-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 39

ನಿಷ್ಪಾಪಿ ಸಸ್ಯಗಳು : ಸಂಚಿಕೆ - 39

ನಿಷ್ಪಾಪಿ ಸಸ್ಯಗಳು : ಸಂಚಿಕೆ - 39
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
        
       

ಪ್ರೀತಿಯ ಮಕ್ಕಳೇ.... ಹೇಗಿದ್ದೀರಿ? ಚೆನ್ನಾಗಿರುವಿರಿ ತಾನೆ?
        ನಾನು ಇಂದು ನಿಮಗೆ ವಿಶೇಷ ಬಳ್ಳಿಯೊಂದರ ಪರಿಚಯ ಮಾಡಿಲಿದ್ದೇನೆ. ನಮ್ಮ ಸಸ್ಯ ಪ್ರಪಂಚದಲ್ಲಿ ತನ್ನ ಉಳಿವಿಗಾಗಿ ಹಾಗೂ ಸ್ವರಕ್ಷಣೆಗಾಗಿ ನಾನಾ ತಂತ್ರಗಳ ಬಳಕೆ ಮಾಡಿಕೊಳ್ಳುವ ಬಹುದೊಡ್ಡ ಸಂಖ್ಯೆಯ ಸಸ್ಯಗಳಿವೆ. ಇವುಗಳಲ್ಲಿ ಒಂದು ನಸುಗುನ್ನಿ ಬಳ್ಳಿ.
        ತರುಚನ ಬಳ್ಳಿ, ಮಂಗನ ಕಾಯಿ ಎಂದೂ ಕರೆಸಿಕೊಳ್ಳುವ ಈ ಬಳ್ಳಿ ತುಳುವಿನಲ್ಲಿ ನಾಯಿಸೊಣಂಗ್ ಆದರೆ ಸಂಸ್ಕೃತ ದಲ್ಲಿ ಕಪಿಕಚ್ಚು.
         ನೀನೇನು ನಸುಗುನ್ನಿ ತರಹ ಆಡುತ್ತಿ!? ಎಂದೋ ಅವನೊಂದು ನಸುಗುನ್ನಿ ಎಂದೋ ಉಪಮೆಯಾಗಿ ಬಳಕೆಯಾಗುವ ನಸುಗುನ್ನಿಯನ್ನು ಹಿಂದೆ ತುಂಟ ಮಕ್ಕಳು ಅಧ್ಯಾಪಕರಿಗೆ ಅದರ ಧೂಳು ತಾಗುವಂತೆ ಮಾಡಿದರೆ ಶಿವರಾತ್ರಿಯ ದಿನ ತಮಾಶೆಗೆಂದು ಬೇರೆ ಮನೆಗಳ ಬಿಸಿನೀರಿನ ಹಂಡೆಗೊಂದು ಕೋಡು ಹಾಕಿ ಬಿಡುತ್ತಿದ್ದರು. ಸಣ್ಣ ಮಕ್ಕಳ ಶಾಲೆಯ ಚೀಲದೊಳಗೆ ನಸುಗುನ್ನಿಯ ಧೂಳು ಹಾರಿಸಿ ಖುಷಿ ಪಡೆವ ಧೂರ್ತರಿಗೂ ಕೊರತೆಯಿರಲಿಲ್ಲ. 'ನನ್ನಲ್ಲಿ ನಸುಗುನ್ನಿ ಆಟ ಆಡಬೇಡ' ಎಂದು ಒಬ್ಬರಿಗೊಬ್ಬರು ಎಚ್ಚರ ನೀಡುವುದೂ ಇದೆ.
       ಈ ಕಂದು ಬಣ್ಣದ ನಸುಗುನ್ನಿಯ ಕೋಡುಗಳ ಮೇಲೆ ಇರುವ ರೋಮ ಎಲ್ಲಾದರೂ ಚರ್ಮಕ್ಕೆ ತಾಗಿತೆಂದರೆ ತುರಿಕೆ, ಉರಿಯ ಪ್ರಮಾಣ ಅಳತೆಗೆ ನಿಲುಕದ್ದು. ಗುಳ್ಳೆ ಗಳೂ ಬರಬಹುದು.. ತುರಿಸಿಕೊಂಡು ರಕ್ತವೇ ಬರುವಂತಾದರೂ ನವೆ ನಿಲ್ಲದ ಕತೆ. ಇದನ್ನು ಉಪಶಮನ ಗೊಳಿಸಲು ಎಮ್ಮೆಯ ಸೆಗಣಿ, ಮೊಸರು, ಹಳೆಯ ಮಜ್ಜಿಗೆಯನ್ನು ಬಳಸುತ್ತಾರೆ. ಅಮೋನಿಯಂ ಸೇರಿಸಿದ ಬಿಸಿನೀರಿನಿಂದ ತೊಳೆದರೂ ಶಮನವಾಗುವುದು.
        ಉಷ್ಣವಲಯದಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಈ ಸಸ್ಯ ಭಾರತ, ಅಂಡಮಾನ್ ನಿಕೋಬಾರ್, ಆಫ್ರಿಕಾ, ಅಮೇರಿಕಾ ಗಳಲ್ಲೂ ಬೆಳೆಯುವ ಈ ನಸುಗುನ್ನಿ ಬೇಲಿ, ತೇವಭರಿತ ಜಾಗ, ಕಾಡು, ಗದ್ದೆ ತೋಟಗಳ ಬದಿಗಳಲ್ಲೂ ಸಾಮಾನ್ಯ ಕಳೆಗಿಡವಾಗಿ ಬೆಳೆಯುತ್ತದೆ.
        ಲೆಗ್ಯೂಮಿನೋಸೀ ಕುಟುಂಬದ ಏಕವಾರ್ಷಿಕ ಈ ಕಾಡುಗಿಡದ ವೈಜ್ಞಾನಿಕ ಹೆಸರು ಮ್ಯೂಕ್ಯುನ ಪ್ರೂರಿಟ. ಕೌಹೇಜ್ ಎಂದು ಸಾಮಾನ್ಯ ಬಳಕೆಯ ಇಂಗ್ಲೀಷ್ ಹೆಸರು. ಇದು ಮರವನ್ನು ಆಧರಿಸಿ ಅಥವಾ ಪೊದೆಗಳ ಮೇಲೆಯೂ ಹಬ್ಬ ಬಲ್ಲ ಬಳ್ಳಿ. ಇದಕ್ಕೆ ಪರ್ಯಾಯ ಜೋಡಣೆಯಲ್ಲಿ ಸಂಯುಕ್ತ ಎಲೆಗಳಿದ್ದು ಒಂದೊಂದು ಎಲೆಯಲ್ಲೂ ಮೂರು ಕಿರು ಪತ್ರಕಗಳಿರುತ್ತವೆ. ನುಣುಪಾದ ಹೊಳೆಯುವ ಬಿಳಿ ಬಣ್ಣದ ರೋಮ ಎಲೆಗಳ ಅಡಿ ಹಾಗೂ ಮೇಲ್ಭಾಗಗಳಲ್ಲಿದ್ದು ಹೂಗಳು ಗೊಂಚಲುಗಳಾಗಿ ನೇರಳೆ ಬಣ್ಣದಲ್ಲಿರುತ್ತವೆ. ಹೂಗಳು ದ್ವಿಲಿಂಗಿ ಗಳಾಗಿದ್ದು ಐದೈದು ಪುಷ್ಪಪತ್ರೆ ಹಾಗೂ ದಳಗಳಿದ್ದು ಹತ್ತು ಕೇಸರ ಹಾಗೂ ಅಂಡಾಶಯವಿದೆ. ಹೂಗೊಂಚಲಿನ ತೊಟ್ಟಿನ ಮೇಲೂ ನಸುಕಂದು ಬಣ್ಣದ ಕೂದಲಿನಂತಹ ರಚನೆಯಿದೆ. ಇವುಗಳಲ್ಲಿ ಇಂಗ್ಲೀಷ್ ಅಕ್ಷರ S ನಂತೆ ಕಾಣುವ ಬೀನ್ಸ್ ನಂತಹ ಕೋಡುಗಳಾಗುತ್ತವೆ. ಎಳೆಯ ಕೋಡುಗಳನ್ನು ಪಲ್ಯವಾಗಿ ಬಳಸುತ್ತಾರಾದರೂ ಕೋಡು ಬೆಳೆದ ಬಳಿಕ ಸಿಪ್ಪೆ ಗಟ್ಟಿಯಾಗುತ್ತದೆ ಅಲ್ಲದೆ ತುರಿಕೆ, ನವೆಯನ್ನುಂಟುಮಾಡುವ ಮ್ಯೂಕ್ಯುಲೈನ್ ಎಂಬ ಅಂಶವಿರುವ ರೋಮಗಳಿಂದ ಆವೃತವಾಗಿರುತ್ತದೆ. ಯಾರೂ ಮುಟ್ಟದಂತೆ ಗಿಡಕ್ಕೆ ಪ್ರಕೃತಿ ನೀಡಿದ ರಕ್ಷಣೆಯಾಗಿರಬಹುದು. ಇದರ ಒಳಗೆ ಅವರೆ ಬೀಜದಂತೆ ಕಪ್ಪಾದ ಬೀಜಗಳಿರುತ್ತವೆ. ಬಿಳಿ ಬಣ್ಣದ ಬೀಜ ಇರುವ ನಸುಗುನ್ನಿಯೂ ಇದೆ. ಇದರ ಬೀಜ ಹಾಗೂ ಬೇರು ಮಾನವನಿಗೆ ಬಲು ಉಪಯುಕ್ತವಾಗಿದೆ. 
     ಈ ನಿಷ್ಪಾಪಿ ಸಸ್ಯವು ತಂತ್ರ ಮಂತ್ರಗಳಲ್ಲೂ ಬಳಕಯಲ್ಲಿರುವ ಒಂದು ವಿಶಿಷ್ಟ ಸಸ್ಯ ಮಾತ್ರವಲ್ಲದೇ ವಿಶೇಷವಾಗಿ ಇದರ ಬೀಜಗಳಿಂದ ಆನೆಕಾಲು, ನರದೌರ್ಬಲ್ಯ ಹಾಗೂ ಪಾರ್ಕಿನ್ಸನ್ ಕಾಯಿಲೆಗಳ ಉಪಶಮನಕ್ಕೆ ಬಹಳ ಪ್ರಯೋಜನಕಾರಿಯೆಂದು ಆಯುರ್ವೇದದಲ್ಲಿ ಬಳಕೆಯಲ್ಲಿದೆ. ಬೀಜ ಹುರಿದು ಪುಡಿ ಮಾಡಿ ಕಾಫಿಯಂತೆಯೂ ಬಳಸುತ್ತಾರೆ. ಇದು ಶಕ್ತಿವರ್ದಕ ಟಾನಿಕ್ ನಂತೆ. ಮೂತ್ರಪಿಂಡದ ಸಮಸ್ಯೆ, ವಾತ, ರಕ್ತಭೇದಿ, ಜಂತುಹಾರಿ, ಪಿತ್ತಕೋಶದ ಚಿಕಿತ್ಸೆ, ಮೂತ್ರಸ್ರಾವದ ಉತ್ತೇಜಕ, ಬಲವರ್ಧಕ, ಜಲೋದರ ಇತ್ಯಾದಿಗಳಲ್ಲಿ ಬಳಕೆಯಲ್ಲಿದೆ. ಇದರ ಹುಡಿ ಹಾಗೂ ತೈಲಗಳೂ ಮಾರುಕಟ್ಟೆಯಲ್ಲಿವೆ.
         ಎಳೆಕಾಯಿ, ಸೊಪ್ಪು ಜಾನುವಾರಗಳಿಗೆ ಮೇವಾಗಿದ್ದು ದನಕರುಗಳಿಗೂ ಹೊಟ್ಟೆ ಹುಳದ ಸಮಸ್ಯೆಗೆ ಔಷಧಿಯಾಗಿದೆ. ಸೋಡಿಯಂ, ಪೊಟಾಷಿಯಂ, ಕಬ್ಬಿಣ, ತಾಮ್ರ, ರಂಜಕ, ಮೆಗ್ನೀಸಿಯಂ ಗಳಿರುವ ನಸುಗುನ್ನಿ ಬೀಜದ ಹುಡಿ ದೇಹದಲ್ಲಿ ಅದ್ಭುತ ಚೈತನ್ಯ ತುಂಬುತ್ತದೆ.. ಇತ್ತೀಚೆಗೆ ತುರಿಕೆ ಇಲ್ಲದ ತಳಿಗಳೂ ಹುಟ್ಟಿಕೊಂಡಿವೆ.
    ತೆಂಗಿನ ತೋಟಗಳಲ್ಲಿ ರೈತರು ನಸುಗುನ್ನಿಯನ್ನು ಬೆಳೆಸುತ್ತಾರೆ. ಇದರಿಂದ ಇಳುವರಿ ಹೆಚ್ಚಾಗುವುದೆಂದು ಕೃಷಿ ಇಲಾಖೆಯೇ ರೈತರಿಗೆ ಸಲಹೆ ನೀಡುತ್ತಿರುವುದಲ್ಲದೆ ಕೃಷಿ ವಿಜ್ಞಾನ ಕೇಂದ್ರವೇ ಹತ್ತಿಪ್ಪತ್ತು ಕ್ವಿಂಟಾಲ್ ಬೀಜಗಳನ್ನೇ ಪೂರೈಸುತ್ತಿದೆ ಎಂದರೆ ಅಚ್ಚರಿ ಎನಿಸುವುದಿಲ್ಲವೇ! ಸಾವಯವ ಇಂಗಾಲದ ಅಂಶ ಹೆಚ್ಚಾಗಿ ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳು ಹೆಚ್ಚಾಗುವ ಮೂಲಕ ಮಣ್ಣಿನ ಫಲವತ್ತತೆ ಹೆಚ್ಚಳವಾಗಲು ಸಹಕಾರಿಯಾಗುವ ಮೂಲಕ ತೆಂಗಿನ ಇಳುವರಿಯ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಸಂಶೋಧನಾ ವರದಿ ಇದೆ. ಮಾವು ಅಡಿಕೆಗೂ ಈ ಸಸ್ಯದ ಪ್ರಯೋಜನವಿದೆ ಎಂದು ಕೃಷಿ ವಿಜ್ಞಾನಿಗಳು ಹೇಳುತ್ತಾರೆ. ಮಣ್ಣಿನ ಸವೆತ ತಡೆಗಟ್ಟಲು, ಸಾರಜನಕದ ಸಮತೋಲನ ಹಾಗೂ ಮಣ್ಣಿನ ಫಲವತ್ತತೆ ಸುಧಾರಿಸುವ ನಸುಗುನ್ನಿ 30% ರಿಂದ 40% ಇಳುವರಿ ಹೆಚ್ಚಿಸಿ 98% ಕಳೆ ನಿಯಂತ್ರಿಸುತ್ತದೆ ಎಂದು ಕೃಷಿ ವಿಜ್ಞಾನಿಗಳು ಹೇಳುತ್ತಾರೆ. ಇತ್ತೀಚೆಗೆ ನಸುಗುನ್ನಿಯ ನಾನಾ ತಳಿಗಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ದೊರೆಯುತ್ತಿವೆ.
      ನೋಡಿದಿರಾ ಮಕ್ಕಳೆ, ತೀವ್ರ ನವೆಯುಂಟುಮಾಡುವ ಕಾರಣದಿಂದಾಗಿ ಕಳೆಗಿಡವಾಗಿದ್ದ ಒಂದು ಸಸ್ಯ ಮಾನವ ಜೀವಿಗೆ ಅದೆಷ್ಟು ಉಪಕಾರಿಯಾಗಿದೆ ಎಂದು ತಿಳಿದಿರಾ? ಪ್ರಕೃತಿ ಅದೆಷ್ಟು ಕೌತುಕಗಳನ್ನು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡಿದೆ!
      ಸರಿ ಮಕ್ಕಳೇ. ಎಲ್ಲಾದರೂ ಈ ನಸುಗುನ್ನಿ ಸಿಕ್ಕರೆ ಗುರುತಿಸಿ... ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.... ನಮಸ್ಕಾರ
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************

Ads on article

Advertise in articles 1

advertising articles 2

Advertise under the article