ನಿಮ್ಮೂರ ಶಾಲೆಯ ಸುದ್ದಿ : ಸಂಚಿಕೆ - 05
Sunday, March 31, 2024
Edit
ನಿಮ್ಮೂರ ಶಾಲೆಯ ಸುದ್ದಿ : ಸಂಚಿಕೆ - 05
ಲೇಖನ : ಪಂಡಿಂಜೆವಾಳ್ಯ ಶಾಲೆ ಮತ್ತು ಮಾತೃ ಹೃದಯದ ಶಿಕ್ಷಕಿ
ಬರಹ : ಕುಮಾರಿ ಸುನೀತಾ ವೇಣೂರು
ಅತಿಥಿ ಶಿಕ್ಷಕಿ
ಸರ್ಕಾರಿ ಉನ್ನತೀಕರಿಸಿದ
ಪ್ರಾಥಮಿಕ ಶಾಲೆ ಅಂಡಿಂಜೆ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಅತಿಥಿ ಶಿಕ್ಷಕಿಯಾಗಿ ಗೌರವ ಶಿಕ್ಷಕಿಯಾಗಿ ಮೂರು ಶಾಲೆಗಳಲ್ಲಿ ನಾನು ಕರ್ತವ್ಯ ನಿರ್ವಹಿಸಿದರೂ ಸಹ ನನ್ನ ಮೇಲೆ ಪ್ರಭಾವ ಬೀರಿ ನನ್ನಲಿ ತಾಳ್ಮೆ, ಸಹಾಯ ಮಾಡುವ ಗುಣ, ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ಪ್ರೀತಿಸುವ ಮಹತ್ತರ ಬದಲಾವಣೆಯನ್ನು ತಂದವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಂಡಿಂಜೆವಾಳ್ಯ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಶ್ರೀಮತಿ ಫ್ಲೇವಿಯಾ ಡಿಸೋಜ ರವರು. ಇವರು ದಿನಾಂಕ 2018 ರಂದು ಮೊದಲ ಬಾರಿಗೆ ಸರ್ಕಾರಿ ವೃತ್ತಿ ಜೀವನಕ್ಕೆ ಪಾದಾರ್ಪಣೆಯನ್ನು ಮಾಡಿದರು. ಆ ವೇಳೆ ನಾನು ಅದೇ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೆ. ಮೂರು ಜನ ಅಕ್ಕನವರ ಮುದ್ದಿನ ತಂಗಿ ನಾನು. ನಾಲ್ಕನೇ ಅಕ್ಕನ ಸ್ಥಾನವನ್ನು ಕಂಡದ್ದು ಫ್ಲೇವಿಯಾ ಡಿಸೋಜ ಇವರಲ್ಲಿ. ಇವರು ನಮ್ಮ ಶಾಲೆಗೆ ಬಂದಾಗ ಮಕ್ಕಳು, ಪೋಷಕರು ತುಂಬಾ ಖುಷಿ ಪಟ್ಟರು. ಯಾಕೆಂದರೆ ಇವರು ತುಂಬಾ ಪ್ರತಿಭಾವಂತರು. ಹಾಡು, ನೃತ್ಯ, ನಾಟಕ, ಕವಿತೆಗಳನ್ನು, ಪ್ರಾರ್ಥನಾ ಗೀತೆಗಳನ್ನು ಬರೆಯುವುದರಲ್ಲಿ ಬಹಳ ಆಸಕ್ತಿ ಇರುವವರು. ಅಷ್ಟೇ ಅಲ್ಲದೆ ಉತ್ತಮ ಆಂಗ್ಲ ಭಾಷಾ ಶಿಕ್ಷಕಿ. ಇವರ ಆಂಗ್ಲ ಭಾಷೆಯ ಬೋಧನೆ ಮಕ್ಕಳ ಮೇಲೆ ಎಷ್ಟು ಪರಿಣಾಮ ಬೀರಿದೆ ಎಂದರೆ ಪ್ರಾಥಮಿಕ ಶಾಲಾ ಶಿಕ್ಷಣದ ಬಳಿಕ ಹೆಚ್ಚಿನ ವಿದ್ಯಾರ್ಥಿಗಳು ಹೈಸ್ಕೂಲ್ ನಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣವನ್ನೇ ಪಡೆಯುವಂತೆ ಮಾಡಿತು. ಪ್ರತಿಯೊಂದು ಮಗುವಿನ ಪ್ರತಿಭೆಯನ್ನು ಗುರುತಿಸಿ ಸ್ವಂತ ಹಣದಿಂದ ಬಹುಮಾನ ಕೊಡಲು ಆರಂಭಿಸಿದರು.
ಶಾಲೆಯಲ್ಲಿ ಶಿಕ್ಷಕರು ಮಕ್ಕಳ ಜೊತೆಗೂಡಿ ಶಾಲಾ ಕೈತೋಟವನ್ನು ಮಾಡಿ ಬಿಸಿಯೂಟಕ್ಕೆ ಬೇಕಾದ ತರಕಾರಿಯನ್ನು ಶಾಲೆಯಲ್ಲಿಯೇ ಬೆಳೆದರು. ಕೊರೋನ ಸಮಯದಲ್ಲಿ ಇವರು ಮಾಡಿದ ಸಹಾಯವನ್ನು ನಾನು, ನನ್ನ ಅಕ್ಕನ ಮಕ್ಕಳು, ನನ್ನ ವಿದ್ಯಾರ್ಥಿಗಳು ಮರೆಯುವಂತಿಲ್ಲ. ಟಿ.ವಿ ಯಲ್ಲಿ ಪಾಠಗಳು ನಡೆಯುತ್ತಿತ್ತು. ನನ್ನ ಅಕ್ಕನ ಮನೆಯಲ್ಲಿ ಟಿವಿ ಇಲ್ಲದ ವಿಚಾರ ತಿಳಿದು ಅವರ ಮನೆಯ ಹಳೆಯ ಟಿವಿಯನ್ನು ಕೊಟ್ಟರು. ಈ ಟಿವಿ ಇಂದಿಗೂ ಒಂದು ಬಾರಿಯೂ ಹಾಳಾಗಿಲ್ಲ. ಶಾಲಾ ವಿದ್ಯಾರ್ಥಿಗಳಿಗೆ ಗೂಗಲ್ ಮೀಟ್ ನಲ್ಲಿ ಪಾಠ ಪ್ರವಚನಗಳು ಆದಾಗ ಮೊಬೈಲ್ ಇಲ್ಲದ ಬಡ ಮಕ್ಕಳ ಹೆತ್ತವರಿಗೆ ಮೊಬೈಲ್ ಕೊಟ್ಟರು. ವೈಯುಕ್ತಿಕವಾಗಿ ಕೊರೋನ ಸಮಯದಲ್ಲಿ ನನಗೆ ನೆರವನ್ನು ಮಾಡಿ ಕಷ್ಟದ ಸಮಯದಲ್ಲಿ ದೇವತೆಯಾಗಿ ಕಂಡರು. ಇವರ ಈ ಸಹಾಯವನ್ನು ನಾನು ಎಂದಿಗೂ ಮರೆಯುವಂತಿಲ್ಲ.