-->
ಜೀವನ ಸಂಭ್ರಮ : ಸಂಚಿಕೆ - 127

ಜೀವನ ಸಂಭ್ರಮ : ಸಂಚಿಕೆ - 127

ಜೀವನ ಸಂಭ್ರಮ : ಸಂಚಿಕೆ - 127
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
               

ಮಕ್ಕಳೇ, ಈ ದಿನ ಪ್ರಾಣಾಯಾಮದ ಬಗ್ಗೆ ತಿಳಿದುಕೊಳ್ಳೋಣ. ಪ್ರಾಣಾಯಾಮ ಎಂದರೆ ಶ್ವಾಸ ಪ್ರಶ್ವಾಸಗಳ ಗತಿಯನ್ನು ವಿಚ್ಛೇದನಗೊಳಿಸುವುದೇ ಪ್ರಾಣಾಯಾಮ. 

ಜೀವನವನ್ನು ನಿಯಮಿತಗೊಳಿಸುವುದೇ ಪ್ರಾಣಾಯಾಮ. ಆಯಾಮ ಎಂದರೆ ನಿಯಮಿತಗೊಳಿಸುವುದು, ನಿಯಮನ ಮಾಡೋದು, ಒಂದು ರೀತಿ ತಂದು ಕೊಡುವುದು. ಪ್ರಾಣಾಯಾಮ ಎಂದರೆ ಪ್ರಾಣಕ್ಕೆ ನಿಯತಿಯನ್ನು, ನಿಯಮವನ್ನು ತರುವುದು. ಒಂದು ಅಚ್ಚು ಕಟ್ಟು ಮಾಡುವುದು. ಉಸಿರು ಎಂದರೆ ಕೇವಲ ಗಾಳಿಯಲ್ಲ , ಎಲ್ಲವನ್ನು ಒಳಕ್ಕೆ ತೆಗೆದುಕೊಳ್ಳುತ್ತೇವೆ. ಅವೆಲ್ಲವೂ ಆಯಾಮಗಳೆ. ಏನೇನು ಒಳಗಿದೆ ಅದರಲ್ಲಿ ಬಹಳಷ್ಟು ಹೊರಗಿನಿಂದಲೇ ತೆಗೆದುಕೊಳ್ಳುವುದು. ಸೌಂದರ್ಯ ಹೊರಗಿನಿಂದ ತೆಗೆದುಕೊಳ್ಳುತ್ತೇವೆ. ಶಕ್ತಿಯನ್ನು ಹೊರಗಿನಿಂದ ತೆಗೆದುಕೊಳ್ಳುತ್ತೇವೆ. ವಿಚಾರಗಳನ್ನು ಹೊರಗಿನಿಂದ ತೆಗೆದುಕೊಳ್ಳುತ್ತೇವೆ. ಸಂತೋಷ ಕೂಡ ಹೊರಗಿನಿಂದ ತೆಗೆದುಕೊಳ್ಳುತ್ತೇವೆ. ಇಷ್ಟೆಲ್ಲಾ ಹೊರಗಿನಿಂದ ಬರ್ತದಲ್ಲ ಅದನ್ನು ಆಯಾಮ ಮಾಡಬೇಕು. ಏನನ್ನು ಒಳಗೆ ತೆಗೆದುಕೊಳ್ಳಬೇಕು?. ಏನನ್ನು ತೆಗೆದುಕೊಳ್ಳಬಾರದು?. ಆಲೋಚನೆ ಮಾಡಬೇಕು. ಅದೇ ಪ್ರಾಣಾಯಾಮ. ಒಳ್ಳೆಯ ಗಾಳಿ ತೆಗೆದುಕೊಳ್ಳುವುದು ಎಷ್ಟು ಮಹತ್ವವೋ?. ಒಳ್ಳೆಯ ವಿಚಾರ ತೆಗೆದುಕೊಳ್ಳುವುದು ಅಷ್ಟೇ ಮಹತ್ವ. ಒಳ್ಳೆಯ ಭಾವನೆಗಳನ್ನು , ಒಳ್ಳೆಯ ನೋಟವನ್ನು , ಒಳ್ಳೆಯ ಶಬ್ದ, ಸ್ಪರ್ಶ ಮತ್ತು ಸುಗಂಧ ತೆಗೆದುಕೊಳ್ಳುವುದು ಅಷ್ಟೇ ಮಹತ್ವ.

ಪ್ರಾಣಾಯಾಮ ಎಂದರೆ ಕೇವಲ ಪ್ರಾಣಾಯಾಮವಲ್ಲ. ಅದರ ಮಧ್ಯದಲ್ಲಿ ರೂಪ ಆಯಾಮ, ಶಬ್ದ ಆಯಾಮ, ಗಂಧ ಆಯಾಮ, ರಸ ಆಯಾಮ ಮತ್ತು ಸ್ಪರ್ಶ ಆಯಾಮ, ಇವೆಲ್ಲವನ್ನು ಆಯಾಮ ಮಾಡುವುದು. ತೆಗೆದುಕೊಳ್ಳುತ್ತೇವೆ ಅಲ್ಲ ಅದಕ್ಕೆ ಪೂರಕ ಎನ್ನುತ್ತೇವೆ. ಇದಕ್ಕೆ ಇನ್ನೊಂದು ಹೆಸರು ಅಭ್ಯಂತರವೃತ್ತಿ ಎನ್ನುವರು. ನಮ್ಮೊಳಗೆ ಬೇಡವಾದದ್ದು, ಕಶ್ಮಲವಾದದ್ದು , ನಮಗೆ ಉಪಯೋಗವಲ್ಲದು ಹೊರಗೆ ಹಾಕುತ್ತೇವೆ. ಇದಕ್ಕೆ ರೇಚಕ ಎನ್ನುವರು. ಹೇಗೆ ಬೇಡವಾದ ಗಾಳಿ ಹೊರಹಾಕುತ್ತೇವೆಯೋ?. ಹಾಗೆಯೇ ನಮಗೆ ಬೇಡವಾದ ವಿಚಾರಗಳನ್ನು, ಭಾವನೆಗಳನ್ನು, ಸರಿ ಇಲ್ಲದಿದ್ದರೆ ಹೊರ ಚೆಲ್ಲುವುದು ರೇಚಕ. ಚೆನ್ನಾಗಿರುವುದು ಎಲ್ಲೇ ಇರಲಿ ಅದನ್ನು ಒಳಗಡೆ ತೆಗೆದುಕೊಳ್ಳಬೇಕು. ಒಳ್ಳೆಯ ವಿಚಾರ ಎಲ್ಲೇ ಇರಲಿ, ಅದು ನಗರದಿಂದ ಬರಲಿ ಅಥವಾ ಹಳ್ಳಿಯಿಂದ ಬರಲಿ , ಪಶ್ಚಿಮ ದೇಶದ್ದಿರಲಿ ಅಥವಾ ಪೂರ್ವ ದೇಶದ್ದಿರಲಿ ಒಳಗೆ ತೆಗೆದುಕೊಳ್ಳಬೇಕು. ಬೆಳಕು ಎಲ್ಲಿಂದ ಬಂದರೆ ಏನು?. ಒಳ್ಳೆಯ ಭಾವನೆಗಳು ಎಲ್ಲಿಂದ ಬಂದರೇನು?. ಅವುಗಳನ್ನು ಸ್ವೀಕಾರ ಮಾಡಬೇಕು ಮತ್ತು ಆಯಾಮ ಮಾಡಿಕೊಳ್ಳಬೇಕು. ಅದನ್ನು ಪೂರಕ ಮಾಡಬೇಕು. ಕೆಟ್ಟದ್ದನ್ನು ರೇಚಕ ಮಾಡುವುದು. ಹಿಡಿಯಬೇಕು ಅನ್ನುವುದೇ ಕುಂಭಕ. ಇವು ಪ್ರಾಣಯಾಮದ ಮೂರು ವೃತ್ತಿಗಳು. ಇವು ದೀರ್ಘವಾಗಿರಬೇಕು. ಮತ್ತು ಸೂಕ್ಷ್ಮವಾಗಿರಬೇಕು. ಅಂದರೆ ದೀರ್ಘ ಮಾಡುವುದು ಮತ್ತು ಸೂಕ್ಷ್ಮ ಮಾಡುವುದು ಪ್ರಾಣದ ಆಯಾಮ. ದೀರ್ಘವಾಗಿರಬೇಕು ಮತ್ತು ಸೂಕ್ಷ್ಮವಾಗಿರಬೇಕು. ಉಸಿರಾಟ ದೀರ್ಘವು ಸೂಕ್ಷ್ಮವೂ ಆಗಿರಬೇಕು. ಅಂದರೆ ಸಮಾಧಾನ ಇರಬೇಕು. ನಿಧಾನವಾಗಿ ಮಾಡಬೇಕು. ನಿಧಾನವಾಗಿ ಉಸಿರು ತೆಗೆದುಕೊಳ್ಳುತ್ತೇವೆ. ನಿಧಾನವಾಗಿ ಉಸಿರು ಬಿಡುತ್ತೇವೆ. ನಿಧಾನವಾಗಿ ಮಾಡುವುದೇ ಪ್ರಾಣಾಯಾಮ. ಹೆಚ್ಚು ಹೆಚ್ಚು ನಿಧಾನ ಮಾಡಿದರೆ ಅದು ದೀರ್ಘ. ಹೆಚ್ಚೆಚ್ಚು ನಿಧಾನ ಮಾಡಿದರೆ ಸೂಕ್ಷ್ಮ. ಇದಕ್ಕೆ ಸೂಕ್ಷ್ಮ ಪ್ರಾಣಾಯಾಮ, ದೀರ್ಘ ಪ್ರಾಣಾಯಾಮ ಎನ್ನುವರು. 

ಪ್ರಾಣಾಯಾಮದಲ್ಲಿ ಬಹಳಷ್ಟು ಪ್ರಕಾರಗಳಿವೆ. ಈ ಪ್ರಾಣಾಯಾಮದ ಉದ್ದೇಶ ದೇಹವನ್ನು ಶಕ್ತಿಯಿಂದ ತುಂಬುವುದು. ಕಣ್ಣು , ಕಿವಿ, ನಾಲಿಗೆ, ಮೂಗು ಮತ್ತು ಚರ್ಮಕ್ಕೆ ಒಳ್ಳೆಯ ವಿಚಾರಗಳಿಂದ ತುಂಬುವುದು. ಕಣ್ಣನ್ನು ಸೌಂದರ್ಯದಿಂದ ತುಂಬುವುದು. ಕಿವಿಯನ್ನು ಒಳ್ಳೆಯ ಶಬ್ದದಿಂದ ತುಂಬುವುದು. ಮೈಯನ್ನ ಒಳ್ಳೆಯ ಸ್ಪರ್ಶದಿಂದ ತುಂಬುವುದು. ಮೂಗನ್ನು ಒಳ್ಳೆಯ ಸುವಾಸನೆಯಿಂದ ತುಂಬುವುದು. ನಾಲಿಗೆಯನ್ನು ಒಳ್ಳೆಯ ರಸದಿಂದ ತುಂಬುವುದು. ಸಂತೋಷ ಕೊಡುವುದಕ್ಕೆ ಬಹಳಷ್ಟು ವಸ್ತುಗಳು ಬೇಕಾಗುವುದಿಲ್ಲ. ಬಹಳಷ್ಟು ಹಣ ಬೇಕಾಗಿಲ್ಲ. ಮನಸ್ಸು ಬೇಕಾಗುತ್ತದೆ. ಹೂ ಹಿಡಿಯಲು ಲಕ್ಷ ಹಣ ಬೇಕಾಗಿಲ್ಲ. ಮೃದುವಾಗಿ ಹಿಡಿದರೆ ಸಾಕು ಸಂತೋಷ. ಇದರಿಂದ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರ ಏನೂ ಇಲ್ಲ. ಏನೂ ಇಲ್ಲದಿರುವುದರಿಂದ ಸಂತೋಷ ಉಂಟಾಗುತ್ತದೆ. ಇಂತಹ ಸ್ಪರ್ಶಗಳಿರಬೇಕು. ಯಾವ ಸ್ಪರ್ಶ ಮಾಡಿದರೆ ಹುಚ್ಚು ಹಿಡಿಯುತ್ತದೆ?. ಯಾವ ರೂಪ ನೋಡಿದರೆ ಹುಚ್ಚು ಹಿಡಿಯುತ್ತದೆ?. ಯಾವ ಶಬ್ದ ಕೇಳಿದರೆ ತಲೆಗೆ ತಾಪ ಏರುತ್ತದೆ ? ಇಂತಹವುಗಳನ್ನು ಹೊರ ಹಾಕುವುದೇ ರೇಚಕ. ಒಳ್ಳೆಯದನ್ನು ಒಳಗೆ ತೆಗೆದುಕೊಳ್ಳುವುದು ಪೂರಕ. ಜಗತ್ತಿನಲ್ಲಿ ಒಳ್ಳೆಯ ನೋಟಗಳಿಲ್ಲವೆ?. ಬಿಸಿಲುಗಾಲದಲ್ಲಿ ಬಹಳ ಬಿಸಿಲಿನಲ್ಲಿ ತಿರುಗಾಡಿ ಬಂದಿರುತ್ತೇವೆ. ಒಂದು ಸಣ್ಣ ಹಳ್ಳಿ. ಸ್ವಚ್ಛ ನೀರು. ಕಾಲನ್ನು ಇಳಿಬಿಟ್ಟು ಕುಳಿತರೆ ಎಂತಹ ಆನಂದ. ನಾಲ್ಕು ಹನಿ ನೀರು ಕುಡಿದರೆ ಎಷ್ಟು ಸುಖ?. ಅನ್ನಿಸುತ್ತದೆ, ಇದೇ ಸ್ಪರ್ಶ ಇದಕೆ ದಿವ್ಯ ಸ್ಪರ್ಶ ಎನ್ನುವರು. ಒಂದು ಕೊಡ ನೀರು ಮೈಮೇಲೆ ಹಾಕಿಕೊಂಡರೆ ತಂಪಾಗುತ್ತದೆ.  

ಶಕ್ತಿ ಆಯಾಮ, ರೂಪ ಆಯಾಮ, ಶಬ್ದ ಆಯಾಮ, ಗಂದ ಆಯಾಮ, ಸ್ಪರ್ಶ ಆಯಾಮ ಮತ್ತು ರಸಾ ಆಯಾಮ. ಆ ಬಳಿಕ ಭಾವನೆಗಳು, ಆಲೋಚನೆಗಳು ಮತ್ತು ವಿಚಾರಗಳನ್ನು ಆಯಾಮ ಮಾಡಬೇಕು. ಎಲ್ಲಾ ಕಡೆಗಳಿಂದ, ಎಲ್ಲಾ ದಿಕ್ಕಿನಿಂದ ಒಳ್ಳೆಯ ಸುಂದರ ಸಂಗತಿಗಳು ಬರಬೇಕು. ಅವು ನಮ್ಮ ಮನಸ್ಸನ್ನು ಪ್ರವೇಶಿಸಬೇಕು. ಪೂರ್ವದಿಂದ, ಪಶ್ಚಿಮದಿಂದ ಬರಲಿ. ನಮ್ಮ ಮನೆಯ ಬಾಗಿಲು ಮುಚ್ಚರಬಾರದು. ಜ್ಞಾನದ ಬಾಗಿಲು ಮುಚ್ಚಬಾರದು. ಸದ್ಭಾವನೆಯ ಬಾಗಿಲು ಮುಚ್ಚಬಾರದು. ಹಾಗೆ ಇದ್ದರೆ ಶ್ರೀಮಂತಿಕೆ ಒಳಗೆ ಬರುತ್ತದೆ. ಶುದ್ಧ ಪ್ರಾಣಾಯಾಮ ಒಳಗೆ ಹೋಗುತ್ತದೆ. ನಾವು ಕಿಟಕಿ ಬಾಗಿಲು ಮುಚ್ಚಿ ಕುಳಿತರೆ ಪ್ರಾಣಾಯಾಮ ಆಗುವುದಿಲ್ಲ. ಗಾಳಿ ಕೆಡುತ್ತದೆ‌. ಶುದ್ಧ ಗಾಳಿ ಇದ್ದರೆ ಪ್ರಾಣಯಾಮ. ಮಲಿನ ಗಾಳಿ ತೆಗೆದುಕೊಳ್ಳುವುದು ಪ್ರಾಣಾಯಾಮ ಅಲ್ಲ. ಎಲ್ಲಿ ಸ್ವಚ್ಛ ಇದೆ ಅಲ್ಲಿ ಪ್ರಾಣಾಯಾಮ. ಅದಕ್ಕೆ ಹೇಳುವುದು... ಪ್ರಾಣಾಯಾಮವನ್ನು ಗುಡ್ಡದ ಮೇಲೆ ಮಾಡಿರಿ. ಪ್ರಾಣಿ ಇದ್ದರೂ ಪರವಾಗಿಲ್ಲ. ಏಕೆಂದರೆ ಮನುಷ್ಯನಿದ್ದಲ್ಲಿ ಅವನ ವಿಚಾರ ಒಳ ಹೋಗುತ್ತದೆ. ವಾಯು ಸ್ವಚ್ಛ ಇರಬೇಕಾದರೆ ಸ್ವಚ್ಛ ಸ್ಥಳದಲ್ಲಿ ಮಾಡಬೇಕಾಗುತ್ತದೆ. ಅಲ್ಲವೇ ಮಕ್ಕಳೇ...
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
************************************************
Ads on article

Advertise in articles 1

advertising articles 2

Advertise under the article