-->
ಮಕ್ಕಳ ಕವನಗಳು : ಸಂಚಿಕೆ - 04

ಮಕ್ಕಳ ಕವನಗಳು : ಸಂಚಿಕೆ - 04

ಮಕ್ಕಳ ಕವನಗಳು : ಸಂಚಿಕೆ - 04
ಕವನ ರಚನೆ ಮಾಡಿರುವ ವಿದ್ಯಾರ್ಥಿಗಳು :

◾ ನಂದಿತಾ ಯು ತೋರಣಗಲ್, ಪ್ರಥಮ ಪಿ ಯು ಸಿ
◾ ದನಿ ಮಣಿನಾಲ್ಕೂರು, 6ನೇ ತರಗತಿ
◾ ಕೀರ್ತಿ ಜೆ, ಪ್ರಥಮ ಪಿ ಯು ಸಿ
◾ ಗಗನಾ ಹಲಗೇರಿ, 10ನೇ ತರಗತಿ
◾ ಜನ್ಯ ಕೇಶವ, 8ನೇ ತರಗತಿ
                

 
    ಮಾರ್ಚ್ - 08 : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು 

                        ಅಮ್ಮ

    ಹೆಣ್ಣಲ್ಲೊಂದು ಅಡಗಿರುವ ಶಕ್ತಿಯೇ ಮಮತೆ
    ಇವಳು ಕೋಟಿದೈವಗಳಲ್ಲೇ ಶ್ರೇಷ್ಠ ದೇವತೆ;
    ಸಲಹುವಳು ಮನೆಯ ತಾಯಿಯಾಗಿ,
    ಕಷ್ಟ-ನಷ್ಟಗಳಲ್ಲಿ ಪಾಲು ಕೇಳುವಳು ಸತಿಯಾಗಿ
ನಿರ್ವಹಿಸುವಳು ಮನೆಯ, ಸೊಸೆಯಾಗಿ..
ಮಾರ್ಗದರ್ಶನ ನೀಡುವಳು
ಮನೆಯೊಡತಿಯಾಗಿ,
ಬಯಸುವಳು ಯೋಗಕ್ಷೇಮವ ಮಗಳಾಗಿ,
ಸಂತೈಸುವಳು ದುಃಖದಲಿ ಮಮತೆಯ ಒಡಲಾಗಿ..
    ಜ್ಞಾನವೆರೆವಳು 'ತಾಳ್ಮೆಯ' ಶಿಕ್ಷಕಿಯಾಗಿ,
    ಕಳೆವಳು ರೋಗವ 'ಜಾಣ್ಮೆ'ಯ ವೈದ್ಯಳಾಗಿ,
    ಹೋರಾಡುವಳು ನ್ಯಾಯಕ್ಕಾಗಿ 
    ಕರೀಕೋರ್ಟ ತೊಟ್ಟು,
    ತಾಳ್ಮೆ, ಜಾಣ್ಮೆಗೂ ಮೀರಿದ ಪ್ರತಿಭೆಗೂ ಸಿದ್ಧಳಿವಳು..
ಗಾಯವಾದಾಗ ನನಗರಿಯದೆ "ಅಮ್ಮ" ಎಂದೇ..
ಅಪಾಯದಿಂದ ಪಾರಾದಾಗ "ಅಮ್ಮ..!" ಎಂದೇ..
ಆವರಿಸಿರುವೆ ಪ್ರತಿಕ್ಷಣವೂ ನೀ ನನ್ನ,
ಅವಲಂಬಿಸಿರುವೆ ಸಂಪೂರ್ಣವಾಗಿ ನಾ ನಿನ್ನ...
ನನ್ನ ಎಲ್ಲಾ ಮಾತೆಯರಿಗೂ ಶತಶತ ವಂದನೆಗಳು
......................... ನಂದಿತಾ ಯು ತೋರಣಗಲ್
ಪ್ರಥಮ ಪಿ ಯು ಸಿ
ಕ್ಲಾಸಿಕ್ ಪದವಿ ಪೂರ್ವ ಕಾಲೇಜು
ಧಾರವಾಡ.
********************************************



                   ನಮ್ಮ ಶಾಲೆ

           ಎಷ್ಟು ಚಂದ ನಮ್ಮ ಶಾಲೆ
           ಏನು ಅಂದ ನಮ್ಮ ಶಾಲೆ
ಶಾಲೆಯಲ್ಲಿ ಆಟ ಪಾಠ
ಒಂದೆ ಸಮ
ಎಲ್ಲರಿಗೂ ಒಂದೇ ಕ್ರಮ
          ಮಧ್ಯಾಹ್ನದ ಬಿಸಿಯೂಟ
          ನಮ್ಮೆಲ್ಲರ ಓಟ
ಶಿಕ್ಷಕರಿಗೆ ನಾವು
ಒಳ್ಳೆದಾಗುವ ಮನ
ಅದಕ್ಕಾಗಿ ನಾವು
ಕಾಯಬೇಕು ದಿನ
         ಶಾಲೆಯಲ್ಲಿ ನಮ್ಮದೇ
         ಸಹಪಾಠಿಗಳು
         ನಾವು ಕುಣಿಯುತ್ತೇವೆ ದಿನವೂ
...................................... ದನಿ ಮಣಿನಾಲ್ಕೂರು
6ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವಶ್ಯಮೂಡೂರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************
  


             ನನ್ನ ಗುರು ನನಗೆ ಹೆಮ್ಮೆ

ನಾವು ಯಶಸ್ಸಿನೆಡೆಗೆ ಸಾಗಲು ಹಿಂಜರಿದಾಗ
ನಮ್ಮ ಬೆನ್ನ ಹಿಂದೆ ನಿಂತವರವರು
ನಾವು ಸೋತು ನಿಂತಾಗ 
ನಮ್ಮನ್ನು ಸಂತೈಸಿದವರವರು
ನಾವು ಗೆದ್ದು ಸಂತಸದಿಂದಿರುವಾಗ 
ತನ್ನದೇ ಗೆಲುವೆಂದು ಸಂಭ್ರಮಿಸಿದವರವರು
ನಾವು ಯಶಸ್ಸಿನೆಡೆಗೆ ಸಾಗುತ್ತಿರುವಾಗ
ನಮ್ಮ ಬೆನ್ನು ತಟ್ಟಿ ಮುನ್ನಡೆಸಿದವರವರು
ನಾವು ತಪ್ಪು ದಾರಿಯನ್ನು ಹಿಡಿದಾಗ
ನಾವು ಸರಿ ದಾರಿಯೆಡೆಗೆ ಸಾಗಲು ಸೂಚಿಸಿದವರವರು
ನಾನು ಬರಹಗಳನ್ನು ಬರೆದು ಅವರ ಮುಂದಿಟ್ಟಾಗ
"ಭಾವನೆಗಳನ್ನು ಬರಹ ರೂಪಕ್ಕೆ ತಂದವಳೆಂದು" ಉತ್ತೇಜಿಸಿದವರವರು
ಸಾಹಿತ್ಯ ಕ್ಷೇತ್ರದಲ್ಲಿ ಅಂಬೆಗಾಲನಿಡುತ್ತಿರುವೆವು ನಾವೀಗ
ಆದರೆ ಸಾಹಿತ್ಯ ಕ್ಷೇತ್ರದಲ್ಲಿ ಮುಳುಗೆದ್ದಿರುವರು ಅವರು
ಹೆತ್ತು-ಹೊರಲಿಲ್ಲ ಅವರು
ಆದರೂ ಹೆತ್ತವರಂತೆ ಮಕ್ಕಳನ್ನು ಕಾಯುವರು
ಅವರೇ ನಮ್ಮ ಗುರುವರ್ಯರು..........
................................................ ಕೀರ್ತಿ ಜೆ
ಪ್ರಥಮ ಪಿಯುಸಿ
ಸರ್ಕಾರಿ ಪದವಿಪೂರ್ವ                     
ಕಾಲೇಜು, ಹೊಸನಗರ
ಶಿವಮೊಗ್ಗ ಜಿಲ್ಲೆ
********************************************




                     ನನ್ನ ಅಪ್ಪ

ನನ್ನ ಮನದ ದೈವ ನನ್ನ "ದಾರಿದೀಪ",
ನನ್ನ ಬಾಳಿಗೆ ಹಚ್ಚಿದಿರಿ "ನಂದಾದೀಪ",
ನೀವು ನನಗೆ ಮಾತ್ರ "ಅಪ್ಪ",
ನನ್ನ ಬಯಕೆಗಳ ಈಡೇರಿಸುವ "ಧೀರ",
ಅವರ ನೆನಪು ನನಗೆಂದು 'ಅಮರ",
ಒಂದು ವಿಷಯಕ್ಕೆ ನಡೆಯುತ್ತೆ "ಸಮರ",
ಆದರೂ ಕೊನೆಗೆ ಒಂದಾಗುವೆವು "ಸರಸರ",
ಪ್ರಪಂಚದ ಎಲ್ಲಾ "ಸಂತೋಷ" ತಂದು ಕೊಟ್ಟು,
ಮರೆಸುತ್ತಿರಿ ನನ್ನ "ನೋವು ಪಣತೊಟ್ಟು",
ಕೊನೆಗೆ ನಾನು "ನಗುವೆನು" ನೋವ ಬಿಚ್ಚಿಟ್ಟು,
ನನ್ನ ಸಂತೋಷ,
ನನ್ನ ಹರುಷ,
ನನ್ನ ಬೇಸರ,
ನನ್ನ ಸಾಧನೆ,
ಜೀವನದ ಪ್ರತಿ ಹಂತ 
ನಿಮ್ಮ ಜೊತೆಗೇನೇ 
ಅಪ್ಪ.......!
......................................... ಗಗನಾ ಹಲಗೇರಿ
10ನೇ ತರಗತಿ
ಸರಕಾರಿ ಪ್ರೌಢಶಾಲೆ ಕಡೂರು
ತಾ|| ರಟ್ಟಿಹಳ್ಳಿ, ಜಿ|| ಹಾವೇರಿ
********************************************


ಮಕ್ಕಳ ಜಗಲಿ 

ಅಮ್ಮನ ಮೊಬೈಲಿನಲಿ           
ನಾ ಕಂಡೆ ಮಕ್ಕಳ ಜಗಲಿ 
ಅದಾಗಿದೆ ಆನ್ಲೈನ್ ಪತ್ರಿಕೆ 
ಮಕ್ಕಳ ಪ್ರತಿಭಾ ಅನಾವರಣಕೆ 
ಇಲ್ಲಿಹುದು ಮಕ್ಕಳ ಚಿತ್ರಲೋಕ 
ಕಥೆ ಕವನ ಕಾವ್ಯ ಲೋಕ              
ಇಲ್ಲಿಹುದು ಶಿಕ್ಷಕರ ಸ್ಫೂರ್ತಿಯ ಮಾತುಗಳು ಪುಟಾಣಿಗಳಿಗೆ ಬಗೆ ಬಗೆ ಮಾಹಿತಿಗಳು 
ಸಂಪಾದಕರ ಜಗಲಿಕಟ್ಟೆ ಜಗಲಿಯ ಮಾತು 
ಶಿಕ್ಷಕರ ಸ್ಕೂಲ್ ಡೈರಿಯ ಗಮ್ಮತ್ತು 
ಓದಬಹುದು ಶಿಕ್ಷಕರ ಹೃದಯದ ಮಾತು 
ಪದದಂಗಳ ಬಿಡಿಸುವುದೇ ಒಂದು ಗಮ್ಮತ್ತು ಜಗಲಿಯಲಿ ನೋಡುವೆನು 
ಪ್ರೀತಿಯ ಪುಸ್ತಕವನ್ನು             
ತಿಳಿಯಬಹುದು ಹಕ್ಕಿಯ ಕಥೆಯನ್ನು 
ತಿಳಿಸುವರು ಜೀವನ ಸಂಭ್ರಮ ವನ್ನು 
ಹೇಳುವರು ಇಲ್ಲಿ ನಿಷ್ಪಾಪಿ ಸಸ್ಯಗಳ ಕಥೆಯನ್ನು ಆಯೋಜಿಸಿಹರು ರಾಜ್ಯಮಟ್ಟದ 
ಕಥೆ ಕವನ ಸ್ಪರ್ಧೆಯನ್ನು 
ಹೆಚ್ಚಿಸಲಿ ಜಗಲಿ ಪುಟಾಣಿಗಳ  
ಜ್ಞಾನ ಭಂಡಾರವನ್ನು               
ನೀಡಲಿ ಮಕ್ಕಳ ಬಾಳಲ್ಲಿ 
ಜ್ಞಾನದ ಬೆಳಕನ್ನು                  
ಬೆಳಗಿಸಲಿ ಎಲ್ಲರ ಮನೆ ಮನವನ್ನು
......................................... ಜನ್ಯ ಕೇಶವ 
8ನೇ ತರಗತಿ 
ಸಂತ ಡೊಮಿನಿಕ್ ಶಾಲೆ , ಬಡಕಬೈಲ್
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************