ಜೀವನ ಸಂಭ್ರಮ : ಸಂಚಿಕೆ - 128
Sunday, March 10, 2024
Edit
ಜೀವನ ಸಂಭ್ರಮ : ಸಂಚಿಕೆ - 128
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ ಡಾಂಭಿಕ ಅಂದರೆ ವೈಭವ. ಡಾಂಭಿಕ ಜೀವನ ಎಂದರೆ ವೈಭವದ ಜೀವನ ಎಂದರ್ಥ ಮಾಡಿಕೊಳ್ಳಬಹುದು.. ಈ ಡಾಂಬಿಕ ಜೀವನದೊಳಗೆ ಪ್ರೇಮ, ಭಕ್ತಿ ಇರುವುದಿಲ್ಲ.
ಇಲ್ಲೊಂದು ಕಥೆ ಇದೆ... ಇದು ಮನುಷ್ಯರ ಕಥೆಯಲ್ಲ. ಪಕ್ಷಿಗಳ ಕಥೆ. ಯಾವ ಪಕ್ಷಿಯು ನನ್ನ ಬಗ್ಗೆ ಏಕೆ ಬರೆದಿದ್ದೀಯಾ ಎಂದು ದೂರುವುದಿಲ್ಲ.
ಒಂದು ಊರಿನ ಸಮೀಪ ಒಂದು ದೊಡ್ಡ ಮರ ಇತ್ತು. ಅದರಲ್ಲಿ ಬಗೆ ಬಗೆಯ ಪಕ್ಷಿಗಳು ಗೂಡು ಕಟ್ಟಿಕೊಂಡು ವಾಸವಾಗಿದ್ದವು. ಅವುಗಳಲ್ಲಿ ಒಂದು ಮಹತ್ವದ ಪಕ್ಷಿ ಅಂದರೆ ಕಾಗೆ. ಆ ಮರದಲ್ಲಿ ಕಾಗೆಯ ಬಳಗವಿತ್ತು. ಅದರಲ್ಲಿ ಒಂದು ಕಾಗೆ ಬಹಳ ಜಾಣ. ಅದು ಹಾರುವ ಅನೇಕ ಗತಿಗಳನ್ನು ಕಲಿತಿತ್ತು. ಒಮ್ಮೆಲೇ ಮೇಲೆ ಏರುತ್ತಿತ್ತು. ಒಮ್ಮೆಲೇ ಕೆಳಗೆ ಇಳಿಯುತ್ತಿತ್ತು. ಲಾಗ ಹಾಕುತ್ತಿತ್ತು. ಅದು ಉಳಿದ ಪಕ್ಷಿಗಳಿಗೆ ಬರುತ್ತಿರಲಿಲ್ಲ. ಹಾಗಾಗಿ ಈ ಕಾಗೆಯನ್ನು ಕೊಂಡಾಡುತ್ತಿದ್ದವು. "ಏನು ಕಲಾ, ನಿನ್ನ ಹಾಗೆ ಯಾರು ಹಾರುವವರಿಲ್ಲ. ಎಷ್ಟು ಭಂಗಿಗಳು. ಎಷ್ಟು ಗತಿಗಳು". ಅದಕ್ಕೆ ಎಲ್ಲಾ ಸೇರಿ ಹೆಸರು ಕೊಟ್ಟಿದ್ದವು ಅದು "ಅನಂತಗತಿಯ ಕಾಗೆ" ಎಂದು ಪದವಿ ನೀಡಿದ್ದವು. ಈಗ ನಾವೆಲ್ಲಾ ಪಡಿತೀವಲ್ಲ ಜ್ಞಾನಪೀಠ, ಪದ್ಮಭೂಷಣ, ಕರ್ನಾಟಕ ರತ್ನ ಹೀಗೆ.... ಅಲ್ಲಿಗೆ ಒಮ್ಮೆ ಹಂಸಗಳು ಬಂದವು. ಅವು ಬಹಳ ದೂರದಿಂದ ಹಾರಿಕೊಂಡು ಬಂದಿದ್ದವು. ಆ ಪಕ್ಷಿಗಳಿದ್ದ ಊರಿನಲ್ಲಿ ಇಳಿದವು. ಅವು ಬಿಳಿ ಬಣ್ಣ. ಹಾರೋದು ಒಂದೇ ತರ. ಅದಕ್ಕೆ ಈ ಕಾಗೆ ಹಾಗೆ ಗತಿ ಗೊತ್ತಿರಲಿಲ್ಲ. ಆಗ ಪಕ್ಷಿಗಳ ನಡುವೆ ಚರ್ಚೆ ನಡೆಯಿತು. ಹಂಸಗಳು ಸುಮ್ಮನೆ ಪಾಪ ಕುಳಿತುಕೊಂಡಿದ್ದವು. ಆಗ ಎಲ್ಲಾ ಪಕ್ಷಿಗಳು ಹೇಳಿದವು. ನಮ್ಮಲ್ಲಿ ಒಬ್ಬ ಕಾಗೆ ಇದ್ದಾನೆ. ಏನು ಹಾರುತ್ತಾನೆ....? ಅವನ ಗತಿಗಳು ಒಂದೇ ನೂರಾರು ಗತಿಗಳು. ಹಾಗೆಯೇ ಈ ಜಗತ್ತಿನಲ್ಲಿ ಯಾರು ಇಲ್ಲ. ನೀವು ಅಷ್ಟು ದೂರದ ಹಿಮಾಲಯದ ಬೆಟ್ಟದಿಂದ ಬಂದಿದ್ದೀರಲ್ಲ. ನಮ್ಮ ಕಾಗೆ ಜೊತೆ ಸ್ಪರ್ಧೆ ಆಗಿಯೇ ಹೋಗಲಿ ಎಂದವು. ಪಾಪ ಹಂಸಗಳಿಗೆ ಸ್ಪರ್ಧೆ ಗೊತ್ತಿರಲಿಲ್ಲ. ಸ್ಪರ್ಧೆ ಅಂದ್ರೆ ಏನು ಅಂತ ಕೇಳಿದವು. ಆಗ ಎಲ್ಲಾ ಪಕ್ಷಿಗಳು ಹೇಳಿದವು. ಯಾರು ಈ ಜಗತ್ತಿನಲ್ಲಿ ಹಾರುವಿಕೆಯಲ್ಲಿ, ಗತಿಯಲ್ಲಿ ಶ್ರೇಷ್ಠ ಇದ್ದಾರೆ ಅದನ್ನು ನಿರ್ಣಯಿಸಬೇಕು ಎಂದವು. ಅವಾಗ ಹಂಸಗಳು ಹೇಳಿದವು. ನಮಗೆ ಹಾರೋದಕ್ಕೆ ಬರುತ್ತದೆ. ಈ ಗತಿ ಗೊತ್ತಿಲ್ಲವಲ್ಲ ಎಂದು. ಆಗ ಪಕ್ಷಿಗಳು ಹೇಳಿದವು. ಈ ಜಗತ್ತು ನಿಮಗೆ ಮಹತ್ವ ಕೊಡುತ್ತದೆ. ನಮ್ಮ ಕಾಗೆ ಹೇಗೆ ಅಂತ ಜಗತ್ತಿಗೆ ತೋರಿಸಿ ನಿಮ್ಮ ಕಿಮ್ಮತ್ತು ಕಡಿಮೆ ಮಾಡುತ್ತೀವಿ ಎಂದವು. ಆಗ ಹಂಸಗಳು ಹೇಳಿದವು. ಆಯ್ತು ನಾಳೆ ನಾವು ಹೋಗ್ತಾ ಇದ್ದೀವಿ. ನೀವು ಬರಬಹುದು ಎಂದವು. ಮರುದಿನ ಮುಂಜಾನೆ ಎಲ್ಲ ಪಕ್ಷಿಗಳು ಸೇರಿದವು. ಹಂಸಗಳು ಹಾರುವುದಕ್ಕೆ ಶುರು ಮಾಡಿದವು. ಅವುಗಳದು ಒಂದೇ ಗತಿ. ಅದೇನೆಂದರೆ ಶಾಂತವಾಗಿ, ಗದ್ದಲ ಮಾಡದೆ, ನಿಧಾನವಾಗಿ ಹಾರುತ್ತ ಹೋಗುವುದು. ಅವು ಹಾಗೆ ಹಾರುತ್ತ ಹಾರುತ್ತಾ ಸಾವಿರಾರು ಕಿಲೋಮೀಟರ್ ಹೋಗುತ್ತವೆ. ಇದೇನು ಕಾಗೆ ಇತ್ತಲ್ಲ ಅಲ್ಲಿದ್ದವರೆಲ್ಲ ಹುರುಪು ತುಂಬಿ ಹಾರಿಸಿದವು. ಎಲ್ಲಾ ಹಂಸ ಪಕ್ಷಗಳು ಸಾವಕಾಶವಾಗಿ ಹಾರುತಿದ್ದವು. ಇದು ಮೇಲೆ ಹೋಗುವುದು. ಕೆಳಗೆ ಬರೋದು. ಮುಂದೆ ಹೋಗೋದು. ಹಿಂದೆ ಬರೋದು. ಬಲಕ್ಕೆ ಹೊರಳುವುದು. ಎಡಕ್ಕೆ ಹೊರಳುವುದು. ಇದನ್ನೆಲ್ಲ ನೋಡಿ ಹಂಸ ಪಕ್ಷಿಗಳಿಗೆ ಆಶ್ಚರ್ಯವಾಯಿತು. ಇದು ಯಾಕೆ ಹೀಗೆ ಮಾಡುತ್ತಿದೆ...? ಉಳಿದ ಪಕ್ಷಿಗಳು ಚಪ್ಪಾಳೆ ಹಾಕುತಿದ್ದವು. ಹೀಗೆ ಮಾಡಿ ತೋರಿಸಿ ಎನ್ನುತ್ತಿದ್ದವು. ಆಗ ಹಂಸ ಹೇಳಿದವು, ಅದು ನನಗೆ ಬರೋದಿಲ್ಲ. ಹಾಗಾದರೆ ಜಯ ಪತ್ರ ಕೊಡಿ ಎಂದವು. ಆಗ ಹಂಸ ಹೇಳಿದವು, ನಾವು ಹಾರ್ಕೊತಾ ಹೋಗ್ತಿವಿ, ಆತ ಏನೇನು ಚಮತ್ಕಾರ ತೋರಿಸ್ತಾನೆ ತೋರಿಸಲಿ ಎಂದವು. ಅದಕ್ಕೆ ಕಾಗೆ ಇತಿಮಿತಿ ಗೊತ್ತಾಗಿತ್ತು. ಅಷ್ಟು ಹೊತ್ತಿಗೆ ಕಾಗೆ ಎಲ್ಲ ಗತಿ ಮುಗಿದಿತ್ತು. ಎಷ್ಟಿರುತ್ತದೆ ಗತಿಗಳು?. ಮೇಲೆ, ಕೆಳಗೆ, ಬಲಕ್ಕೆ, ಎಡಕ್ಕೆ , ಮುಂದಕ್ಕೆ, ಹಿಂದಕ್ಕೆ ಬೀಳೋದು, ಹೇಳೋದು, ಇಷ್ಟೆಲ್ಲಾ ಮಾಡಿತ್ತು. ಇದನ್ನೆಲ್ಲಾ ಮಾಡುವ ಹೊತ್ತಿಗೆ ಹಂಸಗಳು ಸಾಗರದ ಮೇಲೆ ಬಂದವು. ಈ ಕಾಗೆಗೆ ಸಾಗರದ ಮೇಲೆ ಹಾರಿ ಗೊತ್ತಿರಲಿಲ್ಲ. ಇದರ ತಾಕತ್ತು ಗತಿಗಳನ್ನು ತೋರಿಸುವುದರಲ್ಲಿ ಮುಗಿದಿತ್ತು. ಅಷ್ಟರಲ್ಲಿ ಎಲ್ಲಾ ಗತಿ ಮುಗಿದು ಒಂದೇ ಗತಿ ಇತ್ತು. ಅದು ಹಾರುವುದು. ಮುಂದೆ ಆ ಹಾರುವ ಗತಿಯು ಮುಗಿಯುವ ಹಂತ ಬಂತು. ಅಲ್ಲಿಂದ ಸಮುದ್ರ ದ ಮೇಲಿಂದ ಬೀಳುವ ಗತಿ ಶುರುವಾಯಿತು, ಶಕ್ತಿ ಇರಲಿಲ್ಲ. ಹಂಸಗಳು ಸಾವಕಾಶವಾಗಿ ಹಾರಾಡುತ್ತಿದ್ದವು. ಅವು ಕೇಳಿದವು ಇದ್ಯಾವ ಗತಿ ಎಂದು. ಆಗ ಕಾಗೆ ಹೇಳಿತು, ಕ್ಷಮಿಸಿ ನನ್ನನ್ನು, ಬದುಕಿಸಿ, ನನ್ನನ್ನು ಉಳಿಸಿ ಅಂತ ಕೇಳಿತು. ಆಗ ಹಂಸ ಹೇಳಿದ್ದು "ಒಂದು ಗತಿ ಉಳಿಯುತ್ತದೆ, ನೂರು ಗತಿ ಅಳಿಸುತ್ತದೆ". ತೋರಿಸುವುದಕ್ಕಲ್ಲ ಹಾರೋದು, ಬದುಕಲು ಹಾರಬೇಕು. ಆಗ ಹಂಸ ಪಕ್ಷಿಗಳು ಅದನ್ನು ಹಿಡಿದುಕೊಂಡು ಬಂದು ಪಕ್ಷಿಗಳ ಹತ್ತಿರ ಬಿಟ್ಟುವು. ಅದನ್ನು ಹಿಡಿದು ತರುವಾಗ ಉಳಿದ ಪಕ್ಷಿಗಳಿಗೆ ಏನನಿಸಿತು ಅಂದ್ರೆ, ಸೋತಿದ್ದಾರೆ ಅದಕ್ಕೆ ಹೊತ್ತುಕೊಂಡು ಬಂದಿದ್ದಾವೆ ಎಂದು. ಕಾಗೆ ಬಂದು ಕಣ್ಣು ಮುಚ್ಚಿಕೊಂಡು ಕುಳಿತುಕೊಂಡಿತು. ಉಳಿದ ಪಕ್ಷಿಗಳು ಜೈಕಾರ ಹಾಕಲು ಶುರು ಮಾಡಿದವು. ಆಗ ಕಾಗೆ ಹೇಳಿತು, ಜೈಕಾರ ಹಾಕಬೇಡಿ, ಅವರೇ ನನ್ನನ್ನು ಕಾಪಾಡಿದ್ದು. ನಮ್ಮ ನೂರು ತರದ ಜಾಣತನ ನಡೆಯೋದಿಲ್ಲ, ಈ ಜಗತ್ತಿನಲ್ಲಿ. ಬದುಕುವ ಜಾಣತನ ನಮಗಿಲ್ಲ. ಅದು ಹಂಸಕ್ಕಿದೆ. ಬದುಕುವ ಜಾಣತನ ಅಂದ್ರೆ ಶಾಂತತನ. ಅವು ಯಾವುದರ ಜೊತೆ ಪೈಪೋಟಿ ಇಲ್ಲ. ಆದರೆ ಅದರಂಗೆ ಹಾರೋದಕ್ಕೆ ಬೇರೆಯವರಿಗೆ ಬರೋದಿಲ್ಲ. ಯಾಕೆಂದರೆ ಅವು ನಿಧಾನವಾಗಿ ಹಾರುತ್ತವೆ. ತೋರಿಸುವುದಕ್ಕೆ ಹಾರುವುದಿಲ್ಲ. ನೈಜ ಹಾರಾಟ ಮಾಡುತ್ತವೆ. ನಾವು ತೋರಿಸೋದಕ್ಕೆ ಬದುಕಬಾರದು. ನಾವು ಹಾರೋದಕ್ಕೆ ಬದುಕಬೇಕು. ಅಭಿಮಾನವನ್ನು, ಡಂಭಾಚಾರವನ್ನು ಮತ್ತು ಇಂಥ ಅವಗುಣಗಳನ್ನು ತ್ಯಜಿಸಬೇಕು. ಅಂದರೆ ಜೀವನವನ್ನು ಬರಡು ಮಾಡುವ, ರಸಹೀನಗೊಳಿಸುವ, ದುಃಖ ತುಂಬುವ, ಇಂತಹ ಅನೇಕ ಅವಗುಣಗಳನ್ನು ತ್ಯಜಿಸಬೇಕು. ಇವುಗಳ ವಿಷಯದಲ್ಲಿ ಸಾವಧಾನವಾಗಿರಬೇಕು. ಜಾಣನಾಗಿರಬೇಕು. ನಮ್ಮಷ್ಟಕ್ಕೆ ನಾವು ಕೆಲಸ ಮಾಡುವುದು, ಬದುಕುವುದು ಬಹಳ ಮಹತ್ವ. ತೋರಿಸುವುದರಿಂದ ಏನಾಗುತ್ತದೆ...? ಜೀವನ ನೈಜ, ಸಹಜ, ಸುಂದರವಾಗಿ ಇರಬೇಕು. ಯಾರಾದರೂ ಜಗಳಕ್ಕೆ ಬಂದರೆ, ಸ್ಪರ್ಧೆಗೆ ಬಂದರೆ, ಭಾವಿಸಬೇಕು. ಕಾಗೆ ಹಾರೋದಕ್ಕೆ, ಭಂಗಿ ತೋರಿಸುವುದಕ್ಕೆ ಬಂದಿದೆ ಎಂದು ಮತ್ತು ಸುಮ್ಮನೆ ಇರುವುದು. ಅವರು ಎಷ್ಟು ಹೊತ್ತು ಹಾರುತ್ತಾರೆ...? ಉತ್ತರ ಕೊಡುವ ಪ್ರಶ್ನೆಯೇ ಇಲ್ಲ. ಅಷ್ಟೆಲ್ಲಾ ಹಾರಾಟ ಮಾಡಿದವರು ಎಷ್ಟು ಹೊತ್ತು ಮಾಡ್ತಾರೆ. ಪ್ರತಿಕ್ರಿಯೆ ಇಲ್ಲ ಅಂದ ಮೇಲೆ ತೆಪ್ಪಗೆ ಆಗುತ್ತಾರೆ ಅಂತ ಭಾವಿಸಿ ನಮ್ಮ ಕೆಲಸ ನಾವು ಮಾಡೋದು. ತಪ್ಪೆಗೆ ಆದ ಅಂದ್ರೆ ಸೋತ ಅಂತ ತಿಳಿದುಕೊಳ್ಳಬೇಕು. ನಾವು ಪ್ರತಿಕ್ರಿಯೆ ನೀಡಿದರೆ ಬೆಳೆಯುತ್ತ ಹೋಗುತ್ತದೆ. ಸುಮ್ಮನೆ ಇದ್ದರೆ ಅವರೇ ಸೋತು ತಣ್ಣಗಾಗುತ್ತಾರೆ. ನಮ್ಮ ಜೀವನ ಶಾಂತವಾಗಿ ಸೌಮ್ಯವಾಗಿ ಹರಿಯುತ್ತಿರಬೇಕು. ಆಗ ಜೀವನದಲ್ಲಿ ಸೌಂದರ್ಯದ ರಸ ತುಂಬುತ್ತದೆ. ಭಕ್ತಿ ಎಂದರೆ ಶಾಂತಿ ಸಮಾಧಾನ ಸಂತೋಷ. ಅಂತಹ ಭಕ್ತಿಯರಸ ತುಂಬುತ್ತದೆ. ಅದಕ್ಕಾಗಿ ಎಷ್ಟೋ ಅಷ್ಟೇ. ಅಂಗಡಿಗೆ ಹೋದಾಗ ಏನು ತರಬೇಕು ಅದನ್ನೇ ತರಬೇಕು. ಅಂಗಡಿಯವನು ತೆಗೆದುಕೊಳ್ಳಲಿ ಎಂದು ಕೃತಕ ಬೆಳಕಿನಲ್ಲಿ ವೈವಿಧ್ಯಮಯವಾಗಿ ಹೊಳೆಯುವಂತೆ ಬೇಡದ ವಸ್ತುಗಳು ನಮ್ಮ ಅಗತ್ಯ ಸಾಮಾನಿಗೆ ಮೊದಲೇ ಜೋಡಿಸಿರುತ್ತಾರೆ. ಅದಕ್ಕೆ ಮೈಮರೆತರೆ ಜೋಬು ಖಾಲಿಯಾಗುತ್ತದೆ. ಕಂಡ ಕಂಡದ್ದನ್ನು ತರಬಾರದು. ನಮಗೆ ಎಷ್ಟು ಬೇಕೋ ಅಷ್ಟೇ ತರುವುದು. ಕಂಡದ್ದೆಲ್ಲ ತರಲು ಶುರು ಮಾಡಿದರೆ ಮನಸ್ಸಿನಲ್ಲಿ ಸಾಮಾನು ತುಂಬುತ್ತದೆ ವಿನಹ ಸಂತೋಷ ತುಂಬುವುದಿಲ್ಲ. ಮನೆ ಕಟ್ಟುವುದೇ ಆಗಲಿ ವಾಹನ ಖರೀದಿಸುವದೇ ಆಗಲಿ ವಸ್ತು ತರುವುದೇ ಆಗಲಿ ಬದುಕಿಗಾಗಿ... ತೋರಿಕೆಗಾಗಿ ಅಲ್ಲ. ಆದರೆ ನಾವು ಬದುಕಿಗಾಗಿ ಮಾಡುತ್ತಿಲ್ಲ. ತೋರಿಕೆಗಾಗಿ ಮಾಡುತ್ತಿದ್ದೇವೆ. ಇದರಿಂದ ಇನ್ನೊಬ್ಬರೊಂದಿಗೆ ಹೋಲಿಸಿಕೊಂಡು ಸಂತೋಷ ಕಳೆದುಕೊಂಡಿದ್ದೇವೆ. ಅಲ್ಲವೇ ಮಕ್ಕಳೆ.
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*******************************************