ರಾಷ್ಟ್ರೀಯ ವಿಜ್ಞಾನ ದಿನಾಚರಣೆ
Tuesday, February 27, 2024
Edit
ಲೇಖಕರು : ವಿ ಶ್ರೀ ರಾಮಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
"ಗೌರಿ ಕೃಪಾ"
ವಾಟೆತ್ತಿಲ, ಅಂಚೆ: ಬಾಯಾರು
ಮಂಜೇಶ್ವರ ತಾಲೂಕು,
ಕಾಸರಗೋಡು ಜಿಲ್ಲೆ, ಕೇರಳ.
ಮೊಬೈಲ್ : +91 94819 74949
ಎಲ್ಲರಿಗೂ ರಾಷ್ಟ್ರೀಯ ವಿಜ್ಞಾನ ದಿನದ ಹಾರ್ದಿಕ ಶುಭಾಶಯಗಳು. ಮಕ್ಕಳೇ, ಫೆಬ್ರವರಿ 28ರಂದು ಪ್ರತಿ ವರ್ಷ ನಾವು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸುತ್ತಾ ಇದ್ದೇವೆ. ಈ ದಿನಾಚರಣೆಯ ಮಹತ್ವ ಏನು? ಯಾಕೆ ಈ ದಿನಾಚರಣೆಯನ್ನು ಫೆಬ್ರವರಿ 28ರಂದು ಆಚರಿಸುತ್ತಾರೆ ಎಂಬುದರ ಕುರಿತಾಗಿ ಕೆಲವೊಂದು ವಿಚಾರಗಳನ್ನು ತಿಳಿಯೋಣ.
ಭಾರತದ ಶ್ರೇಷ್ಠ ವಿಜ್ಞಾನಿಗಳಲ್ಲೊಬ್ಬರಾದ ಸಿ.ವಿ. ರಾಮನ್ ರವರಿಗೆ 1930 ರಲ್ಲಿ ಬೆಳಕಿನ ಚದುರುವಿಕೆಯ ಕುರಿತಾದ "ರಾಮನ್ ಪರಿಣಾಮ" ವನ್ನು ಕಂಡು ಹಿಡಿದದ್ದಕ್ಕಾಗಿ ಪ್ರಮುಖ ಅಂತರಾಷ್ಟ್ರೀಯ ಪ್ರಶಸ್ತಿಯಾದ ನೋಬೆಲ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಸವಿನೆನಪಿಗಾಗಿ ಭಾರತ ಸರಕಾರವು ಪ್ರತಿ ವರ್ಷ ಫೆಬ್ರವರಿ 28 ನ್ನು ರಾಷ್ಟ್ರೀಯ ವಿಜ್ಞಾನ ದಿನವಾಗಿ ಆಚರಿಸುತ್ತದೆ.
ಸಿ.ವಿ. ರಾಮನ್ ರವರ ಪೂರ್ಣ ಹೆಸರು ಚಂದ್ರಶೇಖರ ವೆಂಕಟ್ ರಾಮನ್. ಇವರು ನವೆಂಬರ್ 7, 1888 ರಲ್ಲಿ ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ ಚಂದ್ರಶೇಖರ ಐಯರ್ ಮತ್ತು ಪಾರ್ವತಿ ಅಮ್ಮಳ್ ರವರ ಪುತ್ರನಾಗಿ ಜನಿಸಿದರು. ಇವರ ತಂದೆಯವರು ಗಣಿತ ಮತ್ತು ಭೌತಶಾಸ್ತ್ರ ಅಧ್ಯಾಪಕರಾಗಿದ್ದರು. ಸಿ.ವಿ. ರಾಮನ್ ರವರು ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಶಿಕ್ಷಣ ಪಡೆದು ಅಕೌಂಟೆಂಟ್ ಆಗಿ ಕೆಲಸಕ್ಕೆ ಸೇರಿದರೂ ವಿಜ್ಞಾನದಲ್ಲಿನ ತಮ್ಮ ಆಸಕ್ತಿಯಿಂದ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ನಿರ್ದೇಶಕರಾಗಿ ವಿಜ್ಞಾನಕ್ಕೆ ಸಂಬಂಧಿಸಿದ ಹಲವು ಸಂಶೋಧನೆಗಳನ್ನು ನಡೆಸಿದರು.
1986ರಲ್ಲಿ ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ ಕಮ್ಯುನಿಕೇಷನ್( NCSTC) ಸಿ ವಿ ರಾಮನ್ ರವರಿಗೆ ನೋಬೆಲ್ ಬಹುಮಾನ ಪಡೆದ ಸವಿ ನೆನಪಿಗಾಗಿ ಫೆಬ್ರವರಿ 28ನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಬೇಕೆಂದು ಸರಕಾರಕ್ಕೆ ಶಿಫಾರಸು ಮಾಡಿತು. ಅದರಂತೆ 1987ರಿಂದ ಪ್ರತಿ ವರ್ಷ ಫೆಬ್ರವರಿ 28ನ್ನು ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ.
ರಾಷ್ಟ್ರೀಯ ವಿಜ್ಞಾನ ದಿನವು ವೈಜ್ಞಾನಿಕ ಆವಿಷ್ಕಾರ ಮತ್ತು ಆಳವಾದ ಪ್ರಗತಿಯ ಕುರಿತಾದ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಭಾರತವು ಇತ್ತೀಚೆಗಿನ ದಿನಗಳಲ್ಲಿ ವೈಜ್ಞಾನಿಕ ಕ್ಷೇತ್ರಗಳಲ್ಲಿ ಮಹತ್ತರವಾದ ಮೈಲಿಗಲ್ಲನ್ನು ಸ್ಥಾಪಿಸುತ್ತಿದೆ. ಬಾಹ್ಯಾಕಾಶ, ಆಟೊಮೊಬೈಲ್ ಕ್ಷೇತ್ರ ಹಾಗೂ ವಿಜ್ಞಾನದ ಇನ್ನಿತರ ಕ್ಷೇತ್ರಗಳಲ್ಲಿ ನಮ್ಮ ದೇಶದ ವಿಜ್ಞಾನಿಗಳು ಮುಂಚೂಣಿಯಲ್ಲಿದ್ದಾರೆ.
ಪ್ರತಿ ವರ್ಷ ವಿಜ್ಞಾನ ದಿನವನ್ನು ಒಂದು ಪ್ರಮುಖ ವಿಷಯದ ಆಧಾರದ ಮೇಲೆ ಆಚರಿಸಲಾಗುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ರವರು "ವಿಕಸಿತ ಭಾರತಕ್ಕಾಗಿ ಸ್ಥಳೀಯ ತಂತ್ರಜ್ಞಾನಗಳು" (Indigenous Technologies for Vikasit Bharath) ಎಂಬುದು ಈ ವರ್ಷದ ವಿಜ್ಞಾನ ದಿನದ ಪ್ರಮುಖ ವಿಷಯ ಎಂಬುದಾಗಿ ಪ್ರಕಟಿಸಿದ್ದಾರೆ. ಇದು ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಎನ್ನುವ ವಿಷಯದಡಿಯಲ್ಲಿ ಹವಾಮಾನ ಬದಲಾವಣೆ, ಸಂಪನ್ಮೂಲಗಳ ಸವಕಳಿ, ಪರಿಸರದ ಅವನತಿ, ಸುಸ್ಥಿರ ಅಭಿವೃದ್ಧಿ ಎನ್ನುವ ನಾಲ್ಕು ಪ್ರಮುಖ ಅಂಶಗಳ ಮೇಲೆ ಕೇಂದ್ರೀಕೃತಗೊಂಡಿದೆ .
ಹವಾಮಾನ ಬದಲಾವಣೆ: ಮಿತಿ ಮೀರಿದ ಆಟೊಮೊಬೈಲ್ ವಾಹನಗಳಿಂದ ಮತ್ತು ಕಾರ್ಖಾನೆಗಳಿಂದ ಬಿಡುಗಡೆಯಾಗುವ ಅನಿಲಗಳಿಂದ ವಾತಾವರಣದ ಮೇಲಾಗುವ ದುಷ್ಪರಿಣಾಮವನ್ನು ಅಭ್ಯಸಿಸಿ ಸೂಕ್ತ ಪರಿಹಾರೋಪಾಯಗಳನ್ನು ಕಂಡುಕೊಳ್ಳುವುದು. ಉದಾ: ನವೀಕರಿಸಬಹುದಾದ ಇಂಧನಗಳ ಬಳಕೆ.
ಸಂಪನ್ಮೂಲ ಸವಕಳಿ: ಇರುವ ಅಗತ್ಯ ಸಂಪನ್ಮೂಲಗಳ ಕೊರತೆಯಾಗದಂತೆ ನೋಡಿಕೊಳ್ಳುವುದು. ಸಂಪನ್ಮೂಲಗಳ ರಕ್ಷಣೆಗೆ ಸೂಕ್ತ ಮಾರ್ಗೋಪಾಯಗಳನ್ನು ಕಂಡುಹಿಡಿಯುವುದು.
ಪರಿಸರದ ಅವನತಿ : ಮಾಲಿನ್ಯದಿಂದಾಗಿ ಪರಿಸರಕ್ಕಾಗುವ ಹಾನಿಯನ್ನು ತಡೆಗಟ್ಟುವ ವಿಧಾನಗಳನ್ನು ಅನುಸರಿಸಿ ಪರಿಸರದ ಸಂರಕ್ಷಣೆ ಮಾಡುವುದು. ಉದಾ: ತ್ಯಾಜ್ಯ ನಿರ್ವಹಣೆ.
ಸುಸ್ಥಿರ ಅಭಿವೃದ್ಧಿ: ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಿ ಪರಿಸರದ ಸಂರಕ್ಷಣೆ, ಅಗತ್ಯ ವಸ್ತುಗಳ ಪೂರೈಕೆ ಹಾಗೂ ಭವಿಷ್ಯದ ಪೀಳಿಗೆಯ ಅಗತ್ಯವನ್ನು ಪೂರೈಸುವ ಸಾಮರ್ಥ್ಯವನ್ನು ಹೆಚ್ಚಿಸುವುದು.
ರಾಷ್ಟ್ರೀಯ ವಿಜ್ಞಾನ ದಿನದ ಆಚರಣೆಯು ವೈಜ್ಞಾನಿಕ ಆವಿಷ್ಕಾರಗಳನ್ನು ನೆನಪಿಸುವ, ಭಾರತೀಯ ವಿಜ್ಞಾನಿಗಳ ಸಾಧನೆಗಳನ್ನು ಹಾಗೂ ಕೊಡುಗೆಗಳನ್ನು ಗೌರವಿಸುವ, ಭವಿಷ್ಯದ ವಿಜ್ಞಾನಿಗಳಿಗೆ ಪ್ರೋತ್ಸಾಹವನ್ನು ನೀಡುವ, ಜಾಗತಿಕ ಸವಾಲುಗಳನ್ನು ಎದುರಿಸುವ ಕುರಿತಾಗಿ ಚಿಂತನೆಗಳನ್ನು ನಡೆಸುವ ಹಾಗೂ ಪ್ರತಿಯೊಬ್ಬರಲ್ಲೂ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಉದ್ದೇಶ ಹೊಂದಿದೆ.
ಶಿಕ್ಷಕರು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಿ ಭವಿಷ್ಯದ ವಿಜ್ಞಾನಿಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕೆನ್ನುವ ಕಳಕಳಿಯೊಂದಿಗೆ, ಈ ದಿನಾಚರಣೆ ಕೇವಲ ಆಚರಣೆಗೆ ಮಾತ್ರ ಸೀಮಿತವಾಗಿರದೆ ವಿಜ್ಞಾನದ ಅನೇಕ ಕ್ಷೇತ್ರಗಳನ್ನು ಜೋಡಿಸಿಕೊಂಡು ಮಾನವನ ಒಳಿತಿಗೆ ಹಾಗೂ ರಾಷ್ಟ್ರದ ಉನ್ನತಿಗಾಗಿ ನಾವೆಲ್ಲರೂ ಕೈಜೋಡಿಸಿ ಈ ಆಚರಣೆಯ ಉದ್ದೇಶವನ್ನು ಈಡೇರಿಸುವತ್ತ ಗಮನ ಹರಿಸೋಣ.
!! ಜೈ ವಿಜ್ಞಾನ್!!
ನಿವೃತ್ತ ವಿಜ್ಞಾನ ಶಿಕ್ಷಕರು
"ಗೌರಿ ಕೃಪಾ"
ವಾಟೆತ್ತಿಲ, ಅಂಚೆ: ಬಾಯಾರು
ಮಂಜೇಶ್ವರ ತಾಲೂಕು,
ಕಾಸರಗೋಡು ಜಿಲ್ಲೆ, ಕೇರಳ.
ಮೊಬೈಲ್ : +91 94819 74949
**********************************************