-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 105

ಸ್ಫೂರ್ತಿಯ ಮಾತುಗಳು : ಸಂಚಿಕೆ - 105

ಸ್ಫೂರ್ತಿಯ ಮಾತುಗಳು : ಸಂಚಿಕೆ - 105
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                   

      ಸಿದ್ಧಹಸ್ತ ಎಂದರೆ ಯಾವುದೇ ಕೆಲಸವನ್ನಾದರೂ ಯಶಸ್ವಿಯಾಗಿ ಮಾಡುವ ಸಾಮರ್ಥ್ಯವನ್ನು ಹೊಂದಿದವರೆಂದು ಅರ್ಥ. ಪ್ರತಿಯೊಬ್ಬರೂ ಪ್ರತಿಯೊಂದರಲ್ಲೂ ಸಿದ್ಧಹಸ್ತರಾಗಿರಲು ಅಸಾಧ್ಯ. ಕೆಲವಾರು ಸಂಗತಿಗಳಲ್ಲಿ ಪೂರ್ಣ ಪರಿಣತಿ ಹೊಂದಿರದವರೂ ಉಸಿರಾಡುವ ಹೆಣವೇ ಹೊರತು ವ್ಯಕ್ತಿ ಅಥವಾ ಶಕ್ತಿಯಾಗುವುದಿಲ್ಲ. ಶಾಶ್ವತವಾಗಿ ನಮಗೆ ಹೆಸರುಳಿಯುವ ಕೆಲಸ ಮಾಡಲಾಗದಿದ್ದರೂ ಜೀವಿಸಿರುವಾಗಲಾದರೂ ಹೆಸರು ಉಳಿಸುವ ಪ್ರಯತ್ನ ಮಾಡಲೇ ಬೇಕು. ಅದಕ್ಕಾಗಿ ಯಾವುದಾದರೂ ಒಂದು ಕೆಲಸದಲ್ಲಾದರೂ ಸಿದ್ಧಹಸ್ತರಾಗಬೇಕು. ನಿಗದಿತ ಕೆಲಸ ಮಾಡುವ ವ್ಯಕ್ತಿಗಳ ಶೋಧನೆಯಿದ್ದಾಗ ನಮ್ಮ ಹೆಸರೇ ಮುನ್ನೆಲೆಗೆ ಬಂದರೆ ಅದು ಸಾರ್ಥಕತೆಯ ಲಕ್ಷಣ.

ತಾನಸೇನ್, ರವೀಂದ್ರನಾಥ ಠಾಗೋರ್, ತೆನಾಲಿ ರಾಮಕೃಷ್ಣ, ಭೀಮಸೇನ ಜೋಷಿ. ಮುಂತಾದವರು ಇಂದೂ ಬದುಕಿದ್ದಾರೆ. ಅವರು ಅವರ ಕ್ಷೇತ್ರದಲ್ಲಿ ಹೊಂದಿದ್ದ ಪ್ರಾವೀಣ್ಯತೆ ಅವರನ್ನು ಇಂದಿಗೂ ಜೀವಂತವಾಗಿ ನಮ್ಮ ಮುಂದೆ ನಿಲ್ಲಿಸಿದೆ. ಕಂಸಾಸುರ, ರಾವಣಾಸುರ ಮುಂತಾದವರ ಹೆಸರೂ ನಮ್ಮ ಮುಂದೆ ಜೀವಂತವಾಗಿವೆಯಾದರೂ ಆ ಹೆಸರುಗಳು ನೇತ್ಯಾತ್ಮಕವೇ ಹೊರತು ಧನಾತ್ಮಕ ಸಾಧನೆಗಳ ಪ್ರತೀಕವಲ್ಲ. ನಮ್ಮ ಹೆಸರು ಹಬ್ಬಲು ನಮ್ಮ ಧನಾತ್ಮಕ ಸಾಧನೆಗಳೇ ಕಾರಣವಾಗಬೇಕೆಂಬುದು ಗಮನೀಯ.

ಸಿದ್ಧಹಸ್ತೆ ಅಥವಾ ಸಿದ್ಧಹಸ್ತರಾಗಲು ನಮ್ಮ ಮುಂದೆ ಅಸಂಖ್ಯ ಆಯ್ಕೆಗಳಿವೆ. ಕೃಷಿಯಲ್ಲಿ ಸಿದ್ಧಹಸ್ತರೆನಿಸಿಕೊಂಡ ಅನೇಕರು ಹೈನುಗಾರಿಕೆಯಲ್ಲೂ ಸಿದ್ಧಹಸ್ತರಾಗಿರುವುದನ್ನು ನಮ್ಮ ನಡುವೆ ನೋಡುತ್ತೇವೆ. ಬೋಧನೆಯಲ್ಲಿ ಸಿದ್ಧಹಸ್ತರಾದವರು ಭಾಷಣ ಮತ್ತು ಬರವಣಿಗೆಗಗಳಲ್ಲೂ ಸಿದ್ಧಹಸ್ತರೆನಿಸಿ ಎಲ್ಲರಿಂದಲೂ ಸೈಯೆನಿಸಿಕೊಂಡಿರುವುದನ್ನೂ ಗಮನಿಸಿದ್ದೇವೆ. ಬೋಧನೆ, ಉಪನ್ಯಾಸ ಮತ್ತು ಬರವಣಿಗೆಗಳಿಗೆ ಪರಸ್ಪರ ಸಂಬಂಧಗಳೂ ಇವೆ. ಅದೇ ರೀತಿ ಕೃಷಿ ಹಾಗೂ ಹೈನುಗಾರಿಕೆಗಳಿಗೆ ಪರಸ್ಪರ ಸಂಬಂಧವಿದೆ. ಪರಸ್ಪರ ಸಂಬಂಧಗಳಿರುವ ವಿಷಯಗಳಲ್ಲಿ ಸಿದ್ಧಹಸ್ತರೆನಿಸಿಕೊಳ್ಳುವುದು ಸುಲಭ. ಆದರೆ ಕೆಲವರು ಅವಕಾಶಗಳಿದ್ದರೂ ಅವುಗಳನ್ನು ಸದುಪಯೋಗಿಸದೇ ಇರುವುದು ಖೇದಕರ. 

ಕೆಲವರು ತಿಂಡಿ ತಯಾರಿಯಲ್ಲಿ ಸಿದ್ಧಹಸ್ತರಾಗಿರುತ್ತಾರೆ, ಉತ್ತಮವಾಗಿ ಉಡುಪುಗಳನ್ನು ಹೊಲಿದು ಕೊಡುವುದರಲ್ಲಿ ಸಿದ್ಧಹಸ್ತರಾದ ದರ್ಜಿಗಳಿದ್ದಾರೆ. ಗಾಯನ, ನರ್ತನಗಳಲ್ಲಿ ಸಿದ್ಧಹಸ್ತರಾಗಿ ಎಲ್ಲರನ್ನೂ ರಂಜಿಸುವವರಿದ್ದಾರೆ. ವ್ಯಾಪಾರದಲ್ಲಿ ಸಿದ್ಧಹಸ್ತರು ಎಂದು ನಾವು ಹೇಳುವುದಿಲ್ಲವೇ? ವ್ಯಾಪಾರದೊಂದಿಗೆ ಅದಕ್ಕೆ ಸಂಬಂಧವೇ ಇರದ ಯಕ್ಷಗಾನದಲ್ಲೂ ಸಿದ್ಧಹಸ್ತರೆನಿಸಿಕೊಂಡವರು ನಿಜವಾಗಿಯೂ ಶ್ಲಾಘನಾರ್ಹರು. ಸಿನಿಮಾ ತಾರೆ ಉಮಾ ಶ್ರೀ ಸಿನಿಮಾ ಮತ್ತು ರಾಜಕೀಯದಲ್ಲಿ ಸಿದ್ಧಹಸ್ತರಾಗಿದ್ದಾರೆ. ತಪ್ಪುಗಳನ್ನು ತಮ್ಮವರೇ ಮಾಡಿದರೂ ಎತ್ತಿ ತೋರಿಸಿ ಸರಿಪಡಿಸುವುದರಲ್ಲಿ ಉಮಾಶ್ರೀ ಸಿದ್ಧಹಸ್ತರೆಂದು ನಾವು ಕೇಳಿದ್ದೇವೆ. ಡಾ. ರಾಜಕುಮಾರ್ ರವರು ನಟನೆಯಲ್ಲಿ ಸಿದ್ಧಹಸ್ತರಾಗಿರುವಂತೆ ಯೋಗ ಮತ್ತು ಆಧ್ಯಾತ್ಮದಲ್ಲೂ ಸಿದ್ಧಹಸ್ತರಾಗಿದ್ದರು. 

ಸಿದ್ಧಹಸ್ತರಾದವರು ಎಂದರೆ ಯಶಸ್ವಿಗಳೇಂದೇ ಅರ್ಥ. ಯಶಸ್ಸು ಸೋಮಾರಿಯ ಸೊತ್ತಲ್ಲ. ಅದು ಪರಿಶ್ರಮಿಗೆ ಮೀಸಲು. ಪರಿಶ್ರಮಿಸಿದರೂ ಸೋಲು ಬರಬಹುದು. ಆದರೆ ಸೋಲಾಯಿತೆಂದು ಕೈಚೆಲ್ಲಬಾರದು. ಮರಳಿಯತ್ನವ ಮಾಡು ಎಂಬ ಮಾತು ಪ್ರತಿಯೊಬ್ಬರಿಗೂ ಅನ್ವಯ. ನಾಜೂಕಾದ ಆಭರಣಗಳಿಗೆ ಸಿದ್ಧಹಸ್ತರಾದ ಅಕ್ಕಸಾಲಿಗರನೇಕರನ್ನು ನಾವು ನೋಡುತ್ತೇವೆ. ದಿಢೀರನೆ ಅವರು ಆಭರಣ ತಯಾರಿಯಲ್ಲಿ ಪ್ರಾವೀಣ್ಯತೆಯನ್ನು ಹೊಂದಲು ಸಾಧ್ಯವಿಲ್ಲ. ಎಳವೆಯಿಂದ ಈ ದಿಸೆಯಲ್ಲಿ ಅವರು ಹೂಡಿದ ಕಠಿಣ ಪರಿಶ್ರಮವೇ ಅವರನ್ನು ಸಿದ್ಧಹಸ್ತರ ಪಟ್ಟಕ್ಕೇರಿಸಿದೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗದು ಎಂಬ ಮಾತೂ ಎಳವೆಯಿಂದಲೇ ಅಧ್ಯಯನ ಮತ್ತು ಅಭ್ಯಾಸ ಮುಖ್ಯ ಎಂಬುದಕ್ಕೆ ಪುಷ್ಟಿ ನೀಡುತ್ತದೆ. ಸಾಧನೆ ಮಾಡುವವರಿಗೆ ಪರಿಶ್ರಮವೇ ಬಂಡವಾಳ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 


Ads on article

Advertise in articles 1

advertising articles 2

Advertise under the article