ.
       ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳೊಂದಿಗೆ..........
....................................... ವಿದ್ಯಾ ಗಣೇಶ್
ಚಾಮೆತ್ತಮೂಲೆ ತರವಾಡುಮನೆ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob: +91 99453 11853
******************************************ಎಲ್ಲರಿಗೂ ನಮಸ್ಕಾರಗಳು,
     ಅತಿ ಆಶೆ ಪಡದೆ ಇದ್ದುದರಲ್ಲೇ ತೃಪ್ತಿ ಪಟ್ಟುಕೊಂಡು ಜೀವಿಸಿದರೆ ಆತ ಸಂತೃಪ್ತಿಯಿಂದ ಇರಬಹುದೆಂಬುದನ್ನು ಉದಾಹರಣೆಗಳ ಮೂಲಕ ಶಿಕ್ಷಣಾಧಿಕಾರಿ ಯವರಾದ ಜ್ಞಾನೇಶ್ ಸರ್ ರವರು ಸುಂದರವಾಗಿ ತಿಳಿಸಿದ್ದಾರೆ. ಧನ್ಯವಾದಗಳು ಸರ್.
    ಮತಿಮಾರ್ಜನದಿಂದಾಗುವ ಅನುಕೂಲತೆಗಳು ಹಾಗೂ ಅನಾನುಕೂಲತೆಗಳ ಕುರಿತಾಗಿ ಬಹಳ ಸೊಗಸಾದ ಲೇಖನ ರಮೇಶ್ ಬಾಯಾರ್ ರವರಿಂದ.
      ಜೀವಿಗಳ ಎಲ್ಲಾ ಕ್ರಿಯೆಗಳಿಗೆ ಆಮ್ಲಜನಕ ಅತೀ ಅವಶ್ಯಕ. ಜೀವಿಗಳಲ್ಲಿ ಉಸಿರಾಟದ ಮೂಲಕ ಶಕ್ತಿ ಬಿಡುಗಡೆಯಾಗುವ ವಿಧಾನವನ್ನು ದಿವಾಕರ ಸರ್ ರವರು ತಮ್ಮ ಈ ಸಲದ ಮಕ್ಕಳಿಗಾಗಿ ವಿಜ್ಞಾನ ಸಂಚಿಕೆಯಲ್ಲಿ ಅರ್ಥವತ್ತಾಗಿ ವಿವರಿಸಿದ್ದಾರೆ.
    ಅರವಿಂದ ಸರ್ ರವರ ಹಕ್ಕಿ ಕತೆಯಲ್ಲಿ ಪ್ರತಿ ಸಲವೂ ಹೊಸ ಹೊಸ ಹಕ್ಕಿಗಳ ಪರಿಚಯವಾಗುತ್ತಿದೆ. ಈ ವಾರದ ಸಂಚಿಕೆಯಲ್ಲಿ ಎಲೆಹಕ್ಕಿ ಎನ್ನುವ ಸುಂದರವಾದ ಹಕ್ಕಿಯ ಪರಿಚಯ ಚೆನ್ನಾಗಿ ಮೂಡಿ ಬಂದಿದೆ.
     ಎಂಜಿರ್ ಬಳ್ಳಿಯ ಸವಿಸ್ತಾರವಾದ ಪರಿಚಯ ತುಂಬಾ ಖುಷಿ ನೀಡಿತು. ನಮ್ಮ ಮನೆ ಹತ್ತಿರಾನೆ ಈ ಬಳ್ಳಿಗಿಡವಿದ್ದು ಈಗಾಗಲೇ ಗಿಡ ತುಂಬ ಹೂವನ್ನು ಬಿಟ್ಟಿದೆ. ಧನ್ಯವಾದಗಳು ವಿಜಯಾ ಮೇಡಂ.
     ಲೇಖನಗಳನ್ನು ಬರೆದು ಬರಹಗಾರನಾಗಲು ಪಡುವ ಶ್ರಮದ ಕುರಿತಾದ ಅಂದವಾದ ಸಂಚಿಕೆ ಯಾಕೂಬ್ ಸರ್ ರವರಿಂದ.
     ವಾಣಿಯಕ್ಕನವರ 'ಮಿನೂ ಮತ್ತು ಅವಳ ಕೂದಲು' ಪುಸ್ತಕದ ಪರಿಚಯ ಚೆನ್ನಾಗಿತ್ತು.
    ನಾಗೇಂದ್ರರವರ ಸವಿಜೇನು ಮೊದಲ ಸಂಚಿಕೆ ಮೊದಲ ಬಾರಿ ಜೇನಿನ ಹುಡುಕಾಟದ ಜೊತೆಗೆ ಜೇನನ್ನು ಧೈರ್ಯದಿಂದ ತೆಗೆದು ಸವಿದ ಅನುಭವದ ಲೇಖನ ಸೊಗಸಾಗಿತ್ತು.
    ರಮೇಶ್ ಉಪ್ಪುಂದರವರ ಪದದಂಗಳ ಸಂಚಿಕೆ ಸೊಗಸಾಗಿ ಮೂಡಿ ಬರುತ್ತಿದೆ.
     ಲಿಖಿತಾರವರ ಲೇಖನ, ಸಾತ್ವಿಕ್ ಚಿತ್ರ ಸಂಚಿಕೆ ಹಾಗೂ ರಿಧಾರವರ ಕವನಗಳು ಎಲ್ಲವೂ ಕೂಡ ಅದ್ಭುತವಾಗಿದ್ದುವು. ಮಕ್ಕಳಿಗೆ ಅಭಿನಂದನೆಗಳು.
   ಈ ವಾರದ ಜಗಲಿಯಲ್ಲಿ ಲೇಖನಗಳನ್ನು ಚಿತ್ರಗಳನ್ನು ಹಾಗೂ ಕವನಗಳನ್ನು ಕಳುಹಿಸಿದ ಎಲ್ಲಾ ಹಿರಿಯರಿಗೆ ಹಾಗೂ ಕಿರಿಯರಿಗೆ ನನ್ನ ಮನದಾಳದ ಕೃತಜ್ಞತೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
********************************************


     ಹಿರಿಯರ ಆಹಾರ ಪದ್ದತಿ, ಜೀವನಕ್ರಮ ತ್ಯಜಿಸುತ್ತಿರುವ ನಾವು ನಿಜವಾದ ಮೂರ್ಖರು ಎಂದು ಅರಿವಿನ ಬೆಳಕು ಚೆಲ್ಲುವ ಲೇಖನ ಬರೆದ 9ನೇ ತರಗತಿಯ ವಿದ್ಯಾರ್ಥಿನಿ ಲಿಖಿತಾ ಸಿದ್ದಕಟ್ಟೆಯವರಿಗೆ ಅಭಿನಂದನೆಗಳು
      'ಮತಿ ಮಾರ್ಜನ' ಹೊಸ ಪದ ಪ್ರಯೋಗ ನಮ್ಮ ಬತ್ತಳಿಕೆಗೂ ಸೇರಿತು! ನಿಜವಾದ ಶಿಕ್ಷಣ ದೊರೆತರೆ ಇದರಿಂದ ಪಾರಾಗುವುದು ಸುಲಭ. ಕೆಲವರು ತಮ್ಮನ್ನು ನಂಬಿಸಲೂ ಮತಿ ಮಾರ್ಜನ ಬಳಸುವುದಿದೆ. ರಮೇಶ್ ಬಾಯಾರು ಅವರ ಉತ್ತಮ ಬರಹ.
     ಭರವಸೆಯ ಚಿತ್ರಗಾರ ಸಾತ್ವಿಕ್ ಗಣೇಶವರ ಚಿತ್ರಗಳ ಸಂಚಿಕೆ 517 ಉತ್ತಮವಾಗಿತ್ತು.
      ದಿವಾಕರ ಸರವರ ಮಕ್ಕಳಿಗಾಗಿ ವಿಜ್ಞಾನ ಸಂಚಿಕೆಯಲ್ಲಿ... ಜೀವಿಗಳ ಹುಟ್ಟು ಹಾಗೂ ವಿಕಾಸಕ್ಕೆ ಆಮ್ಲಜನಕದ ಆರಂಭ ಥಳಕು ಹಾಕಿರುವುದು... ಹೊಸ ವಿಚಾರಕ್ಕೆ ಕಣ್ತೆರೆಸಿತು.
      ನಾಗೇಂದ್ರರು ಮೊದಲ ಬಾರಿ ಜೇನು ತೆಗೆದು ಸಂಭ್ರಮ ಪಟ್ಟಾಗ ನಾವೂ ಅಲ್ಲೇ ಇದ್ದೆವೇನೊ ಎಂಬಂತಿದೆ ಬರಹದ ಸೆಳೆತ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ವಿದ್ಯಾ ಗಣೇಶ್ ಚಾಮೆತ್ತಮೂಲೆ ತರವಾಡುಮನೆ, ವಿಜಯಾ ಬಿ ಶೆಟ್ಟಿ ಸಾಲೆತ್ತೂರು ಶಿಕ್ಷಕಿ ... ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************


Ads on article

Advertise in articles 1

advertising articles 2

Advertise under the article