-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 43

ನಿಷ್ಪಾಪಿ ಸಸ್ಯಗಳು : ಸಂಚಿಕೆ - 43

ನಿಷ್ಪಾಪಿ ಸಸ್ಯಗಳು : ಸಂಚಿಕೆ - 43
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

      
ಪ್ರೀತಿಯ ಮಕ್ಕಳೇ...
     ಹೇಗಿದ್ದೀರಿ? ಪರೀಕ್ಷೆಗಳೆಂಬ ವಾರ್ಷಿಕ ಉತ್ಸವಗಳು ನಡೆಯುತ್ತಿವೆಯಲ್ಲವೇ! ಹೌದು ಮಕ್ಕಳೇ, ಈ ಉತ್ಸವಗಳ ನಡುವೆ ಮಂಗನ ಬಾವು ಅಥವಾ ಕೆಪ್ಪಟೆರಾಯ ಕೆಲವೆಡೆ ವಕ್ಕರಿಸಿ ತೊಂದರೆ ಕೊಡುತ್ತಿದ್ದಾನೆ ಎಂದು ವರದಿಗಳನ್ನೂ ನೋಡುತ್ತಿದ್ದೇವೆ. ಕೆನ್ನೆಗಳು ಊದಿಕೊಂಡು ಜ್ವರ, ತಲೆನೋವು ಹಾಗೂ ಇನ್ನಿತರ ಲಕ್ಷಣಗಳ ಜೊತೆಗೆ ಆಯುರ್ವೇದ ವೈದ್ಯರಲ್ಲಿಗೆ ಹೋದರೆ ಔಷಧಿ ನೀಡುವ ಜೊತೆಗೆ ಪೆತ್ತ ತಜಂಕ್ ನ ಸೊಪ್ಪು ಸಿಕ್ಕಿದ್ರೆ ಸುಣ್ಣ ಸೇರಿಸಿ ಅರೆದು ಹಚ್ಚಿ ಅನ್ನುತ್ತಾರೆ. 
      ಅರೆ! ಏನಿದು ಪೆತ್ತ ತಜಂಕ್ ಅಂತ ಹುಡುಕಲು ಹೊರಡುವಾಗ ಮನೇಲಿರುವ ಅಜ್ಜಿ ಹೋಗಿ ಹುಡುಕಿ ತರುತ್ತಾರೆ. "ಹಿಂದೆ ನಾವು ಅದನ್ನೇ ಅರೆದು ಹಚ್ಚುತ್ತಿದ್ದೆವು.. ಈಗ ನಮ್ಮ ಮಾತು ಯಾರು ಕೇಳ್ತಾರೆ" ಅಂತ ಒಂದು ಮಾತನ್ನೂ ಸೊಪ್ಪಿನ ಜೊತೆ ಜೊತೆಗೆ ಸೇರಿಸುತ್ತಾರೆ.
        ಕಾಡು ಹಾಲೆ ಬಳ್ಳಿ, ಹೆಗಲ ಸೊಪ್ಪು, ಹತ್ತಿ ಹಾಲಿನ ಸಸ್ಯ, ಹಸಿರು ಮೇಣದ ಹೂವು, ಸೀನುವ ರೇಷ್ಮೆ ಎಂದೆಲ್ಲಾ ಕನ್ನಡದಲ್ಲಿ ಹೆಸರಿರುವ ಈ ಬಳ್ಳಿಯನ್ನು ತುಳುವಿನಲ್ಲಿ ಪೆತ್ತ ತಜಂಕ್, ಎರ್ಮೆ ತಜಂಕ್, ಪುಗೆಲ್ ತಪ್ಪು ಎಂದೆಲ್ಲಾ ಕರೆಯುವರು. ಸಂಸ್ಕೃತ ದಲ್ಲಿ ಬಹುಪರ್ಣಿ. ಇತರ ಭಾಷೆಗಳಲ್ಲಿ ಜೀವಧಾತ್ರಿ, ಜೀವಂತಿ, ಮಧುರಸಾ, ಹೇಮಲತಾ, ಅಂಗಾರವಲ್ಲಿ.. ಇಂತಹ ಮೃದು ಮಧುರ ಹೆಸರುಗಳನ್ನಿತ್ತ ಸಸ್ಯಮಿತ್ರರಿಗೆ ಶರಣೆನ್ನಲೇ ಬೇಕು ಅಲ್ಲವೇ?
        ಭಾರತ, ಚೀನಾ, ಏಷ್ಯಾದೆಲ್ಲೆಡೆ ಕಾಣಸಿಗುವ ಈ ನಿಷ್ಪಾಪಿ ಸಸ್ಯದ ಸಸ್ಯಶಾಸ್ತ್ರೀಯ ಹೆಸರು Marsdenia volubilis (ಮಾಸ್ಡೆನಿಯಾ ಮೊಲುಬಿಲಿಸ್). ಕುಟುಂಬ Apocynaceae (ಅಪೊಸಿನೇಸಿಯೇ). ಈ ಬಳ್ಳಿಯ ಎಲೆಗಳು ದುಂಡಾಗಿದ್ದು ಎಲೆಯ ತುದಿಗಳು ಚೂಪಾಗಿವೆ. ತಿಳಿಹಸಿರು ವರ್ಣದ ಮೃದುವಾಗಿರುವ ಎಲೆಗಳನ್ನು ಪುಡಿಮಾಡಿದಾಗ ಹಸಿ ಮೆಣಸಿನ ಪರಿಮಳ ಹೊಂದಿರುತ್ತವೆ. ಈ ಬಿಸಿಲ ಬೇಗೆಯಲ್ಲೂ ಎಲೆಗಳು ರಸಭರಿತವಾಗಿದ್ದು ಯಾವುದೇ ಗಿಡ ಬಳ್ಳಿಗಳ ಮೇಲೆ ನಿಧಾನಕ್ಕೆ ಬೆಳೆಯುವ ನಯವಾದ ಬಳ್ಳಿ. ಎಷ್ಟು ಬೆಳೆದರೂ ಐದು ಹತ್ತಡಿ ವ್ಯಾಸದೊಳಗಷ್ಟೇ ಇರಬಹುದು. ಹತ್ತು ಹನ್ನರೆಡು ಅಡಿಗಳೆತ್ತರ ಏರಬಹುದು. ಎಪ್ರಿಲ್ ನಿಂದಾಚೆಗೆ ಕಾಣಿಸುವ ಇದರ ಹಸಿರು ಹಳದಿ ಹೂವುಗಳು ಸುಂದರ ವಿನ್ಯಾಸದಲ್ಲಿರುತ್ತವೆ. ಕಾಯಿಯಂತೂ ಇನ್ನೂ ವಿಶೇಷವಾದ ರಚನೆಯಾಗಿದೆ. ಕೊಂಬಿನಂತಹ ಅಥವಾ ಉದ್ದನೆ ಹತ್ತಿ ಕೋಡುಗಳಂತೆ ಒಂದು ಗೊಂಚಲಲ್ಲಿ ಮೂರು ನಾಲ್ಕರಂತೆ ಕಾಣಿಸುತ್ತವೆ. ಈ ಕೋಡುಗಳು ಹಸಿರಾಗಿ ನಯವಾಗಿದ್ದು ಒಣಗುವಾಗ ಇಬ್ಭಾಗವಾಗುತ್ತವೆ. ಅದರ ಒಳಗೆ ಒತ್ತೊತ್ತಾಗಿ ಜೋಡಿಸಲ್ಪಟ್ಟ ರೇಷ್ಮೆಯಂತಹ ನುಣುಪು ಕೂದಲುಗಳು ಒಂದು ಕಿರೀಟದಂತಹ ಹಗುರವಾದ ಬೀಜಕ್ಕೆ ಅಂಟಿಕೊಂಡಿರುತ್ತದೆ. ಗಾಳಿಗೆ ಕೋಡು ಒಡೆದರಾಯ್ತು... ಈ ಬಿಳಿ ಮೀಸೆ ಹೊತ್ತು ಸಾಗುವ ಬೀಜಗಳು ಮಕ್ಕಳ ಕೈಗೆ ಸಿಕ್ಕಿಬಿದ್ದು 'ಅಜ್ಜನ ಮೀಸೆ ' ಎಂಬ ಆಟದ ವಸ್ತುವಾಗುತ್ತದೆ. ಬೀಜ ಪ್ರಸಾರಕ್ಕೆ ಪ್ರಕೃತಿ ರಚಿಸಿಕೊಂಡ ಛದ್ಮವೇಷವಿದು! 
         ಗದ್ದೆ ಉಳುವ ಎತ್ತು ಕೋಣಗಳ ಹೆಗಲಿಗೆ ನೊಗ ಇಟ್ಟು ಇಟ್ಟೂ ಅಲ್ಲಿ ಚರ್ಮವೇ ದಡ್ಡುಕಟ್ಟಿ ಹೋಗಿರುತ್ತದೆ. ಅದನ್ನು ಹೋಗಲಾಡಿಸಿ ಚರ್ಮವು ಮೃದುವಾಗಲು ಈ ಸೊಪ್ಪು ಜಜ್ಜಿ ಹಚ್ಚುವುದರಿಂದ ಪುಗೆಲ್ ತಪ್ಪು ಅಥವಾ ಹೆಗಲ ಸೊಪ್ಪು ಎಂಬ ಹೆಸರು ಬಂದಿದೆ. ಹಾಲು ಕರೆಯುವ ದನ ಅಥವಾ ಎಮ್ಮೆಗಳಿಗೆ ಕೆಚ್ಚಲು ಬಾವು ರೋಗ ಬಂದಾಗ ಇದರ ಸೊಪ್ಪು ಅರೆದು ಹಚ್ಚುತ್ತಿದ್ದರು. ಅದಕ್ಕಾಗಿಯೇ ಪೆತ್ತ ತಜಂಕ್, ಎರ್ಮೆ ತಜಂಕ್ ಎಂಬ ಅನ್ವರ್ಥ ನಾಮ ಪಡೆದಿದೆ. ಇದರ ಬೇರನ್ನು ಕತ್ತರಿಸಿ ಅದು ಹೊರಸೂಸುವ ರಸ ಮೂಗಿಗೆ ಸವರಿದರೆ ಸೀನುವಿಕೆ ಉಂಟಾಗುತ್ತದೆ. ಹಾಗಾಗಿ ಇದು ಸೀನು ರೇಷ್ಮೆ. 
      ಶ್ರೀಲಂಕಾ ದಲ್ಲಿ ಮಾರುಕಟ್ಟೆಯಲ್ಲಿ ಮಾರಲ್ಪಡುವ ಈ ಸಸ್ಯದ ಸೊಪ್ಪು ರಿಂಗ್ ವರ್ಮ್, ಜ್ವರ, ಮೂತ್ರದ ಅಸ್ವಸ್ಥತೆ, ಕಣ್ಣುನೋವು ಇತ್ಯಾದಿಗಳಿಗೂ ಔಷಧಿಯಾಗಿದೆ. 
       ಮಕ್ಕಳೇ, ಕಾಡಿನ ನಾಶದಿಂದಾಗಿ ಈ ಬಳ್ಳಿಯನ್ನು ಹುಡುಕಲು ಕಷ್ಟಪಡುವಂತಾಗಿದೆ. ಪ್ರಯೋಜನ ಪಡೆಯುತ್ತಿದ್ದ ತಲೆಮಾರು ಉರುಳಿ ಇಂದೆಲ್ಲವೂ ಹಣ ಮತ್ತು ಮಾತ್ರೆ ಯ ರೂಪ ಪಡೆದಿದೆ. ನಾವು ಜಾಗೃತರಾಗಿ ಈ ನಿಷ್ಪಾಪಿ ಸಸ್ಯಗಳನ್ನು ಉಳಿಸಿಕೊಳ್ಳಲೇ ಬೇಕು ಅಲ್ಲವೇ
    ಸರಿ ಮಕ್ಕಳೇ.. ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.. ನಮಸ್ಕಾರ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************


Ads on article

Advertise in articles 1

advertising articles 2

Advertise under the article