ಸ್ಫೂರ್ತಿಯ ಮಾತುಗಳು : ಸಂಚಿಕೆ - 108
Tuesday, March 26, 2024
Edit
ಸ್ಫೂರ್ತಿಯ ಮಾತುಗಳು : ಸಂಚಿಕೆ - 108
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ನಾವು ಸ್ಪರ್ಧಾತ್ಮಕ ಯುಗದಲ್ಲಿದ್ದೇವೆ. ಅವಕಾಶ ನೀಡುವ ಉದ್ದೇಶದಲ್ಲಿ ಸ್ಪರ್ಧೆಗಳು ಜರಗುತ್ತವೆ. ಬಹುಮಾನಗಳು, ಹುದ್ದೆಗಳು, ಪ್ರಶಸ್ತಿಗಳು, ಆಡಳಿತಾಧಿಕಾರ ಹೀಗೆ ಅನ್ಯಾನ್ಯ ಅವಕಾಶಗಳಿಗೆ ನಡೆಯುವ ಸ್ಪರ್ಧೆಗಳಲ್ಲಿ ಕೆಲವರು, ಕೆಲವೊಮ್ಮೆ ಒಬ್ಬರು ಅಥವಾ ಇಬ್ಬರು ಮಾತ್ರ ಗೆಲುವಿನ ನಗೆ ಬೀರಬಹುದಾದರೆ, ಸೋಲಿನ ಧಗೆ ಅನುಭವಿಸುವವರು ಹಲವರು ಎಂಬುದು ಖಚಿತ. ಆದರೆ ಸೋತವರಿಗೆ ಏನು ಲಾಭ? ಸೋಲು ಧಗೆಯೇ? ಸ್ಪರ್ಧೆಗಳಲ್ಲಿ ಗೆಲುವಿನ ನಗೆಯೊಂದೇ ಅಂತಿಮವಲ್ಲ. ಸ್ಪರ್ಧೆಯಿಂದಾಗಿ ಪಡೆದ ಅನುಭವ ದೊಡ್ಡದಾದ ಲಾಭವೆಂದರಿತರೆ ಸೋಲೇ ಗೆಲುವಿನ ಮತ್ತು ಗೆಲವಿನ ಸೋಪಾನವಾಗುತ್ತದೆ. ಸ್ಪರ್ಧೆಯಲ್ಲಿ ಎದುರಾಳಿಯ ಸಾಮರ್ಥ್ಯ ಕಡಿಮೆಯೆಂದು ತಿಳಿದಿದ್ದರೂ ಎಚ್ಚರ ತಪ್ಪುವಂತಿಲ್ಲ. ಮೊಲ ಮತ್ತು ಆಮೆಗಳ ಓಟದ ಸ್ಪರ್ಧೆಯಲ್ಲಿ ನಿಧಾನ ಗತಿಯ ಆಮೆ ಗೆದ್ದಿತು ಎಂಬ ಕಥೆಯನ್ನು ನಾವು ಓದಿದ್ದೇವೆ. ಅತಿ ವೇಗಿ ಮೊಲವು ಆಮೆಯ ಬಗ್ಗೆ ತಳೆದ ಮನೋಮಟ್ಟ ಮೊಲಕ್ಕೆ ಕೇಡನ್ನುಂಟು ಮಾಡಿತು. ಎಲ್ಲ ಸ್ಪರ್ಧಿಗಳಿಗೂ ಇದೊಂದು ಪಾಠ. ಸ್ಪರ್ಧೆಯಲ್ಲಿ ಜಯಿಸುವ ಸಾಮರ್ಥ್ಯ ಬಲವಾಗಿದ್ದರೂ ಕೆಲವು ಸಂದರ್ಭಗಳಲ್ಲಿ ನಮ್ಮ ದೌರ್ಬಲ್ಯಗಳೂ ನಮ್ಮನ್ನು ಸೋಲಿಸುವುದಿದೆ. ಅತ್ಯಂತ ವೇಗದ ಓಟಗಾತಿಯಾಗಿದ್ದ ರಾಜಕುಮಾರಿಯೊಬ್ಬಳು ತನ್ನನ್ನು ಮದುವೆಯಾಗುವವನು ಓಟದ ಸ್ಫರ್ಧೆಯಲ್ಲಿ ತನ್ನನ್ನು ಸೋಲಿಸುವವನಾಗಿರಬೇಕೆಂಬ ಸ್ಪರ್ಧೆಯನ್ನೊಡ್ಡಿದ್ದಳು. ವಿವಾಹಾರ್ಥಿಗಳಾಗಿ ಬರುತ್ತಿದ್ದ ಎಲ್ಲ ರಾಜಕುಮಾರರೂ ಸೋಲಿನ ರುಚಿಯನ್ನೇ ಉಂಡರು. ಒಬ್ಬ ರಾಜಕುಮಾರನು ಮಾತ್ರ ಸ್ತ್ರೀ ಸಹಜ ದೌರ್ಬಲ್ಯವನ್ನು ಬಳಸಿ ಗೆದ್ದು ಮದುವೆಯಾದನಂತೆ. ಅವನ ಸಹಚರರಿಗೆ ರಾಜಕುಮಾರಿ ಓಡುವ ಪಥದಲ್ಲಿ ಬಂಗಾರದ ಆಭರಣಗಳನ್ನು ಹಾಕುವಂತೆ ಈ ರಾಜಕುಮಾರ ಸೂಚನೆ ನೀಡಿದ್ದ. ಆರಂಭದಲ್ಲಿ ಸಾಕಷ್ಟು ಮುಂದೆ ಇದ್ದ ರಾಜಕುಮಾರಿಗೆ ಬಂಗಾರದ ಆಭರಣಗಳನ್ನು ನೋಡಿದಾಗ ಅವಳ ಮನಸ್ಸು ದುರ್ಬಲವಾಯಿತು. ಅವುಗಳನ್ನು ಹೆಕ್ಕುವ ಕೆಲಸ ಮಾಡಿದಳು. ಹೀಗೆ ಮೂರು ನಾಲ್ಕು ಬಾರಿ ಬಂಗಾರ ಹೆಕ್ಕುವ ಪ್ರಯತ್ನದಲ್ಲಿ ಓಟದ ಮುನ್ನಡೆಯನ್ನು ಕಳೆಯಿತು. ತಾನು ಹಿಂದೆ ಉಳಿದೆನೋ ಮುಂದೆ ಸಾಗಿದೆನೋ ಎಂಬ ಪರಿವೆ ಕೂಡಾ ಆಕೆಯಲ್ಲಿ ಉಳಿಯಲಿಲ್ಲ. ನಮ್ಮ ದೌರ್ಬಲ್ಯಗಳ ದುರ್ಲಾಭ ಪಡೆದು ನಮ್ಮನ್ನು ಸೋಲಿಸುವವರಿರುತ್ತಾರೆ.
ನಮ್ಮಲ್ಲಿ ನಾವು ವಿಶ್ವಾಸ ಹೊಂದಿರಬೇಕು. ಆದರೆ ಈ ವಿಶ್ವಾಸವು ಅಪರಿಮಿತವಾಗಿರಬಾರದು.. ಮಿತಿ ಮೀರಿದ ವಿಶ್ವಾಸವು ಸೋಲಿಗೆ ಹೇತುವಾಗುತ್ತದೆ. ನಿರಂತರ ಪ್ರಯತ್ನವಿಲ್ಲದೆ ಪ್ರತಿಸ್ಪರ್ಧಿಯ ದೌರ್ಬಲ್ಯದ ಪ್ರಯೋಜನ ಪಡೆದು ಸ್ಪರ್ಧೆಯನ್ನು ಗೆದ್ದರೂ ಆ ಗೆಲುವಿಗೆ ಮೌಲ್ಯವಿರುವುದಿಲ್ಲ. ಬಾಹ್ಯ ಸ್ಪರ್ಧಿಗಳನ್ನು ಗೆಲ್ಲುವ ಮೊದಲು ತನ್ನೊಂದಿಗೆಯೇ ಸ್ಪರ್ಧಿಸಿ ಗೆದ್ದರೆ ಅದು ಶಾಶ್ವತವಾದ ನೆಮ್ಮದಿಗೂ ಕಾರಣವಾಗುತ್ತದೆ. ನಾವು ನಮ್ಮೊಂದಿಗೆ ಸ್ಪರ್ಧಿಸಲು ವಿಷಯಗಳಾದರೂ ಯಾವುವು? ಪ್ರತಿಯೊಬ್ಬರೂ ತಮ್ಮಲ್ಲಿರುವ ಷಡ್ವೈರಿಗಳೊಂದಿಗೆ ಸ್ಪರ್ಧಿಸಿ ಗೆಲ್ಲಲೇ ಬೇಕು. ಜೊತೆಗೆ ನಮ್ಮೊಳಗಿರುವ ಆಲಸ್ಯ, ಕೀಳರಿಮೆಗಳನ್ನೂ, ದೌರ್ಬಲ್ಯಗಳನ್ನು ಸೋಲಿಸಬೇಕು. ಕೆಟ್ಟ ಬಾಷೆ, ಕೆಟ್ಟ ಭಾವನೆಗಳೊಂದಿಗೂ ನಾವು ಸ್ಪರ್ಧಿಸಿ ಗೆಲುವು ಕಾಣಬೇಕು. ಅನ್ಯರನ್ನು ತುಳಿದು ತಮ್ಮ ಕಾರ್ಯಸಾಧಿಸುವ ನೀಚತನವನ್ನೂ ನಾವು ಸ್ಪರ್ಧಿಸಿ ಗೆಲ್ಲಬೇಕು. ಚುನಾವಣೆಗಳು ಬಂದಾಗ ನಾವು ಗಮನಿಸುತ್ತೇವೆ. ಸ್ಪರ್ಧಾಳುಗಳು ಇತರರ ಮೇಲೆ ನಿರಂತರ ಮಿಥ್ಯಾರೋಪಗಳ ಧಾಳಿ ಮಾಡುವರು. ತಮ್ಮಲ್ಲಿರುವ ಧನಾತ್ಮಕ ವಿಚಾರಗಳು, ಜನರ ಬಗ್ಗೆ ತಮಗಿರುವ ಕಾಳಜಿ, ಯುವಕರ ಸಾಧನೆಗಳಿಗೆ ತಾವು ನೀಡುವ ಪ್ರೇರಣೆ. ಅಂಗವಿಕಲರು ವೃದ್ಧರು ರೋಗಿಗಳ ಬದುಕಿಗೆ ತಾವು ಕೊಡುವ ಭದ್ರತೆ, ಮಹಿಳೆಯರ ಕಲ್ಯಾಣ ಕಾರ್ಯಕ್ರಮಗಳು ಹೀಗೆ ನೂರಾರು ಉನ್ನತ ವಿಚಾರಗಳಿರುವಾಗ ಮಿಥ್ಯಾರೋಪಗಳನ್ನು ಮಾಡುವ ನಮ್ಮ ಮನಸ್ಸನ್ನು ಅಥವಾ ಭಾವನೆಯನ್ನು ಗೆದ್ದು ನಿಯಂತ್ರಿಸಲು ಸಾಧ್ಯವಾಗದವರು ಚುನಾವಣೆಯಲ್ಲಿ ಸ್ಪರ್ಧಿಸಲು ಲಾಯಕ್ಕಲ್ಲ. ಸ್ಪರ್ಧೆಗಳು ಬೇಕು. ಆದರೆ ನೀತಿಯ ಮಿತಿಯಿರಲಿ. ಹಿತಕರ ಸ್ಪರ್ಧೆಯೇ ನಮ್ಮ ಉಸಿರಾಗಿರಲಿ.
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
********************************************