-->
ಹಕ್ಕಿ ಕಥೆ : ಸಂಚಿಕೆ - 141

ಹಕ್ಕಿ ಕಥೆ : ಸಂಚಿಕೆ - 141

ಹಕ್ಕಿ ಕಥೆ : ಸಂಚಿಕೆ - 141
ಲೇಖಕರು : ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ


              
    ಎಲ್ಲರಿಗೂ ನಮಸ್ಕಾರ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ. ಬೇಸಿಗೆಯ ಒಂದು ದಿನ ಸಂಜೆ ಮನೆಯ ಹೊರಗಡೆ ಕುಳಿತು ಚಹಾ ಕುಡಿತಾ ಇದ್ದೆ. ನಮ್ಮ ಮನೆಯ ಮುಂದೆ ಸ್ವಲ್ಪ ದೂರದಲ್ಲಿ ಇರುವ ಅಡಿಕೆ ತೋಟದ ನೆಲದಲ್ಲಿ ನೆಲದ್ದೇ ಬಣ್ಣದ ಹಕ್ಕಿಯೊಂದು ಕುಪ್ಪಳಿಸುತ್ತಾ ಓಡಾಡುತ್ತಾ ಇರೋದು ಕಾಣಿಸ್ತು. ಹೊಸದಾಗಿ ಅಗೆದ ಕೆಂಪು ಮಣ್ಣಿನ ಬಣ್ಣದ ದೇಹ, ರೆಕ್ಕೆಗಳು ಬೂದು ಬಣ್ಣವೂ ಅಲ್ಲ, ನೀಲಿಯು ಅಲ್ಲ ಅನ್ನಬಹುದಾದ ಬಣ್ಣ. ಮುಖದ ಎರಡು ಕಡೆಗಳಲ್ಲಿ ಆದಿವಾಸಿಗಳು ಬೇಟೆಗೆ ಹೊರಡುವಾಗ ಮುಖದ ಮೇಲೆ ಅಡ್ಡ ನಾಮಗಳನ್ನು ಹಾಕಿಕೊಳ್ಳುತ್ತಾರಲ್ಲ ಆ ತರಹದ ಅಡ್ಡ ಪಟ್ಟಿಗಳು. ತರಗೆಲೆ, ಮಣ್ಣು, ಹುಲ್ಲು ಕೆದರಿ ಅದರೊಳಗಿಂದ ಅದೇನೋ ಹುಳ ಹುಪ್ಪಟೆಗಳನ್ನು ಹಿಡಿದು ತಿನ್ನುತ್ತಾ ಇತ್ತು. ನಾನು ಹೊರಗಡೆ ಬಂದು ಇನ್ನೂ ಸರಿಯಾಗಿ ನೋಡೋಣ ಅಂತ ಕ್ಯಾಮೆರಾ ಹಿಡಿದು ಹೊರಗೆ ಬರುತ್ತೇನೆ... ಹಕ್ಕಿ ಅದೆಷ್ಟು ಬೇಗ ನನ್ನ ಬರುವಿಕೆಯನ್ನು ಗಮನಿಸಿತೋ ಗೊತ್ತಿಲ್ಲ ಹಾರಿ ಹೋಯ್ತು. ಒಂದು ಫೋಟೋನಾದ್ರು ತೆಗಿಬೇಕಿತ್ತಲ್ಲ ಅಂತ ಅಂದುಕೊಳ್ತಾ ಇದ್ದೆ.
     ಇನ್ನೊಂದು ದಿನ ಕರೋನ ಕಾಲದಲ್ಲಿ ಸಾಯಂಕಾಲ ಮನೆ ಹತ್ತಿರದ ಹಳ್ಳಿ ರಸ್ತೆಯಲ್ಲಿ ಸ್ವಲ್ಪ ದೂರ ವಾಕಿಂಗ್ ಅಂತ ಹೋಗಿದ್ದೆ. ಹಿಂದೆ ಬರುವಾಗ ಯಾರದ್ದೋ ಕಾಲ್ ಬಂತು. ಅವರ ಜೊತೆ ಮಾತನಾಡಿ ಕರೆ ಕಟ್ ಮಾಡ್ತೇನೆ, ಹತ್ತಿರದಲ್ಲೇ ಇದ್ದ ಒಂದಿಷ್ಟು ಮರಗಳ ಕಡೆಯಿಂದ ನಿರಂತರವಾಗಿ ಚೆಂದದ ಹಾಡೊಂದು ಕೇಳ್ತಾ ಇತ್ತು. ಮನುಷ್ಯರ ಹಾಡಲ್ಲ ಹಕ್ಕಿ ಹಾಡು. ಹುಡುಕಿ ಹುಡುಕಿ ಕೊನೆಗೆ ಮರದ ಮೇಲೆ ಒಂದು ಕಡೆ ಈ ಹಕ್ಕಿ ಕೂತ್ಕೊಂಡು ಹಾಡೋದು ಕಾಣಿಸ್ತು. ತೋಟದ ಮರೆಯಲ್ಲಿ ತಪ್ಪಿಸಿಕೊಂಡ ಹಕ್ಕಿ ಇದೇ. ಮೊಬೈಲ್ನಲ್ಲಿ ಅದರ ಹಾಡನ್ನು ರೆಕಾರ್ಡ್ ಕೂಡ ಮಾಡಿಕೊಂಡೆ. ಹೆಚ್ಚಾಗಿ ನೆಲದ ಮೇಲೆ ಓಡಾಡ್ತಾ ಆಹಾರ ಹುಡುಕುವ ಈ ಹಕ್ಕಿ ತನ್ನ ಸಂತಾನಾಭಿವೃದ್ಧಿ ಕಾಲ ಬಂತು ಅಂದ್ರೆ ಮರದ ಮೇಲೆ ಕೂತ್ಕೊಂಡು ಬಹಳ ಹೊತ್ತು ನಿರಂತರವಾಗಿ ಹಾಡುತ್ತಿರುತ್ತದೆ. ಗೂಡು ಕಟ್ಟೋದು ಕೂಡ ಅಷ್ಟೇ ಮರದ ಮೇಲೆ. ಕಡ್ಡಿಗಳು ಎಲೆಗಳು ಮೊದಲಾದ ಹಲವು ರೀತಿಯ ವಸ್ತುಗಳನ್ನು ಬಳಸಿ ಪುಟ್ಟ ಗೂಡು ಮಾಡಿ ಮೂರರಿಂದ ನಾಲ್ಕು ಮೊಟ್ಟೆಗಳನ್ನು ಇಟ್ಟು ಸಂತಾನಾವೃದ್ಧಿ ಮಾಡುತ್ತದೆ. ಸಂತಾನಾಭಿವೃದ್ಧಿ ಕಾಲದಲ್ಲಿ ತುಂಬಾ ಸುಂದರವಾಗಿ ಹಾಡುತ್ತದೆ. ನಮ್ಮೂರಿನಲ್ಲಿ ಅಂದ್ರೆ ಕರ್ನಾಟಕ ಮತ್ತು ಪಶ್ಚಿಮ ಘಟ್ಟಗಳ ಸುತ್ತಮುತ್ತ ವರ್ಷ ಪೂರ್ತಿ ಕಾಣಿಸುತ್ತದೆ. ಬಹಳ ನಾಚಿಕೆ ಸ್ವಭಾವದ ಈ ಹಕ್ಕಿ ನಿಮ್ಮ ಆಸು ಪಾಸಿನಲ್ಲಿ ತೋಟ ಕಾಡು ಇದ್ದರೆ ಖಂಡಿತಾ ಇದ್ದೇ ಇರುತ್ತದೆ. ಹುಡುಕುತ್ತೀರಲ್ಲ
ಕನ್ನಡದ ಹೆಸರು: ಕಂದುತಲೆ ನೆಲಸಿಳ್ಳಾರ
ಇಂಗ್ಲೀಷ್ ಹೆಸರು: Orange-headed Thrush 
ವೈಜ್ಞಾನಿಕ ಹೆಸರು: Geokichla citrina
ಚಿತ್ರ : ಅರವಿಂದ ಕುಡ್ಲ
ಮುಂದಿನ ವಾರ ಹೊಸತೊಂದು ಹಕ್ಕಿ ಕಥೆಯೊಂದಿಗೆ ಭೇಟಿ ಮಾಡೋಣ. 
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************



Ads on article

Advertise in articles 1

advertising articles 2

Advertise under the article