ಹೃದಯದ ಮಾತು : ಸಂಚಿಕೆ - 35
Thursday, March 28, 2024
Edit
ಹೃದಯದ ಮಾತು : ಸಂಚಿಕೆ - 35
ಲೇಖಕರು : ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
"ಅಮ್ಮ ಆ ಸ್ಕೂಟರ್ ನೋಡು ಎಷ್ಟು ಚೆನ್ನಾಗಿದೆ" ಎಂದ ರಮೇಶ. ತಾಯಿ ಯಶೋಧಾ ಅಷ್ಟೊಂದು ಆಸಕ್ತಿ ತೋರಲಿಲ್ಲ. ಮಗ ಪ್ರತಿಬಾರಿಯೂ ಸ್ಕೂಟರ್ ಬಗ್ಗೆ ಮಾತಾಡುತ್ತಿದ್ದ. ತನ್ನ ಗೆಳೆಯರು ಸ್ಕೂಟರ್ ಮೇಲೆ ಓಡಾಟ ಮಾಡುತ್ತಿದ್ದ ಬಗ್ಗೆ ತಾಯಿಗೆ ತಿಳಿಸುತ್ತಿದ್ದ. ಯಶೋಧಾಳಿಗೆ ಮಗನ ಉದ್ದೇಶದ ಅರಿವಿದ್ದರೂ ಸ್ಕೂಟರ್ ಕೊಡಿಸುವ ಸ್ಥಿತಿಯಲ್ಲಿ ಆಕೆಯಿರಲಿಲ್ಲ.
ಯಶೋಧಾ ಕೂಲಿ ಮಾಡಿ ಮಗನನ್ನು ಬೆಳೆಸಿದ್ದಳು. ಮನೆಯಲ್ಲಿ ಪ್ರತಿದಿನ ಸಮಸ್ಯೆಗಳ ಮೇಲೆ ಸಮಸ್ಯೆಗಳು. ಸ್ವಂತ ಮನೆಯಿದ್ದರೂ, ಅದು ಸುಸ್ತಿಯಲ್ಲಿರಲಿಲ್ಲ. ಗಂಡ ಶ್ವಾಸಕೋಶ ಕಾಯಿಲೆಗೆ ತುತ್ತಾಗಿ ಪ್ರಾಣಬಿಟ್ಟಾಗ ಮಗನಿಗಿನ್ನೂ ಒಂಭತ್ತರ ಹರೆಯ. ಮೇಸ್ತ್ರಿ ಕೆಲಸ ಮಾಡಿ ಮನೆಯ ಖರ್ಚನ್ನು ನಿಭಾಯಿಸುತ್ತಿದ್ದ ಗಂಡ ಕಾಯಿಲೆಗೆ ತುತ್ತಾದಾಗ ಆಕೆ ದಿಕ್ಕು ಕಾಣದವಳಾಗಿದ್ದಳು. ಗಂಡನ ಚಿಕಿತ್ಸೆಗೆ ಒಂದಷ್ಟು ಸಾಲ ಶೂಲ ಮಾಡಿದರೂ ಆತನನ್ನು ಉಳಿಸಿಕೊಳ್ಳಲಾಗಲಿಲ್ಲ.
ಕೂಲಿ ಕೆಲಸ ಮಾಡಿ ಯಶೋಧಾ ಸಂಸಾರ ಸಾಗಿಸಬೇಕಿತ್ತು. ದಿನದ ದುಡಿಮೆ ಖರ್ಚನ್ನು ಸರಿದೂಗಿಸುವಲ್ಲಿ ಕೆಲವೊಮ್ಮೆ ಸಾಕಾಗುತ್ತಿರಲಿಲ್ಲ. ಆದರೂ ಇದ್ದ ಒಬ್ಬ ಮಗನಿಗೆ ಕೊರತೆ ಬಾರದಂತೆ ನೋಡಿಕೊಳ್ಳುತ್ತಿದ್ದಳು. ಮಗ ರಮೇಶ ಬೆಳೆಯುತ್ತಿದ್ದಂತೆ ಆತನ ಬೇಡಿಕೆಗಳು ಹೆಚ್ಚುತ್ತಿತ್ತು. ಕಲಿಯುವುದರಲ್ಲಿ ಆತ ತೀರಾ ಆಸಕ್ತಿ ತೋರುತ್ತಿದ್ದ. ಮಗ ಬೆಳೆಯುತ್ತಿದ್ದಂತೆ ಆತನ ಬೇಡಿಕೆಗಳು ಹೆಚ್ಚುತ್ತಿತ್ತು. ಯಶೋಧಾ ಅಲ್ಪ ಸ್ವಲ್ಪ ಸಾಲ ಮಾಡಿ ಹೇಗೋ ಅದನ್ನು ನಿಭಾಯಿಸುತ್ತಿದ್ದಳು.
ರಮೇಶ ಪ್ರೌಢಶಾಲೆಯಲ್ಲಿ ಸೌಮ್ಯ ವಿದ್ಯಾರ್ಥಿಯಾಗಿದ್ದ. ಅದಕ್ಕಾಗಿಯೇ ಎಲ್ಲಾ ಶಿಕ್ಷಕರಿಗೆ ಆತ ಅಚ್ಚುಮೆಚ್ಚಾಗಿದ್ದ. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿದ್ದ. ಆದರೂ ಮುಂದಿನ ಕಲಿಕೆಗೆ ಇತಿಶ್ರೀ ಹೇಳಿದ್ದ. ಮಗ ಮತ್ತೆ ಕಲಿಯದಿದ್ದರೂ ಪರ್ವಾಗಿಲ್ಲ ಚೆನ್ನಾಗಿದ್ದರೆ ಸಾಕು ಎಂದು ಯಶೋಧಾ ಹೆಚ್ಚು ಬಲವಂತವೂ ಮಾಡಿರಲಿಲ್ಲ. ಶಾಲೆ ಬಿಟ್ಟ ಮಗ ಅದ್ಯಾವುದೋ ಕೆಲಸ ಮಾಡಿ ಒಂದಷ್ಟು ಸಂಪಾದಿಸುತ್ತಿದ್ದ.
ಯಶೋಧಾ ಮಗನ ಬಗ್ಗೆ ಬಹಳ ನಿರೀಕ್ಷೆಗಳನ್ನು ಹೊತ್ತುಕೊಂಡಿದ್ದಳು. ಗಂಡನನ್ನು ಕಳೆದು ಕೊಂಡ ಆಕೆಗೆ ಅವನೊಬ್ಬನೇ ಭವಿಷ್ಯವಾಗಿದ್ದ. ಮಗನಿಗಿನ್ನೂ ಹದಿನೆಂಟರ ಹರೆಯ. ಅದಾಗಲೇ ಒಂದು ಒಳ್ಳೆ ಕೆಲಸಕ್ಕೆ ಸೇರಿಕೊಂಡಿದ್ದ. ಸಂಪಾದನೆಯೂ ಹೆಚ್ಚಾದಾಗ ತಾಯಿಗೆ ಆಸರೆಯಾಗ ತೊಡಗಿದ. ರಮೇಶ ನಿಯತ್ತಿನಿಂದ ದುಡಿಯುತ್ತಿದ್ದ. ಆತನ ಬಗ್ಗೆ ಪ್ರತಿಯೊಬ್ಬರಿಗೂ ಮೆಚ್ಚುಗೆಯಿತ್ತು. ಆತ ಯಾವುದೇ ದುಶ್ಚಟಗಳಿಗೆ ಬಲಿ ಬಿದ್ದಿರಲಿಲ್ಲ.
ಹರೆಯ ಹತ್ತೊಂಬತ್ತು ದಾಟುತ್ತಿದ್ದಂತೆ ರಮೇಶನಿಗೆ ಸ್ಕೂಟರ್ ಕೊಳ್ಳುವ ಆಸೆ ಮೂಡತೊಡಗಿತು. ಚಿಕ್ಕವನಿದ್ದಾಗಲೇ ಆತನಿಗೆ ಸ್ಕೂಟರ್ ಅಂದರೆ ತುಂಬಾ ಇಷ್ಟ. ಈಗಂತೂ ಹೇಗಾದರೂ ಸ್ಕೂಟರ್ ಹೊಂದಲೇ ಬೇಕೆಂಬ ಹಟ. ಅದಕ್ಕೆ ಆತನ ಗೆಳೆಯರು ಓಡಿಸುತ್ತಿದ್ದ ಸ್ಕೂಟರ್ ಗಳೂ ಕಾರಣವಾಗಿತ್ತು. ಯಶೋಧಾಳಿಗೆ ಮಗ ಸ್ಕೂಟರ್ ಕೊಳ್ಳೋದು ಇಷ್ಟವಿರಲಿಲ್ಲ. ಆದರೆ ಮಗ ಪ್ರತಿದಿನ ಅದಕ್ಕಾಗಿ ಹಟ ಮಾಡುತ್ತಿದ್ದ.
ಮಗನ ಒತ್ತಾಯಕ್ಕೆ ಮನಸೋತ ಆಕೆ ಅಂದು ಸ್ವಸಹಾಯ ಸಂಘದಿಂದ ಸಾಲ ಪಡೆದು, ಸಾಲದ್ದಕ್ಕೆ ತನ್ನಲ್ಲಿ ಉಳಿದಿದ್ದ ಎರಡು ಕಿವಿಯೋಲೆ ಮಾರಾಟ ಮಾಡಿ ಮಗನ ಕೈಗಿತ್ತಳು. ಮಗನ ಸಂತೋಷಕ್ಕೆ ಪಾರವೇ ಇಲ್ಲದಾಗಿತ್ತು. ಬಳಿಯಿದ್ದ ನಗದು ನೀಡಿ, ಉಳಿದ ಮೊತ್ತಕ್ಕೆ ಕಂತಿನಲ್ಲಿ ಸ್ಕೂಟರ್ ಖರೀದಿಸಿದ. ಮಗ ಮನೆಯ ಮುಂದೆ ಸ್ಕೂಟರ್ ತಂದು ನಿಲ್ಲಿಸಿದಾಗ ಮತ್ತೆ ಮತ್ತೆ ನೋಡಿ ಖುಷಿಪಟ್ಟಳು. ಮಗ ಸ್ಕೂಟರಲ್ಲಿ ಹೋಗುವುದನ್ನು ನೋಡಿ ಅಮ್ಮನ ಹೃದಯ ತುಂಬಿಬರುತ್ತಿತ್ತು.
ಸ್ಕೂಟರ್ ತಂದು ಇನ್ನೂ ತಿಂಗಳಾಗಿರಲಿಲ್ಲ. ರಮೇಶ ತನ್ನ ಗೆಳೆಯನನ್ನು ಕೂರಿಸಿಕೊಂಡು ತುರ್ತು ಕೆಲಸವೆಂದು ಹೊರಟಿದ್ದ. ಅಂದು ತಾಯಿಗೆ ಬೇಗ ಬರುವುದಾಗಿ ಹೇಳಿ ಮನೆ ಬಿಟ್ಟಿದ್ದ. ಸ್ಕೂಟರಿನ ವೇಗ ಸ್ವಲ್ಪ ಹೆಚ್ಚೇ ಇತ್ತು. ಇದಕ್ಕಿದ್ದಂತೆ ಎದುರಿನಿಂದ ಬಂದ ಪಿಕಪ್ ವಾಹನವೊಂದಕ್ಕೆ ಸ್ಕೂಟರ್ ಹೊಡೆದೇ ಬಿಟ್ಟಿತ್ತು. ಕ್ಷಣ ಮಾತ್ರದಲ್ಲಿ ರಸ್ತೆಗೆ ಎಸೆಯಲ್ಪಟ್ಟ ರಮೇಶ ಮತ್ತು ಸ್ನೇಹಿತ ರಕ್ತದ ಮಡುವಿನಲ್ಲಿದ್ದರು. ಅರೆಕ್ಷಣ ಹೊರಳಾಡಿದ ಇಬ್ಬರ ದೇಹಗಳೂ ನಿಶ್ಚಲಗೊಂಡವು. ಆ ಮೂಲಕ ಯಶೋಧಾಳಿಗೆ ಇದ್ದ ಏಕ ಮಾತ್ರ ಆಸರೆಯೂ ಬೂದಿಯಾಯಿತು.
ರಮೇಶ ಇನ್ನೂ ಹತ್ತೊಂಬತ್ತರ ಹುಡುಗ. ಜಗತ್ತನ್ನು ಇನ್ನೂ ಅರಿಯುವ ವಯಸ್ಸಾಗಿರಲಿಲ್ಲ. ಹುಡುಗಾಟಿಕೆಯಲ್ಲಿ ಸುಂದರ ಕನಸಿನಲ್ಲಿ ತೇಲಾಡುವ ಹರೆಯ. ಸ್ಕೂಟರ್ ಕೊಳ್ಳುವುದು ಮತ್ತು ಅದರಲ್ಲಿ ಓಡಾಡುವ ಕನಸು ಆತನ ಬದುಕನ್ನು ಕೊನೆಗೊಳಿಸಿದ್ದಂತು ಸತ್ಯ. ಇಂತಹ ನೂರಾರು ಹುಡುಗರು, ಯುವಕರು ಇಂದು ಪ್ರತಿ ದಿನ ಬೀದಿಪಾಲಾಗುತ್ತಿರುವುದು ಖೇದಕರ. ಮಕ್ಕಳಿಗೆ ದ್ವಿಚಕ್ರದ ಅಪಾಯದ ಬಗ್ಗೆ ಅರಿವು ಮೂಡಿಸುವುದು ಸಾಮಾಜಿಕ ಬದ್ಧತೆಯಾಗಿದೆ. ಅಷ್ಟಕ್ಕೂ ಹುಚ್ಚೆದ್ದು ಓಡಾಟ ನಡೆಸುವ ಯುವಕರ ಬಗ್ಗೆ ಇತರ ಚಾಲಕರು ಸ್ವಯಂ ಎಚ್ಚರ ವಹಿಸಿದರೆ ಅದೆಷ್ಟೋ ಮನೆಗಳ ಮಕ್ಕಳು ಬೀದಿ ಹೆಣವಾಗುವುದನ್ನು ತಪ್ಪಿಸಬಹುದು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************
ನನ್ನ ಲೇಖನಗಳ ಸಂಗ್ರಹ (ಒಟ್ಟು62) ಪುಸ್ತಕದ ರೂಪದಲ್ಲಿ ಲಭ್ಯವಿದೆ. ಆಸಕ್ತಿಯುಳ್ಳ ಓದುಗರು ಸಂಪರ್ಕಿಸಬಹುದು....... ಯಾಕೂಬ್ ಎಸ್ ಕೊಯ್ಯೂರು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ
ಮುಖ್ಯ ಶಿಕ್ಷಕರು,
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************