-->
ಜಗಲಿ ಕಟ್ಟೆ : ಸಂಚಿಕೆ - 42

ಜಗಲಿ ಕಟ್ಟೆ : ಸಂಚಿಕೆ - 42

ಜಗಲಿ ಕಟ್ಟೆ : ಸಂಚಿಕೆ - 42
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 



ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ



     ಜಗಲಿಯ ಮಕ್ಕಳೆಲ್ಲಾ ಪರೀಕ್ಷಾ ಸಿದ್ಧತೆಯಲ್ಲಿದ್ದೀರಿ ಎಂದುಕೊಳ್ಳುತ್ತೇನೆ... ನೀವು ಈಗಾಗಲೇ ಕಳುಹಿಸಿ ಕೊಟ್ಟಿರುವ ಚಿತ್ರ, ಕಥೆ, ಕವನಗಳನ್ನು ಪ್ರಕಟಿಸುತ್ತಾ ಇದ್ದೇವೆ. ಮೊನ್ನೆ ಮೊನ್ನೆ ಒಬ್ಬಾಕೆ ವಿದ್ಯಾರ್ಥಿನಿ "ಪರೀಕ್ಷೆ ಮುಗಿದ ತಕ್ಷಣ ಜಗಲಿಗೆ ಚಿತ್ರ ಬರೆಯುತ್ತೇನೆ" ಅಂದಿದ್ದಳು. ಉಳಿದವರು ಕೂಡ ಪರೀಕ್ಷೆಯ ನಂತರ ಜಗಲಿಗೆ ಕಥೆ, ಕವನ, ಲೇಖನಗಳನ್ನು ಬರೆದು ಕಳುಹಿಸುವಿರೆಂದು ಭಾವಿಸುತ್ತೇನೆ. ಅಂತೂ ಇಂತೂ ನಿತ್ಯ ನಿರಂತರವಾಗಿ ಮಕ್ಕಳ ಜಗಲಿಯಲ್ಲಿ ತೊಡಗಿಸಿಕೊಳ್ಳುತ್ತಿರುವ ಎಲ್ಲಾ ವಿದ್ಯಾರ್ಥಿಗಳನ್ನು ಸ್ಮರಿಸುತ್ತಿದ್ದೇನೆ...
       ಇನ್ನು ಬೇಸಿಗೆ ರಜೆಗಳು ಆರಂಭವಾದ ಕೂಡಲೇ ನಿಮ್ಮೂರಲ್ಲಿ ಮಕ್ಕಳ ಬೇಸಿಗೆ ಶಿಬಿರಗಳು ನಡೆಯುತ್ತವೆ. ಸಾಧ್ಯವಾದರೆ ಇಂತಹ ಶಿಬಿರಗಳಲ್ಲಿ ಭಾಗವಹಿಸಿ. ಶಾಲಾ ವತಿಯಿಂದ ಅಥವಾ ಇತರ ಸಂಘ ಸಂಸ್ಥೆಗಳು ನಡೆಸುವಂತಹ ಬೇಸಿಗೆ ಶಿಬಿರಗಳು ನಮ್ಮ ಕಲಿಕೆಯ ಭಾಗವನ್ನು ವಿಸ್ತಾರಗೊಳಿಸುತ್ತದೆ. ಶಾಲಾ ಅವಧಿಯಲ್ಲಿ ಕೇವಲ ಪಠ್ಯ ಹಾಗೂ ಇನ್ನಿತರ ಚಟುವಟಿಕೆಗಳಿಗೆ ಮಾತ್ರ ಮೀಸಲಾಗಿರುತ್ತದೆ. ಆದರೆ ಬೇಸಿಗೆ ಶಿಬಿರಗಳಲ್ಲಿ ಯೋಗ, ಚಿತ್ರ, ಕ್ರಾಫ್ಟ್, ಬರವಣಿಗೆ, ಹಾಡು, ನೃತ್ಯ, ರಂಗಾಭಿನಯ ಹೀಗೆ ಸರ್ವವಿಧದ ವಿಷಯಗಳೂ ಅಲ್ಲಿರುತ್ತದೆ.
     ಬೇಸಿಗೆ ಶಿಬಿರಗಳು ಹೆಚ್ಚಾಗಿ ಪ್ರಾಯೋಗಿಕವಾಗಿರುತ್ತದೆ. ಇಲ್ಲಿ ಯಾವುದೇ ಭಾಷಣ, ಉಪನ್ಯಾಸ, ಉಪದೇಶಗಳು ಇರುವ ಅವಕಾಶಗಳು ಕಡಿಮೆ. ಇಲ್ಲಿ ನಮ್ಮ ಹಸ್ತ ಕೌಶಲ್ಯ, ಭಾವಾಭಿವ್ಯಕ್ತಿ, ಬೌದ್ಧಿಕ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸುವ ಚಟುವಟಿಕೆಗಳು ಗಮನ ಸೆಳೆಯುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗಳನ್ನು ಹೆಚ್ಚು ಕ್ರಿಯಾಶೀಲಗೊಳಿಸುವ, ಸೃಜನಶೀಲ ಗೊಳಿಸುವ ಪ್ರಕ್ರಿಯೆ ನಡೆಯುತ್ತದೆ.
      ಶಿಬಿರಗಳಲ್ಲಿ ಭಾಗವಹಿಸುವುದರಿಂದ ವಿವಿಧ ಕಲೆಗಳಲ್ಲಿ ಅನುಭವವಿರುವ ಸಂಪನ್ಮೂಲ ವ್ಯಕ್ತಿಗಳ ಪರಿಚಯವಾಗುತ್ತದೆ. ಅವರ ಸಾಧನೆ, ವ್ಯಕ್ತಿತ್ವವನ್ನು ಅರಿತುಕೊಳ್ಳಬಹುದು. ಅವರು ಹೇಳಿಕೊಟ್ಟ ಮಾದರಿಯಲ್ಲಿ ಇನ್ನು ಹೊಸತನ್ನು ನಾವು ಶೋಧನೆ ಮಾಡಬಹುದು. ಶಿಬಿರಗಳಲ್ಲಿ ಹೆಚ್ಚಾಗಿ ಆಸಕ್ತಿ ಇರುವ ವಿದ್ಯಾರ್ಥಿಗಳೇ ಭಾಗವಹಿಸುವುದರಿಂದ ವಿವಿಧ ಪ್ರತಿಭಾನ್ವಿತ ಮಕ್ಕಳ ಸಂಪರ್ಕ ದೊರೆಯುತ್ತದೆ. ಅವರಲ್ಲಿರುವ ಪ್ರತಿಭೆಗಳನ್ನು ಅರಿತು ನಾವು ಜೊತೆ ಸೇರಿ ಕಲಿಯಬಹುದು. 
     ಸ್ವರೂಪ ಅಧ್ಯಯನ ಸಂಸ್ಥೆ , ರಂಗಮನೆ ಸುಳ್ಯ ಹೀಗೆ ಬೇರೆ ಬೇರೆ ಕಡೆಗಳಲ್ಲಿ ನಡೆಸುವ ಶಿಬಿರದ ಮಾಹಿತಿಯನ್ನು ಇಲ್ಲಿ ಹಂಚಿದ್ದೇನೆ. ಅವಕಾಶವಿರುವವರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
         

ಕಳೆದ ಸಂಚಿಕೆಯ ಜಗಲಿಕಟ್ಟೆ - 41 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ವಿದ್ಯಾ ಕಾರ್ಕಳ ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....


     ನಮಸ್ತೆ ಸರ್... ಕಳೆದ ವಾರ ಜಗಲಿಯಲ್ಲಿ ಶ್ರಾನ್ವಿಯ ಚಿತ್ರ ಸಂಚಿಕೆ: 390 ಮರು ಪ್ರಕಟಗೊಂಡಾಗ ಒಮ್ಮೆ ನೋಡಿ, ಮತ್ತೊಮ್ಮೆ, ಮಗದೊಮ್ಮೆ ನೋಡಬೇಕೆನಿಸಿತು. ಆ ಮುದ್ದುಮುಖ ಅವಳಲ್ಲಿದ್ದ ಆಸಕ್ತಿ, ಆ ಕಣ್ತುಂಬಾ ಇದ್ದ ನೂರಾರೂ ಕನಸುಗಳು...... ಶಿಶಿರನ ಕನಸುಗಳು ಹಾಗೆಯೇ ತಾನೇ. ದೈವೀಚ್ಛೆಯಂತೆ ಎಲ್ಲವೂ ನಡೆಯುವುದು. ಶಾಲೆಯೇ ತನ್ನ ಉಸಿರು, ಇಷ್ಟದ ಚಟುವಟಿಕೆಯ ತಾಣ ಎಂದು ತಿಳಿದಿದ್ದ ಶಿಶಿರ್ ಆಕಸ್ಮಾತ್ ಅನಾರೋಗ್ಯದಿಂದ ಶಾಲೆಗೆ ಹೋಗಲು ಕಷ್ಟವಾದಾಗ.. ನನಗೆ ಯಾಕೆ ಹೀಗೆ ? ಎಂದು ದುಖಿಸುತ್ತಿದ್ದಾಗ ನೆನಪಾದದ್ದೇ ಜಗಲಿ, ಅವನು ಸಂಭ್ರಮಿಸುತ್ತಿದ್ದ ಮಕ್ಕಳ ಜಗಲಿ. ನಿಮಗೆ ಫೋನ್ ಮಾಡಿದಾಗ ನಿಮ್ಮಿಂದ ಸಿಕ್ಕ ಸ್ಪಂದನೆ.. ಬಂಟ್ವಾಳದ ಶಿಕ್ಷಣಾಧಿಕಾರಿಯಾಗಿದ್ದ ಜ್ಞಾನೇಶ್ ಸರ್ ಭೇಟಿ ಅವರ ಜೀವನ ಸಂಭ್ರಮಿಸುವ ಮನೋಸ್ಥೖರ್ಯ ತುಂಬಿದ ಮಾತುಗಳು, ಕಲಿಕಾ ಹಬ್ಬದಲ್ಲಿ ಪಾಲ್ಗೊಳ್ಳುವ ಆವಕಾಶ. ಅಲ್ಲಿ ಜಗಲಿಯ ಸಹೃದಯಿ ಶಿಕ್ಷಕರನ್ನು ಭೇಟಿ ಮಾಡಿದ್ದು... ಮುಂದೆ ತನ್ನ ಮಹದಾಶೆಯ ಎಸ್.ಎಸ್. ಎಲ್. ಸಿ. ಪರೀಕ್ಷೆಯನ್ನು ಬರೆಯಲು ಸಾಧ್ಯವಾಯಿತು. ಕಾಲೇಜು ಶಿಕ್ಷಣ ಮುಂದುವರಿಸಲು ಸಾಧ್ಯವಿಲ್ಲದ್ದಿದ್ದಾಗ ಮುಂದೇನು? ಎಂಬ ಚಿಂತೆಯಲ್ಲಿ ನಾವಿದ್ದಾಗ ಬದುಕಿನ ಪ್ರೀತಿಯ ಶಿಕ್ಷಣ ನೀಡುತ್ತಿರುವ ಗೋಪಾಡ್ಕರ್ ಸರ್ ಭೇಟಿಗೂ ಕಾರಣವಾಯಿತು. 
ಜಗಲಿಯಿಂದ ಸಿಕ್ಕ ಪ್ರೇರಣೆಯಿಂದ ನಂತರ ಅವನು ಕೊರಗಿದ್ದೇ ಇಲ್ಲ. ದಿನದ ಒಂದೊಂದು ಕ್ಷಣವನ್ನು ಧನಾತ್ಮಕವಾಗಿ ಸೃಜನಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಂತೋಷದಿಂದ ಕಳೆದ ಆ ದಿನಗಳು... ಅಕ್ಕನ ಪತ್ರ ನೀಡಿದ ಹುಮ್ಮಸ್ಸು, ವಾರದ ಕೊನೆಯಲ್ಲಿ ಅಕ್ಕನಿಗೆ ಪತ್ರ ಬರೆಯಬೇಕು ಏನು ಬರೆಯಲಿ, ಹೇಗೆ ಬರೆಯಲಿ ಎಂಬುದು ಪುಸ್ತಕಗಳ ಓದುವ ಖುಷಿಗೆ ಕಾರಣವಾಯಿತು. ಇವತ್ತು ಶ್ರಾನ್ವಿ, ಶಿಶಿರ್ ಇಲ್ಲ ಆದರೂ ಅವರು ಕಷ್ಟದಲ್ಲೂ ಜಗಲಿಯಲ್ಲಿ ಸಂತೋಷದಿಂದ ಸಂಭ್ರಮಿಸಿದ ಸುಂದರ ದಿನಗಳ ನೆನಪುಗಳು ಇದೆಯಲ್ಲಾ ಸಾಕು ನಮ್ಮನ್ನು ನಾವು ಸಂತೖಸಿಕೊಳ್ಳಲು..... ಮಕ್ಕಳ ಆಸಕ್ತಿ ತೆರೆದುಕೊಳ್ಳಲು ಪ್ರೀತಿಯ ಸ್ಪಂದನೆ, ಅವಕಾಶ... ನಮ್ಮ ಮಕ್ಕಳ ಜಗಲಿ. ಈ ವಾರ ಜಗಲಿಯಲ್ಲಿ ಪ್ರಕಟವಾದ ಮಕ್ಕಳ ಚಿತ್ರಗಳು ಕಥೆಗಳು, ಕವನಗಳನ್ನು ಓದಿ ತುಂಬಾ ಸಂತೋಷವಾಯಿತು. ಎಲ್ಲಾ ಮಕ್ಕಳಿಗೂ ಪ್ರೀತಿಯ ಅಭಿನಂದನೆಗಳು. 'ಗೆಲ್ಲಲು ಹೊರಟವಳು' ಯಾಕೂಬ್ ಸರ್ ಬರೆದ ಹೃದಯದ ಮಾತು ಲೇಖನ ಇಷ್ಟವಾಯಿತು. ಧನ್ಯವಾಗಳು.