ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 21
Tuesday, March 26, 2024
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 21
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ.... ಕಾಡಿನ ರಾಜ ಯಾರಿಗೆ ಗೊತ್ತಿಲ್ಲ ಅಲ್ಲವೇ? ಆತನ ಕೇಸರದ ಸೌಂದರ್ಯಕ್ಕೆ ಸೋತ ಜನ ಅವನನ್ನು ಕೇಸರಿ ಎಂದು ಕರೆಯುತ್ತಾರೆ. ಈ ಸಿಂಹರಾಜ ಒಂದಷ್ಟು ದೂರ ನಡೆದ ಮೇಲೆ ಎತ್ತರದ ಜಾಗದಲ್ಲಿ ನಿಂತು ತಾನು ಸವೆಸಿದ ದಾರಿಯನ್ನೊಮ್ಮೆ ನೋಡುತ್ತಾನಂತೆ. ಈ ಅವಲೋಕನವನ್ನು ಸಿಂಹಾವಲೋಕನ ಎನ್ನುತ್ತೇವೆ. ಮೊನ್ನೆಯ ಸಂಚಿಕೆಯನ್ನು ನೋಡುತ್ತಿದ್ದಾಗ ಇದು 20 ನೆಯ ಸಂಚಿಕೆ ಎಂದು ಗುಂಪಿನ ನಿರ್ವಾಹಕರು ನೆನಪಿಸಿದರು. ಮತ್ತು ಬರೆವಣಿಗೆ ಒಂದು ಹಂತ ತಲುಪಿದೆ ಅನ್ನಿಸಿದ್ದರಿಂದ ಹೊಸ ವಿಷಯಗಳನ್ನು ಹೇಳುವುದಕ್ಕಿಂತ ಈ ಹಿಂದೆ ಹೇಳಿದ ಸಂಚಿಕೆಗಳಲ್ಲಿ ಚರ್ಚಿಸಿದ ವಿಷಯಗಳ ಪುನರಾವಲೋಕನ ಮಾಡುವುದು ಒಳಿತು ಅನ್ನಿಸಿದೆ. ಆದ್ದರಿಂದ ಒಮ್ಮೆ ಹಿಂದಿರುಗಿ ನೋಡೋಣ.
13.5 ಬಿಲಿಯನ್ ವರ್ಷಗಳ ಹಿಂದೆ ಈ ನಮ್ಮ ವಸ್ತು ವಿಶ್ವ (material world) ರೂಪುಗೊಂಡಿತು. ಅಂದರೆ ಸಮಯ ಅಲ್ಲಿಂದಲೇ ಆರಂಭವಾಯಿತೇ ಎಂದರೆ ಇಲ್ಲ ಅದಕ್ಕಿಂತಲೂ ಮೊದಲು ವಿಶ್ವ ಅಸ್ತಿತ್ವದಲ್ಲಿತ್ತು. ಆದರೆ ಅದು ಶಕ್ತಿಯ ರೂಪದಲ್ಲಿತ್ತು. ಆದ್ದರಿಂದ 13.5 ಬಿಲಿಯನ್ ವರ್ಷಗಳಿಗೆ ಸಮಯ ಸೊನ್ನೆ ಅಥವಾ ಆರಂಭವಲ್ಲ ಬದಲಾಗಿ ನಮ್ಮ ಗಂಟೆಯ ನೆಂಟ ಟಿಕ್ ಟಿಕ್ಕಿಸುತ್ತಲೇ ಇದ್ದ. ಈ ವಿಶ್ವದಲ್ಲಿ ಸೂರ್ಯ ಕಾಣಿಸಿದ್ದು 4.5 ಬಿಲಿಯನ್ ವರ್ಷಗಳ ಹಿಂದೆ.%% ಅಲ್ಲಿಂದ ಕೇವಲ 3 ಮಿಲಿಯನ್ ವರ್ಷಗಳಲ್ಲಿ ಅವನಿಗೆ ಹೆಣ್ಣು ಮಗುವೊಂದು ಹುಟ್ಟಿತು ಅವಳೇ 'ಅವನಿ'. ಅವನಿ ತನ್ನಪ್ಪ ಸೂರ್ಯನಿಗೆ ವಿಧೇಯಳಾಗಿ ಸುತ್ತುತ್ತಿರುವಾಗ ಧೂರ್ತ ಕಾಯವೊಂದು ಬಂದು ಅವನಿಗೆ ಢಿಕ್ಕಿ ಹೊಡೆಯಿತು. ಆಗ ಭೂಮಿಗೊಬ್ಬ ಮಗ ಹುಟ್ಟಿದ ಅವನೇ ಚಂದ್ರ. ಸೂರ್ಯನ ಹೊಟ್ಟೆಯಲ್ಲಿ ಬೈಜಿಕ ಕುಲುಮೆ (nuclear furnace) ಉರಿಯುತ್ತಲೇ ಇದ್ದುದರಿಂದ ಆತ ನಿರಂತರವಾಗಿ ಶಾಖ ಮತ್ತು ಬೆಳಕನ್ನು ಹೊರ ಸೂಸುತ್ತಾ ತನ್ನ ಬಳಗದ ಶಕ್ತಿಯ ಅವಶ್ಯಕತೆಗಳನ್ನು ಪೊರೈಸುತ್ತಾ ಉರಿದು ಖಾಲಿಯಾಗತೊಡಗಿದ. ಆದರೆ ಭೂಮಿ ಮತ್ತು ಚಂದ್ರನ ಒಡಲು ಆರಿ ನಿಧಾನವಾಗಿ ತಣ್ಣಗಾಗತೊಡಗಿದವು.
ತಣ್ಣಗಾಗುವ ಭೂಮಿಯ ಒಡಲಾಳದಲ್ಲಿ ನಡೆಯುವ ರಾಸಾಯನಿಕ ಕ್ರಿಯೆಯಲ್ಲಿ ಬಿಡುಗಡೆಯಾಗುತ್ತಿದ್ದ ಅನಿಲಗಳು ಭೂ ಗುರುತ್ವದಿಂದ ತಪ್ಪಿಸಿಕೊಳ್ಳಲಾಗದೇ ಒಂದು ವಾತಾವರಣ ರೂಪಗೊಂಡಿತು. ಇದೇ ರಾಸಾಯನಿಕ ಕ್ರಿಯೆಯಲ್ಲಿ ಬಿಡುಗಡೆಯಾದ ನೀರು ಮೊದಲು ಅನಿಲ ರೂಪದಲ್ಲಿ ನಂತರ ಭೂಮಿ ತಣ್ಣಗಾಗುತ್ತಿದ್ದಂತೆ ದ್ರವ ರೂಪದಲ್ಲಿ ಸಂಗ್ರಹವಾಯಿತು. ಇದರೊಂದಿಗೆ ಧೂಮಕೇತುಗಳು ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸುವಾಗ ತಂದ ಹನಿ ಹನಿ ನೀರು ಸಂಗ್ರಹವಾಗುತ್ತಾ ಹೋಗಿ 23 ರಷ್ಟಿರ ಬೇಕಾಗಿದ್ದ ನೀರಿನ ಪ್ರಮಾಣ 71 ರಷ್ಟಾಯಿತು. ಹೀಗೆ ಜೀವಾಂಕುರಕ್ಕೆ ಅಗತ್ಯವಾದ ಮಾಧ್ಯಮ ಸಿದ್ಧವಾಯಿತು.
ಅಲ್ಲಿಂದ ಅಡುಗೆಯ ಕೆಲಸ ಆರಂಭವಾಯಿತು. ಜೀವ ರಚನೆಯ ಮೂಲ ಘಟಕಗಳಾದ ಅಮೈನೋ ಆಮ್ಲಗಳು, ಮಾನೋ ಸ್ಯಾಕರೈಡ್ ಗಳು, ಲಿಪಿಡ್ ಗಳು ಮತ್ತು ನ್ಯೂಕ್ಲಿಯಿಕ್ ಆಮ್ಲದ ಬೇಸ್ ಗಳಾಗಿ ಬದಲಾಗಲಿರುವ N-heterocycles ಗಳ ತಯಾರಿ ನಡೆಯತೊಡಗಿತು. ಸೂರ್ಯನ ಬೆಳಕು, ಮಿಂಚು, ಅಲ್ಟ್ರಾವಯೋಲೆಟ್ ಕಿರಣಗಳು, ಜ್ವಾಲಾಮುಖಿಯ ಶಾಖ, ಮತ್ತು ಜಲೋಷ್ಣ ಕ್ರಿಯೆಗಳು (hydrothermal reactions) ಈ ಎಲ್ಲಾ ರುಚಿಕರವಾದ ಅಡುಗೆಯನ್ನು ತಯಾರಿಸಲು ಬೇಕಾದ ಶಕ್ತಿಯನ್ನು ಒದಗಿಸಿದವು. ಹೀಗೆ ಜೀವ ರಚನೆಗೆ ಬೇಕಾದ ಎಲ್ಲಾ ಮೂಲ ಘಟಕಗಳಾದ ಪ್ರೋಟೀನ್‌ಗಳು, ಪೆಂಟೋಸ್ ಸಕ್ಕರೆ, ಕೊಬ್ಬು ಮತ್ತು ನ್ಯೂಕ್ಲಿಯಿಕ್ ಆಮ್ಲಗಳು ದೊರೆತವು. ಇವು ಭೂಮಿಯ ಮೇಲೂ ತಯಾರಾಗಿರಬಹುದು ಅಥವಾ ಬಾಹ್ಯಾಕಾಶದಿಂದ ಬಂದಿಳಿದಿರಬಹುದು. ಒಟ್ಟು ದ್ರವ ರೂಪದ ನೀರು ಈ ಎಲ್ಲಾ ಘಟಕಗಳಿಂದಾಗಿ ಜೀವಾಂಕುರದ ವೇದಿಕೆ ಸಿದ್ಧಗೊಂಡಿತು.
ಪರೀಕ್ಷೆಯ ದಿನಗಳಲ್ಲಿ ಪುನರಾವರ್ತನೆಯಾಗಬೇಕಲ್ಲ. ಅದು ಇಂದು ಮುಗಿಯಿತು. ಮುಂದಿನ ಸಂಚಿಕೆಯಲ್ಲಿ ಮೊದಲು ಬಂದ ಜೀವಿ ಯಾವುದು ತಿಳಿಯೋಣ.
ಮುಂದೆ ಜೀವಿ ಸಂಕೀರ್ಣತೆಯ ಬಗ್ಗೆ ತಿಳಿಯೋಣ.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
********************************************