-->
ಧಾರುಶಿಲ್ಪ

ಧಾರುಶಿಲ್ಪ

ಮಕ್ಕಳ ಜಗಲಿಯಲ್ಲಿ ಕಲಾಕೃತಿ - ಉಪಸ್ಮರಣೆ
ಲೇಖನ : ಧಾರುಶಿಲ್ಪ
ಬರಹ : ಲತಾ ಶ್ರೀಧರ್
ಪ್ರಥಮ ಬಿ.ವಿ.ಎ.
ಸಿ.ಕೆ.ಎಮ್. ಕಾಲೇಜು
ವಿಶುವಲ್ ಆರ್ಟ್ಸ್,
ಉಡುಪಿ
ಮೊ: 9742070028
             

                      ಧಾರುಶಿಲ್ಪ

“ಧಾರುಶಿಲ್ಪ” ಇದು ಅತ್ಯಂತ ಪ್ರಾಚೀನ ಹಾಗೂ ಪುರಾತನ ಶಿಲ್ಪಕಲೆ. ಶತ ಶತಮಾನಗಳ ಹಿಂದೆ ಎಂದರೆ ಲೋಹಯುಗ, ಶಿಲಾಯುಗಕ್ಕೂ ಮೊದಲು ನಮ್ಮ ಪೂರ್ವಜರು ಅಗೋಚರ ಶಕ್ತಿಯನ್ನು ತಮ್ಮ ಸುತ್ತ - ಮುತ್ತಲಿರುವ ಪ್ರಕೃತಿ, ಪ್ರಾಣಿ - ಪಕ್ಷಿ, ಗಿಡ - ಮರಗಳನ್ನೇ ಪೂಜಿಸಿ ಅದರಲ್ಲೇ ಅಗೋಚರ ಶಕ್ತಿಯ ಅನುಭೂತಿಯನ್ನು ಪಡೆಯುತ್ತಿದ್ದರು. ಹಾಗೂ ಇನ್ನೂ ಕೆಲವು ಸಮಯಗಳ ಬಳಿಕ ತಮ್ಮನ್ನು ಕಾಯುವಂತಹ ನಾಯಕ - ನಾಯಕಿಯರು, ಮತ್ತು ತಮ್ಮ ದಿನ ನಿತ್ಯ ಬಳಕೆ ಹಾಗೂ ಹೊಟ್ಟೆ ಪಾಡಿಗೆ ಸಹಕರಿಸುವ ಪ್ರಾಣಿಗಳಾದ ಕೋಣ, ಎಮ್ಮೆ, ಹಂದಿ ಹಾಗೂ ಇನ್ನಿತರೇ ಜೀವ ಜಂತುಗಳಿಗೂ ಸ್ಥಾನಮಾನವನ್ನು ಕೊಟ್ಟು
ಪೂಜಿಸಲಾರಂಭಿಸಿದರು. ಹೀಗೆ ದಿನನಿತ್ಯ ಪೂಜೆ ಪುರಸ್ಕಾರಗಳಿಗೆ ಒಳಪಟ್ಟ ಮರ, ಪ್ರಾಣಿ, ಪಕ್ಷಿ, ಮನುಷ್ಯ ಹಾಗೂ ನಿರ್ಜೀವಿ ಕಲ್ಲುಗಳೂ ದೈವೀ ಶಕ್ತಿ ಪ್ರೇರೇಪಣೆಯಿಂದ ದೈವತ್ವಕ್ಕೇರಿದರು. ಅಂತೆಯೇ ನಮ್ಮ ಕರಾವಳಿಯಲ್ಲಿ ಶಿಲಾಯುಗ ಹಾಗೂ ಲೋಹಯುಗದ ನಂತರವೂ ದೈವತ್ವಕ್ಕೇರಿದ ಮನುಷ್ಯ ಕುಲವನ್ನು ಪೂಜಿಸುವುದಕ್ಕಾಗಿ ಕಾಷ್ಠದ ಮೂರ್ತಿ (ಮರದ) ಯನ್ನು ಕೆತ್ತಿ ಶಕ್ತಿಯನ್ನು ಆ ಮೂರ್ತಿಯಲ್ಲಿ ಆವಾಹಿಸಿ ಪೂಜಿಸಲಾರಂಭಿಸಿದರು. 
ಆ ಮೂರ್ತಿಗಳಿಗೆ ನಿಸರ್ಗದಲ್ಲಿ ಲಭ್ಯವಿರುವ ಬಣ್ಣವನ್ನು ಬಳಿದು ಅದರ ಸೊಬಗನ್ನು ಹೆಚ್ಚಿಸಿದರು. ಧಾರುಶಿಲ್ಪದಲ್ಲಿ ನಾವು ಹೆಚ್ಚಾಗಿ ಕಾಣ ಸಿಗುವ ಬಣ್ಣ ರಕ್ತವರ್ಣ, ಹಸಿರು, ನೀಲಿ, ಹಳದಿ, ಬಿಳಿ ಮತ್ತು ಕಪ್ಪು. ಇದಕ್ಕೆ ಹಚ್ಚಿದ ಬಣ್ಣ 150 - 200 ವರ್ಷವಾದರೂ ಮಾಸದೆ ಪಳಪಳಿಸುತ್ತದೆ. ಇತ್ತೀಚಿಗಷ್ಟೇ ಕೃತಕ ಬಣ್ಣವನ್ನು ಉಪಯೋಗಿಸುತ್ತಿದ್ದಾರೆ. ಈ ಮೂರ್ತಿಗಳನ್ನು ಹೆಚ್ಚಾಗಿ ಕಾಡಲ್ಲಿ ದೊರೆಯುವ ಹೆಮ್ಮರವಾದ ಹಲಸು, ಹೊಂಗೆ ಮರದಿಂದ ತಯಾರಿಸಲಾಗುತ್ತದೆ. ನನ್ನ ಹಿರಿಯರು ಹೇಳುತ್ತಿದ್ದ ಮಾಹಿತಿಯಂತೆ ಹಲಸು ಮತ್ತು ಹೊಂಗೆ ಮರವು ನಕಾರಾತ್ಮಕ ಶಕ್ತಿಯನ್ನು ಒಳ ತೆಗೆದುಕೊಳ್ಳುವುದಿಲ್ಲ. ನಕಾರಾತ್ಮಕ ಮತ್ತು ಸಕಾರಾತ್ಮಕ ಶಕ್ತಿಗಳಿಗೆ ಹೆಚ್ಚಾಗಿ ಸ್ಪಂದಿಸುವ ನೈಸರ್ಗಿಕ ಗುಣವನ್ನು ಹೊಂದಿದೆ. ಅಂತೆಯೇ ಹೊಂಗೆ ಮರದ ಬಾಳುವಿಕೆ ಆಯಸ್ಸು ಹಲಸಿನ ಮರಕ್ಕಿಂತ ಕಡಿಮೆಯಾಗಿರುತ್ತದೆ. ಹಾಗಾಗಿ ಹೊಂಗೆ ಮರದಿಂದ ತಯಾರಿಸಿದ ಮೂರ್ತಿಯನ್ನು ವರ್ಷಕ್ಕೊಮ್ಮೆ ವಿಸರ್ಜಿಸಿ ಬದಲಾಯಿಸಲಾಗುತ್ತದೆ. (ಇದು ದಕ್ಷಿಣ ಕನ್ನಡದ ಪ್ರದೇಶದಲ್ಲಿ ಚಾಲ್ತಿಯಲ್ಲಿರುತ್ತದೆ)
ಇನ್ನು ಈ ಧಾರುಶಿಲ್ಪದ ಮೂರ್ತಿಗಳು ನಮ್ಮ ಕರಾವಳಿಯಲ್ಲಿ ಹೆಚ್ಚಾಗಿ ಕಾಣಲ್ಪಡುತ್ತದೆ.
ಮಂಜೇಶ್ವರದಿಂದ ಹಿಡಿದು ಗೋವಾದ ವರೆಗೂ ಇವುಗಳನ್ನು ಹಲವು ದೇಗುಲಗಳಲ್ಲಿ ಕಾಣಬಹುದು. ಈ ಕಾಷ್ಠಶಿಲ್ಪವು ಸುಮಾರು 4 - 15 ಅಡಿಗಳವರೆಗೂ ಎತ್ತರವಿರುತ್ತದೆ. ಈ ಮೂರ್ತಿಗಳಿಗೆ ನೈವೇದ್ಯ ಅರ್ಪಣೆ ಹಾಗೂ ಅಭಿಷೇಕವು ನೆರವೇರುವುದಿಲ್ಲ. ಹೆಚ್ಚಿನ ಎಲ್ಲಾ ಮೂರ್ತಿಗಳೂ ಸೈನಿಕನ ಭಂಗಿಯಲ್ಲೂ ಮತ್ತು
ವೀರ ಚಹರೆಯನ್ನು ಹೊಂದಿರುತ್ತದೆ. ಕೆಲವೊಂದು ಮೂರ್ತಿಗಳು ದೊಡ್ಡ ಕಣ್ಣು ಮತ್ತು ಕೋರೆ
ಹಲ್ಲುಗಳನ್ನು ಹೊಂದಿರುತ್ತದೆ. ಇತಿಹಾಸಕಾರರ ಪ್ರಕಾರ ಇದನ್ನು 16 - 17ನೇ ಶತಮಾನದಲ್ಲಿ ನಡೆದ ಮೊಘಲ್ ಅಥವಾ ಬಹಮನಿ ಯುದ್ಧದಲ್ಲಿ ವೀರ ಸ್ವರ್ಗವನ್ನು ಪಡೆದ ಸೈನಿಕರು ಹಾಗೂ ಪೌರಾಣಿಕ ಇತಿಹಾಸದ ಪ್ರಕಾರ ಇವೆಲ್ಲವೂ ಶಿವನ ಗಣಗಳೆಂದೂ ಪರಿಗಣಿಸಲ್ಪಡುತ್ತದೆ. ಒಟ್ಟಿನಲ್ಲಿ ಈ ಮೂರ್ತಿಗಳ ಸಮೂಹವು ರಹಸ್ಯದಿಂದ ಕೂಡಿದ್ದಾಗಿದೆ. ಇತಿಹಾಸಕಾರರ ಪ್ರಕಾರ ಇದು 16 - 17ನೇ ಶತಮಾನದಲ್ಲಿ ನಡೆದ ಯುದ್ಧದಲ್ಲಿ ವೀರ ಸ್ವರ್ಗವನ್ನು ಸೇರಿದ ಸೈನಿಕರೆಂದು ಹಾಗೂ ಅವರ ವೇಷಭೂಷಣ ಮತ್ತು ಕಿರೀಟವನ್ನು ಪರಿಗಣಿಸಿ ಅವು ಬ್ರಿಟಿಷ್, ಸಿಖ್ ಸಮೂದಾಯದ ಪಗಡಿ ಎಂದು ಹೇಳಿದರೂ ಅದು ಒಪ್ಪಲು ದೂರವಾದ ಟಿಪ್ಪಣಿ ಎಂದು ಹೇಳಬಹುದು. ತುಳು ರಾಜ್ಯದಲ್ಲಿ ಇಂದಿಗೂ ಸಂಪ್ರದಾಯ ಪ್ರಕಾರ ಪುರುಷರು ರೂಮಾಲಿನಿಂದ ಸುತ್ತಿದ ಪೇಟ ಅಥವಾ ಮುಂಡಾಸು ಹಾಕಿಕೊಳ್ಳುತ್ತಾರೆ. ಅದು ನೋಡಲು ಸಿಖರ ಪಗಡಿಯಂತೆ ಕಾಣುತ್ತದೆ. ಹಾಗೇ ನೋಡಿದರೆ ಉಡುಪಿ ಜಿಲ್ಲೆಯಲ್ಲಿರುವ ಬಾರ್ಕೂರಿನ 364 ದೇವಾಲಯಗಳ ಪೈಕಿ 5 ದೇವಾಲಯಗಳಲ್ಲಿ ಮಾತ್ರ ಪೂಜಾ ಕೈಕಂರ್ಯ ನಡೆಯುತ್ತದೆ. ಮತ್ತು ಅದರಲ್ಲೂ ಮೊಗವೀರ
ಸಮುದಾಯಕ್ಕೆ ಸಂಬಂಧಿಸಿದ ಶ್ರೀ ಕುಲ ಮಹಾಸ್ತ್ರೀ ಅಮ್ಮನವರ ದೇಗುಲದ ಬಲಬದಿಯಲ್ಲಿರುವ ಕಾಷ್ಠ ಮೂರ್ತಿಗಳ ಸಮಾಹದಲ್ಲಿ ಮೊಗವೀರ ಸಮುದಾಯದಲ್ಲಿ ಇಂದೂ ಚಾಲ್ತಿಯಲ್ಲಿರುವ “ಗುರಿಕಾರ” ಪದ್ಧತಿಯ ಹರಿಕಾರ ಗುರು ಶ್ರೀ ಮಾಧವ ಮಂಗಲರವರ ಕಾಷ್ಠ ಮೂರ್ತಿಯನ್ನು ಒಳಗೊಂಡಂತೆ ಚೀನಿರಾಯ, ಚಿಕ್ಕು, ಮರ್ ಚಿಕ್ಕು, ಚಿಕ್ಕಮ್ಮ, ರಕ್ತೇಶ್ವರ, ಮರಕಾಲು ಚಿಕ್ಕು, ದೊಡ್ಡ ಕಾಲು ಚಿಕ್ಕು, ಬೊಬ್ಬರ್ಯ, ನಾಗ ಬೊಬ್ಬರ್ಯ, ಬಾಗಿಲು ಬೊಬ್ಬರ್ಯ, ಶಿವ ಸೈನಿಕ, ಶಿವರಾಯ ಹೀಗೆ ಹತ್ತು ಹಲವು ವರ್ಣ ರಂಜಿತ ಮೂರ್ತಿಗಳಿವೆ. ಅಂತೆಯೇ ಶಿರಿಯಾರದ ಮೆಕ್ಕೆಕಟ್ಟು ದೇವಾಲಯ 15 ಅಡಿ ಎತ್ತರದ ಮೂರ್ತಿಯು ವಿಶೇಷ ಆಕರ್ಷಣೆಯನ್ನು ಹೊಂದಿದೆ. ಬ್ರಿಟಿಷರ ಧಿರಿಸಿನಂತೆ ಮತ್ತು ಕೈಯಲ್ಲಿರುವ ಖಡ್ಗ ಹಾಗೂ ಮೇಲುಡುಪಿಲ್ಲದ ಶರೀರವನ್ನು ನೋಡಿದರೆ ಚುರುಕಿನ ವ್ಯಕ್ತಿತ್ವ ಎದ್ದು ಕಾಣುತ್ತದೆ. ಅಂತೆಯೇ ಅಲ್ಲಿರುವ ಮನುಷ್ಯ ದೇಹದ ನಂದಿ ಶಿವನ ನಂದಿ ಎಂದೇ ಪ್ರಚಲಿತ ಹಾಗೂ ಅಲ್ಲಿರುವ ಎಲ್ಲಾ ಮೂರ್ತಿಗಳನ್ನು ಶಿವಗಣಗಳೆಂದೆ ಗುರುತಿಸುತ್ತಾರೆ. ದಂತಕಥೆಗಳ ಪ್ರಕಾರ ಬಾರ್ಕೂರು ಅರಸರ ಸಾಮ್ರಾಜ್ಯವನ್ನು ನೆರೆಯ ರಾಜ್ಯದವರು ದಂಡೆತ್ತಿ ಬಂದಾಗ ಬಾರ್ಕೂರು ಅರಸರು ಜಂಬೂರಿನ ಋಷಿಗಳಲ್ಲಿ ಅಭಯವನ್ನು ಅರಸಿ ಬಂದಾಗ ಋಷಿಗಳು ತಮ್ಮ ತಪಃಶಕ್ತಿಯಿಂದ ಶಿವನಲ್ಲಿ ಪ್ರಾರ್ಥಿಸಿದಾಗ ಶಿವನು ತನ್ನ ಗಣಗಳನ್ನು ಬಾರ್ಕೂರು ಅರಸರ ಸಹಾಯಕ್ಕೆ ಕಳುಹಿಸಿಕೊಡುತ್ತಾನೆ. ಅಂತೆಯೇ ಶಿವನ ವಾಹನವಾದ ನಂದಿಯು ಎಲ್ಲಾ ಶತ್ರು ಪಡೆಯನ್ನು ಹಿಮ್ಮೆಟ್ಟಿಸಿ ಬಾರ್ಕೂರು ಅರಸರಿಗೆ ಜಯವನ್ನು ಕೊಡಿಸದರ ಕುರುಹಾಗಿ ಶಿವ ಗಣ ಮತ್ತು ಮನುಷ್ಯ ದೇಹದ ನಂದಿಯನ್ನು ತಮ್ಮ ಪಾಲಿನ ದೇವರೆಂದು ಪರಿಗಣಿಸಿ ಸ್ಥಾಪನೆ ಮಾಡಿ ಪೂಜಿಸುತ್ತಾರೆ. ಇಲ್ಲಿ ವಿಶೇಷವಾಗಿ ಕಾಣ ಸಿಗುವುದೇನೆಂದರೆ ಬರೀ ಪುರುಷ ಮೂರ್ತಿಗಳಲ್ಲದೆ ಹೆಣ್ಣು (ಸ್ತ್ರೀ) ಮೂರ್ತಿಗಳನ್ನು ದೇವರು ಅಥವಾ ದೈವಗಳೆಂದು ಪರಿಗಣಿಸಿ ಪೂಜಿಸುವಂತಹ ವಿಶಿಷ್ಟ ಪದ್ಧತಿ ಇದೆ. ಇದರಿಂದಾಗಿ ಪುರಾತನ ಚರಿತ್ರೆಯಲ್ಲೂ ಮತ್ತು ಅದಕ್ಕೂ ಮೊದಲು ಸ್ತ್ರೀಯನ್ನು ಪುರುಷರ ಸಮಕಾಲೀನರಂತೆ ಪರಿಗಣಿಸುತ್ತಿದ್ದರು ಎನ್ನುವುದನ್ನು ಕಾಣಬಹುದಾಗಿದೆ. ಮತ್ತು ಸ್ತ್ರೀಯರಿಗೂ ಪುರುಷರಂತೆ ಸಮಾನ ಹಕ್ಕು ಮತ್ತು ಸ್ಥಾನಮಾನ ಇರುತ್ತಿದ್ದವು ಎನ್ನುವುದಕ್ಕೆ ಉದಾಹರಣೆಯಾಗಿದೆ. ಹೆಣ್ಣು ಮೂರ್ತಿಗಳ ಕೈಯಲ್ಲೂ ಬಿಲ್ಲು ಬಾಣ ಆಯುಧಗಳನ್ನು ಕಾಣಬಹುದಾಗಿದೆ. ಇದರಿಂದಾಗಿ
ತಿಳಿಯುವುದೇನೆಂದರೆ ಸ್ತ್ರೀಯರು ಬಿಲ್ವಿದ್ಯೆಯಲ್ಲಿ ಪರಿಣಿತರಾಗಿದ್ದರು. ಒಟ್ಟಿನಲ್ಲಿ ಹೇಳುವುದಾದರೆ ಈ ಮೂರ್ತಿಗಳ ಸಮೂಹವನ್ನು ನೋಡುವಾಗ ಭಯ ಭಕ್ತಿಗಳ ಸಮ್ಮಿಲನ ಮತ್ತು ನಿಗೂಢ ವಿಸ್ಮಯಗಳ ಆಗರ ಎಂದೆನಿಸುತ್ತದೆ. ಇಂತಹ ಅದ್ಭುತವಾದ ದೇವಾಲಯವು ನಮ್ಮ ಉಡುಪಿ ಜಿಲ್ಲೆಯಲ್ಲಿರುವುದಕ್ಕೆ ಹೆಮ್ಮೆ ಎನಿಸುತ್ತದೆ.
................................................ ಲತಾ ಶ್ರೀಧರ್
ಪ್ರಥಮ ಬಿ.ವಿ.ಎ.
ಸಿ.ಕೆ.ಎಮ್. ಕಾಲೇಜು
ವಿಶುವಲ್ ಆರ್ಟ್ಸ್,
ಉಡುಪಿ
ಮೊ: 9742070028
********************************************


Ads on article

Advertise in articles 1

advertising articles 2

Advertise under the article