-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 20

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 20

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 20
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203         

ಪ್ರೀತಿಯ ಮಕ್ಕಳೇ... ಕನಕದಾಸರ ಈ ಭಕ್ತಿ ಗೀತೆಯನ್ನು ಎಲ್ಲರೂ ಕೇಳಿರುತ್ತೀರಿ. 
'ನೀ ಮಾಯೆಯೊಳಗೊ 
ನಿನ್ನೊಳು ಮಾಯೆಯೋ'. 
ಇಲ್ಲಿ ದಾಸರು ಜ್ಞಾನ ಸಮುದ್ರದಲ್ಲಿ ಈಜುತ್ತಾ ಗೊಂದಲಕ್ಕೊಳಗಾಗಿ ಹೀಗೆ ಕೇಳುತ್ತಾರೆ. ಅವರು ಮುಂದುವರಿದು
'ಬಯಲು ಅಲಯದೊಳಗೊ 
ಆಲಯವು ಬಯಲೊಳಗೊ
ಬಯಲು ಆಲಯವೆರಡು ನಯನದೊಳಗೊ
ನಯನ ಬುದ್ದಿಯ ಒಳಗೊ 
ಬುದ್ಧಿ ನಯನದ ಒಳಗೊ
ನಯನ ಬುದ್ಧಿಗಳೆರಡು ನಿನ್ನೊಳಗೊ ಕೃಷ್ಣಾ' ಎನ್ನುತ್ತಾರೆ.

ಹೌದು ತೆರೆದ ಬಯಲು ಗೋಡೆಗಳಿಂದ ಬಂಧಿಯಾಗಿ ಆಲಯವಾದದ್ದು ಹೇಗೆ ಎಂಬುದೇ ಜಿಜ್ಞಾಸೆ. ಮನುಷ್ಯ ವಿಶ್ವ ಮಾನವನಾಗಿದ್ದ. ಕುವೆಂಪು ಅವರು 
"ಎಲ್ಲಿಯೂ ನಿಲ್ಲದಿರು 
ಮನೆಯನೆಂದು ಕಟ್ಟದಿರು 
ಕೊನೆಯನೆಂದೂ ಮುಟ್ಟದಿರು" ಎಂದು ಅಲವತ್ತುಕೊಂಡರೂ ಆಲಯ ನಿರ್ಮಿಸಿ ಏಕಾಂಗಿಯಾಗಿ ಅಲ್ಪ ಮಾನವನಾದ. ದಾಸರು ಇಲ್ಲಿ ಬಯಲುತನ ಬೇಕು ಎಂಬ ಆಶಯ ತೋರ್ಪಡಿಸುತ್ತಿದ್ದಾರೆ ಅನ್ನಿಸಿದರೆ ಬಯಲು ಆಲಯವಾಗದಿದ್ದರೆ ಜೀವಾಂಕುರವಾಗುವುದಾದರೂ ಹೇಗೆ ಎಂಬುದು ನನ್ನ ತುಡಿತ. ಹೌದು ಎಲ್ಲಿಂದ ಬಂತು. ಹೇಗೆ ಉತ್ಪತ್ತಿಯಾಯಿತು ಎಂಬ ಗೊಂದಲವಿದ್ದರೂ ನಮ್ಮ ಸುತ್ತಲೂ ಇರುವ ನೀರು ಅಮೈನೋ ಆಮ್ಲಗಳು (ಪ್ರೋಟೀನ್‌ಗಳು), ಶರ್ಕರ ಪಿಷ್ಟಗಳು, ನ್ಯೂಕ್ಲಿಯಿಕ್ ಆಮ್ಲಗಳನ್ನು ಹೊಂದಿ ಹದ ರಸಾಯನವಾದದ್ದು ನಾವು ಇಲ್ಲಿಯವರೆಗೆ ಓದುತ್ತಾ ಬಂದಿದ್ದೇವೆ. ಇದು ಬಯಲು. ಎಲ್ಲೆಲ್ಲೂ ರಸಾಯನ. ನೀವು ಜೀವ ಶಾಸ್ತ್ರದ ಕಲಿಕೆ ಆರಂಭಿಸಬೇಕಾದರೆ ನಿಮ್ಮ ಗುರುಗಳು ಜೀವಕೋಶವು ಜೀವಿಯ ರಚನಾತ್ಮಕ ಮತ್ತು ಕಾರ್ಯ ನಿರ್ವಾಹಕ ಘಟಕ (structural and functional unit) ಎಂದು ಕೇಳಿದ್ದೀರಿ. ಅಂದರೆ ಈ ಜೀವ ಘಟಕಗಳು ಒಂದು ಪೊರೆಯಿಂದ ಆವೃತವಾದಾಗ ಮಾತ್ರ ಒಂದು ಕೋಶ ರೂಪುಗೊಳ್ಳುವುದು ಎಂದಾಯಿತು ತಾನೆ. ಅಂದರೆ ಬಯಲು ಬಂಧಿಯಾಗಿ ಆಲಯವಾದಾಗ (compartmentalisation) ಮಾತ್ರ ಜೀವೋದ್ಭವ. ಪ್ರಾಜ್ಞರು ಬಯಲಾಗುವುದನ್ನು ಬಯಸಿದರೆ ಜೀವೋತ್ಪತ್ತಿಗೆ ಆಲಯವಾಗಬೇಕಾಗುತ್ತದೆ. ಹಾಗಾದರೆ ಈ ಬಯಲು ಆಲಯವಾಗಿಸಿದ ಈ ಒಡಕು ಶೂರರು ಕಟ್ಟಿದ ಗೋಡೆ ನಿರ್ಮಾಣವೇ ಈ ವಾರದ ಕಲಿಕಾ ವಸ್ತು.

ಜೀವಕೋಶದ ಪೊರೆ ಎಂದರೆ ಒಳಗಿರುವ ವಸ್ತು ಹೊರ ಸೋರದಂತೆ ಹೊರಗಿನ ವಸ್ತು ಒಳ ಹೋಗದಂತೆ ಇರುವ ಒಂದು ನಿರ್ಜೀವ ಪೊರೆ ಅಲ್ಲ. ಅದೊಂದು ಜೀವಂತ ಪೊರೆ. ಕೋಶದ ಒಳ ಹೋಗಬೇಕಾದ ವಸ್ತುಗಳನ್ನು ಮಾತ್ರ ಒಳಗೆ ಬಿಡುವ ಹೊರ ಹಾಕಬೇಕಾದ ವಸ್ತುಗಳನ್ನು ಮಾತ್ರ ಹೊರಗೆ ಬಿಡುವ ಜೀವಂತ ಪೊರೆ. ಈಗ ನೀವು ಕೃತಕ ಬುದ್ಧಿಮತ್ತೆ (artificial intelligence) ಎನ್ನುತ್ತೀರಲ್ಲ ಹಾಗಲ್ಲ ಬದಲಾಗಿ ಅಂತಃ ಪ್ರಜ್ಞೆ ಹೊಂದಿರುವ ಪೊರೆ. ಇದನ್ನು ನಾವು ಮಿತ ಪಾರದರ್ಶಕ ಪೊರೆ (semipermeable membrane) ಎನ್ನುವುದು. ಇದು ಎರಡು ಪದರಗಳ ಫಾಸ್ಫೋಲಿಪಿಡ್ ಗಳು (phospolipids) ಮತ್ತು ಪ್ರೋಟೀನ್‌ಗಳಿಂದ ಮಾಡಲ್ಪಡುತ್ತವೆ. ಈ ಫಾಸ್ಪೋಲಿಪಿಡ್ ಗಳು ದ್ವಿ ಆಕರ್ಷಣ ಗುಣ ಹೊಂದಿರುವಂತವು (amhiphiles). ಇವುಗಳ ಒಂದು ತುದಿ ನೀರಿನ ಆಕರ್ಷಣೆ ಹೊಂದಿದ್ದರೆ ಇನ್ನೊಂದು ತುದಿ ನೀರನ್ನು ದ್ವೇಷಿಸುತ್ತದೆ. ಈಗ ನಮಗೆ ಬೇಕಾದ ಈ ಪ್ರೋಟೀನ್‌ಗಳನ್ನು ರೈಬೋಸೋಮ್‌‌ಗಳು ಸಿದ್ಧಪಡಿಸಿದರೆ ಈ ಫಾಸ್ಫೋಲಿಪಿಡ್ ಗಳನ್ನು ಅಂತರ ಪ್ರದ್ರವ್ಯಜಾಲಗಳು (Endoplasmic Reticulum) ತಮ್ಮ ಅಡುಗೆ ಮನೆಯಲ್ಲಿ ಸಿದ್ದಗೊಳಿಸುತ್ತವೆ. ಆದರೆ ಜೀವ ಪೂರ್ವ (probiotic/abiotic) ಜಗತ್ತಿನಲ್ಲಿ ನಮ್ಮ ಸೃಷ್ಟಿಕರ್ತ ಒಂದೊಂದೆ ಘಟಕಗಳನ್ನು ಜೋಡಿಸಿ ತಯಾರಿಸಬೇಕಿತ್ತಲ್ಲ ಅದು ಹೇಗೆ ಎಂದು ವಿಜ್ಞಾನಿಗಳು 60 ವರ್ಷ ಹುಡುಕಾಡಿದ್ದಾರೆ. ಯೂರೇ - ಮಿಲ್ಲರರ ಹಾಗೆ ಜೀವ ಪೂರ್ವ ಜಗತ್ತಿನ ಪ್ರತಿಕೃತಿ ಸಿದ್ಧಪಡಿಸಿ ಹುಡುಕಾಟ ನಡೆಸಿದ್ದಲ್ಲದೇ ಪ್ರಯೋಗಗಳಿಂದ ಹೊಸ ಹೊಳಹುಗಳನ್ನು ನೀಡಿದ್ದಾರೆ. ವಿಜ್ಞಾನಿಗಳು ಕೊಬ್ಬಿನ ಘಟಕಗಳಾದ ಫೀನಾಲ್ (phenols), ಅಲ್ಕೇನ್ (alkanes), ಕಾರ್ಬಾಕ್ಸಿಲಿಕ್ ಆಮ್ಲ (carboxylic acids), ಜಲಜನಕದ ಸಯನೈಡ್ (HCN) ಗಳಿಗಾಗಿ ಸಮಕಾಲೀನ ಭೂಮಿ ಹಾಗೂ ವ್ಯೋಮದಲ್ಲಿ ಹುಡುಕಾಡಿದ್ದಾರೆ. ಉಲ್ಕೆಗಳಲ್ಲಿ, ಚಂದ್ರನಲ್ಲಿ, ಕ್ಷುದ್ರಗ್ರಹಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಆದ್ದರಿಂದ ಈ ಕೊಬ್ಬು ಕೂಡಾ 'ಆಕಾಶದಿಂದ ಧರೆಗಿಳಿದ ರಂಭೆ' ಎಂಬ ಸಿನಿಮಾ ಹಾಡಿನಂತೆ ತಳ್ಳಿಹಾಕಲಾಗುವುದಿಲ್ಲ. 
ವಾತಾವರಣದಲ್ಲಿ ಲಭ್ಯವಿದ್ದ ಶಕ್ತಿಯ ಮೂಲಗಳಾದ ಸೂರ್ಯನ ಬೆಳಕು, ಅಲ್ಟ್ರಾವಯೋಲೆಟ್ ಕಿರಣಗಳು, ಜ್ವಾಲಾಮುಖಿಯಿಂದ ದೊರೆಯುವ ಶಾಖ ಮತ್ತು ಜಲೋಷ್ಣೀಯ ಕ್ರಿಯೆಗಳು (hydrothermal reactions) ಈ ಕೊಬ್ಬಿನ ಅಣುಗಳ ಸಂಶ್ಲೇಷಣೆಗೆ ಪೂರಕವಾಗಿತ್ತು ಎನ್ನಲಾಗುತ್ತದೆ. ವಾತಾವರಣದಲ್ಲಿ ಸಮೃದ್ಧವಾದ ಸಾರಜನಕ, ಗಣನೀಯವಾಗಿದ್ದ ಇಂಗಾಲದ ಡೈಆಕ್ಸೈಡ್, ಅಲ್ಪ ಪ್ರಮಾಣದಲ್ಲಿದ್ದ ಹೈಡ್ರೊಜನ್ ಸಯನೈಡ್, ಮಿಥೇನ್, ಇಂಗಾಲದ ಮಾನಾಕ್ಸೈಡ್ ಗಳನ್ನು ಬಳಸಿಕೊಳ್ಳಲಾಯಿತು. ವಾತಾವರಣದಲ್ಲಿದ್ದ ಜಲಜನಕದ ಸಲ್ಫೈಡ್ ಬೆಳಕಿನ ಸಮ್ಮುಖದಲ್ಲಿ ವೇಗವರ್ಧಕವಾಗಿ ಕೆಲಸ ಮಾಡಿತು ಮತ್ತು ಜ್ವಾಲಾಮುಖಿಗಳು ಅಗತ್ಯವಾದ ನೀರು ಯುಕ್ತ ಮತ್ತು ಮುಕ್ತ ಮಾಧ್ಯಮವನ್ನೊದಗಿಸಿದವು ಎಂದು ಒಂದು ವಾದ ಹೇಳುತ್ತದೆ. 1992 ರಲ್ಲಿ ಎಶ್ಚೆನ್ಮೋಸರ್ ಮತ್ತು ತಂಡ ಪ್ರಕಟಿಸಿದ ವಾದವೊಂದು ಅಮೈನೋ ಆಮ್ಲಗಳು, N-heterocycles ( ಮುಂದೆ ನ್ಯೂಕ್ಲಿಯಿಕ್ ಆಮ್ಲಗಳಾದವು) ಮತ್ತು ಮತ್ತು ಈ ಒಡಕು ಶೂರರಾದ ಫೊಸ್ಪೋಲಿಪಿಡ್ ಗಳು ಸಮಕಾಲೀನವಾದವುಗಳು ಮತ್ತು ಅವುಗಳ ಸಮಾನ ಮೂಲಪುರುಷ ಜಲಜನದ ಸಯನೈಡ್ ಎಂದು ಹೇಳಿತು. ಇವುಗಳ ಕಾಲಮಾನ 4.0 ಯಿಂದ 3.6 ಬಿಲಿಯನ್ ವರ್ಷಗಳ ನಡುವೆ ಇತ್ತು ಎಂದು ಈ ವಾದ ಮಂಡಿಸಿದ ರವರು ತಮ್ಮದೇ ಸಾಕ್ಷ್ಯಗಳನ್ನು ನೀಡಿದರು. 2017 ರಲ್ಲಿ ಸುದರ್ಲ್ಯಾಂಡ್ ಮತ್ತು ಸಹ ಸಂಶೋಧಕರು RNA, ಫಾಸ್ಪೋಲಿಪಿಡ್ಸ್ ಮತ್ತು ಅಮೈನೋ ಆಮ್ಲಗಳ ಮೂಲ ಒಂದೇ ಮತ್ತು ಅದು ಭೂಮಿಯ ಹೊರಮೂಲದ್ದೂ ಆಗಿರಬಹುದು ಎಂದಿದ್ದಾರೆ. ಆದರೆ ಎರಡೂ ವಾದಗಳಲ್ಲಿ ಈ ಫಾಸ್ಪೋಲಿಪಿಡ್ ಗಳ ತಯಾರಿಕಾ ಸರಣಿ ಒಂದೇ ಆಗಿರುವುದು ಗಮನಾರ್ಹ.

ಇವು ಓದಲು ರೋಚಕ. ಇದಕ್ಕಿಂತ ರೋಚಕ ಆದರೆ ಸತ್ಯಕ್ಕೆ ಸಮೀಪದ ವಾದ ಸರಣಿಯನ್ನು ಮಂಡಿಸಲು ನಿಮಗೆ ವಿಫುಲ ಅವಕಾಶಗಳಿವೆ. ಆದರೆ ಇರುವ ಸವಾಲು ಎಂದರೆ ನೀವು ಶುದ್ದ ವಿಜ್ಞಾನದ (pure science) ಅಧ್ಯಯನವನ್ನು ಕೈಗೆತ್ತಿಕೊಳ್ಳುವುದು. ಇಲ್ಲಿಯವರೆಗೆ ಜೀವಾಂಕುರಕ್ಕೆ ಅಗತ್ಯ ಭೂಮಿಕೆ ಹೇಗೆ ಸಿದ್ಧವಾಯಿತು ಎಂಬುದನ್ನು ತಿಳಿದೆವು ಇನ್ನು ಮುಂದೆ ಜೀವಿ ಸಂಕೀರ್ಣತೆಯ ಬಗ್ಗೆ ತಿಳಿಯೋಣ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 


Ads on article

Advertise in articles 1

advertising articles 2

Advertise under the article