-->
ಮಕ್ಕಳ ಕಥೆಗಳು - ಸಂಚಿಕೆ : 03

ಮಕ್ಕಳ ಕಥೆಗಳು - ಸಂಚಿಕೆ : 03

ಮಕ್ಕಳ ಕಥೆಗಳು
ಸಂಚಿಕೆ : 03
ಕಥೆ ರಚನೆ ಮಾಡಿರುವ ವಿದ್ಯಾರ್ಥಿಗಳು :
◾ ಗೀತಾ ಲಕ್ಷ್ಮಿ, 10ನೇ ತರಗತಿ
◾ ಆಯಿಷತ್ ಶಹ್ ಮ, 3ನೇ ತರಗತಿ
◾ ಹರ್ಷಿತಾ ನಾಗಪ್ಪ ಪಟಗಾರ, 6ನೇ ತರಗತಿ
◾ ಅಭಿನವ್ ಎಸ್ ಭಟ್, 4ನೇ ತರಗತಿ

                                         
     ಒಂದು ಮುಂಜಾನೆ. ರಾಜೀವ್ ಎಂಬ ಹುಡುಗ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಕ್ಕಿಯ ಗುಂಪೊಂದನ್ನು ನೋಡಿ ಒಂದು ಕ್ಷಣ ಮೈ ಮರೆಯುತ್ತಾನೆ. ರಾಜೀವ್ ಹಕ್ಕಿಯ ಗುಂಪನ್ನು ನೋಡುತ್ತಾ ಮನಸಲ್ಲಿ ಆಹಾ ! ಎಷ್ಟು ಚಂದವಿದೆ ಹಕ್ಕಿಗಳ ಗುಂಪು. ಇವುಗಳಿಗೆ ಒಂದರ ಮೇಲೊಂದೆಂತಹ ಪ್ರೀತಿ. ಬೇರೆ ಬೇರೆ ಜಾತಿಯ ಹಕ್ಕಿಗಳು ಆಹಾರವನ್ನು ಹಂಚಿ ತಿನ್ನುತ್ತಾ ಪ್ರೀತಿಯಿಂದ ಇರುತ್ತಿತ್ತು. ಹೀಗೆ, ಆಹಾರವನ್ನು ಹಂಚಿ ತಿನ್ನುತ್ತಿರುವಾಗ, ಒಂದು ಹಕ್ಕಿಯ ಕಾಲು ಮುಳ್ಳಿಗೆ ಸಿಲುಕಿಕೊಂಡಿತು. ಇದರ ಕಾಲನ್ನು ಮುಳ್ಳಿನಿಂದ ತೆಗೆಯಲು ಎಲ್ಲಾ ಹಕ್ಕಿಗಳು ಕಷ್ಟಪಡುತಿದ್ದವು. ಈ ಹಕ್ಕಿಗೆ ಚುಚ್ಚಿದ ಮುಳ್ಳನ್ನು ಎಲ್ಲಾ ಹಕ್ಕಿಗಳು ಸೇರಿ ತನ್ನ ತನ್ನ ಕೊಕ್ಕಿನಿಂದ ಆ ಹಕ್ಕಿಯ ಕಾಲಿಗೆ ಸಿಲುಕಿದ್ದ ಮುಳ್ಳಿನ ಬೇಲಿಯನ್ನು ತೆಗೆಯಿತು. ನಂತರ ಎಲ್ಲಾ ಹಕ್ಕಿಗಳು ತಿಂಡಿ ಹಂಚುತ್ತಾ ಖುಷಿಯಾಗಿದ್ದವು. ಆ ಒಂದು ಹಕ್ಕಿಯ ಕಣ್ಣಿನಲ್ಲಿ ಉಪಕಾರ ಸ್ಮರಣೆಯನ್ನು ರಾಜೀವ್ ಗಮನಿಸಿದನು. ಆ ಹಕ್ಕಿಯ ಗುಂಪನ್ನು ನೋಡಿ ರಾಜೀವ್ ಆಹಾ! ಹಕ್ಕಿಗಳು ಎಷ್ಟು ಚಂದ ಬಾಳುತ್ತವೆ. ಹಕ್ಕಿಗಳು ಎಷ್ಟು ಪ್ರೀತಿಯಿಂದ ಇರುತ್ತವೆ. ಈ ಭೂಮಿಯಲ್ಲಿ ಜಾತಿ-ಭೇದ ಮತ-ಧರ್ಮಗಳನ್ನು ತೊರೆದು ಪ್ರೀತಿಯಿಂದ ಮನುಷ್ಯರು ಇರುತ್ತಿದ್ದರೆ, ಚೆನ್ನಾಗಿರುತ್ತಿತ್ತು. ಎಂದು ಯೋಚನೆ ಮಾಡುತ್ತಾ ಮುಂದೆ ನಡೆದು ಹೋಗುತ್ತಿರುವಾಗ ಮಕ್ಕಳು ಜೋರಾಗಿ ಚೆಂಡಿನ ವಿಷಯದಲ್ಲಿ ಗಲಾಟೆ ಮಾಡುವುದನ್ನು ಗಮನಿಸುತ್ತಾನೆ. ಮಕ್ಕಳನ್ನು ಕಂಡು ರಾಜೀವ್, "ಗಲಾಟೆ ಮಾಡುವುದನ್ನು ನಿಲ್ಲಿಸಿ ಮಕ್ಕಳೇ," ಎಂದು ಹೇಳುತ್ತಾನೆ. ಇವರ ಗಲಾಟೆಯನ್ನು ನಿಲ್ಲಿಸಲು ರಾಜೀವ್ ತಾನು ನೋಡಿದ ಹಕ್ಕಿಯ ಕಥೆಯನ್ನು ಮಕ್ಕಳಿಗೆ ಹೇಳಲು ಶುರು ಮಾಡುತ್ತಾನೆ. ಹಕ್ಕಿಗಳು ಎಷ್ಟು ಚೆನ್ನಾಗಿ ಪ್ರೀತಿಯಿಂದ ಇರುತ್ತದೆ. ಜಾತಿ- ಭೇದ ಮಾಡದೆ, ಪ್ರೀತಿಯಿಂದ ಎಲ್ಲಾ ಹಕ್ಕಿಗಳು ತಿಂಡಿಯನ್ನು ಹಂಚುತ್ತಾ, ಏನಾದರೂ ಕಷ್ಟಗಳು ಬಂದರೆ, ಎಲ್ಲಾ ಹಕ್ಕಿಗಳು ಪ್ರೀತಿಯಿಂದ, ಒಟ್ಟಾಗಿ ಕಷ್ಟಗಳನ್ನು ಎದುರಿಸುತ್ತಾ, ಪ್ರೀತಿಯಿಂದ ಇರುತ್ತದೆ. ಆದರೆ ಮನುಷ್ಯರಾದ ನಾವು ಇಂತಹ ಪ್ರೀತಿಯ ಭಾವನೆಯನ್ನು ಮರೆತು ಬಿಟ್ಟಿದ್ದೇವೆ. ಜಾತಿ-ಭೇದ, ಮಾಡುತ್ತಿದ್ದೇವೆ. ಹಕ್ಕಿಗಳ ಹಾಗೆ ಗಲಾಟೆ ಮಾಡದೆ, ಎಲ್ಲಾ ವಿಷಯಕ್ಕೂ ಒಟ್ಟಿಗೆ ಇದ್ದು, ಏನೇ ಕಷ್ಟ ಬಂದರೂ, ಒಟ್ಟಿಗೆ ಬಗೆಹರಿಸುವ ಗುಣವನ್ನು ಬೆಳೆಸಬೇಕು. ಎಂದು ಮಕ್ಕಳಿಗೆ ರಾಜೀವ್, ಹಕ್ಕಿಯ ಮುಖಾಂತರ ಸಹೋದರತ್ವ ಭಾವನೆಯನ್ನು ಬೆಳೆಸುವಂತೆ ಹೇಳಿಕೊಡುತ್ತಾನೆ. ಅಲ್ಲಿ ಗಲಾಟೆ ಮಾಡುತ್ತಿದ್ದ ಮಕ್ಕಳೆಲ್ಲರೂ, ರಾಜೀವ್ ಮಾತನ್ನ ಕೇಳಿ "ನಮ್ದು ತಪ್ಪಾಯಿತಣ್ಣ" ಎಂದು ಎಲ್ಲಾ ಮಕ್ಕಳೂ ಕ್ಷಮೆ ಯಾಚಿಸುತ್ತಾ.... "ನಾವೆಲ್ಲರೂ ಇನ್ನು ಮುಂದೆ ಒಂದಾಗಿರುತ್ತೇವೆ. ಜಾತಿ-ಭೇದ ಮಾಡದೇ ಒಂದೇ ತಾಯಿ ಮಕ್ಕಳ ರೀತಿ ಬಾಳುತ್ತೇವೆ. ನಾವೆಲ್ಲರೂ, ಒಟ್ಟಿಗೇ ಇರುತ್ತೇವೆ. ಎಲ್ಲರಿಗೂ ಹೀಗೆ ಪ್ರೀತಿಯಿಂದ ಇರಲು ತಿಳಿಸುತ್ತೇವೆ. ನಾವಿನ್ನೂ ಯಾವತ್ತೂ, ಈ ರೀತಿ ಗಲಾಟೆ ಮಾಡುವುದಿಲ್ಲ. ಎಲ್ಲರೂ ಒಟ್ಟಾಗಿ ಇರುತ್ತೇವೆ." ಎಂದು ಎಲ್ಲಾ ಮಕ್ಕಳು, ರಾಜೀವ್, ಬಳಿ ಹೇಳುತ್ತಾರೆ. ಮಕ್ಕಳೆಲ್ಲರೂ, ಸಂತೋಷವಾಗಿರುತ್ತಾರೆ. ಇದನ್ನು ನೋಡಿ ರಾಜೀವ್, ತುಂಬಾ ಸಂತೋಷ ಪಡುತ್ತಾನೆ.   
................................................ ಗೀತಾ ಲಕ್ಷ್ಮಿ
10ನೇ ತರಗತಿ
ಸರಕಾರಿ ಪ್ರೌಢ ಶಾಲೆ ಮಾಣಿಲ 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************

             

ಒಂದಾನೊಂದು ಊರು. ಆ ಊರಿನ ಪಕ್ಕದಲ್ಲಿ ಕಾಡು. ಅಲ್ಲಿಗೆ ಒಬ್ಬ ಜನ ಬಂದ. ಅವನು ಆ ಊರಿನ ಜನರಲ್ಲಿ ಮನೆ ಕಟ್ಟಲು ಹೇಳಿದ. ಎಲ್ಲರೂ ಮನೆ ಕಟ್ಟಲು ಪ್ರಯತ್ನಿಸಿದರು. ಕೊನೆಗೆ ಎಲ್ಲರೂ ಮನೆ ಕಟ್ಟಿ ಆಯಿತು. ಅಲ್ಲಿಗೆ ರಾಜ ಬಂದು ನೋಡಿದ. ಎಲ್ಲರ ಮನೆ‌ ಚಂದ ಆಗಿದೆ ಎಂದು ಹೇಳಿದ.
      ಆಗ ಆ ಜನರು, ಪಕ್ಕದಲ್ಲಿ ಒಂದು ಕಾಡು ಇದೆ.. ನಾವೆಲ್ಲರೂ ಅಲ್ಲಿಗೆ ಹೋಗೋಣ‌ ಎಂದರು. ಆಗ ರಾಜನು, ನನಗೆ ಹೋಗಲು ಭಯ ಎಂದು ಹೇಳಿದ. ಆಗ ಜನರು, ನಾವು ನಿಮ್ಮನ್ನು ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿದರು. ಕೊನೆಗೆ ಅವರೆಲ್ಲರೂ ಕಾಡಿಗೆ ಹೋದರು. ಆದರೆ ಅಲ್ಲಿ ಕಾಡುಮನುಷ್ಯರನ್ನು ನೋಡಿ ಎಲ್ಲರೂ ಭಯಪಟ್ಟರು. ಕಾಡುಮನುಷ್ಯರು ಇಲಿ, ಹಂದಿಗಳನ್ನು ತಿನ್ನುತ್ತಿದ್ದರು. ಇದನ್ನು ‌ನೋಡಿದ ಎಲ್ಲರೂ ಇನ್ನು ಮುಂದೆ ಕಾಡಿಗೆ ಹೋಗುವುದು ಬೇಡ ಎಂದು ತೀರ್ಮಾನ ಮಾಡಿದರು. ಹೀಗೆ ಮರ, ಪ್ರಾಣಿಗಳು ನಾಶವಾಗದೆ ಚೆನ್ನಾಗಿದ್ದವು.
................................... ಆಯಿಷತ್ ಶಹ್ ಮ
3ನೇ ತರಗತಿ
ದ ಕ ಜಿ ಪಂ ಉ ಹಿ ಪ್ರಾ ಶಾಲೆ ಗೋಳಿತ್ತಟ್ಟು 
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************

  
          
       ಒಂದಾನೊಂದು ಊರು. ಆ ಊರಿನಲ್ಲಿ ಪಿಂಟು ಎಂಬ ಹುಡುಗನಿದ್ದನು. ಅವನು ಕಲಿಕೆಯಲ್ಲಿ ಮತ್ತು ಇತರ ಚಟುವಟಿಕೆಯಲ್ಲಿ ಯಾವಾಗಲೂ ಮುಂದಿರುತ್ತಿದ್ದನು. ಮನೆಯವರ ಮುದ್ದು ಮಗನಾಗಿದ್ದನು. ಊರಿನಲ್ಲಿ ಒಳ್ಳೆಯ ಅಭಿಪ್ರಾಯ ಹೊಂದಿದ್ದನು. ಅವನಿಗೆ ಮೂರು ಜನ ಸ್ನೇಹಿತರಿದ್ದರು. ಅವರು ಚಿಂಟು, ದತ್ತು, ರಾಘು. ಅವರು ದಿನಾಲೂ ಶಾಲೆಯಿಂದ ಬಂದ ನಂತರ ಆಟವಾಡಲು ಹೋಗುತ್ತಿದ್ದರು. ಪಿಂಟು ಚಿಕ್ಕವಯಸ್ಸಿನವನಾಗಿದ್ದರು. ಜವಾಬ್ದಾರಿಯುತ ಹುಡುಗನಾಗಿದ್ದನು.  
         ಒಂದು ದಿನ ಪಿಂಟು ಮತ್ತು ಅವನ ಸ್ನೇಹಿತರು ಜೊತೆಗೂಡಿ ಸಮುದ್ರ ತೀರಕ್ಕೆ ಆಟವಾಡಲೆಂದು ತೆರಳುತ್ತಾರೆ. ಸಮುದ್ರದ ತೀರದಲ್ಲಿ ನಾಲ್ವರು ಖುಷಿಯಿಂದ ಕಾಲಕಳೆಯುತ್ತಿರುತ್ತಾರೆ. ಆ ಸಂದರ್ಭದಲ್ಲಿ ಪಿಂಟುವಿಗೆ ಭಯಂಕರವಾದ ನಾಯಿ ಕಣ್ಣಿಗೆ ಬೀಳುತ್ತದೆ. ಪಿಂಟು ಅದನ್ನು ನೋಡಿ ಹೆದರುತ್ತಾನೆ. ತನ್ನ ಸ್ನೇಹಿತರನ್ನು ಬಿಟ್ಟು ತಾನೊಬ್ಬನೇ ಪಾರಾದರೆ ಸಾಕು ಎನ್ನುವ ಆಲೋಚನೆ ಮಾಡುತ್ತಾನೆ. ಅವರಿಗೆ ವಿಷಯ ತಿಳಿಸದೆ ತಾನೊಬ್ಬನೇ ಅಲ್ಲೇ ಪಕ್ಕದಲ್ಲಿ ಇರುವ ಕಲ್ಲುಬಂಡೆಯ ಹಿಂದೆ ಅಡಗಿ ಕುಳಿತುಕೊಳ್ಳುತ್ತಾನೆ. ಆ ನಾಯಿ ಅವನ ಸ್ನೇಹಿತರ ಕಡೆಗೆ ಹೋಗದೆ ಕಲ್ಲು ಬಂಡೆಯ ಹತ್ತಿರವೇ ಓಡಿ ಬಂತು. ಇದರಿಂದ ಅವನಿಗೆ ತುಂಬಾ ಭಯವಾಯಿತು. ಪಿಂಟು ಓಡಲು ಆರಂಭಿಸುತ್ತಾನೆ, ನಾಯಿ ಕೂಡ ಅವನನ್ನು ಅಟ್ಟಾಡಿಸಿಕೊಂಡು ಹೋಗುತ್ತದೆ. ಪಿಂಟು ಜೀವ ಉಳಿಸಿಕೊಳ್ಳುವ ಭರದಲ್ಲಿ ಸಮುದ್ರದ ಆಳಕ್ಕೆ ಹೋಗಿ ಬಿಡುತ್ತಾನೆ. ಇನ್ನೇನು ತನ್ನ ಪ್ರಾಣ ಕಳೆದುಕೊಳ್ಳುತ್ತೇನೆ ಅನ್ನುವಷ್ಟ್ರಲ್ಲಿ ಅವನ ಆ ಮೂರು ಜನ ಸ್ನೇಹಿತರೇ ಅವನನ್ನು ಕಾಪಾಡುತ್ತಾರೆ. ಇದರಿಂದ ಅವನಿಗೆ ತುಂಬಾ ಬೇಸರವಾಗುತ್ತದೆ. ನಾನು ಅವರನ್ನು ಬಿಟ್ಟು ನನ್ನ ಜೀವ ಉಳಿಸಿಕೊಳ್ಳುವುದಕ್ಕಾಗಿ ಹಾಗೆ ಮಾಡಿದೆ, ಆದರೆ ಅವರು ತಮ್ಮ ಜೀವ ಒತ್ತೆ ಇಟ್ಟಾದರೂ ಸರಿ ನನ್ನ ಸ್ನೇಹಿತನನ್ನು ಉಳಿಸಿದರಲ್ಲ... ನನಗೆ ತುಂಬಾ ಬೇಸರವಾಗುತ್ತದೆ ಎಂದು ಮನಸ್ಸಿನಲ್ಲೇ ಹೇಳಿಕೊಂಡ.
          ಈ ಘಟನೆ ನಡೆದ ನಂತರದಲ್ಲಿ ಪಿಂಟು ನಾಯಿಯನ್ನು ನೋಡಿದರೆ ತುಂಬಾ ಭಯಪಡಲಾರಂಭಿಸುತ್ತಾನೆ. ಅಲ್ಲದೆ ತನ್ನ ಸ್ನೇಹಿತರಿಗೆ ಕ್ಷಮೆಯನ್ನು ಕೇಳುತ್ತಾನೆ. ಮುಂದಿನ ದಿನಗಳಲ್ಲಿ ಅವನು ತನ್ನೊಬ್ಭನ ಬಗ್ಗೆ ಮಾತ್ರ ಯೋಚಿಸದೆ ಬೇರೆಯವರ ಬಗ್ಗೆಯೂ ಯೋಚಿಸಲು ಆರಂಭಿಸುತ್ತಾನೆ. ಎಲ್ಲ ಸಂದರ್ಭದಲ್ಲಿಯೂ ಬೇರೆಯವರ ಕಷ್ಟಕ್ಕೆ ನೆರವಾಗುತ್ತಾನೆ. ಯಾರಿಗೂ ಕೆಡುಕನ್ನು ಬಯಸದೆ ಸುಖಮಯವಾದ ಜೀವನವನ್ನು ಸಾಗಿಸುತ್ತಾನೆ.
......................... ಹರ್ಷಿತಾ ನಾಗಪ್ಪ ಪಟಗಾರ
6ನೇ ತರಗತಿ 
ದಿನಕರ ಪ್ರಾಥಮಿಕ ಶಾಲೆ ಧಾರೇಶ್ವರ,
ಕುಮಟಾ ತಾಲೂಕು,ಉತ್ತರ ಕನ್ನಡ ಜಿಲ್ಲೆ .
******************************************


                           
         ಒಂದು ಕಾಡಿನಲ್ಲಿ ಟಿಂಪೂ ಎಂಬ ಒಂದು ಮಂಗವಿತ್ತು. ಒಂದು ದಿನ ಕಾಡಿನಲ್ಲಿರಬೇಕಾದರೆ ತುಂಬಾ ಹಸಿವೆಯಾಯಿತು. ತಿಂಡಿಯನ್ನು ಹುಡುಕುತ್ತಾ ಮುಂದೆ ಸಾಗುತ್ತಿರುವಾಗ ದೂರದಲ್ಲಿ ಒಂದು ಬಾಳೆಗಿಡ ಕಂಡಿತು. ಆದರೆ ಅಲ್ಲಿಗೆ ತಲುಪಲು ನದಿಯೊಂದನ್ನು ದಾಟಬೇಕಿತ್ತು.
        ಹೀಗೆ ಆಲೋಚಿಸುತ್ತಿರುವಾಗ ನದಿಯ ದಡದಲ್ಲಿ ಬಿಂಕೂ ಮೊಸಳೆ ಕಣ್ಣಿಗೆ ಬಿತ್ತು. ಅದರ ಬಳಿ ಸಹಾಯ ಕೇಳಿತು. ಆದೀತೆಂದು ಒಪ್ಪಿ, ಟಿಂಪುವನ್ನು ಬಿಂಕೂ ಮೊಸಳೆಯು ತನ್ನ ಬೆನ್ನಿನ ಮೇಲೆ ಕೂರಿಸಿಕೊಂಡು ನದಿಯ ಇನ್ನೊಂದು ದಡಕ್ಕೆ ಕರೆದುಕೊಂಡು ಹೋಯಿತು. 
           ಟಿಂಪೂ ಮಂಗವು ಖುಷಿಯಿಂದ ಬಾಳೆಗಿಡಕ್ಕೆ ಜಿಗಿದು ಹಣ್ಣುಗಳನ್ನು ಕೊಯ್ದು ಕೆಳಗಿಳಿಯಿತು. ನಂತರ ತಾನೊಬ್ಬನೇ ತಿನ್ನಲಿಲ್ಲ. ಬಿಂಕೂ ಮೊಸಳೆಗೆ ಕೂಡಾ ಕೊಟ್ಟು, ತಾನೂ ತಿಂದು ಹಸಿವನ್ನು ನೀಗಿಸಿತು. 
         ಹೀಗೆ ಅಂದಿನಿಂದ ಟಿಂಪೂ ಹಾಗೂ ಬಿಂಕೂ ಇಬ್ಬರೂ ಒಳ್ಳೆಯ ಗೆಳೆಯರಾದರು.
.................................. ಅಭಿನವ್ ಎಸ್ ಭಟ್
4ನೇ ತರಗತಿ 'ಬಿ'
ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ 
ನರಿಮೊಗರು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
******************************************


Ads on article

Advertise in articles 1

advertising articles 2

Advertise under the article