ಹಕ್ಕಿ ಕಥೆ : ಸಂಚಿಕೆ - 143
Wednesday, March 20, 2024
Edit
ಹಕ್ಕಿ ಕಥೆ : ಸಂಚಿಕೆ - 143
ಲೇಖಕರು : ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಎಲ್ಲರಿಗೂ ನಮಸ್ಕಾರ. ಈ ವಾರದ ಹಕ್ಕಿ ಕಥೆಗೆ ಸ್ವಾಗತ.... ನಾನೊಂದು ಬಾರಿ ಕರ್ನಾಟಕದ ಹಗರಿಬೊಮ್ಮನಹಳ್ಳಿಯ ಸಮೀಪ ಇರುವ ಅಂಕಸಮುದ್ರ ಎಂಬ ಪಕ್ಷಿಧಾಮಕ್ಕೆ ಹೋಗಿದ್ದೆ. ತುಂಗಭದ್ರಾ ನದಿಯ ಅಣೆಕಟ್ಟೆಯ ಹಿನ್ನೀರಿನ ಪ್ರದೇಶದ ಬಳಿಯಲ್ಲಿರುವಂತಹ ಈ ಪಕ್ಷಿಧಾಮ ಹಲವಾರು ವಲಸೆ ಪಕ್ಷಿಗಳಿಗೆ ಆಶ್ರಯ ತಾಣವೂ ಹೌದು. ಈ ಬಾರಿ ಕರ್ನಾಟಕದ ಮೂರು ಇಂತಹ ತಾಣಗಳನ್ನು ರಾಮ್ಸಾರ್ ಸಂರಕ್ಷಿತ ಪ್ರದೇಶಗಳು ಎಂದು ಘೋಷಿಸಿದ್ದಾರೆ. ಅವುಗಳಲ್ಲಿ ಅಂಕಸಮುದ್ರವೂ ಕೂಡ ಒಂದು.
1971 ರಲ್ಲಿ ಇರಾನ್ ದೇಶದ ರಾಮ್ಸಾರ್ (Ramsar) ಎಂಬಲ್ಲಿ ನಡೆದ ಯುನೆಸ್ಕೋ ಸಮ್ಮೆಳನದಲ್ಲಿ ತೆಗೆದುಕೊಂಡ ಅಂತರ್ರಾಷ್ಟ್ರೀಯ ಪರಿಸರ ಒಪ್ಪಂದದಂತೆ ಅಂತರ್ರಾಷ್ಟ್ರೀಯ ಪ್ರಾಮುಖ್ಯತೆಯ ಜಲಮೂಲ ಪರಿಸರ ಪ್ರದೇಶಗಳನ್ನು ರಾಮ್ಸಾರ್ ತಾಣಗಳೆಂದು ಘೋಷಿಸುತ್ತಾರೆ.
ಈ ವರ್ಷ ಅಂಕಸಮುದ್ರವೂ ಅಂತಹ ಸ್ಥಳ ಎಂಬ ಸ್ಥಾನ ಪಡೆದುಕೊಂಡಿದೆ. ಈಗ ಭಾರತದಲ್ಲಿ ಅಂತಹ 80 ಸ್ಥಾನಗಳಿವೆ. ಹಲವಾರು ಜಾತಿಯ ಪಕ್ಷಿಗಳು ಅಂಕಸಮುದ್ರಕ್ಕೆ ವಲಸೆ ಬರುತ್ತವೆ. ಚಳಿಗಾಲದಲ್ಲಿ ಸೈಬೀರಿಯಾ, ರಷ್ಯಾ, ಮಂಗೋಲಿಯಾ ಕಡೆಯಿಂದ ವಲಸೆ ಬರುವಂತಹ ಒಂದು ಪುಟಾಣಿ ಸುಂದರ ಹಕ್ಕಿಯನ್ನು ನಾವೂ ನೋಡಿದ್ವಿ.
ಈ ಹಕ್ಕಿ ಮುಖ್ಯವಾಗಿ ಕೀಟಗಳನ್ನು, ಸಣ್ಣಪುಟ್ಟ ಜೀವಿಗಳನ್ನು ಹಲ್ಲಿ ಓತಿ ಇಂಥವುಗಳನ್ನ ಹಿಡಿದು ತಿನ್ನುತ್ತದೆ. ಚಳಿಗಾಲದಲ್ಲಿ ಒಣಗಿದ ಪ್ರದೇಶದ ಮುಳ್ಳು ಗಿಡಗಂಟಿಗಳ ಮೇಲೆ ಕುಳಿತುಕೊಳ್ಳುತ್ತದೆ. ಇದರ ಬಣ್ಣವು ಕಂದು ಬಣ್ಣಕ್ಕೆ ಬಹಳ ಹತ್ತಿರ ಇರುವುದರಿಂದ ಇವು ಕೂಗಿದರೆ ಅಥವಾ ಹಾರಾಡಿದರೆ ಮಾತ್ರ ಇದನ್ನು ಗುರುತಿಸುವುದು ಸುಲಭ. ಕಣ್ಣಿನ ಬಳಿ ಇರುವ ಕಪ್ಪು ಪಟ್ಟಿ ಇವುಗಳ ಗುರುತು. ಇವು ಮುಖ್ಯವಾಗಿ ಕೀಟಭಕ್ಷಕರು. ಕೀಟಗಳನ್ನು ಹಿಡಿದು ಮುಳ್ಳಿನ ಗಿಡಗಳ ಮುಳ್ಳಿಗೆ ಚುಚ್ಚಿ ಆಮೇಲೆ ತಿನ್ನುತ್ತವೆ ಎಂದು ಹಲವರು ಹೇಳುತ್ತಾರೆ. ಇವುಗಳನ್ನು ಇಂಗ್ಲಿಷ್ನಲ್ಲಿ ಬುಚ್ಚರ್ ಬರ್ಡ್ ಎಂದು ಕೂಡ ಕರೆಯುತ್ತಾರೆಂತೆ. ಚಳಿಗಾಲ ಮುಗಿದು ಎಪ್ರಿಲ್ ತಿಂಗಳು ಬಂದರೆ ಅವು ತಮ್ಮ ತವರು ಮನೆಯಾದ ಉತ್ತರ ಏಷ್ಯಾದ ಕಡೆಗೆ ವಲಸೆ ಹೋಗುತ್ತವೆ. ಅಲ್ಲಿ ಮರಗಳ, ಮುಳ್ಳಿನ ಪೊದೆಗಳ ನಡುವೆ ಗೂಡು ಮಾಡಿ, ಮರಿ ಮಾಡಿ ಮೊಟ್ಟೆ ಇಟ್ಟು ಮರಿಗಳನ್ನು ಬೆಳೆಸುತ್ತವೆ. ಮತ್ತೆ ಚಳಿಗಾಲ ಪ್ರಾರಂಭವಾದರೆ ಆಹಾರದ ಹುಡುಕಾಟದಲ್ಲಿ ದಕ್ಷಿಣ ಏಷ್ಯಾದ ಭಾರತ, ಮಯನ್ಮಾರ್ ಮೊದಲಾದ ದೇಶಗಳ ಕಡೆಗೆ ವಲಸೆ ಬರುತ್ತವೆ. ಒಮ್ಮೆ ಬಂದ ಜಾಗಕ್ಕೆ ಮತ್ತೆ ಮತ್ತೆ ಮರಳಿ ಬರುವ ಅಭ್ಯಾಸ ಇವುಗಳಿಗೆ ಇದೆ ಎಂದು ಅಧ್ಯಯನಕಾರರು ಹೇಳುತ್ತಾರೆ. ತವರಿಗೆ ಇನ್ನೇನು ಮರಳಲು ಸಿದ್ಧವಾಗಿರುವ ಈ ಹಕ್ಕಿಗಳು ನಿಮ್ಮ ಆಸುಪಾಸಿನಲ್ಲೂ ಇರಬಹುದು.
ಕನ್ನಡದ ಹೆಸರು: ಕಂದು ಕಳಿಂಗ
ಇಂಗ್ಲೀಷ್ ಹೆಸರು: Brown Shrike
ವೈಜ್ಞಾನಿಕ ಹೆಸರು: Lanius cristatus
ಚಿತ್ರ ಕೃಪೆ: ಧವಲ್ ಜೋಷಿ
ಮುಂದಿನ ವಾರ ಹೊಸತೊಂದು ಹಕ್ಕಿ ಕಥೆಯೊಂದಿಗೆ ಭೇಟಿ ಮಾಡೋಣ.
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************