ಮಕ್ಕಳ ಕಥೆಗಳು - ಸಂಚಿಕೆ : 04 - ರಚನೆ : ಕೆ ವಿ ಶರಣ್ಯ ಭಟ್
Monday, March 4, 2024
Edit
ಮಕ್ಕಳ ಕಥೆಗಳು - ಸಂಚಿಕೆ : 04
ಕಥೆ ರಚನೆ : ಕೆ ವಿ ಶರಣ್ಯ ಭಟ್
5ನೇ ಎ ತರಗತಿ
ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ
ಕಿಲ್ಪಾಡಿ ಮುಲ್ಕಿ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಆ ರಾಜನಿಗೆ ಇಬ್ಬರು ಮಕ್ಕಳಿದ್ದರು. ಒಬ್ಬಳ ಹೆಸರು ನವ್ಯ, ಇನ್ನೊಬ್ಬಳ ಹೆಸರು ಕಾವ್ಯ. ಒಂದು ದಿನ ಯಮರಾಜ ರಾಜನ ಪ್ರಾಣವನ್ನು ತೆಗೆದು ಕೊಂಡು ಹೋಗಲು.... ಆಗ ಕಾವ್ಯ, "ಓ ಯಮರಾಜ, ದಯವಿಟ್ಟು ನಮ್ಮ ತಂದೆಯನ್ನು ನಮ್ಮ ಹತ್ತಿರ ಒಂದು ವರ್ಷ ಇರುವುದಕ್ಕೆ ಬಿಡು" ಎಂದು ಬೇಡಿಕೊಂಡಳು. ಆಗ ಯಮನ ಮನಸ್ಸು ಕರಗಿ ನೀರಾಗಿ ಅಲ್ಲಿಂದ ಹೊರಟು ಹೋದನು. ಒಂದು ವರ್ಷದ ನಂತರ ಯಮ ಮತ್ತೆ ಬಂದನು. ಆಗ ಕಾವ್ಯ "ನಮ್ಮ ತಂದೆಯನ್ನು ನಮ್ಮ ಹತ್ತಿರ ಇನ್ನೂ ಒಂದು ವರ್ಷ ಇರುವುದಕ್ಕೆ ಬಿಡು" ಎಂದು ಬೇಡಿಕೊಂಡಳು. ಅದಕ್ಕೆ ಯಮ ಒಪ್ಪಿಕೊಂಡು ಪುನಃ ಹೋದನು. ಒಂದು ವರ್ಷದ ನಂತರ ಯಮ ಮತ್ತೆ ಅಲ್ಲಿಗೆ ಬಂದನು. ಆಗ ನವ್ಯ "ಅಗೋ, ಅಲ್ಲಿ ನೋಡು, ಅಲ್ಲಿ ಒಂದು ಮೇಣದಬತ್ತಿ ಉರಿಯುತ್ತಿದೆ. ಆ ಮೇಣದಬತ್ತಿ ಯಾವಾಗ ಕರಗಿ ನೀರಾಗುತ್ತದೆ ಆಗ ನೀನು ಬಾ. ನಮ್ಮ ತಂದೆಯ ಪ್ರಾಣವನ್ನು ತೆಗೆದುಕೊಂಡು ಹೋಗು." ಎಂದು ಹೇಳಿದಳು. ಆಗ ಯಮರಾಜ "ಹೋ ಈ ಬಾಲಕಿ ಹೀಗೆ ಹೇಳುತ್ತಿರುವಳೇ. ಹಾಗಾದರೆ ಸರಿ, ಈ ಮೇಣದಬತ್ತಿ ಕರಗಿ ನೀರಾಗಲು ಇಷ್ಟು ಹೊತ್ತು ಹಿಡಿಯುತ್ತದೆ. ನಾನು ಮತ್ತೆ ಬರುತ್ತೇನೆ." ಎಂದು ಮನಸ್ಸಿನಲ್ಲಿ ಅಂದುಕೊಂಡು ಅಲ್ಲಿಂದ ಹೊರಟು ಹೋದನು. ಯಮರಾಜ ಹೋದ ತಕ್ಷಣ ನವ್ಯ, ಆ ಉರಿಯುತ್ತಿರುವ ಮೇಣದ ಬತ್ತಿಯನ್ನು ಆರಿಸಿಬಿಟ್ಟಳು. ಹಾಗಾಗಿ ಆ ಮೇಣದಬತ್ತಿ ಕರಗಲೇ ಇಲ್ಲ. ಹಾಗಾಗಿ ಯಮ ಮತ್ತೆ ಅಲ್ಲಿಗೆ ಬರಲೇ ಇಲ್ಲ.
....................................... ಕೆ ವಿ ಶರಣ್ಯ ಭಟ್
5ನೇ ಎ ತರಗತಿ
ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ
ಕಿಲ್ಪಾಡಿ ಮುಲ್ಕಿ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
******************************************
ಒಂದು ದಿನ ಸಿಂಹ ನರಿಯನ್ನು ಕರೆದುಕೊಂಡು ಬೇಟೆಗೆ ಹೋಯಿತು. ನರಿ ಅಥವಾ ಸಿಂಹನಿಗೆ ಯಾವುದೇ ಬೇಟೆ ಸಿಗಲಿಲ್ಲ. ಸಿಂಹನಿಗೆ ಬಹಳ ಬೇಸರವಾಯಿತು. ಆಗ ನರಿ ಒಂದು ಉಪಾಯ ಮಾಡಿತು. ನರಿ ಸಿಂಹನಿಗೆ "ರಾಜರೇ ನನ್ನ ಹತ್ತಿರ ಒಂದು ಉಪಾಯ ಇದೆ. ಅದೇನೆಂದರೆ, ಈಚೆ ಕಡೆ ನಾನು ಹುಡುಕುತ್ತೇನೆ, ಆಚೆ ಕಡೆ ನೀವು ಹುಡುಕಿ, ಯಾರಿಗೆ ಗೊತ್ತು?, ಯಾವುದಾದರೂ ಬೇಟೆ ಸಿಗಬಹುದಲ್ಲವೇ?" ಅದಕ್ಕೆ ಸಿಂಹ "ಸರಿ ಆಯ್ತು. ಇದೂ ಒಂದು ಪ್ರಯತ್ನ ಆಗಿ ಬಿಡಲಿ." ಎಂದಿತು. ಹಾಗೆ, ನರಿ ಸೂಚಿಸಿದಂತೆ, ಇಬ್ಬರೂ ಒಂದೊಂದು ದಿಕ್ಕಿನಲ್ಲಿ ಹೋದರು. ಹಾಗೆ ಹುಡುಕುತ್ತಾ ಹುಡುಕುತ್ತಾ ನರಿಗೆ ಒಂದು ಸಣ್ಣ ಮೊಲ ಸತ್ತು ಬಿದ್ದದ್ದು ಕಂಡಿತು. ಆದರೆ ಅದು ಯಾರಿಗಾದರೂ ಒಬ್ಬರಿಗೆ ತಿನ್ನಬಹುದಾದ ಆಹಾರವಾಗಿತ್ತು. ನರಿಯು, ಯೋಚಿಸಿತು "ರಾಜರು ಬಂದರೆ, ಎಲ್ಲಾ ಅವರೇ ತಿಂದು ಮುಗಿಸುತ್ತಾರೆ. ನಾನು ಅವರಿಗೆ ಗೊತ್ತಾಗದಂತೆ ವೇಗವಾಗಿ ತಿಂದು ಮುಗಿಸಬೇಕು" ಎಂದುಕೊಂಡಿತು. ಹಾಗೆಯೇ ಸಿಂಹ ಬರುವುದಕ್ಕಿಂತ ಮುಂಚೆ ವೇಗವಾಗಿ ತಿಂದು ಮುಗಿಸಿತು. ಸ್ವಲ್ಪ ಹೊತ್ತು ಕಳೆದ ಮೇಲೆ, ಸಿಂಹಾ ನರಿಯನ್ನು ಹುಡುಕಿಕೊಂಡು ಬಂತು. ಸಿಂಹ ಆಹಾರ ಸಿಗದ ಕಾರಣ ಕೋಪದಿಂದ ನರಿಯ ಹತ್ತಿರ "ಏ ನರಿಯೇ ನಿನಗೇನಾದರೂ ಆಹಾರ ಸಿಕ್ಕಿತೇ?" ಎಂದು ಕೇಳಿತು. ಅದಕ್ಕೆ ನರಿ ಬೇಸರವಾಗಿ ಹೇಳುವಂತೆ ನಟಿಸುತ್ತಾ "ಇಲ್ಲ ಪ್ರಭು ನನಗೂ ಯಾವುದೇ ಆಹಾರ ಸಿಗಲಿಲ್ಲ" ಎಂದು ಸುಳ್ಳು ಹೇಳಿತು. ಪಾಪ, ಸಿಂಹವು ಅದರ ಮಾತನ್ನು ನಂಬಿತು. ಹಾಗೆ, ಆ ದಿನ ಸಿಂಹ ಏನು ತಿನ್ನದೆ ಹಸಿವಿನಿಂದ ಮಲಗಿತ್ತು.
....................................... ಕೆ ವಿ ಶರಣ್ಯ ಭಟ್
5ನೇ ಎ ತರಗತಿ
ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ
ಕಿಲ್ಪಾಡಿ ಮುಲ್ಕಿ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
******************************************
ಒಂದು ಊರಿನಲ್ಲಿ ಒಬ್ಬ ತಾತ ಇದ್ದ. ಅವನ ಹೆಸರು ವಿಷ್ಣು. ಅವನಿಗೆ ಇಬ್ಬರು ಮಕ್ಕಳು. ಒಬ್ಬನ ಹೆಸರು ರಮೇಶ್ ಮತ್ತು ಇನ್ನೊಬ್ಬನ ಹೆಸರು ಮಹೇಶ್. ರಮೇಶ್ ಮತ್ತು ಮಹೇಶ್ ತುಂಬಾ ಸೋಮಾರಿಗಳಾಗಿದ್ದರು. ಎಷ್ಟು ಸೋಮಾರಿಗಳೆಂದರೆ, ಒಂದೇ ಒಂದು ಪುಟ್ಟ ಕೆಲಸವು ಮಾಡುತ್ತಿರಲಿಲ್ಲ. ಆ ತಾತನಿಗೆ ಒಂದು ಪುಟ್ಟ ಹೊಲವಿತ್ತು. ತಾತ ಅದರಲ್ಲಿ ಬೇಳೆ ಬೆಳೆಯಬೇಕೆಂದು ಯೋಚಿಸಿದನು. ಅವನು "ಈ ಕೆಲಸವನ್ನು ನನ್ನ ಮಕ್ಕಳ ಕೈಯಲ್ಲಿ ನಾನೇಕೆ ಮಾಡಿಸಬಾರದು?" ಎಂದುಕೊಂಡನು. ಅದಕ್ಕೆ ತಾತ ಮಕ್ಕಳೊಡನೆ "ಮಕ್ಕಳೇ, ನನ್ನದೊಂದು ಪುಟ್ಟ ಹೊಲದಲ್ಲಿ ಏನಾದರೂ ಬೆಳೆ ಬೆಳೆಯುವಿರಾ?" ಎಂದು ಕೇಳಿದನು. ಅದಕ್ಕೆ ಮಕ್ಕಳು ಇಲ್ಲ ಎಂದು ಕೋಪದಿಂದ ಹೇಳಿದರು. ಇದರಿಂದ ತಾತನಿಗೆ ತುಂಬಾ ಬೇಸರವಾಯಿತು. ಅದಕ್ಕೆ ತಾತ ಒಂದು ಉಪಾಯ ಮಾಡಿದರು. ತಾತ ಪೇಪರ್ ನಿಂದ ಮಾಡಿದ ವಜ್ರಗಳನ್ನು ಹೊಲದಲ್ಲಿ ಮುಚ್ಚಿಟ್ಟು, ಮಕ್ಕಳಿಗೆ "ಈ ಹೊಲದಲ್ಲಿ ವಜ್ರವಿದೆ. ಆದರೆ ಅದು ಹೊಲದಲ್ಲಿ ಬೆಳೆ ಬೆಳೆದರೆ ಮಾತ್ರ ಸಿಗುವುದೆಂದು ಹೇಳಿದರು. ಅದಕ್ಕೆ ಮಕ್ಕಳು "ನಾವು ಅದರಲ್ಲಿ ಬೆಳೆ ಬೆಳೆಯುತ್ತೇವೆ" ಎಂದು ಮುಂದೆ ಬಂದರು. ಮಾರನೇ ದಿನದಿಂದ ಮಕ್ಕಳು ಬೆಳೆ ಬೆಳೆಯುವುದಕ್ಕೆ ಪ್ರಾರಂಭಿಸಿದರು. ಹಾಗೆ ದಿನಗಳು ಉರುಳಿ ಹೋದವು. ಆ ಹೊಲದಲ್ಲಿ ಬೆಳೆ ಬಂದಿತು ಮತ್ತು ಮಕ್ಕಳಿಗೆ ವಜ್ರವು ಸಿಕ್ಕಿತು. ಆದರೆ ಅದು ಪೇಪರ್ ನಿಂದ ಮಾಡಲಾಗಿದೆ ಎಂಬ ವಿಚಾರ ತಿಳಿದು ಮಕ್ಕಳಿಗೆ ಬೇಸರವಾಯಿತು. ತಾತ ಅದಕ್ಕೆ ನಕ್ಕರು.
....................................... ಕೆ ವಿ ಶರಣ್ಯ ಭಟ್
5ನೇ ಎ ತರಗತಿ
ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ
ಕಿಲ್ಪಾಡಿ ಮುಲ್ಕಿ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
******************************************
ಡೋಲಕ್ ಪುರ್ ಎಂಬ ಊರಿನಲ್ಲಿ ಒಬ್ಬ ವಿಧವೆ ಇದ್ದಳು. ಆ ವಿಧವೆಯ ಹೆಸರು ಶಾಂತಿ. ಶಾಂತಿಗೆ ಒಬ್ಬ ಮಗನಿದ್ದ. ಅವನ ಹೆಸರು ರಮೇಶ್. ರಮೇಶ್ ತುಂಬಾ ಒಳ್ಳೆಯವನಾಗಿದ್ದ. ರಮೇಶನ ಕುಟುಂಬ ತುಂಬಾ ಬಡತನದಲ್ಲಿತ್ತು. ಶಾಂತಿ ಬೇರೆಯವರ ಮನೆಗೆ ಕೆಲಸಕ್ಕೆ ಸೇರಿದ್ದಳು. ರಮೇಶ್ ತನ್ನ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಉದ್ದೇಶದಿಂದ ಚೆನ್ನಾಗಿ ಓದುತ್ತಿದ್ದ. ಇದ್ದಕ್ಕಿದ್ದಂತೆ ಅವನಮ್ಮ ಹಾಸಿಗೆ ಹಿಡಿದರು. ಅವನು ಶಾಲೆಗೆ ರಜೆ ಹಾಕಿ ಅಮ್ಮನನ್ನು ನೋಡಿಕೊಳ್ಳುತ್ತಿದ್ದ. ಆದರೆ ಅಮ್ಮನ ಚಿಕಿತ್ಸೆಗೆ ಏನು ಮಾಡುವುದೆಂದು ಅರ್ಥವಾಗಲಿಲ್ಲ. ಹಾಗೆ ಒಂದು ದಿನ ಅಮ್ಮ ಮಲಗಿದ ಮೇಲೆ ಅವನು ನೇರವಾಗಿ ಕಾಡಿನ ಕಡೆಗೆ ಹೊರಟ. ಅಲ್ಲಿ ಅವನು ಒಂದು ದೊಡ್ಡ ಮರವನ್ನು ಕಂಡ ಮತ್ತು ಅದರ ಕೆಳಗೆ ಕೂತುಕೊಂಡು ಅಳಲು ಪ್ರಾರಂಭಿಸಿದ. ತನ್ನ ಅಮ್ಮನನ್ನು ಆರೋಗ್ಯದಿಂದ ನೋಡಿಕೊ ಎಂದು ದೇವರಲ್ಲಿ ಬೇಡಿಕೊಂಡ. ಹಾಗೆ ಅಳುವಾಗ, ಅವನಿಗೆ ಎಲ್ಲೋ ಯಾರೋ ಗರ್ಜಿಸುವುದು ಕೇಳಿತು. ಅವನು ಒಂಚೂರು ಯೋಚಿಸದೆ ಅದರ ಕಡೆಗೆ ಹೊರಟ. ಅಲ್ಲಿ ಹೋಗಿ ನೋಡಿದರೆ ಒಂದು ಸಿಂಹದ ಕಾಲಿಗೆ ಮುಳ್ಳು ಚುಚ್ಚಿಕೊಂಡು ಅದು ನೋವಿನಿಂದ ಬಳಲುತ್ತಿತ್ತು. ಅವನು ನಾನೀಗ ಈ ಸಿಂಹದ ಕಾಲಿನಿಂದ ಮುಳ್ಳನ್ನು ತೆಗೆಯಬಲ್ಲೆ, ಆದರೆ ಅದು ನನ್ನ ಮೇಲೆ ಆಕ್ರಮಣ ಮಾಡಿದರೆ ನಾನೇನು ಮಾಡಲಿ ಎಂದು ಯೋಚಿಸಿದ. ಆದರೆ ತನಗೆ ಧೈರ್ಯ ತಂದುಕೊಂಡು, ಆ ಸಿಂಹದ ಕಾಲಿನಿಂದ ಮುಳ್ಳನ್ನು ತೆಗೆದ. ರಮೇಶ್ ಯೋಚಿಸಿದ ಹಾಗೆ ಅದು ಏನು ಆಕ್ರಮಣ ಮಾಡಲಿಲ್ಲ ಬದಲಾಗಿ ಅದು ತನ್ನ ಭಾಷೆಯಲ್ಲಿ ಧನ್ಯವಾದ ಹೇಳಿತು. ಆಗ ಆ ಸಿಂಹ ಒಂದು ಸುಂದರವಾದ ದೇವತೆಯಾಗಿ ಬದಲಾಯಿತು. ರಮೇಶ್, ನೀನು ನನ್ನ ಕಾಲಿನಿಂದ ಮುಳ್ಳನ್ನು ತೆಗೆದು ನನ್ನನ್ನು ಕಾಪಾಡಿದ್ದೀಯ. ನಿನಗೇನು ವರ ಬೇಕು ಕೇಳಿಕೋ ಎಂದು ಆ ದೇವತೆ ರಮೇಶನ ಬಳಿ ಹೇಳಿದಳು. ರಮೇಶ್ ಧನ್ಯವಾದ ದೇವತೆ, ನನಗೆ ಬೇಕಾಗಿರುವುದು ಕೇವಲ ಒಂದು ವರ. ಅದೇನೆಂದರೆ ಒಂದು ನನ್ನ ಅಮ್ಮನನ್ನು ಅನಾರೋಗ್ಯದಿಂದ ಪಾರುಮಾಡು. ಅದಕ್ಕೆ ದೇವತೆ ಈಗ ನೀನು ಮನೆಗೆ ಹೋಗು, ಅಲ್ಲಿ ನಿನ್ನ ಅಮ್ಮ ಚೆನ್ನಾಗಿರುತ್ತಾಳೆ. ಹಾಗೆ ದೇವತೆ ಹೇಳಿದಂತೆ ರಮೇಶ್ ಮನೆಯ ಕಡೆಗೆ ನಡೆದನು. ಅಲ್ಲಿ ಹೋಗಿ ನೋಡಿದರೆ ಒಂದು ಚಮತ್ಕಾರವೇ ನಡೆಯಿತು ಎಂದು ನಮ್ಮ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿರುತ್ತಾಳೆ. ಅಮ್ಮ ಚೆನ್ನಾಗಿರುವುದನ್ನು ನೋಡಿ ರಮೇಶನಿಗೆ ಖುಷಿಯಾಯಿತು. ಅಂದಿನಿಂದ ಅವರು ಸುಖವಾಗಿದ್ದರು.
5ನೇ ಎ ತರಗತಿ
ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ
ಕಿಲ್ಪಾಡಿ ಮುಲ್ಕಿ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
******************************************