-->
ಜಗಲಿ ಕಟ್ಟೆ : ಸಂಚಿಕೆ - 41

ಜಗಲಿ ಕಟ್ಟೆ : ಸಂಚಿಕೆ - 41

ಜಗಲಿ ಕಟ್ಟೆ : ಸಂಚಿಕೆ - 41
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


     'ಜೀವನ ಸಂಭ್ರಮ' ಸಂಚಿಕೆಯಿಂದ ಆರಂಭವಾಗುವ ಮಕ್ಕಳ ಜಗಲಿಯ ಪ್ರತಿವಾರವೂ ಕೂಡಾ ಓದುಗರಲ್ಲಿ ಜೀವನೋತ್ಸಾಹವನ್ನು ತುಂಬುತ್ತದೆ. ನನ್ನ ಆತ್ಮೀಯರೊಬ್ಬರು ಫೋನ್ ಮಾಡಿ "ಎಂ.ಪಿ ಜ್ಞಾನೇಶ್ ಅವರ ಲೇಖನವನ್ನು ಪ್ರತಿಬಾರಿ ಓದುತ್ತೇನೆ" ಎನ್ನುವ ಮಾತು ಖುಷಿ ಎನಿಸುತ್ತದೆ. ಓರ್ವ ಶಿಕ್ಷಣಾಧಿಕಾರಿಯಾಗಿ ಒತ್ತಡದಲ್ಲಿ ಕೂಡಾ ಬರೆಯುವ ಸಾಮರ್ಥ್ಯವಳ್ಳ ಅಸಾಮಾನ್ಯ ವ್ಯಕ್ತಿ ಎಂದರೆ ತಪ್ಪಾಗಲಾರದು. ಈಗಾಗಲೇ 125 ಸಂಚಿಕೆಗಳನ್ನು ದಾಟಿ ಸಾಗುತ್ತಿರುವ ಲೇಖನ ಸರಣಿ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಅಚ್ಚೊತ್ತಿದೆ.
      ಅನುಭವಿ ಬರಹಗಾರರು ರಮೇಶ್ ಬಾಯಾರ್ ಅವರ ಲೇಖನದ ಸೊಗಸು ಅದ್ಭುತ. ಸ್ಫೂರ್ತಿಯ ಮಾತುಗಳ ಮೂಲಕ ತಮ್ಮ ಅಗಾಧ ಜ್ಞಾನವನ್ನು ಧಾರೆಯೆರೆಯುತ್ತಿರುವುದು ಬಹಳ ಸಂತೋಷ. ಪ್ರತಿಬಾರಿ ಸರಳ ವಿಷಯವನ್ನೆತ್ತಿಕೊಂಡು ವಿಮರ್ಶಿಸಿ ತಿಳಿಸಿಕೊಡುವ ಪ್ರಯತ್ನ ಅಭಿನಂದನೀಯ. ನೂರರ ಗಡಿಯನ್ನು ಮೀರಿ ಬೆಳೆಯುತ್ತಿರುವ ಇವರ ಲೇಖನಗಳ ಗುಚ್ಛವು ಮುಂದೊಂದು ದಿನ ಪುಸ್ತಕ ರೂಪದಲ್ಲಿ ಪ್ರಕಟವಾಗಿ ಬರಲಿ ಎನ್ನುವ ಆಶಯ ನಮ್ಮದು.
      ಬುಧವಾರ ಎಂದ ಮೇಲೆ ಅದು 'ಹಕ್ಕಿ ಕಥೆ' ಗಾಗಿ ಕಾಯುವ ಜಗಲಿಯ ಮನಸ್ಸುಗಳನ್ನು ಕಂಡು ಖುಷಿಯಾಗುತ್ತದೆ.. ಆತ್ಮೀಯ ಮಿತ್ರ ಅರವಿಂದ ಕುಡ್ಲರ ವರ ಪ್ರತಿಬಾರಿಯ ಹೊಸ ಹಕ್ಕಿಗಳು ಬಹಳ ಕುತೂಹಲ ಮೂಡಿಸುತ್ತದೆ. ಬೇರೆ ಬೇರೆ ತರಹದ ಹಕ್ಕಿಗಳು ಅವುಗಳ ಜೀವನ ಪದ್ಧತಿ, ಓದಿದಾಗ ಪಕ್ಷಿ ಪ್ರಪಂಚದ ಕೌತುಕಗಳು ಗೋಚರಿಸುತ್ತದೆ. ಓದುವ ಮನಸ್ಸನ್ನು ಇನ್ನಷ್ಟು ಖುಷಿಗೊಳಿಸುವ ಒಗಟು ಕೂಡ ಸುಂದರವಾಗಿ ಮೂಡಿ ಬರುತ್ತಿದೆ. ಪಕ್ಷಿಯ ಛಾಯಾಚಿತ್ರಗಳಂತು ಸಂಗ್ರಹ ಯೋಗ್ಯವಾಗಿದೆ. ಇದರ ಸಂಚಿಕೆಗಳು ಈಗಾಗಲೇ ನೂರರ ಗಡಿ ದಾಟಿ 150 ಸಂಖ್ಯೆಯನ್ನು ಸಮೀಪಿಸುತ್ತಿದೆ.
       ಮಕ್ಕಳ ಜಗಲಿ ಆರಂಭವಾದಾಗಿನಿಂದ ವಿಜ್ಞಾನಕ್ಕೆ ಸಂಬಂಧಿಸಿದ ಲೇಖನಗಳು ಅಗತ್ಯವಾಗಿ ಬೇಕಿತ್ತೆನ್ನುವುದಾಗಿತ್ತು. ಒಮ್ಮೆ ಮಂಗಳೂರು ಬಿ ಎಡ್ ಕಾಲೇಜ್ ಪ್ರಶಿಕ್ಷಣಾರ್ಥಿಗಳ ಶಿಬಿರದಲ್ಲಿ ವರ್ಲಿ ಕಲೆಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದಾಗ ಪ್ರವಾಚಕರಾದ ದಿವಾಕರ್ ಶೆಟ್ಟಿ ಯವರು ತುಂಬಾನೇ ಪರಿಚಿತರಾದರು. ವಿಜ್ಞಾನದ ಬಗ್ಗೆ ಬಹಳಷ್ಟು ಸರಳವಾಗಿ ಬರೆಯುತ್ತಾರೆ ಅನ್ನೋದು ಮೊದಲೇ ತಿಳ್ಕೊಂಡಿದ್ದೆ. ಹೀಗೆ ಅವರಲ್ಲಿ ಪ್ರಸ್ತಾಪವಿತ್ತಾಗ ಬಹಳ ಪ್ರೀತಿಯಿಂದಲೇ ಒಪ್ಪಿಕೊಂಡರು. ಬಹಳ ಕುತೂಹಲ ಮೂಡಿಸುವ ಇವರ ಲೇಖನಗಳು ವಿಜ್ಞಾನದ ಬಗ್ಗೆ ಬಹು ಅಮೂಲ್ಯ ಸಂಚಿಕೆ ಎಂದರೆ ತಪ್ಪಾಗಲಾರದು. ಮೊನ್ನೆ ಮೊನ್ನೆ ಮಕ್ಕಳ ಜಗಲಿಯ ಆತ್ಮೀಯರೊಬ್ಬರು ಕರೆ ಮಾಡಿ 'ಮಕ್ಕಳಿಗಾಗಿ ವಿಜ್ಞಾನ' ದ ಎಲ್ಲಾ ಸಂಚಿಕೆಗಳನ್ನು ಕಳುಹಿಸಿಕೊಡುವಂತೆ ವಿನಂತಿಸಿದ್ದರು. ವಿಜ್ಞಾನ ಶಿಕ್ಷಕರು ಇದರ ಲಾಭವನ್ನು ಪಡೆದು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಪ್ರಯತ್ನ ಮಾಡಿದರೆ ಸಾರ್ಥಕವಾದೀತು. ವಿಜ್ಞಾನದ ಬಗೆಗಿನ ಆಸಕ್ತಿ ಇಮ್ಮಡಿಯಾದೀತು...!!
     'ನಿಷ್ಪಾಪಿ ಸಸ್ಯಗಳು' ಶಿಕ್ಷಕಿ ಹಾಗೂ ಮಹಿಳಾ ಸಂವೇದನಾ ಬರಹಗಾರ್ತಿವಿಜಯಾ ಶೆಟ್ಟಿ ಅವರ ವಿಶೇಷ ಸಂಚಿಕೆ. ಬಹಳಷ್ಟು ಮಂದಿ ಇವರು "ಸಸ್ಯಶಾಸ್ತ್ರ ವಿಭಾಗದವರಾ...?" ಎನಿಸುವಷ್ಟು ಮಟ್ಟಿಗೆ ಅಧ್ಯಯನ ಮಾಡಿ ಬರೆಯುವ ಕೌಶಲ್ಯ ಹೊಂದಿದ್ದಾರೆ. ತುಂಬಾ ಜನ ಇಷ್ಟ ಪಡುವ ಸಂಚಿಕೆ ಎಂದೆನಿಸಿಕೊಳ್ಳಲು ಬೆಳಿಗ್ಗೆ ಬೆಳಿಗ್ಗೆ ಕಾಯುವ ಅದೆಷ್ಟೋ ಓದುಗರೇ ಸಾಕ್ಷಿಯಾಗಿದ್ದಾರೆ... ಪ್ರತಿ ಬಾರಿ ಹೊಸ ಹೊಸ ಸಸ್ಯಗಳ ಪರಿಚಯ ಅವುಗಳ ಉಪಯೋಗಗಳ ಕುರಿತು ತುಂಬಾ ಸೊಗಸಾಗಿ ತಿಳಿಸಿಕೊಡುತ್ತಾರೆ.
       'ಹೃದಯದ ಮಾತು' ರಾಷ್ಟ್ರಪ್ರಶಸ್ತಿ ಪುರಸ್ಕೃತ ಯಾಕೂಬ್ ಸರ್ ಅವರ ಹೃದಯ ತಾಕುವ ಬರಹದ ಸಂಚಿಕೆಗಳು. ಪ್ರತಿ ಬರಹಗಳು ಕೂಡ ಹೃದಯಕ್ಕೆ ಹತ್ತಿರವಾಗಿ ಓದುಗರನ್ನು ಚಿಂತನೆಗೆ ಹಚ್ಚುತ್ತದೆ. ಹೃದಯ ಮಿಡಿಯುವ ಅನೇಕ ಬರಹಗಳು, ಬರಹದ ಶೈಲಿ ಹಾಗೂ ಒಂದಕ್ಕೊಂದು ಸೇರಿ ಹೋಗುವ ಪದಗಳು, ಕಥೆಯ ತಿರುವುಗಳು ಅದ್ಭುತವಾಗಿದೆ. ಮುಖ್ಯ ಶಿಕ್ಷಕರಾಗಿದ್ದುಕೊಂಡು ಒತ್ತಡವನ್ನು ನಿವಾರಿಸಿ ನಿರಂತರವಾಗಿ ಬರೆಯುವ ಇವರ ತಾಳ್ಮೆಗೆಂದು ದೊಡ್ಡ ಸಲಾಂ....!
       ಪುಸ್ತಕದ ಪರಿಚಯ "ಪ್ರೀತಿಯ ಪುಸ್ತಕ" ಸಂಚಿಕೆಯ ಮೂಲಕ ಮಕ್ಕಳಿಗಾಗಿ 100 ನೇ ಪುಸ್ತಕದ ಪರಿಚಯ ಮಾಡಿರುವ ವಾಣಿ ಅಕ್ಕನವರಿಗೆ ಮಕ್ಕಳ ಜಗಲಿಯ ಪರವಾಗಿ ವಿಶೇಷವಾಗಿ ಅಭಿನಂದನೆಗಳು.... ಮಕ್ಕಳ ಜಗಲಿ ಆರಂಭವಾದಾಗ ಮಕ್ಕಳಿಗಾಗಿ ಬರೆದಿರುವ ಸಾಹಿತ್ಯಿಕ ಪುಸ್ತಕಗಳ ಪರಿಚಯ ವಾಗಬೇಕೆನ್ನುವುದು ಕನಸಾಗಿತ್ತು. ಅಕ್ಷರಶಹ ಈ ಒಂದು ಸಂಚಿಕೆಗೆ ಮೊದಲ ಆಯ್ಕೆ ಹಾಗೂ ಅಂತಿಮವಾದದ್ದು ವಾಣಿ ಅಕ್ಕನವರೇ.. ಬಹಳಷ್ಟು ವರ್ಷಗಳಿಂದ ಪರಿಚಿತವಾಗಿರುವ ಇವರು ನಡೆಸುತ್ತಿದ್ದ ಸಿಂಪನಿ ಮಕ್ಕಳ ಪುಸ್ತಕದಲ್ಲಿಯೂ ಕೂಡ ಚಿತ್ರ ಮಾಡುವ ಅವಕಾಶವನ್ನು ಒದಗಿಸಿದ್ದರು.... ಇವರ ಮನೆಗಳಲ್ಲಿ ರಾಶಿ ರಾಶಿ ಮಕ್ಕಳ ಪುಸ್ತಕಗಳನ್ನು ಕಂಡು ಕುತೂಹಲಗೊಂಡಿದ್ದೆ. "ಮಕ್ಕಳಿಗಾಗಿ ಪುಸ್ತಕ ಓದು" , ಮಕ್ಕಳಿಗಾಗಿ ಬೇಸಿಗೆ ಶಿಬಿರ, ಪುಟಾಣಿ ಮುದ್ದು ಕಂದ, ಈ ತರಹದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದ್ದ ಇವರ ಕಾರ್ಯ ಚಟುವಟಿಕೆಗಳು ಎಲ್ಲರಿಗೂ ಮಾದರಿ. ಒಂದು ಬಾರಿ 100ನೇ ಸಂಚಿಕೆಗೆ ನಿಲ್ಲಿಸೋಣ ಎಂದಾಗ ನಾನೇ ಬೇಡ ಅಂದಿದ್ದೆ.. ಮಕ್ಕಳ ಪುಸ್ತಕಗಳು ಎಷ್ಟು ಇವೆಯೋ ಅಷ್ಟು ಕೂಡ ಪರಿಚಯವಾಗಬೇಕೆನ್ನುವುದು ನಮ್ಮೆಲ್ಲರ ಆಶಯ... ಪ್ರೀತಿಯಿಂದ ಒಪ್ಪಿರುವ ವಾಣಿ ಮೇಡಮ್ ಸಂಚಿಕೆಯನ್ನು ಮುಂದುವರಿಸುತ್ತಾರೆ..
     "ಪದದಂಗಳ" ನೂರರ ಗಡಿ ದಾಟಿ ಸಂಚಿಕೆ ಮುಂದುವರಿಯುತ್ತಿದೆ. ನನ್ನ ಆತ್ಮೀಯ ಮಿತ್ರ ರಮೇಶ್ ನಾಯ್ಕ ಉಪ್ಪುಂದರವರು ನಿರಂತರವಾಗಿ ಈ ಸಂಚಿಕೆಯನ್ನು ನೀಡುತ್ತಿದ್ದಾರೆ. ಬಿಡುವಿನ ಸಂದರ್ಭದಲ್ಲಿ ಈ ತರಹದ ಪದಗಳನ್ನು ಹುಡುಕುವ ಆಟಗಳು ತುಂಬಾನೆ ಮಜ ನೀಡುತ್ತದೆ. ಇದು ಆಟದ ಜೊತೆಗೆ ಮಕ್ಕಳಲ್ಲಿ ಹೊಸ ಹೊಸ ಪದಗಳ ಸಂಗ್ರಹ, ಕನ್ನಡ ಪದಗಳ ಅರಿವನ್ನು ಇನ್ನೂ ಹೆಚ್ಚಾಗಿ ನೀಡುತ್ತದೆ. ಕನ್ನಡದ ಕಲಿಕೆಗೆ ಇನ್ನೂ ಹೆಚ್ಚಿನ ಸಹಕಾರಿಯಾಗಿದೆ. ಶಾಲೆಗಳಲ್ಲಿ ಇದನ್ನು ಮಕ್ಕಳಿಗೆ ತಿಳಿಸಿಕೊಟ್ಟಾಗ ಅವರಲ್ಲಿ ಆಸಕ್ತಿಯನ್ನು ಮೂಡಿಸಬಹುದು. ಈ ಸಂಚಿಕೆಯಲ್ಲಿ ಇನ್ನೊಂದು ವಿಶೇಷವೆಂದರೆ ಪದಗಳ ಚೌಕವು ಪ್ರತಿ ಬಾರಿಯೂ ಹೊಸ ಹೊಸ ವಿನ್ಯಾಸವನ್ನು ಹೊಂದಿದೆ.. ನಿಜವಾಗಿ ರಮೇಶ್ ಅವರ ತಾಳ್ಮೆ ಹಾಗೂ ನೀಡುವ ಸಮಯಕ್ಕಾಗಿ ನಾವು ಆಭಾರಿಗಳು.
     ಶಿಕ್ಷಕರ ಡೈರಿ , ಆರ್ಟ್ ಗ್ಯಾಲರಿ, ಹಾಗೂ ವಿಶೇಷ ಲೇಖನಗಳಲ್ಲಿ ಬರೆಯುವ ಪ್ರತಿಯೊಬ್ಬರೂ ಕೂಡ ಜಗಲಿಯ ಸೊಗಸಿಗೆ ಕಾರಣರಾಗಿದ್ದಾರೆ. 
     ನಿರಂತರವಾಗಿ ಕಥೆ, ಕವನ, ಲೇಖನ, ಚಿತ್ರಗಳನ್ನು ಬರೆಯುವ ಮಕ್ಕಳು 'ಮಕ್ಕಳ ಜಗಲಿ' ಯ ಕೇಂದ್ರಬಿಂದುಗಳಾಗಿದ್ದಾರೆ. ಈಗ ಪರೀಕ್ಷಾ ಸಮಯ.... ಬೇಸಿಗೆ ರಜೆ ಸಿಕ್ಕಿದ ಕೂಡಲೇ ಮತ್ತೆ ಎಲ್ಲ ಮಕ್ಕಳು, ಜಗಲಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ.... 
      ಇನ್ನೂ ಒಂದು ಹೆಚ್ಚಿಗೆ ಒತ್ತಿ ಹೇಳಬೇಕಾದದ್ದು ಶ್ರೀರಾಮ ಮೂರ್ತಿಯವರನ್ನು... ಕಳೆದ ವಾರ ವಿಜ್ಞಾನ ದಿನದಂದು ವಿಶೇಷವಾದ ಲೇಖನವನ್ನು ಬರೆದು ವಿಜ್ಞಾನ ದಿನದ ಆಚರಣೆ ಮಹತ್ವವನ್ನು ತಿಳಿಸಿದ್ದಾರೆ. ಪ್ರತಿವಾರ ಜಗಲಿ ಕಟ್ಟೆಯಲ್ಲಿ ಜಗಲಿಯಲ್ಲಿ ಪ್ರಕಟವಾಗುವ ಎಲ್ಲಾ ಬರಹಗಳನ್ನು ಓದಿ ಅನುಭವಿಸಿ ತಮ್ಮ ಮಾತುಗಳಲ್ಲಿ ಪ್ರಕಟ ಮಾಡುತ್ತಾರೆ.. ಈ ಮಾತುಗಳು ಪ್ರತಿಯೊಬ್ಬರಲ್ಲಿಯೂ ಕೂಡ ಸ್ಪೂರ್ತಿಯನ್ನು ತುಂಬಿ, ಮತ್ತೆ ಮತ್ತೆ ಹೊಸತಾಗಿ ಬರೆಯುವ ಯೋಚನೆಗೆ ಕಾರಣರಾಗುತ್ತಾರೆ. ಧನ್ಯವಾದಗಳು ಸರ್... 
     ಅದೇ ರೀತಿ ವಿದ್ಯಾ ಗಣೇಶ್ ಚಾಮೆತ್ತಮೂಲೆ ಕೂಡ ಜಗಲಿ ಕಟ್ಟೆಯಲ್ಲಿ ಬರೆಯುತ್ತಾ ಬರೆಯುವವರಿಗೆ ಪ್ರೋತ್ಸಾಹದ ನುಡಿಗಳನ್ನು ನಿರಂತರವಾಗಿ ನೀಡುತ್ತಾ ಬಂದಿದ್ದಾರೆ. ವಿಶೇಷವಾಗಿ ಬರೆಯುವ ಕೌಶಲ್ಯ ಹೊಂದಿರುವ ಇವರು ಜಗಲಿಯಲ್ಲಿ ತಾನು ಬೆಳೆಯುತ್ತಾ, ಜಗಲಿಯ ಸಂಭ್ರಮದಲ್ಲಿ ಪಾಲುದಾರರಾಗಿದ್ದಾರೆ. 
      

ಕಳೆದ ಸಂಚಿಕೆಯ ಜಗಲಿಕಟ್ಟೆ - 40 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ವಿದ್ಯಾ ಗಣೇಶ್ ಚಾಮೆತ್ತಮೂಲೆ ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....

ಎಲ್ಲರಿಗೂ ನಮಸ್ಕಾರ,
    ನಮ್ಮ ದೇಹದ ಎಲ್ಲಾ ಅಂಗಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡಿದರೆ ದೇಹದ ಆರೋಗ್ಯ ಚೆನ್ನಾಗಿದೆ ಎಂದರ್ಥ. ಈ ರೀತಿಯಾಗಿ ದೇಹ ಸ್ವಾಸ್ಥ್ಯವನ್ನು ಕಾಪಾಡಲು ಯೋಗ ಪ್ರಾಣಾಯಾಮ ಅಗತ್ಯ ಎನ್ನುವುದನ್ನು ತಮ್ಮ ಈ ಸಲದ ಸಂಚಿಕೆಯಲ್ಲಿ ಶಿಕ್ಷಣಾಧಿಕಾರಿಯವರಾದ ಜ್ಞಾನೇಶ್ ಸರ್ ರವರು ಸೊಗಸಾಗಿ ತಿಳಿಸಿದ್ದಾರೆ.
     ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ, ಭಯೋತ್ಪಾದನೆ, ಸೈಬರ್ ಅಶ್ಲೀಲತೆ, ಹಣ ಲಪಟಾಯಿಸುವಿಕೆ, ಮುಂತಾದ ಅನೇಕ ಸೈಬರ್ ಅಪರಾಧಗಳನ್ನು ಹೇಗೆ ನಿರ್ವಹಿಸುತ್ತಾರೆ ಹಾಗೂ ಅವುಗಳಿಂದ ನಾವು ಹೇಗೆ ಸುರಕ್ಷಿತರಾಗಬಹುದು ಎಂಬುದರ ಕುರಿತಾಗಿ ರಮೇಶ್ ಸರ್ ರವರು ಸ್ಯೆಬರ್ ಅಪರಾಧ ಕುರಿತಾದ ಎರಡನೇ ಸಂಚಿಕೆಯಲ್ಲಿ ವಿವರವಾಗಿ ತಿಳಿಸಿದ್ದಾರೆ. ಧನ್ಯವಾದಗಳು ಸರ್.
     ಕೋಳಿ ಮೊದಲೋ ಮೊಟ್ಟೆ ಮೊದಲೋ ಎನ್ನುವ ತಾರ್ಕಿಕ ಪ್ರಶ್ನೆಯ ಉತ್ತರದೊಂದಿಗೆ ಜೀವಿಗಳಿಗೆ ಅತೀ ಅಗತ್ಯವಾಗಿರುವ ಪ್ರೋಟೀನ್ ಗಳ ತಯಾರಿಕೆ ಜೀವಕೋಶದ ಪ್ರೋಟೀನ್ ತಯಾರಿಕಾ ಘಟಕವಾದ RNAಯ ಮೂಲಕ ಹೇಗೆ ನಡೆಯುತ್ತದೆ ಎಂಬುದನ್ನು ದಿವಾಕರ್ ಸರ್ ಅವರು ಈ ಸಲದ ವೈಜ್ಞಾನಿಕ ಸಂಚಿಕೆಯಲ್ಲಿ ಬಹಳ ಸೊಗಸಾಗಿ ತಿಳಿಸಿದ್ದಾರೆ.
      ಪುಟಾಣಿ ಹಕ್ಕಿಯಾದ ನೀಲಿ ಮಿಂಚುಳ್ಳಿಯ ಸೊಗಸಾದ ಪರಿಚಯ ಅರವಿಂದ ಸರ್ ರವರಿಂದ. ಧನ್ಯವಾದಗಳು ಸರ್.
     ನಸುಗುನ್ನಿ ಸಸ್ಯ ತೀವ್ರತರವಾದ ನವೆ, ಉರಿಯನ್ನು ಉಂಟುಮಾಡುವ ಕಾರಣದಿಂದ ಕಳೆ ಸಸ್ಯವೆಂದು ಪರಿಗಣಿಸಿದರೂ ಅದರ ಪ್ರಯೋಜನಗಳಿಂದ ಈ ಸಸ್ಯ ಬಹಳ ಉಪಯುಕ್ತ ಸಸ್ಯವೂ ಹೌದು. ವಿಜಯಾ ಮೇಡಂ ರವರಿಂದ ಉಪಯುಕ್ತ ಮಾಹಿತಿ.
     ದಾರು ಶಿಲ್ಪದ ಬಗ್ಗೆ ಲತಾ ಶ್ರೀಧರ್ ಅವರಿಂದ ಅನೇಕ ಉತ್ತಮ ಮಾಹಿತಿಯನ್ನು ಒಳಗೊಂಡ ಲೇಖನ. ಧನ್ಯವಾದಗಳು ಮೇಡಂ.
    ಪುಸ್ತಕ ಪರಿಚಯದ ಸಂಚಿಕೆಗೆ ಶತಕದ ಸಂಭ್ರಮ. ಅಭಿನಂದನೆಗಳು ವಾಣಿಯಕ್ಕ. ಈ ವಾರ 'ಆ 36 ಗಂಟೆಗಳು' ಎನ್ನುವ ಪುಸ್ತಕದ ಪರಿಚಯ ಸೊಗಸಾಗಿ ಮೂಡಿ ಬಂದಿದೆ.
     ಶಾನ್ವಿಯವರು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಸುಂದರ ಮುದ್ದಿನ ಕಲಾಕೃತಿಗಳು ಮತ್ತೆ ಅವಳನ್ನು ನೆನಪಿಸುವಂತೆ ಮಾಡಿವೆ. ಪುಟ್ಟ ಬಾಲಕಿಯ ಚಿತ್ರಗಳು ತುಂಬಾನೇ ಚೆನ್ನಾಗಿವೆ.
     ಮಂಗಳೂರಿನ ಪ್ರಸಿದ್ಧ ಚಿತ್ರಕಲಾ ಮಹಾವಿದ್ಯಾಲಯ - ಮಹಾಲಸ ಚಿತ್ರಕಲಾ ಮಹಾವಿದ್ಯಾಲಯದ ಉಡುಪಿಯ ಪಾಂಬೂರಿನಲ್ಲಿ ನಡೆದ ಚಿತ್ರಕಲಾ ಶಿಬಿರದ ಸುಂದರ ವರದಿ - ಜಗಲಿಯ ರೂವಾರಿ ಆತ್ಮೀಯ ಮಿತ್ರರಾದ ತಾರಾನಾಥ ಸರ್ ರವರಿಂದ. ಶಿಬಿರದಲ್ಲಿ ಅದ್ಭುತ ಕಲಾಕೃತಿಗಳ ರಚನೆಯಾಗಿವೆ. ಧನ್ಯವಾದಗಳು ಸರ್.
    ರಮೇಶ್ ಉಪ್ಪುಂದ ಇವರಿಂದ ಪದಗಳ ಹುಡುಕಾಟಕ್ಕೆ ಕಾರಣವಾದ ಪದದಂಗಳ ಸಂಚಿಕೆ ಚೆನ್ನಾಗಿತ್ತು.
    ಜಗಲಿಯಲ್ಲಿ ತಮ್ಮ ಉತ್ತಮ ಲೇಖನಗಳ ಜಗಲಿಯ ಅಂದ ಹೆಚ್ಚಿಸಿದ ಎಲ್ಲರಿಗೂ ಮನದಾಳದ ಕೃತಜ್ಞತೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************


   ಶ್ರಾನ್ವಿಯ ಚಿತ್ರಗಳ ಸಂಚಿಕೆ.. ನಿಜಕ್ಕೂ ವಿಶೇಷ ಸಂಚಿಕೆ. ಜಗಲಿ ಮೂಲಕ ಈ ಬಾಲಕಿಗೂ ಸಿಕ್ಕಂತಹ ವಿಶೇಷ ವೇದಿಕೆ. ಹೌದು. ಹೀಗೆ ಹೇಳಲು ಕಾರಣವಿದೆ. ಶ್ರಾನ್ವಿ ಗೆ 2ನೇ ತರಗತಿಯಲ್ಲಿ ಕಂಡುಬಂದ ಗಂಭೀರ ಅನಾರೋಗ್ಯದಿಂದ ಆ ಬಳಿಕ ಆಸ್ಪತ್ರೆ - ಚಿಕಿತ್ಸೆ ಓಡಾಟದಲ್ಲಿಯೇ ದಿನಗಳು ಕಳೆದು ಹೋದವು. ಶಾಲೆ ಎಂದರೆ ಬಹಳ ಆಸೆಪಡುವ ಹುಡುಗಿಗೆ ತಾನೊಂದು ದಿನ ಗುಣಮುಖಳಾಗಿ ಎಲ್ಲರಂತೆ ಶಾಲೆಗೆ ಹೋಗುತ್ತೇನೆ ಎನ್ನುವ ಕನಸು ಕನಸಾಗಿಯೇ ಉಳಿಯಿತು. ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದರೂ ಎಲ್ಲ ಮಕ್ಕಳಿಗೆ ಸಿಗುವಂತೆ ಪ್ರತಿಭಾ ಕಾರಂಜಿ, ಕ್ರೀಡಾಕೂಟ, ಶಾಲಾಪ್ರವಾಸ, ವಾರ್ಷಿಕೋತ್ಸವದ ನೃತ್ಯ, ಇನ್ನಿತರ ಸ್ಪರ್ಧೆಗಳಲ್ಲಿ ಭಾಗವಹಿಸುವ, ಬಹುಮಾನ ಪಡೆದು ಸಂಭ್ರಮಿಸುವ ಅವಕಾಶ ಇವಳ ಅನಾರೋಗ್ಯ ಇವಳಿಗೆ ಎಡೆ ಮಾಡಿಕೊಡಲಿಲ್ಲ. ಚಿಕಿತ್ಸೆಯೊಂದಿಗೆ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಮಯ ಅವಳು ಉಲ್ಲಾಸವಾಗಿ ಹೊಸ - ಹೊಸ ಚಿತ್ರ, ಕ್ರಾಫ್ಟ್ ಗಳಲ್ಲಿ ತೊಡಗಿಸಿಕೊಂಡು ಒಂದಿಷ್ಟು ಸಂತೋಷವನ್ನು ಪಡೆಯಲಾದದ್ದು ಮಕ್ಕಳ ಜಗಲಿಯಲ್ಲಿ ಚಿತ್ರಗಳು ಪ್ರಕಟವಾಗುವ ಅವಕಾಶ. ಅವಳು ವರ್ಷದ ಮೊದಲು ಮನೆಯಿಂದಲೇ ಎಲೆ- ಹೂಗಳ ರಂಗೋಲಿ ಮಾಡಿ ನವರಾತ್ರಿ ಸಂದರ್ಭ ಜಗಲಿಗೆ ಮೊದಲ ಬಾರಿಗೆ ಕಳುಹಿಸಿ ಶಾಲೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದಂತಹ ಸಂತೋಷ ಅನುಭವಿಸಿದಳು.. ತಮ್ಮ ಮಗಳು ಮನೆಯಿಂದಲೇ ಭಾಗವಹಿಸುವ ಅವಕಾಶ ಸಿಕ್ಕಿತಲ್ಲ ಎಂದು ಮನೆಯವರೂ ಖುಷಿಪಟ್ಟರು. ಚಿಕಿತ್ಸೆಯ ಸಂದರ್ಭ ರೋಗನಿರೋಧಕ ಶಕ್ತಿ ಅವಳಲ್ಲಿ ಕಡಿಮೆ ಇದ್ದ ಕಾರಣ ಶಾಲೆಯಾಗಲೀ, ಹೊರಗಿನ ಉತ್ಸವ, ಜಾತ್ರೆಯ ಕಾರ್ಯಕ್ರಮಗಳಲ್ಲಾಗಲೀ ಭಾಗವಹಿಸುವ ಅವಕಾಶ ಅವಳಿಗಿರಲಿಲ್ಲ. ಹಾಗಾಗಿ ಹೊಸಬಟ್ಟೆ ತೊಟ್ಟು ಸಂಭ್ರಮಿಸುವ ಕ್ಷಣಗಳೂ ಅವಳಿಗೆ ಮರೀಚಿಕೆಯಾಗಿತ್ತು. ಮಕ್ಕಳ ಜಗಲಿಗೆ ಚಿತ್ರ ಕಳುಹಿಸುವಾಗ ನೀಡಬೇಕಾದ ಅವಳ ಫೋಟೋಕ್ಕಾಗಿ ಹೊಸಬಟ್ಟೆ ತೊಟ್ಟು ಸಂಭ್ರಮಿಸುವ ಒಂದು ಸಣ್ಣ ನೆಪ ಅವಳಿಗೆ ಸಿಕ್ಕಿತು.. ಅದನ್ನು ನೋಡಿ ಸಂತೋಷಿಸುವ ಅವಕಾಶ ಅವಳ ಮನೆಯವರದಾಯಿತು. ಜಗಲಿಯ ಕಾರಣ.. ಅವಳ ಚಂದದ ಚಿತ್ರಗಳು , ಜೊತೆಗೆ ಅವಳ ನಗುಮುಖದ ಬಿಂಬ ಸುಂದರ ನೆನಪುಗಳಾಗಿ ಶಾಶ್ವತವಾಗಿ ಉಳಿಯುವಂತಾಯಿತು. ಹೀಗೆ ಜಗಲಿ ನೀಡುವ ಅವಕಾಶ ಎಳೆಯ ಮಕ್ಕಳ ಪಾಲಿಗೆ ಎಂತೆಂತಹ ರೀತಿ ಆಶಾಕಿರಣವಾಗಬಲ್ಲುದು ಎನ್ನುವುದಕ್ಕೆ ಶ್ರಾನ್ವಿಯ ಸಂದರ್ಭ ಚಂದದ ಉದಾಹರಣೆಯಾಗಿದೆ.
....................................... ವಿದ್ಯಾ ಕಾರ್ಕಳ ಶಿಕ್ಷಕರು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಕ್ಕಾಡಿಗೋಳಿ 
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob: +91 94499 07371
******************************************


ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ವಿದ್ಯಾ ಕಾರ್ಕಳ... ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************Ads on article

Advertise in articles 1

advertising articles 2

Advertise under the article