-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 106

ಸ್ಫೂರ್ತಿಯ ಮಾತುಗಳು : ಸಂಚಿಕೆ - 106

ಸ್ಫೂರ್ತಿಯ ಮಾತುಗಳು : ಸಂಚಿಕೆ - 106
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 


            
     ನನ್ನ ಹಿರಿಯ ವಿದ್ಯಾರ್ಥಿನಿಯೊಬ್ಬಳನ್ನು ಸಮಾರಂಭವೊಂದರಲ್ಲಿ ಭೇಟಿಯಾಗುವ ಸದವಕಾಶ ದೊರೆಯಿತು. ಕಾರ್ಯಕ್ರಮಗಳಲ್ಲಿ ಸಂಬಂಧಿಗಳ, ಕುಟುಂಬಿಕರ, ಶಿಷ್ಯರ ಭೇಟಿ ಸಹಜವೇ ಆದರೂ ಈಕೆಯ ಭೇಟಿ ವಿಶೇಷವಾದ ಅನುಭವ ನೀಡಿತು. ಆ ಅನುಭವದ ಪ್ರತಿಫಲವೇ ಈ ಲೇಖನ.
    ಅರಗಿಣಿಯಂತಿರುವ ಆಕೆಯ ಹೆಸರು ರಾಗಿಣಿ (ಹೆಸರು ಬದಲಿಸಿದೆ). ರಾಗಿಣಿಯು ನನಗೆ ಪ್ರೌಢ ಶಾಲಾ ಶಿಷ್ಯೆ. ಕಲಿಕೆಯಲ್ಲಿ ಮತ್ತು ಇತರ ಚಟುವಟಿಕೆಗಳಲ್ಲಿ ಬಹಳಷ್ಟು ಮುಂದಿರುವ ಶಿಷ್ಯ ಶಿಷ್ಯೆಯರ ಬಗ್ಗೆ ಎಲ್ಲ ಅಧ್ಯಾಪಕರಿಗೂ ಮಮತೆ ಹೆಚ್ಚಿರುವುದು ಸಹಜ. ಹಾಗೆಂದು ಸಾಮಾನ್ಯ ವಿದ್ಯಾರ್ಥಿಗಳೆಂದರೆ ತಿರಸ್ಕಾರವಿರುವುದಿಲ್ಲ, ಮಮತೆ ಇದ್ದೇ ಇರುತ್ತದೆ. ರಾಗಿಣಿ ನನ್ನ ಮುಂದೆ ನಿಂತು, “ನಮಸ್ತೇ ಸರ್, ನನ್ನ ನೆನಪಿದೆಯಾ?” ಎಂದು ಪ್ರಶ್ನಿಸಿದಾಗ ಉಸಿರಾಟದಲ್ಲಿ ಸಣ್ಣ ಏರುಪೇರಾಯಿತು. ಸಾವರಿಸಿಕೊಂಡು, “ನೆನಪು ಮಾಡಿಕೊಳ್ಳುತ್ತಿದ್ದೇನೆ” ಎಂದು ಹೌದೂ ಅಥವಾ ಇಲ್ಲ ಎಂದು ಹೇಳದೆ ಅಡ್ಡ ಗೋಡೆಯ ಮೇಲೆ ದೀಪವಿರಿಸಿದಂತೆ ನಾಜೂಕಾಗಿ ನುಣುಚಿಕೊಂಡೆ. ಆಕೆ ಹೇಳಿದಳು, “ನಾನು ರಾಗಿಣಿ, ಸರ್?” ಅದೇನೋ ಹೊಸದೊಂದನ್ನು ಅನ್ವೇಷಣೆ ಮಾಡಿಕೊಂಡವನಂತೆ, “ಹಾಂ ಹೌದು, ಗೊತ್ತಾಯಿತಮ್ಮ, ಕೇಶವಯ್ಯನವರ (ಹೆಸರು ಬದಲಿಸಿದೆ) ಮಗಳಲ್ಲವೇ? ಎಂದೆ. ಅವಳು ನಗುತ್ತಾ “ಹೂಂ” ಎಂದಳು. ಬಳಿ ಕುಳಿತಳು. ಮಾತುಕತೆ ನಡೆಯಿತು. ಹಳೆಯ ನೆನಪುಗಳ ಬುತ್ತಿ ಬಿಚ್ಚಿಡಲಾರಂಭಿಸಿದೆವು.
    ರಾಗಿಣಿ ಎಂಟನೇ ತರಗತಿಗೆ ಸೇರಿದಾಗಲೇ ಆಕೆ ಪ್ರತಿಭಾವಂತೆಯೆಂದು ಗುರುತಿಸಿದ್ದೆ. ಆಕೆ ಪ್ರಾಥಮಿಕ ಶಾಲೆಯಿಂದಲೇ ಕರಾಟೆ, ಸಂಗೀತ, ನಾಟಕ, ಭರತನಾಟ್ಯ ಮತ್ತು ಯಕ್ಷಗಾನಗಳ ಅಭ್ಯಾಸ ಮಾಡುತ್ತಿದ್ದು, ಪ್ರೌಢ ಶಾಲೆಯಲ್ಲಿ ರಂಗಪ್ರವೇಶವನ್ನೂ ಮಾಡಿದ ಸಕಲ ಕಲಾವಲ್ಲಭೆ. ಉತ್ತಮ ಭಾಷಣಗಾತಿ, ಬರವಣಿಗೆಯಲ್ಲೂ ಮೇಲುಗೈ ಪಡೆದವಳು. ನೀಳ ಜಿಗಿತದಲ್ಲಿ ಚಾಂಪಿಯನ್. ರಂಗೋಲಿ ರಚನೆಯಲ್ಲಿ ರಾಜ್ಯ ಮಟ್ಟದ ಪುರಸ್ಕಾರ ಸ್ವೀಕೃತೆ. ಕಲಿಕೆಯಲ್ಲಿ ಎಲ್ಲರಿಗಿಂತ ಮುಂದೆ. ಈಗ ಆಕೆಯ ಹರೆಯ ಇಪ್ಪತ್ತೈದು. ಅದೇ ಚುರುಕುತನ, ಅದೇ ವಿನಯ ಮತ್ತು ಅದೇ ಮುಗುಳು ನಗು. ಅವಳ ಕತ್ತು ಹೇಳಿತು, “ನಾನು ಮುತ್ತೈದೆ” ಎಂದು. ಮಕ್ಕಳಿದ್ದಾರಾ? ಎಂಬ ನನ್ನ ಪ್ರಶ್ನೆಗೆ ಸಂತೋಷದ ಉತ್ತರ, “ಹೌದು ಸರ್ ಹೆಣ್ಣು ಮಗು.” ಮಗಳ ಬಗ್ಗೆ ಆಕೆಗಿದ್ದ ಅಭಿಮಾನ ಮುಖ ಮತ್ತು ಮಾತಿನಲ್ಲಿ ವ್ಯಕ್ತಗೊಂಡಿತ್ತು. ಬರವಣಿಗೆ ಏನಾದರೂ ಮಾಡುತ್ತಿದ್ದಿಯಾ? ಯಕ್ಷಗಾನದ ಸಾಧನೆ ಹೇಗೆ ಮುಂದುವರಿಯುತ್ತಿದೆ ಎಂದಾಗ ಮುಖದಲ್ಲಿದ್ದ ನಗು ಮಾಸಿಹೋಯಿತು. “ಮದುವೆಯಾದ ಮೇಲೆ ಮನೆ, ಅಡುಗೆ, ಈಗ ಮಗು ಇಷ್ಟೇ,” ಎಂದಳು. ಬಾಲ್ಯದಲ್ಲಿ ಅಭ್ಯಾಸ ಮಾಡಿದ ಎಲ್ಲ ಕಲೆಗಳಿಗೂ ತಿಲಾಂಜಲಿ ನೀಡಿರುವುದು ನನಗೆ ಬೇಸರ ತಂದಿತು. ಪ್ರೌಢ ಶಾಲಾ ನಂತರ ವಿಜ್ಞಾನದಲ್ಲಿ ಸ್ನಾತಕ ಮಾಡಿ ಸಂಶೋಧನಾ ಪ್ರಬಂಧ ಬರೆಯುವ ಆಸೆಯಿತ್ತಲ್ಲಾ? ಎಲ್ಲಿತನಕ ತಲುಪಿದ್ದಿಯಾ? ಎಂಬ ಪ್ರಶ್ನೆಗೆ ಆಕೆ ನೀಡಿದ ಉತ್ತರ ನನ್ನೊಳಗೆ ಸ್ಮಶಾನ ಮೌನವನ್ನು ಸೃಜಿಸಿತು. ಮೂಕನಾದೆ.
  ದ್ವಿತೀಯ ವರ್ಷದ ಪಿ.ಯೂ ಪರೀಕ್ಷೆ ಮುಗಿದೊಡನೆಯೇ ಮದುವೆಯಾಯಿತು. ಮದುವೆಯ ನಂತರ.......? ಗಂಡ ಆಸ್ಟ್ರೇಲಿಯದಲ್ಲಿ ಉದ್ಯೋಗದಲ್ಲಿದ್ದರು. ಆಸ್ಟ್ರೇಲಿಯ ನನ್ನ ಕನಸುಗಳನ್ನು ಭಗ್ನಗೊಳಿಸಿತು. ನಮ್ಮ ಭರತನಾಟ್ಯ. ಯಕ್ಷಗಾನ, ನಾಟಕ, ಭಾಷಣ ಆ ಮಣ್ಣಿಗಾಗದಲ್ಲವೇ ಎಂಬ ನಿರಾಸೆಗೆ ನನ್ನಲ್ಲಿ ಸಮಾಧಾನದ ಮಾತು ಇರಲೇ ಇಲ್ಲ. ಮದುವೆಯೆನ್ನುವುದು ಬದುಕಿನ ಒಂದು ಹೆಜ್ಜೆ ಮಾತ್ರ. ಅದು ಸಾಧನೆಯ ಅಂತಿಮ ಹಂತವಲ್ಲ. ಸಾಧನೆಗೆ ಶೈಕ್ಷಣಿಕ ವ್ಯವಸ್ಥೆಯ ನಂತರವೇ ಹೆಚ್ಚು ಅವಕಾಶವಿರುವುದೆಂಬ ನನ್ನ ಬಲವಾದ ನಂಬಿಕೆಗೆ ವಜ್ರಾಘಾತವಾಗಿ ಬಿಟ್ಟಿತು.
    ಹೌದು. ಬಹಳಷ್ಟು ಸಾಧಕಿಯರು, ಕೆಲವು ಸಂದರ್ಭಗಳಲ್ಲಿ ಸಾಧಕರು ಕೂಡಾ, “ಮದುವೆಯಾಯಿತು” ಎಂಬ ಕಾರಣದಿಂದ ಸಾಧನೆಯಿಂದ ವಿಮುಖರಾಗುವುದು ನಮ್ಮ ವರ್ತುಲದೊಳಗೆ ಅಲ್ಲಲ್ಲಿ ಗೋಚರಿಸುತ್ತಿದೆ. ಮದುವೆಯ ನಂತರ ಸಾಧನೆ ಮುಂದುವರಿಸಲಾಗದ ಒತ್ತಡವಾದರೂ ಏನು? ಅದರಲ್ಲೂ ಹೆಚ್ಚಾಗಿ ಮಹಿಳೆಯರ ಸಾಧನಾ ಮಾರ್ಗಗಳಿಗೆ ಎತ್ತರದ ಗೋಡೆ ನಿರ್ಮಾಣವಾಗುತ್ತಿರುವುದು ವಿಸ್ಮಯಕರ. ಮದುವೆಯ ನಂತರವೂ ಹೆಣ್ಣಿರಲಿ, ಗಂಡಿರಲಿ, ಅವರ ಸಾಧನೆಗೆ ಹೆಚ್ಚು ಬಲ ಬರಬೇಕು, ಹೊಸ ಹುಮ್ಮಸ್ಸಿನ ಜೋಡಣೆಯಾಗಬೇಕು. ಸಮಾಜದಲ್ಲಿ ಅಂತಹ ಹೂಮನಸ್ಸುಗಳ ಹೊಮ್ಮನಸ್ಸುಗಳ ಸಂಖ್ಯೆ ಬಾಹುಳ್ಯ ಪಡೆಯಬೇಕು.
      ನಮ್ಮ ಸಾಧಕರ ಪಟ್ಟಿ ಮಾಡಿದರೆ ಅವರಲ್ಲೆ ಶೇಕಡಾ ತೊಂಭತ್ತೈದು ಮಂದಿ ವಿವಾಹೋತ್ತರ ಸಾಧಕರು. ಸಾಧನೆಗೆ ನಮ್ಮ ಸಾವು ಮಾತ್ರ ಅಂತಿಮ ಕ್ಷಣವೇ ಹೊರತು ವಿವಾಹವಲ್ಲ. ಸುಧಾ ಮೂರ್ತಿಯವರು ಇಂದು ರಾಜ್ಯ ಸಭೆಗೆ ರಾಷ್ಟಪತಿಗಳಿಂದ ನಾಮನಿರ್ದೇಶನ ಪಡೆದಿದ್ದಾರೆ. ಮೊಮ್ಮಕ್ಕಳನ್ನು ಪಡೆದನಂತರವೂ ಅವರು ಸಾಧನೆಯ ಶಿಖರವನ್ನೇರುತ್ತಿದ್ದಾರೆ. ಮದುವೆ ನಂತರ....... ಅದ್ಭುತ ಸಾಧನೆಯನ್ನು ಚಿವುಟುವ ಕೆಲಸ ಯಾರಿಂದಲೂ ಆಗದಿರಲಿ. ನಮಸ್ಕಾರ
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 




Ads on article

Advertise in articles 1

advertising articles 2

Advertise under the article