-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 18

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 18

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 18
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
         

ಪ್ರೀತಿಯ ಮಕ್ಕಳೇ... ಕಳೆದ ವಾರ ರೈಬೋಸೋಮ್‌‌ಗಳೆಂಬ ಪ್ರೋಟೀನ್ ತಯಾರಿಕಾ ಕಾರ್ಖಾನೆಗಳ ಬಗ್ಗೆ ತಿಳಿದುಕೊಂಡಿದ್ದೀರಿ. ಕೋಶದೊಳಗಿರುವ ಪ್ರೋಟೀನ್‌ಗಳು ಒಂದೋ ವಿಘಟನೆ ಹೊಂದುತ್ತವೆ ಅಥವಾ ಬೇರೆ ಕಡೆಗೆ ಸಾಗಿಸಲ್ಪಡುತ್ತವೆ. ಆದ್ದರಿಂದ ಅವುಗಳ ತಯಾರಿಕೆ ನಿರಂತರ. ಆದ್ದರಿಂದ ರೈಬೋಸೋಮ್ ಎಂಬ ಕಾರ್ಖಾನೆ ಸದಾ ಕ್ರಿಯಾಶೀಲವಾಗಿಯೇ ಇರಬೇಕಾಗುತ್ತದೆ. ಪ್ರೋಟೀನ್ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳಾದ ಅಮೈನೋ ಆಮ್ಲಗಳು ಕೋಶ ದ್ರವ್ಯದಲ್ಲಿ ಲಭ್ಯವಿರುತ್ತವೆ. ಅಂದರೆ ಅಡುಗೆ ಮನೆಯಲ್ಲಿ ಅಕ್ಕಿ, ಬೇಳೆ, ತರಕಾರಿ, ಸಾಂಬಾರ ಪದಾರ್ಥಗಳು ಲಭ್ಯವಿರುತ್ತವಲ್ಲ ಹಾಗೆ. ಪ್ರೋಟೀನ್ ತಯಾರಿಕೆ ಎಂದರೆ ಅಡುಗೆ ಮಾಡಿದಂತೆ. ಪಾಯಸ, ಬೇಳೆ ಸಾರು, ಗುಜ್ಜೆ ಪಲ್ಯ ಹೀಗೆ ಆದೇಶ ನೀಡಬೇಕಷ್ಟೆ. ಕೋಶದ ಬೇಡಿಕೆ ನೋಡಿ ಆದೇಶ ಸಿದ್ದವಾಗುತ್ತದೆ. ಈಗ ತಯಾರಿಸಬೇಕಾದ ಅಡುಗೆ ಹೇಗಿರಬೇಕು ಅದಕ್ಕೆ ಏನೇನು ಸೇರಿಸಬೇಕು ಎಂಬುದನ್ನು ಮುಖ್ಯ ಅಡುಗೆಯವರು ಪಟ್ಟಿ ಸಿದ್ಧಪಡಿಸುತ್ತಾರೆ. ಈ ಮುಖ್ಯ ಅಡುಗೆಯವರಿಗೆ DNA (deoxyribose nucleic acid) ಅನ್ನುತ್ತೇವೆ. ಈ ಮುಖ್ಯ ಅಡುಗೆಯವರಲ್ಲಿ ನಿಶ್ಚಿತ ಸಂದೇಶ ಹೊಂದಿರುವ ಅಂದರೆ ನಿಶ್ಚಿತ ಅಡುಗೆಯ ಸಾಮಗ್ರಿಗಳ ಸಿದ್ಧಪಟ್ಟಿ ಇರುತ್ತದೆ. ಈ ಸಿದ್ಧ ಪಟ್ಟಿಯೇ ಗುಣಾಣು (gene). ಒಂದು ಅಡುಗೆ ತಯಾರಾಗಬೇಕಾದಾಗ ಆ ಅಡುಗೆಯ ಜೀನ್ ಬಿಡಿಸಿಕೊಂಡು ತನ್ನದೇ ತದ್ರೂಪಿ ಚೀಟಿಯೊಂದನ್ನು (ಸಂದೇಶ) ಸಿದ್ದಪಡಿಸುತ್ತದೆ (transcription). ಈ ತದ್ರೂಪು ಚೀಟಿಯೇ ಸಂದೇಶ ವಾಹಿ RNA (messenger RNA/ mRNA). ಜೀವಕೋಶದ ಒಳಗೆ ತಯಾರಾಗುವ ಇದು ಅಲ್ಲಿಂದ ಕೋಶದ್ರವ್ಯದೊಳಗೆ ದೂಡಲ್ಪಡುತ್ತದೆ. ಇದು ಅಡುಗೆಯವ. ಪ್ರತೀ mRNA ನಿಶ್ಚಿತ ಪ್ರೋಟೀನ್ ಕೋಡಿಂಗ್ ಅನ್ನು ಹೊಂದಿರುತ್ತವೆ. ಇಲ್ಲಿಂದ ಇದನ್ನು ಆಚೆ ಈಚೆಗೆ ಎಂದರೆ ರೈಬೋಸೋಮ್‌ ಗೆ ಸಾಗಿಸುವ ಕೆಲಸ ಕೋಶದ್ರವದ RNA (cytoplasmic RNA) ಯದ್ದು. ಈ mRNA ತನಗೆ ಬೇಕಾದ ಪ್ರೋಟೀನ್ ನ ಸರಣಿ ಸಂದೇಶ (sequencing) ಹೊಂದಿರುತ್ತದೆ. mRNA ಗಳು ಈ ಅಮೈನೋ ಆಮ್ಲಗಳ ನಡುವೆ ಪೆಪ್ಟೈಡ್ ಬಂಧಗಳನ್ನು ರಚಿಸುತ್ತಾ ಹೋಗುವ ಅಂದರೆ ಅಡುಗೆಯ ಪರಿಭಾಷೆಯಲ್ಲಿ ಹೇಳುವುದಾದರೆ ಹುರಿಯುವುದು, ಅರೆಯುವುದು, ಕೊಚ್ಚುವುದು ಇತ್ಯಾದಿ ಕೆಲಸಗಳಲ್ಲಿ ಪುರುಸೊತ್ತಿಲ್ಲದೇ ಇರುವಾಗ ಇದಕ್ಕೆ ಬೇಕಾದ ಸಾಮಗ್ರಿಗಳನ್ನು ತಂದು ಕೊಡಲು ಸಹಾಯಕರು ಬೇಕು ಅಂದರೆ ಅಡುಗೆ ಸಹಾಯಕರು. ನಮ್ಮ ಅಡುಗೆ ಮನೆಯಂತೆ ಎಲ್ಲಾ ಸಾಮಾನುಗಳನ್ನು (ಅಮೈನೋ ಆಮ್ಲಗಳನ್ನು) ಒಬ್ಬನೇ ಅಡುಗೆ ಸಹಾಯಕ ತಂದು ಕೊಡುವುದಿಲ್ಲ. ಪ್ರತಿಯೊಂದು ಅಮೈನೋ ಆಮ್ಲವನ್ನು ನಿರ್ದಿಷ್ಟ ಸಹಾಯಕ ಮಾತ್ರ ತರಬಲ್ಲ. ಏಕೆಂದರೆ ಪ್ರತೀ ಅಮೈನೋ ಆಮ್ಲಕ್ಕೆ ಅದರದೇ ಆದ ಕೋಡಿಂಗ್ (coding) ಇರುತ್ತದೆ. ಈ ಅಡುಗೆ ಸಹಾಯಕರನ್ನು tRNA (transfer RNA) ಎನ್ನುವುದು. ಇವರು ತರುವ ಅಡುಗೆ ಸಾಮಗ್ರಿಗಳನ್ನು (ಅಮೈನೋ ಆಮ್ಲಗಳನ್ನು) ಜೋಡಿಸುತ್ತಾ ಜೋಡಿಸುತ್ತಾ ನಮ್ಮ ಅಡುಗೆಯವರು (mRNA) ಅಡುಗೆ (ಪ್ರೋಟೀನ್) ಸಿದ್ಧಪಡಿಸುತ್ತದೆ. ಇದನ್ನೇ ನಾವು ಪ್ರೋಟೀನ್ ಸಂಶ್ಲೇಷಣೆ (protein synthesis) ಎನ್ನುವುದು.

ಆದರೆ ಇಲ್ಲಿ ಅಡುಗೆ ಸಿದ್ಧಪಡಿಸುವ ಕ್ರಿಯೆ ಇಷ್ಟೊಂದು ನಿಖರವಾಗಿರಬೇಕೆಂದರೆ ನಾಲ್ಕನೆಯ ಸ್ಥಾನದಲ್ಲಿ ಯಾವ ಅಮೈನೋ ಆಮ್ಲವಿರಬೇಕಾಗಿತ್ತೋ ಅದೇ ಅಮೈನೋ ಆಮ್ಲ ನಾಲ್ಕನೆಯ ಸ್ಥಾನದಲ್ಲಿಯೇ ಇರಬೇಕಾಗುತ್ತದೆ. ಇಲ್ಲದೇ ಹೋದರೆ ಸಿದ್ಧವಾದ ಅಡುಗೆಯೇ ಬೇರೆಯಾಗಿ ಬಿಡುತ್ತದೆ. ಮನೆಯಲ್ಲಿ ಅಡುಗೆ ಮಾಡುವಾಗ ಹುಳಿ ಕಡಿಮೆಯಾಯಿತು, ಖಾರ ಜಾಸ್ತಿಯಾಯಿತು ಎಂದರೆ ಪರವಾಗಿಲ್ಲ ಅಮ್ಮ ಊಟ ಚೆನ್ನಾಗಿದೆ ಎಂದು ತಿನ್ನುವ ಗಂಡ ಮತ್ತು ಮಕ್ಕಳಿರುತ್ತಾರೆ. ಆದರೆ ಜೀವ ಕೋಶದಲ್ಲಿ ಇದು ನಡೆಯುವುದಿಲ್ಲ. ಉದಾಹರಣೆಗೆ ನಾಲ್ಕು ಪ್ರೋಟೀನ್ ಸರಪಣಿಗಳಲ್ಲಿ ಒಂದು ಸರಪಣಿ ಸ್ವಲ್ಪ ವ್ಯತ್ಯಾಸವಾದರೂ ಬಿಲ್ಲೆಯಾಕಾರದಲ್ಲಿರಬೇಕಾದ ಕೆಂಪು ರಕ್ತ ಕಣಗಳು ಕತ್ತಿಯ ಹಾಗೆ ಬಾಗಿಕೊಂಡು ಆಮ್ಲಜನಕವನ್ನು ಹೀರುವ ಗುಣವನ್ನು ಗಣನೀಯವಾಗಿ ಕಳೆದುಕೊಂಡು ಬಿಡುತ್ತವೆ. ಇದನ್ನು ನಾವು ಕತ್ತಿ ಕೋಶದ ರಕ್ತ ಹೀನತೆ (sickle celled anemia) ಎಂದು ಕರೆಯುವುದು. ಇದು ನೀಲಗಿರಿ ಬೆಟ್ಟದ ಬುಡಕಟ್ಟು ಜನಾಂಗದವರಲ್ಲಿ ಸರ್ವೇ ಸಾಮಾನ್ಯ. ಇದಕ್ಕೂ ಕಾರಣವಿದೆ ಅದು ಬೇರೆ ಮಾತು.

ಇಲ್ಲಿಯ ವರೆಗೆ ಅಡುಗೆಯವರಾಗಿ, ಅಡುಗೆ ಸಹಾಯಕರಾಗಿ, ನಿರ್ವಾಹಕರಾಗಿ, ಅಡುಗೆ ಮನೆಯ ಯಜಮಾನರಾಗಿ ಕಾರ್ಯನಿರ್ವಾಹಕರಾಗಿ ಕೆಲಸ ಮಾಡುವ mRNA, tRNA, cRNA ಮತ್ತು rRNA ಗಳ ಬಗ್ಗೆ ತಿಳಿದೆವು. ಮುಂದಿನ ಸಂಚಿಕೆಯಲ್ಲಿ ಮುಖ್ಯ ಅಡುಗೆಯವರ (head chef) ಬಗ್ಗೆ ತಿಳಿಯೋಣ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 


Ads on article

Advertise in articles 1

advertising articles 2

Advertise under the article