-->
ಜಗಲಿ ಕಟ್ಟೆ : ಸಂಚಿಕೆ - 43

ಜಗಲಿ ಕಟ್ಟೆ : ಸಂಚಿಕೆ - 43

ಜಗಲಿ ಕಟ್ಟೆ : ಸಂಚಿಕೆ - 43
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 



ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


    ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಗೆ ಬೆರಳೆಣಿಕೆಯ ದಿನಗಳು ಮಾತ್ರ ಉಳಿದಿದೆ. ಈಗಾಗಲೆ ಮಕ್ಕಳ ಜಗಲಿಯಲ್ಲಿ ಹತ್ತನೆಯ ತರಗತಿಯ ಪರೀಕ್ಷಾ ಪೂರ್ವ ತಯಾರಿಯ ಬಗ್ಗೆ ಅನೇಕ ಲೇಖನಗಳು ಪ್ರಕಟವಾಗಿವೆ. ಇವುಗಳ ಪ್ರಯೋಜನಗಳನ್ನು ತಾವೆಲ್ಲಾ ಪಡೆದಿರುವಿರಿ ಎಂದು ಭಾವಿಸುತ್ತೇನೆ. ಪರೀಕ್ಷೆಯ ಬಗ್ಗೆ ದಿನ ನಿತ್ಯದ ತಯಾರಿಗಳು ನಮ್ಮಲ್ಲಿ ಹೆಚ್ಚು ಆತ್ಮವಿಶ್ವಾಸವನ್ನು ತುಂಬುತ್ತದೆ. ದಿನಾ ಸಾಕಷ್ಟು ಓದುತ್ತ ಸಂದೇಹಗಳನ್ನು ಶಿಕ್ಷಕರ ಮೂಲಕ ಬಗೆಹರಿಸಿಕೊಳ್ಳತ್ತಾ ಸಾಗಿದವರಿಗೆ ಯಾವುದೇ ಭಯವಿಲ್ಲದೆ ಪರೀಕ್ಷೆಯನ್ನು ಎದುರಿಸುವ ಸಾಮರ್ಥ್ಯ ಒದಗಿ ಬರುತ್ತದೆ. ಪ್ರತಿ ಪರೀಕ್ಷೆಯ ಮಧ್ಯ ಇರುವ ಬಿಡುವು ಇನ್ನೂ ಹೆಚ್ಚಿನ ಅನುಕೂಲವನ್ನು ಒದಗಿಸಿಕೊಡಲಿದೆ. ಪರೀಕ್ಷೆಯನ್ನು ಎದುರಿಸಲಿರುವ ಜಗಲಿಯ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಹಾರೈಕೆಗಳು....
        ಮೊನ್ನೆ ಮೊನ್ನೆ 5ನೇ , 8ನೇ , 9ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ಪರೀಕ್ಷೆ ಇತ್ತು. ಎರಡು ಪರೀಕ್ಷೆಗಳು ನಡೆದು ಈಗ ಕಾರಣಾಂತರಗಳಿಂದ ಆ ಪರೀಕ್ಷೆಯನ್ನು ಮುಂದೂಡಿದ್ದಾರೆನ್ನುವುದು ನಿಮಗೆಲ್ಲರಿಗೂ ತಿಳಿದಿದೆ. ನಾನು ಕೂಡಾ ನಮ್ಮ ಹತ್ತಿರದ ಒಂದು ಶಾಲೆಗೆ ಪರೀಕ್ಷೆಯ ಕೊಠಡಿ ಮೇಲ್ವಿಚಾರಕರಾಗಿ 2 ದಿನಗಳ ಕಾಲ ಹೋಗಿದ್ದೆ. ಒಂದು ದಿನ ಇಂಗ್ಲಿಷ್ ಪರೀಕ್ಷೆ ನಡೆದಿತ್ತು. ಪುಟಾಣಿ ಮಕ್ಕಳೆಲ್ಲಾ ಬಹಳ ಖುಷಿ ಖುಷಿಯಾಗಿ ಪರೀಕ್ಷೆ ಬರೆಯುತ್ತಿದ್ದರು. ಒಬ್ಬಾಕೆಯ ಇಂಗ್ಲಿಷ್ ಅಕ್ಷರ ಬಹಳಷ್ಟು ಇಷ್ಟವಾಯಿತು. ಮುದ್ದು ಮುದ್ದಾಗಿ ಬರೆಯುವುದರ ಜೊತೆಗೆ ಅಕ್ಷರದ ವಿನ್ಯಾಸ ಬಹಳ ಆಕರ್ಷಕವಾಗಿತ್ತು. ಪರೀಕ್ಷೆ ಮುಗಿದ ಬಳಿಕ ಆಕೆಯ ಅಕ್ಷರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದೆ. ಪುಟಾಣಿ ಹುಡುಗಿಗೂ ತುಂಬಾನೆ ಸಂತೋಷವಾಯಿತು. "ಈ ರೀತಿಯ ಅಂದದ ಬರವಣಿಗೆಯನ್ನು ಕಲಿಸಿಕೊಟ್ಟವರಾರು..?" ಅಂದೆ. ಹುಡುಗಿ, "ನಮ್ಮ ಇಂಗ್ಲಿಷ್ ಸರ್... ಅವರು ಮೊನ್ನೆ ಮೊನ್ನೆ ಅವರ ಊರಿಗೆ ವರ್ಗಾವಣೆಯಾಗಿ ಹೋದರು." ಎಂದಾಗ ಅವಳ ಮುಖದಲ್ಲಿ ದುಃಖದ ಭಾವ ಎದ್ದುಕಾಣುತ್ತಿತ್ತು.
     ನಾನು ಪ್ರಸ್ತುತ ಕರ್ತವ್ಯದಲ್ಲಿರುವ ಶಾಲೆಯಲ್ಲಿಯೂ ಕೂಡಾ ದಾಖಲಾತಿ ಹೊಂದಿ ಬರುವ ಹೊಸ ವಿದ್ಯಾರ್ಥಿಗಳ ಬರವಣಿಗೆಯನ್ನು ಗಮನಿಸುವುದು ನನಗೆ ಆಸಕ್ತಿಯ ಸಂಗತಿ. ನಮ್ಮ ಪ್ರೌಢಶಾಲೆಗೆ 5-6 ಶಾಲೆಗಳಿಂದ 7ನೇ ತರಗತಿ ಅಥವಾ 8ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳು ಆಗಮಿಸುತ್ತಾರೆ. ತುಂಬಾ ವರುಷಗಳಿಂದ ನಿರ್ಧಿಷ್ಟ ಒಂದು ಶಾಲೆಯ ವಿದ್ಯಾರ್ಥಿಗಳ ಇಂಗ್ಲಿಷ್ ಭಾಷಾ ಅಕ್ಷರಗಳು ಮುದ್ದು ಮುದ್ದಾಗಿ ವಿಶೇಷವಾಗಿ ಆಕರ್ಷಕವಾಗಿತ್ತು. ಇತ್ತೀಚೆಗೆ ಆ ಶಾಲೆಯಿಂದ ಬರುವ ವಿದ್ಯಾರ್ಥಿಗಳ ಅಕ್ಷರಗಳ ಶೈಲಿ ಬದಲಾಗಿತ್ತು. ವಿಚಾರಿಸಿದಾಗ ಮಕ್ಕಳು, "ನಮ್ಮ ಶಾಲೆಯ ಇಂಗ್ಲಿಷ್ ಶಿಕ್ಷಕರು ವರ್ಗಾವಣೆಯಾಗಿ ಹೊಸ ಶಿಕ್ಷಕರು" ಬಂದಿದ್ದಾರೆ ಅಂದಾಗ ವಿಚಾರ ತಿಳಿಯಿತು.
    ಸಾಮಾನ್ಯವಾಗಿ ಅಂದವಾದ ಬರವಣಿಗೆ ಎಲ್ಲರನ್ನೂ ಸೆಳೆಯುತ್ತದೆ. ನಾನು ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವಾಗ ನನ್ನ ಕನ್ನಡ ಭಾಷಾ ಅಕ್ಷರವನ್ನು ಕಂಡು ವಿಜ್ಞಾನ ಪಠ್ಯದ ಶಿಕ್ಷಕಿಯಾಗಿದ್ದ ಶ್ರೀಮತಿ ಗೀತಾ ಹೊಳ್ಳ ಇವರು ಪ್ರಶಂಸೆಯ ಮಾತುಗಳನ್ನಾಡಿದ್ದರು. ಮೊತ್ತ ಮೊದಲನೇ ಬಾರಿಗೆ ನನ್ನ ಅಕ್ಷರವನ್ನು ಕಂಡು ತರಗತಿಯಲ್ಲಿ ಪ್ರಶಂಸೆ ಮಾಡಿದಂತಹ ಶಿಕ್ಷಕಿಯಾಗಿದ್ದರು. ಅಂದಿನ ದಿನ ನಾನಂತೂ ತುಂಬಾ ಸಂತೋಷಗೊಂಡಿದ್ದೆ. ಅಂದಿನಿಂದ ನನ್ನ ಅಕ್ಷರ ವಿನ್ಯಾಸದಲ್ಲಿ ಇನ್ನು ಅಂದವಾಗಿ ಬರೆಯಲು ಪ್ರೇರಣೆ ಪಡೆದಿದ್ದೆ. ಒಬ್ಬ ವಿದ್ಯಾರ್ಥಿಯ ಬರವಣಿಗೆಯ ಹಿಂದೆ ಶಿಕ್ಷಕರ ಶ್ರಮ ಹಾಗೂ ಶಿಕ್ಷಕರ ಪ್ರಶಂಸೆಯ ಮಾತುಗಳು ತುಂಬಾ ಬದಲಾವಣೆಯನ್ನು ತರಲು ಸಾಧ್ಯತೆ ಇದೆ ಅನ್ನೋದು ಇಲ್ಲಿ ತಿಳಿಯಬಹುದಾಗಿದೆ.
       ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ತಿದ್ದುವ ಪ್ರತಿಯೊಬ್ಬ ಶಿಕ್ಷಕರಿಗೂ ಅಂದವಾದ ಬರವಣಿಗೆಯ ಉತ್ತರ ಪತ್ರಿಕೆಗಳು ಸಾಮಾನ್ಯವಾಗಿ ತುಂಬಾನೇ ಇಷ್ಟವಾಗುತ್ತದೆ. ಅಂಕ ನೀಡುವಾಗಲೂ ಅಷ್ಟೇ ಕಡಿಮೆ ಅಂಕ ನೀಡುವ ಮನಸ್ಸು ಬರಲು ಸಾಧ್ಯವೇ ಇಲ್ಲ...!! ಅಂದವಾಗಿ ಬರೆಯುವ ಪ್ರತಿಯೊಬ್ಬ ವಿದ್ಯಾರ್ಥಿ ಕೂಡ ಹೆಚ್ಚು ಅಂಕ ಪಡೆಯಲು ಒಂದು ಉತ್ತಮವಾದ ಮಾರ್ಗವಾಗಿದೆ. ಅಂದವಾದ ಬರವಣಿಗೆಯ ಕುರಿತಾಗಿ ಕಳೆದ ವಾರ ಮಕ್ಕಳ ಜಗಲಿಯಲ್ಲಿ ಚಿತ್ರಕಲಾ ಶಿಕ್ಷಕಿಯಾದ ಅಂಬಿಕಾ ಇವರು ಹಲವಾರು ಸಲಹೆಗಳನ್ನು ನೀಡಿದ್ದರು. ಶಾಲೆಯಲ್ಲಿ ಕಲಿಯುವ ಪ್ರತಿಯೊಬ್ಬ ಮಕ್ಕಳು ಇದರ ಪ್ರಯೋಜವನ್ನು ಪಡೆದುಕೊಂಡರೆ ತುಂಬಾ ಸಂತೋಷ.
     ಮಕ್ಕಳ ಜಗಲಿಯ ಬಳಗದಲ್ಲಿರುವ ಕಲಾವಿದ, ಶಿಕ್ಷಣ ಚಿಂತಕ ಗೋಪಾಡ್ಕರ್ ಅವರ ಅಕ್ಷರ ವಿನ್ಯಾಸ ಬಹಳ ವಿಶಿಷ್ಟವಾದುದು. 'ಗೋಪಡ್ಕರ್ ಶೈಲಿ' ಅನ್ನುವಂತೆ ಬಹಳಷ್ಟು ಪ್ರಸಿದ್ಧಿಯಾಗಿದೆ. ಇನ್ನೋರ್ವ ಕಲಾವಿದ, ಬರಹಗಾರ, ವನ ಚೇತನದ ರೂವಾರಿ ದಿನೇಶ್ ಹೊಳ್ಳ ಇವರ ಅಕ್ಷರ ವಿನ್ಯಾಸವು ಕೂಡ ಎಲ್ಲರನ್ನೂ ಆಕರ್ಷಿಸುತ್ತದೆ. ಕಂಪ್ಯೂಟರ್ ಅಕ್ಷರಕ್ಕಿಂತಲೂ ಹೆಚ್ಚು ಆಕರ್ಷಕವಾಗಿರುವ ಇವರ ಅಂದವಾದ ಬರವಣಿಗೆ ಪ್ರತಿಯೊಬ್ಬರೂ ಕೂಡಾ ಆನಂದಿಸುವಂತೆ ಇದೆ. ಪುತ್ತೂರು ತಾಲೂಕಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಪ್ರಸ್ತುತ ಮಂಗಳೂರು ಡಯಟ್ ನಲ್ಲಿ ಉಪನ್ಯಾಸಕರಾಗಿರುವ ಶಶಿಧರ ಜಿ ಎಸ್ ಇವರ ಅಂದವಾದ ಬರವಣಿಗೆಯೂ ಕೂಡ ವಿಶಿಷ್ಟ ಶೈಲಿಯದ್ದು. 
      ಒಟ್ಟಾಗಿ ಅಂದವಾದ ಬರವಣಿಗೆ ಎಲ್ಲಾ ವಿಧದಲ್ಲೂ ಸಹಕಾರಿಯಾಗಿದೆ. ಪ್ರತಿಯೊಬ್ಬರು ತಮ್ಮದೇ ಆದ ವಿಶಿಷ್ಟ ಶೈಲಿಯ ಬರವಣಿಗೆಯನ್ನು ರೂಪಿಸಿಕೊಳ್ಳುವುದಕ್ಕೆ ಇದು ಪ್ರೇರಣೆಯಾಗಲಿ... ನಮಸ್ಕಾರ.


ಕಳೆದ ಸಂಚಿಕೆಯ ಜಗಲಿಕಟ್ಟೆ - 42 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ಕವಿತಾ ಶ್ರೀನಿವಾಸ ದೈಪಲ, ವಿದ್ಯಾ ಕಾರ್ಕಳ... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....


   ನಿಜಕ್ಕೂ "ಮಕ್ಕಳ ಜಗಲಿ" ಆನ್ಲೈನ್ ಪತ್ರಿಕೆಯು ಅತ್ಯಂತ ಅದ್ಭುತವಾದದ್ದು.... ಇಲ್ಲಿ ನಮಗೆ ತುಂಬಾ ತಿಳುವಳಿಕೆ, ಜ್ಞಾನ, ಹಾಗೂ ಉತ್ತಮ ವಿಷಯಗಳ ಭಂಡಾರವೇ ಕಾಣಲು ಸಿಗುತ್ತದೆ..... ಕ್ಷೇತ್ರ ಶಿಕ್ಷಣಾಧಿಕಾರಿಯಾದ ಎಂ.ಪಿ. ಜ್ಞಾನೇಶ್ ರವರು" ಜೀವನ ಸಂಭ್ರಮ" ಎಂಬ ಲೇಖನದಲ್ಲಿ ಬರೆದ ವಿಷಯವು ಬಹಳ ಅದ್ಭುತವಾದದ್ದು.... ಜೀವನವೆಂಬುದು ಢಂಭಾಚಾರವಾಗಬಾರದು.... ಸರಳ ಸಜ್ಜನಿಕೆಯ ಜೀವನವನ್ನು ನಾವು ನಮ್ಮದಾಗಿಸಿಕೊಳ್ಳಬೇಕೆನ್ನುವ ನೀತಿಯೊಂದಿಗೆ ಅತ್ಯಂತ ಸುಂದರವಾಗಿ ಜೀವನ ಪಾಠವನ್ನು ತಿಳಿಸಿ ಕೊಡುತ್ತಾರೆ.... ಈ ಲೇಖನವನ್ನು ನಾನು ನೂರಕ್ಕೆ ನೂರರಷ್ಟು ಅನುಮೋದಿಸುತ್ತೇನೆ.... ಏಕೆಂದರೆ ಸರಳ ಸಜ್ಜನಿಕೆಯ ಜೀವನ ಕ್ರಮವು ನಮಗೆ ನಿರಾಡಂಬರದ ಬದುಕನ್ನು ಕೊಡುವುದೇ ಅಲ್ಲದೆ ತಾಳ್ಮೆ, ಸಹನೆ, ಆತ್ಮಸಂತೃಪ್ತಿಯೊಂದಿಗೆ ನಮ್ಮನ್ನು ದೈವತ್ವದೆಡೆಗೆ ಕೊಂಡೊಯ್ಯಬಲ್ಲದು. ಈ ಭಕ್ತಿ, ನಂಬಿಕೆಗಳು ನಮ್ಮಲ್ಲಿ ಬೆಳೆದಂತೆ ನಮ್ಮಲ್ಲಿ ಧೈರ್ಯ, ಸತ್ಯ, ನೀತಿಗಳು ತನ್ನಿಂದ ತಾನೇ ಮೈಗೂಡಿಕೊಳ್ಳುತ್ತವೆ. ಆಗಲೇ ನಾವು ಸಮಾಜಕ್ಕೆ ಮಾದರಿಯಾಗಿ ಬದುಕಬಲ್ಲೆವು ಮತ್ತು ಮುಂದಿನ ಪೀಳಿಗೆಗೆ ಮನುಷ್ಯ ಜೀವನ ಹೇಗಿರಬೇಕು ಎನ್ನುವುದನ್ನು ನಾವು ಕಲಿಸಿಕೊಡಬಲ್ಲೆವು. ಹಾಗಾಗಿ ನಾವು ನಮ್ಮ ಜೀವನವನ್ನು ಢಾಂಬಿಕದೆಡೆಗೆ ಕೊಂಡೊಯ್ಯದೆ ಸರಳ, ಸತ್ಯ, ಸುಂದರ ಜೀವನವನ್ನು ಬದುಕುವುದರೊಂದಿಗೆ ಮುಂದಿನ ಪೀಳಿಗೆಗೆ ಆರೋಗ್ಯಕರವಾದ ಸಮಾಜವನ್ನು ನಿರ್ಮಾಣ ಮಾಡಿ ಕೊಡುವ ಅಲ್ಲವೇ.....!
............................................. ಪ್ರತಿಮಾ ಜಿ.ಕೆ.
ಸಹ ಶಿಕ್ಷಕಿ
ತುಂಬೆ ಆಂಗ್ಲ ಮಾಧ್ಯಮ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************



ಎಲ್ಲರಿಗೂ ನಮಸ್ಕಾರಗಳು,
    ಆಡಂಬರದ ಜೀವನಕ್ಕಿಂತ ಸರಳವಾದ ಜೀವನದಲ್ಲಿ ಹೆಚ್ಚು ಪ್ರೀತಿ ವಿಶ್ವಾಸವನ್ನು ಕಾಣಬಹುದು. ಆನಂದವಾಗಿ ಜೀವಿಸಬಹುದು. ಎಂಬುದನ್ನು ಒಂದು ಸುಂದರವಾದ ಕಥೆಯ ಮೂಲಕ ಶಿಕ್ಷಣಾಧಿಕಾರಿಯವರಾದ ಜ್ಞಾನೇಶ್ ಸರ್ ರವರು ತಿಳಿಸಿದ್ದಾರೆ. ಕಥೆ ಬಹಳ ಇಷ್ಟವಾಯಿತು.
    ಪ್ರತಿಭಾವಂತರಾಗಿದ್ದು ಅನೇಕ ವಿಷಯಗಳಲ್ಲಿ ಸಾಧನೆಯನ್ನು ಮಾಡಿದಂತಹ ಹೆಣ್ಣು ಮಕ್ಕಳು ಮದುವೆಯ ನಂತರ ಅವರ ಸಾಧನೆಗಳು ಬೆಳಕಿಗೆ ಬಾರದೆ ಹಿನ್ನಡೆಯಾಗುವುದರ ಕುರಿತು ಬೆಳಕು ಚೆಲ್ಲುವ ಸುಂದರ ಲೇಖನ ರಮೇಶ್ ಸರ್ ರವರಿಂದ.
     ಡಿಎನ್ಎ ಹಾಗೂ ವಂಶವಾಹಿ (ಜೀನ್) ಇವುಗಳ ಪ್ರಾಮುಖ್ಯತೆಯ ಕುರಿತಾಗಿ ದಿವಾಕರ್ ಸರ್ ಅವರು ತಮ್ಮ ವೈಜ್ಞಾನಿಕ ಲೇಖನದಲ್ಲಿ ಬಹಳ ಸೊಗಸಾಗಿ ತಿಳಿಸಿದ್ದಾರೆ.
    ಅರವಿಂದ ಸರ್ ರವರ ಹಕ್ಕಿ ಕತೆಯಲ್ಲಿ ಬಿಳಿ ಹುಬ್ಬಿನ ಪಿಕಳಾರ ಹಕ್ಕಿಯ ಪರಿಚಯ ಸೊಗಸಾಗಿ ಮೂಡಿ ಬಂದಿದೆ. ಹಕ್ಕಿಯ ಛಾಯಾ ಚಿತ್ರ ಕೂಡ ಸೊಗಸಾಗಿದೆ.
    ಕಾಣಲು ಕಳೆ ಗಿಡದಂತಿದ್ದರೂ ಬಹಳ ಉಪಯುಕ್ತವಾದ ಜಯಂತಿ ಗಿಡದ ಕುರಿತಾದ ಅತ್ಯುಪಯುಕ್ತ ಮಾಹಿತಿ ವಿಜಯಾ ಮೇಡಂರವರಿಂದ ಲಭಿಸಿತು.
     ಪೈ ದಿನಾಚರಣೆಯನ್ನು ಮಾರ್ಚ್ 14 ರಂದು ಯಾಕೆ ಆಚರಿಸುತ್ತಾರೆ ಹಾಗೂ 
ಪೈ (π) ದಿನಾಚರಣೆಯ ಮಹತ್ವವೇನು ಎಂಬುದನ್ನು ಸಂಕ್ಷಿಪ್ತವಾಗಿ ಸುಂದರವಾಗಿ ಜಯಂತಿ ಪುರಂದರ, ಧರ್ಮಸ್ಥಳ ಇವರು ತಿಳಿಸಿದ್ದಾರೆ.
    ಕೃತಕ ತಂಪು ಪಾನೀಯಗಳು ಬಾಯಿಗಷ್ಟೇ ರುಚಿಯಲ್ಲದೆ ಆರೋಗ್ಯಕ್ಕೆ ಹಾನಿಕಾರಕ ಎಂಬುದನ್ನು ಬಹಳ ಚೆನ್ನಾಗಿ ಯಾಕೂಬ್ ಸರ್ ರವರು ತಮ್ಮ ಈ ಸಲದ ಸಂಚಿಕೆಯಲ್ಲಿ ಸೊಗಸಾಗಿ ತಿಳಿಸಿದ್ದಾರೆ. ಸಕಾಲಿಕ ಲೇಖನ.
    ಈ ವಾರ ಟೊಮೆಟೊ ಫಿಶ್ ಎನ್ನುವ ಸುಂದರವಾದ ಪುಸ್ತಕದ ಪರಿಚಯ ವಾಣಿಯಕ್ಕ ನವರಿಂದ.
    ರಮೇಶ್ ಉಪ್ಪುಂದರವರ ಪದದಂಗಳ ಸಂಚಿಕೆ ಚೆನ್ನಾಗಿ ಮೂಡಿ ಬರುತ್ತಿದೆ.
    ಭವಿತ ಹಾಗೂ ಪ್ರತೀಕ್ಷಾರವರ ಕವನಗಳು ಸೊಗಸಾಗಿವೆ. ಮಿಕ್ದಾದ್ ಹಾಗೂ ದೀಪ್ತಿ ರವರ ಲೇಖನಗಳು ಕೂಡ ತುಂಬಾ ಚೆನ್ನಾಗಿತ್ತು. ಅಭಿನಂದನೆಗಳು ಮಕ್ಕಳಿಗೆ.
     ಈ ವಾರದ ಜಗಲಿಯ ಅಂದ ಹೆಚ್ಚಿಸಿದ ಎಲ್ಲಾ ಹಿರಿಯರಿಗೆ ಹಾಗೂ ಕಿರಿಯರಿಗೆ ನನ್ನ ಮನದಾಳದ ಕೃತಜ್ಞತೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************


ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ಪ್ರತಿಮಾ ಜಿ.ಕೆ.
ಸಹ ಶಿಕ್ಷಕಿ... ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************


Ads on article

Advertise in articles 1

advertising articles 2

Advertise under the article