-->
ಜಗಲಿ ಕಟ್ಟೆ : ಸಂಚಿಕೆ - 44

ಜಗಲಿ ಕಟ್ಟೆ : ಸಂಚಿಕೆ - 44

ಜಗಲಿ ಕಟ್ಟೆ : ಸಂಚಿಕೆ - 44
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ

      
     2023-24 ನೇ ಸಾಲಿನ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆ ಆರಂಭವಾಗಿದೆ. ವರ್ಷಪೂರ್ತಿ ಕಲಿತ ಪಠ್ಯದ ವಿಷಯಗಳನ್ನು ಮನನ ಮಾಡಿ ಸಾಕಷ್ಟು ಸಿದ್ಧತೆಗಳೊಂದಿಗೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಾಶಯಗಳು. ಮಕ್ಕಳ ಜಗಲಿಯಲ್ಲಿ ನಿರಂತರ ತೊಡಗಿಸಿಕೊಳ್ಳುತ್ತಿದ್ದ ಹತ್ತನೇ ತರಗತಿಯ ಗಗನಾ ಹಲಗೇರಿ, ಕೆ ಮಿಕ್ದಾದ್ ಕೆಯ್ಯೂರು, ಗೀತಾಲಕ್ಷ್ಮಿ ಮಾಣಿಲ, ಸೌಮ್ಯ ಈ ತೋರಣಗಲ್ಲು, ಚೈತ್ರ ಯು ಬಳ್ಳಾರಿ ಜಿಲ್ಲೆ , ಕಾವ್ಯ , ನೆಶ್ವಿತಾ ಡಿಸೋಜ ಕೊಳ್ನಾಡು ಹೀಗೆ ಅನೇಕ ಜಗಲಿಯ ವಿದ್ಯಾರ್ಥಿಗಳಿಗೆ ವಿಶೇಷವಾದ ಶುಭಹಾರೈಕೆಗಳು...     
      ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆ ಮೂರು ಹಂತಗಳಲ್ಲಿ ನಡೆಯಲಿದೆ. ಈ ವರ್ಷ ಇಲಾಖೆಯು ಪರೀಕ್ಷೆಗಾಗಿ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಒಂದು ವೆಬ್ ಕಾಸ್ಟಿಂಗ್. ಪ್ರತಿ ವರ್ಷ ಪರೀಕ್ಷಾ ಕೇಂದ್ರಗಳಲ್ಲಿ CCTV ಮಾತ್ರ ಅಳವಡಿಸಲಾಗುತ್ತಿತ್ತು. ಈ ವರ್ಷ CCTV ಇವುಗಳ ಜೊತೆಗೆ WEB CASTING ಅಳವಡಿಸಲಾಗಿದೆ. ಇದರಿಂದ ಯಾವುದೇ ಸ್ಥಳದಲ್ಲಿ ಕುಳಿತುಕೊಂಡು LAPTOP/ SYSTEM & ಮೊಬೈಲ್ ನಲ್ಲಿ ಪಾಸ್ವರ್ಡ್ ಅನ್ನು ಹಾಕಿ ಪರೀಕ್ಷೆ ಕೇಂದ್ರದ ಸಮಸ್ತ ಚಟುವಟಿಕೆಗಳನ್ನು ವೀಕ್ಷಿಸ ಬಹುದಾಗಿದೆ. ಆದಕಾರಣ SSLC ಪರೀಕ್ಷೆಗೆ ನಿಯೋಜಿತ ಮುಖ್ಯ ಅಧೀಕ್ಷಕರು ಹಾಗೂ ಮೇಲ್ವಿಚಾರಕರು ಇತರೆ ಎಲ್ಲಾ ಸಿಬ್ಬಂದಿಗಳು ಜಾಗರೂಕತೆಯಿಂದ ಕಾರ್ಯ ನಿರ್ವಹಿಸಬೇಕಾಗಿದೆ. SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ SSLC 1,2,3 ಹೀಗೆ ಮೂರು ಬಾರಿ ಪರೀಕ್ಷೆಗಳನ್ನು ಬರೆಯಲು ಅವಕಾಶವಿರುತ್ತದೆ. ಆದ ಕಾರಣ ಪರೀಕ್ಷೆ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು, ಯಾವುದೇ ಆಕ್ರಮಗಳಿಗೆ ಸಂಶಯಾಸ್ಪದ ಚಟುವಟಿಕೆಗಳಿಗೆ, ಅವಕಾಶ ನೀಡದೆ ಕೊಟ್ಟ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಲು ಈ ವ್ಯವಸ್ಥೆಯನ್ನು ಮಾಡಲಾಗಿದೆ. 
      ವಿದ್ಯಾರ್ಥಿಗಳು ಪರೀಕ್ಷೆಗಾಗಿ ಕಠಿಣ ಪರಿಶ್ರಮದಿಂದ ಎಲ್ಲಾ ರೀತಿಯ ಪೂರ್ವ ತಯಾರಿ ಮಾಡಿ ಪರೀಕ್ಷೆಗೆ ಆಗಮಿಸುತ್ತಾರೆ. ವಿದ್ಯಾರ್ಥಿಗಳು ಬಹು ನಿರೀಕ್ಷಿತ ಮಟ್ಟದಲ್ಲಿ ಪರೀಕ್ಷೆಯ ಪಾವಿತ್ರ್ಯತೆಯ ಬಗ್ಗೆ ಕಲ್ಪನೆಯನ್ನು ಹೊಂದಿರುತ್ತಾರೆ. ತಾವು ಕಷ್ಟಪಟ್ಟು ಓದಿ ಉತ್ತಮ ಅಂಕಗಳನ್ನು ಗಳಿಸುವ ಆಶಯವನ್ನು ಹೊಂದಿರುತ್ತಾರೆ. ಅದೇ ರೀತಿ ಶಿಕ್ಷಕರು ಕೂಡ ತಮ್ಮ ವಿಶೇಷ ಮುತುವರ್ಜಿಯಿಂದ ರಜಾ ದಿನಗಳಲ್ಲೂ ಕೂಡ ತರಗತಿಗಳನ್ನು ಮಾಡಿ ಜ್ಞಾನವನ್ನು ತುಂಬುತ್ತಾರೆ. ಈ ಮೂಲಕ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾರ್ಗದರ್ಶನ ನೀಡಿ ಆತ್ಮವಿಶ್ವಾಸವನ್ನು ಗಳಿಸಿಕೊಳ್ಳುವಂತೆ ಸಹಕರಿಸುತ್ತಾರೆ. ಈ ರೀತಿ ಸಿದ್ಧಗೊಳ್ಳುವ ವಿದ್ಯಾರ್ಥಿಗಳಿಗೆ ಹಾಗೂ ಸಿದ್ಧಗೊಳಿಸುವ ಶಿಕ್ಷಕರಿಗೆ ಅನ್ಯಾಯವಾಗಬಾರದೆನ್ನುವ ದೃಷ್ಟಿಯಿಂದ ಇಂತಹ ಹೊಸ ಪದ್ಧತಿಗಳನ್ನು ಅನುಸರಿಸುವುದು ಅನಿವಾರ್ಯವಾಗಿದೆ.
      'ಕಡ್ಡಾಯ ಶಿಕ್ಷಣ ದಡಿಯಲ್ಲಿ' 14 ವರ್ಷದೊಳಗಿನ ಎಲ್ಲಾ ವಿದ್ಯಾರ್ಥಿಗಳು ಶಾಲಾ ಶಿಕ್ಷಣದಲ್ಲಿ ಪಾಲ್ಗೊಳ್ಳುತ್ತಿರುವುದು ದೊಡ್ಡ ಮಟ್ಟದ ಬೆಳವಣಿಗೆ. ಆದರೆ ಬಹುತೇಕ ವಿದ್ಯಾರ್ಥಿಗಳಲ್ಲಿ ಯಾವುದೇ ಪ್ರಯತ್ನದ ಹೊರತಾಗಿಯೂ, ಸಂಪೂರ್ಣವಾಗಿ ತೊಡಗಿಸಿಕೊಳ್ಳದೆಯೂ ಮುಂದಿನ ತರಗತಿಗೆ ಪ್ರವೇಶವನ್ನು ಪಡೆಯಬಹುದೆನ್ನುವ ಬಲವಾದ ನಂಬಿಕೆ ವಿದ್ಯಾರ್ಥಿಗಳ ಮನಸ್ಸಲ್ಲಿದೆ. ವ್ಯವಸ್ಥೆಯ ಕಟ್ಟುಪಾಡಿನೊಳಗೆ, ಮೊಬೈಲ್ , ಟಿವಿ , ಇನ್ನಿತರೆ ಮಾಧ್ಯಮಗಳ ಹಾವಳಿಯಿಂದ ವಿದ್ಯಾರ್ಥಿಗಳು ಶಾಲಾ ಶಿಕ್ಷಣದಿಂದ ವಿಮುಖರಾಗುತ್ತಿರುವುದು ಅರಗಿಸಲಾಗದ ಸತ್ಯ..!! ಕನಿಷ್ಠ ಬರೆಯುವ, ಓದುವ ಸಾಮರ್ಥ್ಯವನ್ನು ಗಳಿಸಲಾಗದ ವಿದ್ಯಾರ್ಥಿಗಳು 9ನೇ ತರಗತಿವರೆಗೆ ಯಾವುದೇ ಶ್ರಮವಿಲ್ಲದೆ ಬರುತ್ತಾರೆಂದರೆ ಶಿಕ್ಷಣದ ಗುಣಮಟ್ಟವನ್ನು ಉಳಿಸುವ ಬಗ್ಗೆ ಎಲ್ಲರೂ ಚಿಂತಿಸಬೇಕಾದ ಅವಶ್ಯಕತೆ ಇದೆ...!!
         ಯಾರಿಗೇ ಆಗಲಿ ಯಾವುದೇ ಕಷ್ಟ ಪಡದೆ ಹೆಚ್ಚು ಅಂಕ ಗಳಿಸಬೇಕೆನ್ನುವ ಮನೋಭಾವ ಇರಕೂಡದು. ಇಂತಹ ಒಂದು ಅವಕಾಶಗಳಿಗೆ ಆಸ್ಪದ ಸಿಕ್ಕಾಗ ಪರೀಕ್ಷೆಯ ಪಾವಿತ್ರ್ಯತೆಯು ಕಳೆದುಕೊಳ್ಳುತ್ತದೆ. ಫಲಿತಾಂಶದ ಪೈಪೋಟಿಯಲ್ಲಿ ಶಾಲೆಯಿಂದ ಶಾಲೆಗೆ ಜಿಲ್ಲೆಯಿಂದ ಜಿಲ್ಲೆಗೆ ಅವೈಜ್ಞಾನಿಕ ಸ್ಪರ್ಧೆಯಿಂದ ಪರೀಕ್ಷೆಯ ಮೌಲ್ಯಗಳು ಕಳೆದುಕೊಳ್ಳುತ್ತಿದೆ ಎಂದರೆ ತಪ್ಪಾಗಲಾರದು. ಪರೀಕ್ಷೆಯ ಮೌಲ್ಯಗಳ ಜೊತೆ ಜೊತೆಗೆ ನಂಬಿಕೆಯೂ ಕೂಡ ಕಳೆದುಕೊಳ್ಳುತ್ತಿದೆ ಎಂದರೆ ನಂಬಲೇಬೇಕು. ಈ ವ್ಯವಸ್ಥೆಯೊಳಗಡೆ ಭಾಗವಹಿಸುವ ಪ್ರತಿಯೊಬ್ಬರೂ ಕೂಡ ತಮ್ಮ ಜವಾಬ್ದಾರಿಯನ್ನರಿತು ಸ್ವಚ್ಛವಾಗಿ ತಮ್ಮ ಕೆಲಸಗಳನ್ನು ನಿರ್ವಹಿಸಿದರೆ ನಂಬಿಕೆಯು ಶಾಶ್ವತವಾಗುತ್ತದೆ. ಸಿಸಿಟಿವಿಯಾಗಲಿ ವೆಬ್ ಕ್ಯಾಮರಗಳಾಗಲಿ ಇದರ ಅವಶ್ಯಕತೆಗಳು ಖಂಡಿತಾ ಬರಲಾರದು. ಶಿಕ್ಷಣದ ಗುಣಮಟ್ಟವು ಖಂಡಿತಾ ಉತ್ತಮಗೊಳ್ಳುತ್ತದೆ. ನಮಸ್ಕಾರ 
           
          
ಕಳೆದ ಸಂಚಿಕೆಯ ಜಗಲಿಕಟ್ಟೆ - 43 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ಪ್ರತಿಮಾ ಜಿ ಕೆ, ಸಹ ಶಿಕ್ಷಕಿ... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....     ಮಕ್ಕಳ ಜಗಲಿಯಲ್ಲಿ ನಮ್ಮ ಶಿಕ್ಷಣ ಇಲಾಖೆಯ ದಿವಾಕರ್ ಶೆಟ್ಟಿ ಹೆಚ್ ಮಾನ್ಯ ನಿವೃತ್ತ ಪ್ರವಾಚಕರು ಸಿ‌.ಟಿ.ಇ ಮಂಗಳೂರು ಇವರು ಬರೆದ ವಿಜ್ಞಾನ ಸರಣಿಯ ಲೇಖನ ಜೀವಾಂಕುರ ಓದಿದೆ.
     ವಿಜ್ಞಾನ ವಿಷಯವನ್ನು ಹೇಗೆ ಕುತೂಹಲ ಭರಿತವಾಗಿ ಆಸಕ್ತಿದಾಯಕವಾಗಿ ವಿದ್ಯಾರ್ಥಿಗಳನ್ನು ಮತ್ತು ಓದುಗರನ್ನು ಎಂಬುದಕ್ಕೆ ಪತ್ತೆದಾರಿ ರೋಮಾಂಚಕ ಕಾದಂಬರಿಗಳ ಓದಿನ ಹಾಗೆ ಸೆಳೆಯಬಹುದು ಎಂಬುದಕ್ಕೆ ಸರ್ ಅವರು ಬರೆದ ಲೇಖನವೇ ಸಾಕು.
    ಸಹಜವಾಗಿ ವಿಜ್ಞಾನ ಎನ್ನುವ ವಿಷಯ ನಿಖರತೆ, ಅಂಕಿ ಅಂಶಗಳು ಒಳಗೊಂಡಿದ್ದು, ಇದ್ದ ವಿಷಯವನ್ನು ನೇರವಾಗಿ ಉತ್ಪ್ರೇಕ್ಷೆ ಇಲ್ಲದೆ ಬಣ್ಣನೆ ಇಲ್ಲದೆ ಎದುರು ಕುಳಿತಿರುವ ಓದುಗರಿಗೆ, ವಿದ್ಯಾರ್ಥಿಗಳಿಗೆ ಅರ್ಥವಾಗುವ ಹಾಗೆ ದಾಟಿಸುವ ಸವಾಲನ್ನು ಹೊಂದಿರುವಂತಹದ್ದು.
   ಸರ್ ಅವರ ಅನೇಕ ಲೇಖನಗಳನ್ನು ನಾನು ಫೇಸ್ ಬುಕ್ ನಲ್ಲಿ ಮತ್ತು ಇತರೆ ಮುದ್ರಣ ಮಾಧ್ಯಮದಲ್ಲಿ ಓದಿದ್ದೇನೆ.
      ನನಗೆ ಬಾಲ್ಯದಿಂದಲೂ ಓದುತ್ತಿದ್ದ ಸುಧಾ ವಾರಪತ್ರಿಕೆ ಮತ್ತು ಪ್ರಜಾವಾಣಿಯ ಸಾಪ್ತಾಹಿಕ ವಾರಕ್ಕೊಂದು ಆವರ್ತಿಯಾಗಿ ಲೇಖನವನ್ನು ಬರೆಯುತ್ತಿದ್ದ ಎನ್ ವಾಸುದೇವ್ ಸರ್ ( ಈಗಲೂ ಬರೆಯುತ್ತಿದ್ದಾರೆ) ಅವರ ವಿಷಯ ಮಂಡನೆ ಆಸಕ್ತಿದಾಯಕವಾಗಿ ಹೇಳುವ ಪರಿ ಆಕರ್ಷಿಸಿತ್ತು. ಹಾಗೆ ನಾಗೇಶ್ ರವರ ವಿಜ್ಞಾನ ಬರಹಗಳು ಕೂಡ.
     ನಂತರ ವಿಜ್ಞಾನದ ವಿಷಯವನ್ನು ದಿವಾಕರ್ ಸರ್ ಲೇಖನಿಯಲ್ಲಿ ಓದಿದ ಮೇಲೆ ಮೂಲತಹ ಕಲಾವಿದ್ಯಾರ್ಥಿಯಾದ ನನಗೆ ವಿಜ್ಞಾನ ಇನ್ನಷ್ಟು ಆಳಕ್ಕೆ ಇಳಿಯಿತು.
    ಇಷ್ಟನ್ನೆಲ್ಲಾ ಏಕೆ ಹೇಳಬೇಕಾಯಿತು ಎಂದರೆ ವಿಜ್ಞಾನವನ್ನು ಆಸಕ್ತಿದಾಯಕವಾಗಿ ಓದುವಂತೆ ಬೋಧಿಸುವಂತೆ... ಹೇಗೆ ಎಂಬುದಕ್ಕೆ ಉತ್ತರ ಸರ್ ಅವರ ಬರವಣಿಗೆ.
      "ಜೀವಾಂಕುರ" ಈ ಲೇಖನ ಜೀವಕೋಶ ಜೀವ ಉತ್ಪತ್ತಿ ಇದರ ಪ್ರಕ್ರಿಯೆ ಬಯಲು ಆಲಯ ವಾಗುವುದು ಆಲಯದಲ್ಲಿ ಬಯಲನ್ನು ಹಿಡಿದಿಡುವಿಕೆ ಇದಕ್ಕೆ ಕನಕದಾಸರ ಕೀರ್ತನೆಯನ್ನು ಪ್ರಾರಂಭದಲ್ಲಿ ಬಳಸಿ ನಂತರ ಕುವೆಂಪುರವರ ಆಲಯದ ಪರಿಕಲ್ಪನೆ ಆಸಕ್ತಿದಾಯಕವಾಗಿ ಹೇಳುತ್ತಾ ಹೇಗೆ ಜೀವಕೋಶ ಜೀವಾಂಕುರ ಜೀವೊತ್ಪತ್ತಿ ಆಗುತ್ತದೆ ಎಂಬುದನ್ನು ವಿಜ್ಞಾನದ ಪಾರಿಭಾಷಿಕ ಪದಗಳನ್ನು ಬಳಸಿ ಓದುಗರ ಮನಸ್ಸಿಗೆ ವಿದ್ಯಾರ್ಥಿಗಳ ಮೆದುಳಿನಲ್ಲಿ ನಾಟಿಸುವುದು ಸುಲಭದ ಮಾತಲ್ಲ.
      ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಲೇಖಕ ಮತ್ತು ಸಹೃದಯ ( ಅಂದರೆ ಓದುಗ) ಇವರ ನಡುವೆ ಯಶಸ್ವಿ ಸಂವಹನ ಕಾವ್ಯ ಮೀಮಾಂಸೆಯ ಸಾಹಿತ್ಯ ಪರಿಭಾಷೆಯಲ್ಲಿ ರಸಾನುಭವ ಆಗಬೇಕು ಎಂದರೆ ವಿಷಯ ಮನಮುಟ್ಟುವಂತೆ ಓದುಗನಿಗೆ ತಲುಪಬೇಕು ಎಂದರೆ ಆ ಸಂವಹನ ಸಿದ್ದಿಸಿರಬೇಕು ಲೇಖಕನಿಗೆ. ಇದು ಎಲ್ಲ ಲೇಖಕರಿಗೂ ಸಾಧ್ಯವಾಗುವುದಿಲ್ಲ. ತೀರಾ ವಿರಳ.
     ಲೇಖನದ ಕೊನೆಯಲ್ಲಿ ನನಗೆ ಬಹಳ ಇಷ್ಟವಾದದ್ದು ವಿಶೇಷವಾಗಿ ಮಕ್ಕಳಿಗೆ ವಿಜ್ಞಾನದ ಈ ಕೌತುಕ ಆಳ ಅಗಲಗಳನ್ನು ಅರಿಯಬೇಕಾದರೆ ಶುದ್ಧ ವಿಜ್ಞಾನ ( Pure science) ಕಲಿಯಬೇಕು ಆಸಕ್ತಿ ಹೊಂದಬೇಕು ಎಂಬ ವಿಷಯವನ್ನು ತಿಳಿಸಿರುವುದು. ಈ ಲೇಖನದ ತೂಕವನ್ನು ಹೆಚ್ಚಿಸಿದೆ.
      ಹಿರಿಯರಾದ ಪ್ರೀತಿಯ ದಿವಾಕರ್ ಸರ್ ನಿಮ್ಮ ವಿಜ್ಞಾನದ ಬರವಣಿಗೆ ಈ ರೀತಿ ಆಸಕ್ತಿದಾಯಕ ಸಾಹಿತ್ಯದ ಹಳಿಯ ಮೇಲೆ ಸಾಗಲಿ ಅದನ್ನು ಸವಿಯುವ ಓದುಗ ಪಯಣಿಗರು ನಾವು ಎಂದು ನಿಮಗೆ ಅಭಿನಂದನೆಯನ್ನು ತಿಳಿಸುತ್ತಿದ್ದೇನೆ.
........................................ ಜಿ ಎಸ್ ಶಶಿಧರ
ಹಿರಿಯ ಉಪನ್ಯಾಸಕರು
ಡಯಟ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*****************************************ನಮಸ್ತೇ...
    ಸ್ವಾರ್ಥ ರಹಿತ ಕೆಲಸದಿಂದ ಮಾತ್ರ ಮಾನವ ಉತ್ತುಂಗಕ್ಕೇರಬಹುದು ಎನ್ನುವ ಸಂದೇಶವನ್ನು ಅಬ್ರಹಾಂ ಲಿಂಕನ್ ರವರ ಘಟನೆಯ ಉದಾಹರಣೆಯೊಂದಿಗೆ ಶಿಕ್ಷಣಾಧಿಕಾರಿ ಜ್ಞಾನೇಶ್ ಸರ್ ರವರು ಬಹಳ ಸುಂದರವಾಗಿ ನಿರೂಪಿಸಿದ್ದಾರೆ.
     ಹೃದಯ ವೈಶಾಲ್ಯತೆ (ವಿಶಾಲ ಮನೋಭಾವ) ಇರುವವರು ಎಲ್ಲರೊಂದಿಗೆ ಸಮಚಿತ್ತವಾಗಿ ಬೆರೆಯುತ್ತಾರೆ. ವಿಶಾಲ ಮನೋಭಾವವನ್ನು ಎಲ್ಲರೂ ರೂಢಿಸಿಕೊಳ್ಳಬೇಕೆನ್ನುವ ಕಳಕಳಿಯ ಉತ್ತಮ ಲೇಖನ ರಮೇಶ್ ಬಾಯಾರ್ ಸರ್ ರವರಿಂದ.
     ಜೀವಕೋಶದ ರಚನೆ ಮತ್ತು ಜೀವಕೋಶದಿಂದ ಜೀವಿಗಳ ಉಗಮ ಹೇಗೆ ಅನ್ನೋದನ್ನು ಬಹಳ ಅದ್ಭುತವಾಗಿ ಸುಂದರವಾಗಿ ದಿವಾಕರ್ ಸರ್ ಅವರು ಈ ಸಲದ ವೈಜ್ಞಾನಿಕ ಲೇಖನದಲ್ಲಿ ವಿವರಿಸಿದ್ದಾರೆ. ಧನ್ಯವಾದಗಳು ಸರ್.
     ಈ ವಾರದ ಹಕ್ಕಿಕಥೆಯಲ್ಲಿ ಕಂದು ಕಳಿಂಗ ಅನ್ನುವ ವಲಸೆ ಹಕ್ಕಿಯ ಸೊಗಸಾದ ಪರಿಚಯ ಅರವಿಂದ ಸರ್ ರವರಿಂದ.
    ಪಂಚಪತ್ರೆ ಅತಿ ಉಪಯುಕ್ತ ಗಿಡಮೂಲಿಕೆ. ಈ ಸಲದ ಸಂಚಿಕೆಯಲ್ಲಿ ವಿಜಯಾ ಮೇಡಮ್ ಅವರಿಂದ ಈ ಗಿಡದ ಕುರಿತಾಗಿ ಅತ್ಯುಪಯುಕ್ತ ಮಾಹಿತಿ. ಧನ್ಯವಾದಗಳು ಮೇಡಂ.
    ಶ್ರೇಷ್ಟ ವಿಜ್ಞಾನಿಯಾಗಬಲ್ಲ ಪ್ರತಿಭೆಯೊಂದು ವಿಧಿಯಾಟಕ್ಕೆ ಬಲಿಯಾಗಬೇಕಾದ ನೈಜ ಘಟನೆ ಮನಮಿಡಿಯುವಂತಿತ್ತು. ಧನ್ಯವಾದಗಳು ಯಾಕೂಬ್ ಸರ್.
    ಚಾಚಾ ನೆಹರು ಒಂದು ಪುಸ್ತಕ ಕಳುಹಿಸಿ ಕೊಡುತ್ತೀರಾ ಎನ್ನುವ ಸುಂದರ ಪುಸ್ತಕದ ಪರಿಚಯ ವಾಣಿ ಅಕ್ಕನವರಿಂದ.
    ಕಲಿಯುವಿಕೆಯಲ್ಲಿ ಚುರುಕಿಲ್ಲದಿದ್ದರೂ ಹೇಳಿದ ಕೆಲಸವನ್ನು ತಪ್ಪದೇ ಮಾಡುವ ಮಗುವಿನ ಕುರಿತಾದ ಸುಂದರ ಅನುಭವ ಸತೀಶ್ ಕುಮಾರ್ ರವರಿಂದ ಈ ವಾರದ ಶಿಕ್ಷಕರ ಡೈರಿಯಲ್ಲಿ.
    ರಮೇಶ ಉಪ್ಪುಂದರವರ ಪದದಂಗಳ ಸಂಚಿಕೆ ಬಹಳ ಸೊಗಸಾಗಿ ಮೂಡಿಬರುತ್ತಿದೆ. ಧನ್ಯವಾದಗಳು ಸರ್.
    ಜಗಲಿಗೆ ಲೇಖನಗಳನ್ನು ಕಳುಹಿಸಿ ಸ್ಪೂರ್ತಿ ತುಂಬಿದ ಎಲ್ಲರಿಗೂ ನನ್ನ ಕೃತಜ್ಞತೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************


ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ಜಿ ಎಸ್ ಶಶಿಧರ ಹಿರಿಯ ಉಪನ್ಯಾಸಕರು.. ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************


Ads on article

Advertise in articles 1

advertising articles 2

Advertise under the article