-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 42

ನಿಷ್ಪಾಪಿ ಸಸ್ಯಗಳು : ಸಂಚಿಕೆ - 42

ನಿಷ್ಪಾಪಿ ಸಸ್ಯಗಳು : ಸಂಚಿಕೆ - 42
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
      
     
      ಪ್ರೀತಿಯ ಮಕ್ಕಳೇ.... ಹೇಗಿದ್ದೀರಿ? ಪರೀಕ್ಷೆಗಳು ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿವೆ. ಆಮೇಲೆ ನೀವು ಸ್ವತಂತ್ರವಾಗಿ ಹಾರಾಡುವ ಹಕ್ಕಿಗಳಾಗುತ್ತೀರಲ್ವಾ...? ಸರಿ ಮಕ್ಕಳೇ.. ಬಾಲ್ಯದಲ್ಲಿ ನಿಮಗೆ ತುಂಬಾ ಹಠ, ಜಗಳ, ಅಳು, ಕೋಪತಾಪಗಳ ರಂಪ ಇದ್ದ ನೆನಪಿದೆಯೇ? ಆಗೆಲ್ಲಾ ನಿಮ್ಮ ಅಮ್ಮ ಏನು ಮಾಡ್ತಿದ್ರು.. ನೆನಪಿದೆಯಾ? 
       ನಾವು ಸಣ್ಣವರಿದ್ದಾಗ ನಮ್ಮಮ್ಮ ಅಮವಾಸ್ಯೆ ಹುಣ್ಣಿಮೆ ಅಂತ ಆಗಾಗ "ಚಿಹ್ನೆ" ಯ ಮಾತ್ರೆ ಕೊಡ್ತಿದ್ದರು. ಏನೋ ಒಂದು ವಾಸನೆಯ ಮಾತ್ರೆಯನ್ನು ತುಳಸಿ ಎಲೆಯ ರಸದ ಜೊತೆ, ಜೇನುತುಪ್ಪದ ಜೊತೆ, ಪಂಚಪತ್ರೆಯ ಎಲೆ ರಸದ ಜೊತೆ ಒತ್ತಾಯದಿಂದ ಕುಡಿಸುತ್ತಿದ್ದರು. ತುಳಸಿ, ಜೇನು, ಪಂಚಪತ್ರೆಯ ವಾಸನೆಯೇ ಅಸಹ್ಯವೆನಿಸುವಂತಾಗಿತ್ತು. ಅದೆಷ್ಟು ಉತ್ತಮ ಔಷಧೀಯ ವಸ್ತುಗಳೆಂದು ಈಗ ಅರಿವಾಗುತ್ತಿದೆ. ಇದು ಮಕ್ಕಳ ಹಠದ ಸ್ವಭಾವವನ್ನು ಕಡಿಮೆ ಮಾಡುತ್ತದೆಯೆಂದೂ, ಮಗು ಆರೋಗ್ಯವಾಗಿರುತ್ತದೆಂದೂ ತಾಯಂದಿರು ಮಾತನಾಡಿಕೊಳ್ಳುತ್ತಿದ್ದರು. ಅದು ಸತ್ಯವೋ ಸುಳ್ಳೋ ತಿಳಿಯದು. ಈಗಲೂ ಹಲವರು ಈ ಪದ್ಧತಿಯನ್ನು ಅನುಸರಿಸುತ್ತಾರೆ.
      ಚಿಹ್ನೆಯ ಮಾತ್ರೆಯ ಜೊತೆ ಸೇರಿಸುವ ಪಂಚಪತ್ರೆ ಅನ್ನುವ ಸೊಪ್ಪಿನ ಗಿಡದ ಪರಿಚಯವನ್ನು ಈ ಬಾರಿ ಮಾಡಿಕೊಳ್ಳೋಣ. ಇದೊಂದು ಸುಂದರವಾದ ಸಸ್ಯ. ಸರಳ ಸುಂದರಿ. ಇತರ ಯಾವ ಸಸ್ಯಗಳಿಗೂ ಕಿರಿಕಿರಿ ಮಾಡದೆ ತುಂಡೊಂದನ್ನು ನೆಲಕ್ಕೆ ಊರಿದಲ್ಲಿ ಅತ್ತಿತ್ತ ಹರಡಿ ನೆಲವನ್ನೆ ಹಸಿರಾಗಿಸುತ್ತದೆ. ಎಲೆಗೆ ಬಹಳ ಪರಿಮಳವಿದೆ. ಆರ್ಟಿಮಿಸಿಯಾ ಅನುವ ಎಂಬ ಹೆಸರಿನ ಪಂಚಪತ್ರೆ ಅಸ್ಪರೇಸಿ ಕುಟುಂಬದ ಸಸ್ಯ. ಸಮಶೀತೋಷ್ಣ ವಲಯದ ಏಷ್ಯಾದಲ್ಲಿ ಸ್ಥಳೀಯ ಸಸ್ಯ. ಉತ್ತರ ಅಮೇರಿಕಾ, ಚೀನಾ ಗಳಲ್ಲೂ ಕಂಡುಬರುತ್ತದೆ.
       ಇದರ ಕಾಂಡ ಕಂದು ಅಥವಾ ತಿಳಿನೇರಳೆ ಬಣ್ಣ ಹೊಂದಿದ್ದು 30 ರಿಂದ ಸುಮಾರು 100 cm ಎತ್ತರ ಬೆಳೆಯಬಲ್ಲದು. ಎಲೆಗಳು 3 ರಿಂದ 5cm ಉದ್ದವಿದ್ದು ಹೆಚ್ಚು ಆಳ ಸೀಳುಗಳಾಗಿ ಏಳು ಪುಟ್ಟ ಭಾಗಗಳಾಗಿರುತ್ತವೆ. ಕಾಂಡದ ಮೇಲೆ ಬೇರೆ ಬೇರೆ ದಿಕ್ಕುಗಳಲ್ಲಿ ಜೋಡಣೆಗೊಂಡ ಎಲೆಗಳು ಸೂರ್ಯರಶ್ಮಿಗೆ ಮೈಯ್ಯೊಡ್ಡಲು ಸಹಕಾರಿಯಾಗಿವೆ.
      ಬಿಸಿಲು ಮತ್ತು ಬೆಚ್ಚಗಿನ ವಾತಾವರಣ ಬಯಸುವ ಈ ಗಿಡಮೂಲಿಕೆ ಬಹಳ ನೀರನ್ನು ಬಯಸದು. ಬರಗಾಲದಂತಹ ಹವಾಮಾನಕ್ಕೂ ಇದು ಸೈ ಎನ್ನುತ್ತಾ ಮಳೆಗೆ ಕಾಯಬಲ್ಲದು!.
      ಮಕ್ಕಳೇ, ಈ ಪಂಚಪತ್ರೆ ನಾವೆಣಿಸಿದಂತೆ ಏನೋ ಒಂದು ಕಳೆಸಸ್ಯವಲ್ಲ ಎಂದರೆ ನಂಬಲೇಬೇಕು. ಈ ಸಸ್ಯವನ್ನು ರೈತರು ಕೃಷಿ ಮಾಡಿ ದುಡ್ಡು ಸಂಪಾದಿಸುತ್ತಾರೆ ಗೊತ್ತಾ? ಏಕೆಂದರೆ ಇದು ನಮ್ಮ ಮನೆಗಳಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಂತ ಔಷಧಿಗಾಗಿ ಬಳಕೆಯಾಗುತ್ತಿದೆ. ಸಾಂಪ್ರದಾಯಿಕ ಚೈನೀಸ್ ಔಷಧದಲ್ಲಿ ನೂರಾರು ವರ್ಷಗಳಿಂದ ಜ್ವರ ನಿವಾರಕವಾಗಿ, ಬಹು ರೋಗಗಳ ವಿರುದ್ಧವಾಗಿ ಇದನ್ನು ಬಳಸಲಾಗುತ್ತಿತ್ತು. ಪ್ಲಾಸ್ಮೋಡಿಯಂ ಪರಾವಲಂಬಿಗಳಿಂದ ಉಂಟಾಗುವ ಮಲೇರಿಯಾ ಚಿಕಿತ್ಸೆಗೆ ಮೊದಲ ಸಾಲಿನ ಔಷಧಗಳಾದ ಆರ್ಟಿಮಿಸಿನಿನ್ ಉತ್ಪನ್ನಗಳ ಮೂಲವಾಗಿ ಅನೇಕ ಜಾಗತಿಕ ಸಮುದಾಯಗಳು ಬಳಸುತ್ತಿವೆ. SARS _ Cov 2 ರೂಪಾಂತರಿಗಳ ಪುನರಾವರ್ತನೆ ತಡೆಯುತ್ತದೆ ಹಾಗೂ ವೈರಸ್ ಗಳಿಂದ ಹರಡುವ ಸೋಂಕು ಗಳ ಮೇಲೆ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿವೆ.
          ಇದರ ಹಲವಾರು ಉತ್ಪನ್ನಗಳು ನಮ್ಮಲ್ಲೂ ಮಾರುಕಟ್ಟೆಯಲ್ಲಿವೆ. 1971 ರಲ್ಲಿ ಮಲೇರಿಯಾ ವಿರೋಧಿ ಎಂದು ವಿಜ್ಞಾನಿಗಳು ಸಾಬೀತುಪಡಿಸಿದರೆನ್ನಲಾಗುತ್ತದೆ. ಈ ಸಸ್ಯದ ಎಲೆಯಿಂದ ಅರ್ಟಿಮಿಸಿನಿನ್ ನ ಮೊದಲ ಪ್ರತ್ಯೇಕತೆಯ ಪ್ರಾಜೆಕ್ಟ್ 523 ಎಂದು ಕರೆಯಲ್ಪಡುವ ಮಿಲಿಟರಿ ಯೋಜನೆಯಿಂದ ಸಂಭವಿಸಿದೆ. ಆರ್ಟಿಮಿಸಿನಿನ್ ಮತ್ತು ಅದರ ಆಂಟಿಮಲೇರಿಯಲ್ ಗುಣಲಕ್ಷಣದ ಆವಿಷ್ಕಾರವನ್ನು 1970 ರ ದಶಕದಲ್ಲಿ ಚೀನೀ ವಿಜ್ಞಾನಿ You You Tu ನಡೆಸಿದ್ದರು. ಇವರು ಮುಂದೆ 2011ರ ಲಾಸ್ಕರ್ ಪ್ರಶಸ್ತಿ, 2015ರ ವೈದ್ಯಕೀಯ ನೋಬೆಲ್ ಪ್ರಶಸ್ತಿಗೆ ಭಾಜನರಾದರು.
        ಸಾಮಾನ್ಯವಾಗಿ ಪಂಚಪತ್ರೆ ಗಿಡದ ಎಲೆಗಳಲ್ಲಿ 1.5% ಆರ್ಟಿಮಿಸಿನಿನ್ ಅಂಶವಿದ್ದರೆ ಸ್ವಿಜರ್ಲೇಂಡಿನಲ್ಲಿ ಅಭಿವೃದ್ಧಿ ಪಡಿಸಿದ ಮಿಶ್ರತಳಿಗಳು 2% ತಲುಪಿವೆ. ಹವಾಮಾನ ಮತ್ತು ಭೂಮಿಯ ಎತ್ತರವನ್ನು ಅವಲಂಬಿಸಿ ಪಂಚಪತ್ರೆಯ ಗುಣಮಟ್ಟದ ಬೆಳೆ ಪಡೆಯಬಹುದು. ಬಿತ್ತನೆಯಿಂದ ಕೊಯ್ಲಿಗೆ 190 ರಿಂದ 240 ದಿನಗಳು ಬೇಕಾಗುತ್ತವೆ. ಗೊಂಚಲಾಗಿ ಕಾಣಿಸಿಕೊಳ್ಳುವ ಈ ಸಸ್ಯದ ಹೂಗಳು ಹಸಿರು ಮಿಶ್ರಿತ ಹಳದಿ ಬಣ್ಣದ್ದಾಗಿರುತ್ತವೆ. ಇವುಗಳಲ್ಲಿ ಬಹು ಸೂಕ್ಷ್ಮಗಾತ್ರದ ಬೀಜಗಳಾಗುತ್ತವೆ. 1000 ಬೀಜಗಳಿದ್ದರೆ 0.03 ಗ್ರಾಂ ತೂಗಬಹುದು. ಈ ಬೀಜಗಳನ್ನು ಬಿತ್ತನೆ ಮಾಡಿದ 4 ರಿಂದ 10 ದಿನಗಳ ನಡುವೆ ಮೊಳಕೆಯೊಡೆದು 15ರಿಂದ 30 ದಿನಗಳಲ್ಲಿ ಒಂದನೇ ಜೋಡಿ ಎಲೆಗಳು ಹಾಗೂ 21ರಿಂದ 50 ನೇ ದಿನಕ್ಕೆ ಎರಡನೇ ಜೋಡಿ ಎಲೆಗಳು ಗೋಚರವಾಗುತ್ತವೆ. ಎರಡು ಮೂರು ತಿಂಗಳಾಗುತ್ತಲೇ ಗಿಡವು ಬೆಳೆದು ಕವಲುಗಳಾಗುತ್ತವೆ. ಹೀಗೆ ಮಾಡಿದ ಕೃಷಿಯಲ್ಲಿ ಈ ಸಸ್ಯ 200 cm ಎತ್ತರದವರೆಗೆ ಬೆಳೆಯುತ್ತದೆ. ಹೂ ಬಿಡುವ ಮೊದಲೇ 190 ರಿಂದ 240 ದಿನಗಳಲ್ಲಿ ಸಂಪೂರ್ಣ ಗಿಡವನ್ನು ಕತ್ತರಿಸಿ ಬಿಸಿಲಲ್ಲಿ ಒಣಗಿಸಿ ಕಾಂಡದಿಂದ ಎಲೆಗಳನ್ನು ಬೇರ್ಪಡಿಸಿ ಒಂದು ವರ್ಷದ ವರೆಗೂ ಪುಡಿಮಾಡದೆ ಶೇಖರಣೆ ಮಾಡಿ ಇಡುತ್ತಾರೆ. ಇದು ಭಾಷ್ಪಶೀಲ, ಗಾಳಿಯಲ್ಲಿ ಬೇಗನೆ ಸೋರಿಕೆಯಾಗುವುದರಿಂದ ಬಹಳ ನಾಜೂಕಾಗಿ ಶೇಖರಿಸಿಡಬೇಕಾಗುತ್ತದೆ. ಬಳಿಕವಷ್ಟೇ ಅದರ ಔಷಧೀಯ ಅಂಶಗಳನ್ನು ಬೇರ್ಪಡಿಸಲಾಗುತ್ತದೆ. ಯಾವುದೇ ರೋಗಬಾಧೆಗಳು ಅಪರೂಪ. ವಿವಿಧ ಮಣ್ಣಿಗೆ ಹೊಂದಿಕೊಳ್ಳುವ ಸ್ವಭಾವ ಇರುವುದರಿಂದ ಅಲ್ಪತೃಪ್ತ ಗುಣ ಹೊಂದಿದ ಅಪರೂಪದ ಸಸ್ಯವೇ ಸರಿ.
     ನಿಷ್ಪಾಪಿ ಸಸ್ಯವಾದ ಈ ಪಂಚಪತ್ರೆಯು ಲಕ್ಷಾಂತರ ಜನರಿಗೆ ಮಲೇರಿಯಾ ತಡೆಗಟ್ಟಲು, ರಕ್ತದ ಏರು ಒತ್ತಡ, ಗಾಯ, ಟ್ಯೂಮರ್, ಉರಿಯೂತ, ಮೂಲವ್ಯಾಧಿ, ಪರೋಪಜೀವಿ ನಾಶ, ಕೀಲುನೋವಿನಂತಹ ಕಾಯಿಲೆಗಳಿಗೆ ಸಾಂಪ್ರದಾಯಿಕವಾಗಿ ಬಳಕೆಯಾಗುತ್ತಿದೆ. ಕಡಿಮೆ ರಕ್ತದೊತ್ತಡವಿದ್ದವರಿಗೆ ಹಾಗೂ ಗರ್ಭಿಣಿಯರಿಗೆ ಈ ಮೂಲಿಕೆಯ ಬಳಕೆ ಸೂಕ್ತವಲ್ಲವೆನ್ನಲಾತ್ತದೆ.
      ನೋಡಿದಿರಲ್ಲ ಮಕ್ಕಳೇ, ನಮಗೆ ಅಗತ್ಯವೇ ಕಾಣದ ಸಸ್ಯವೊಂದು ಹೇಗೆ ಜಗದಗಲ ಬೆಳೆದು ನಿಂತು ಗೌರವ ಪಡೆದಿದೆಯಲ್ಲವೇ? 
      ಸರಿ ಮಕ್ಕಳೇ.. ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.. ನಮಸ್ಕಾರ.
.......................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************



Ads on article

Advertise in articles 1

advertising articles 2

Advertise under the article