-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 107

ಸ್ಫೂರ್ತಿಯ ಮಾತುಗಳು : ಸಂಚಿಕೆ - 107

ಸ್ಫೂರ್ತಿಯ ಮಾತುಗಳು : ಸಂಚಿಕೆ - 107
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 

            
     ವಿಶಾಲವಾದ ಭೂಮಿಯಿರುವವನು ಶ್ರೀಮಂತ. ಹಿಂದೆ ಸಾಮ್ರಾಟರಾದವರನ್ನು ಸಾಮ್ರಾಜ್ಯದ ವಿಸ್ತಾರದ ಆಧಾರದ ಮೇಲೆ ಚಕ್ರವರ್ತಿಯೆಂದು ಅಭಿಷೇಕಿಸುತ್ತಿದ್ದರು. ಸಿರಿವಂತಿಕೆ, ಅರಸೊತ್ತಿಗೆ ಮುಂತಾದುವು ಹಣಬಲ, ಭುಜಬಲ, ಸ್ಥಾನ ಬಲ ಮತ್ತು ಅಧಿಕಾರಬಲಗಳ ಮೇಲೆ ಅಂಕಿತಗೊಳಿಸಲ್ಪಡುತ್ತಿತ್ತು. ರಾವಣನು ಲಂಕೆಯ ಅಧಿಪತಿ, ವೀರಪ್ಪನ್ ಕಾಡಿನ ವೀರ, ಅಂಗುಲಿಮಾಲ ಗಂಡೆದೆಯನ್ನೂ ನಡುಗಿಸುತ್ತಿದ್ದ ದರೋಡೆಕೋರ. ಅವರ ಮನಸ್ಸು ವಿಶಾಲವಾಗಿತ್ತೇ ಎಂದರೆ ಖಂಡಿತ ಅವರೆಲ್ಲರೂ ಶೂನ್ಯ ಮನಸ್ಕರು. ಹಣ ಬಲ, ಪದ ಬಲ, ಭುಜ ಬಲ, ಜಾತಿ ಬಲ.... ಇವು ಯಾವುದಿರದಿದ್ದರೂ ವಿಶಾಲ ಮನಸ್ಸಿರುವವರು ನಿತ್ಯ ವಂದನೀಯರು, ಅವರೇ ಸಜ್ಜನ ಸಾಮ್ರಾಟರು ಅಥವಾ ಚಕ್ರವರ್ತಿಗಳು.
          ಭೂಮಿಯ ವಿಸ್ತಾರದಳತೆಗೆ ಮಾಪನವಿದೆ. ಸಂಪತ್ತನ್ನೂ ಎಣಿಸಿ ಹೇಳಬಹುದು. ಆದರೆ ಮನೋವೈಶಾಲ್ಯಕ್ಕೆ ಮಾಪನವಿದೆಯೇ? ಮನಸ್ಸು ಎಷ್ಟು ವಿಶಾಲವಾಗಿದೆಯೆಂಬುದನ್ನು ಅಳೆಯಲಾಗದಿದ್ದರೂ ಅವಲೋಕನದಿಂದ ತಿಳಿಯಲು ಸಾಧ್ಯವಿದೆ. ಮಾತಿನಲ್ಲಿ ನಮ್ರತೆ, ಹಿರಿಯರಲ್ಲಿ ಗೌರವ, ಕಿರಿಯರಲ್ಲಿ ಆದರ, ಗೆಳೆಯರಲ್ಲಿ ಅನ್ಯೋನ್ಯತೆ, ಬಡವರಲ್ಲಿ ದಯೆ, ಅನಾರೋಗಿಗಳು ಮತ್ತು ಅಸಹಾಯಕರಲ್ಲಿ ಅನುಕಂಪ ಇವು ವಿಶಾಲ ಮನಸ್ಸಿನವರ ಪ್ರಮುಖ ಲಕ್ಷಣ. ಮನೆಗೆ ಬಂದವರನ್ನು ಉಪಚರಿಸುವುದರಲ್ಲಿ ಕಾಳಜಿ ವಹಿಸುವುದು, ತಾನು ನೀಡುವ ಆತಿಥ್ಯದಲ್ಲಿ ಲೋಪವಾಗಬಾರದಲ್ಲ ಎಂಬ ವಾಂಛೆ ವಿಶಾಲ ಮನಸ್ಕರಲ್ಲಿ ಮಾತ್ರವಿರುತ್ತದೆ. ಇವರನ್ನು ಉಪಚರಿಸುವುದರಿಂದ ಮುಂದೆ ತನಗೆ ಏನಾದರೂ ಲಾಭವಾಗಬಹುದೆಂಬ ನಿರೀಕ್ಷೆಯಿದ್ದರೆ ಅದು ಸ್ವಾರ್ಥವೇ ಹೊರತು ವಿಶಾಲ ಮನಸ್ಸಿನ ಪ್ರತೀಕವಲ್ಲ.
        ವಿಶಾಲ ಮನಸ್ಸಿಗೆ ಸೀಮಿತ ಪರಿಧಿಯಿರುವುದಿಲ್ಲ. ಜಾತಿ, ಧರ್ಮ, ಅಂತಸ್ತು, ಅಧಿಕಾರ, ಉಡುಪು ತೊಡುಪು, ವಯಸ್ಸು, ಲಿಂಗ ಇತ್ಯಾದಿಗಳನ್ನು ಪರಿಗಣಿಸದಿರುವುದೂ ಮನಸ್ಸಿನ ವೈಶಾಲ್ಯದ ದರ್ಪಣ. ಒಂದು ಮನೆಯಲ್ಲಿ ತಂದೆ, ತಾಯಿ, ಮಗ ಮತ್ತು ಸೊಸೆಯಿದ್ದರು. ಕಡಬಡವರವರು. ಆ ದಿನ ಚಪಾತಿ ಮಾಡಿದ್ದರು. ಲೆಕ್ಕ ಮಾಡಿ ಎಂಟೇ ಚಪಾತಿ ಮಾಡಲು ಮಾತ್ರವೇ ಹಿಟ್ಟಿತ್ತು. ತಾಯಿಯು ಚಪಾತಿಗಳನ್ನು ನಾಲ್ಕು ತಟ್ಟೆಗೆ ಸಮಾನವಾಗಿ ಬಡಿಸಿದಳು. ಅಷ್ಟರಲ್ಲಿ ಕಡು ಬಡ ವೃದ್ಧೆಯೊಬ್ಬರು ಆ ಮನೆಗೆ ಬಂದು ಕರೆ ಗಂಟೆ ಒತ್ತಿದರು. ಚಪಾತಿ ತಿನ್ನ ತೊಡಗದೇ ಇದ್ದ ಅವರೆಲ್ಲರೂ ಬಾಗಿಲ ಬಳಿ ಬಂದರು. ವೃದ್ಧೆಯನ್ನು ಒಳಗೆ ಕರೆದು ಕುಳ್ಳಿರಿಸಿ ಬಾಯಾರಿಕೆ ನೀಡಿ ಪರಸ್ಪರ ಪರಿಚಯಿಸಿದರು. ವೃದ್ಧೆ ತಾನು ಹಸಿದಿರುವುದಾಗಿ ಹೇಳಿದರು. ತಂದೆಯು ತನ್ನ ಪಾಲಿನ ಚಪಾತಿಗಳನ್ನು ಬಟ್ಟಲು ಸಮೇತ ವೃದ್ಧೆಗೆ ನೀಡಿದರು. ಹಸಿವು ಇಂಗಲಿಲ್ಲ ಎಂದೆಣಿಸಿದ ತಾಯಿ ತನ್ನ ಬಟ್ಟಲಿನ ಚಪಾತಿಗಳನ್ನೂ ನೀಡಿದಳು. ವೃದ್ಧೆ ಕುಳಿತಲ್ಲಿಂದ ಏಳಲಿಲ್ಲ. ಮಗನ ತಟ್ಟೆಯನ್ನೂ ಖಾಲಿ ಮಾಡಲಾಯಿತು. ಸೊಸೆಯ ಪಾಲನ್ನೂ ಬಡಿಸಲಾಯಿತು. ವೃದ್ಧೆ ತನ್ನ ಹೊಟ್ಟೆ ತುಂಬಿತೆಂದು ಸಮಾಧಾನದಿಂದ ಎದ್ದರು. ವೃದ್ಧೆ ತಿಂದ ತಟ್ಟೆಗಳನ್ನು ಎತ್ತಲು ತಾಯಿ ಬಾಗಿದಳು. ಬಟ್ಟಲೆತ್ತುತ್ತಾ ನಿಂತು ನೋಡಿದರೆ ಅಲ್ಲಿ ವೃದ್ಧೆಯಿರಲಿಲ್ಲ. ಸಾಕ್ಷಾತ್ ಲಕ್ಷ್ಮೀ ದೇವಿ ಪ್ರತ್ಯಕ್ಷಳಾಗಿದ್ದಳು.
      ಮನೆಯವೆರೆಲ್ಲರ ವಿಶಾಲ ಮನಸ್ಸನ್ನು ಈ ಕಥೆ ವಿವರಿಸುತ್ತದೆ. ತಮ್ಮ ಹಸಿವನ್ನೂ ಲೆಕ್ಕಿಸದೆ ಇತರರ ಹಸಿವನ್ನು ಇಂಗಿಸುವ ಮನೋಗುಣ ಭಗವಂತನ ಅನುಗ್ರಹಕ್ಕೆ ಪಾತ್ರವಾಗುತ್ತದೆ. ವಿಶಾಲ ಮನಸ್ಸಿಗಿಂತ ಮಿಗಿಲಾದ ಸಂಪತ್ತು ಯಾವುದೂ ಇಲ್ಲ. ಭಾರೀ ಸಂಪತ್ತಿನ ಮಾಲಕನಾದರೂ ಮನೋಸಂಪತ್ತು ಶೂನ್ಯವಾಗಿದ್ದರೆ ಆತ ಭಗವಂತನ ದೃಷ್ಟಿಯಲ್ಲಿ ಶಾಪಗ್ರಸ್ಥನೇ ಆಗುತ್ತಾನೆ. ಅವನಲ್ಲಿ ಪಾಪದ ಬೃಹತ್ ಭಾಂಡವೇ ತುಂಬಿರುತ್ತದೆ. ನಾವೂ ವಿಶಾಲಮನಸ್ಸಿನವರಾಗೋಣವೇ? ಭಗವದನುಗ್ರಕ್ಕೆ ಭಾಜನರಾಗೋಣ. ನಮಸ್ಕಾರ...
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 


Ads on article

Advertise in articles 1

advertising articles 2

Advertise under the article