-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 17

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 17

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 17
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
     

ಪ್ರೀತಿಯ ಮಕ್ಕಳೇ.... ಹಿಂದಿನಿಂದಲೂ ಕೇಳುವ ಒಂದು ಸಾಮಾನ್ಯ ಪ್ರಶ್ನೆ ಎಂದರೆ ಕೋಳಿ ಮೊದಲೋ ಮೊಟ್ಟೆ ಮೊದಲೋ. ಕೋಳಿ ಮೊದಲು ಎಂದರೆ ಕೋಳಿ ಹೇಗೆ ಹುಟ್ಟಿತು ಎಂದು ಕೇಳುವುದು. ಮೊಟ್ಟೆ ಮೊದಲು ಎಂದರೆ ಮೊಟ್ಟೆ ಇಟ್ಟವರಾರು ಎಂದು ನಿಮ್ಮನ್ನು ಬೆಸ್ತು ಬೀಳಿಸುತ್ತಿದ್ದರು. ಈ ಪ್ರಶ್ನೆಗೆ ಉತ್ತರಿಸುವುದೆಂದರೆ ತೀರಾ ಇಕ್ಕಟ್ಟು. ಆದರೆ ಈ ಸಂದಿಗ್ಧತೆ ಸದ್ಯ ಪರಿಹರಿಸಲಾಗಿದೆ. ವಿಜ್ಞಾನಿಗಳು ಮೊಟ್ಟೆಯಲ್ಲ ಕೋಳಿಯೇ ಮೊದಲು ಎಂಬ ಒಪ್ಪಬಹುದಾದ ವಾದವನ್ನು ಮುಂದಿಟ್ಟಿದ್ದಾರೆ. ಅದು ಹೇಗೆ ಎನ್ನುತ್ತೀರಾ? ಒಂದು ಕೋಳಿ ಮೊಟ್ಟೆಯನ್ನು ಊಹಿಸಿಕೊಳ್ಳಿ ಅದರಲ್ಲಿ ಮೊಟ್ಟೆಯ ಹಳದಿ (egg yolk) ಇದೆ. ಇದು ಮೊಟ್ಟೆಯ ಜೀವಂತ ಭಾಗ ಇದರ ಬಹುಭಾಗ ಕೊಬ್ಬು. ಇದೇ ಮುಂದೆ ಕೋಳಿಯಾಗುವುದು. ಆರಂಭದಲ್ಲಿ ಇದು ಒಂದೇ ಒಂದು ಜೀವಕೋಶ. ಬರಿಯ ಕಣ್ಣಿನಿಂದ ನೋಡಬಹುದಾದ ಅತ್ಯಂತ ದೊಡ್ಡ ಕೋಶ ಎಂದರೆ ಇದೇ. ಸದ್ಯಕ್ಕೆ ಆದ್ದರಿಂದ ಅತಿ ದೊಡ್ಡ ಮೊಟ್ಟೆಯಾದ ಉಷ್ಟ್ರಪಕ್ಷಿಯ ಮೊಟ್ಟೆ ಬರಿಯ ಕಣ್ಣಿಂದ ನೋಡಬಹುದಾದ ಅತಿ ದೊಡ್ಡ ಜೀವಕೋಶ. (ಹಿಂದೆ ಡೂಡೋ ಮೊಟ್ಟೆಯಾಗಿತ್ತು.) ಅದರ ಹೊರಭಾಗದಲ್ಲಿ ಮೊಟ್ಟೆಯ ಬಿಳಿ (egg albumin) ಇದೆ. ಇದು ಪ್ರೋಟೀನ್ ಸಮೃದ್ಧ. ಮರಿಯಾಗಿ ಬೆಳೆಯಲು ಬೇಕಾದ ಪೋಷಕಾಂಶ ಒದಗಿಸುವ ಮೂಲ ಇದು. ಇದರ ಹೊರಭಾಗದಲ್ಲಿ ಮೊಟ್ಟೆಯ ಪೊರೆ (egg shell membrane) ಇದೆ. ಇದು ಒಳಗಿನ ಘಟಕಗಳನ್ನು ಬಂಧಿಸುತ್ತದೆ. ಅದರ ಹೊರಭಾಗದಲ್ಲಿ ಕ್ಯಾಲ್ಸಿಯಂ ಕಾರ್ಬೋನೇಟ್ ನ ಕಠಿಣವಾದ ಮೊಟ್ಟೆಯ ಚಿಪ್ಪು (egg shell). ಇದು ಮೊಟ್ಟೆಗೆ ಆಕಾರ ಮತ್ತು ಕಠಿಣತೆಯನ್ನು ಒದಗಿಸುತ್ತದೆ. ಈ ಮೊಟ್ಟೆಯ ಚಿಪ್ಪುರಚನೆಯಾಗಲು (egg shell calcification) ಗರ್ಭಕೋಶದ ಚಿಪ್ಪು ಗ್ರಂಥಿಯಲ್ಲಿ (Shell gland) ಮಾತ್ರ ಕಂಡು ಬರುವ ಒವೋಕ್ಯಾಲಿಕ್ಸಿನ್ - 36 (ovocalyxin - 36) ಎಂಬ ಪ್ರೋಟೀನ್ ಕಾರಣ ಎಂಬುದನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಆದ್ದರಿಂದ ಕೋಳಿ ಇಲ್ಲದೇ ಮೊಟ್ಟೆ ಇರುವುದು ಸಾಧ್ಯವಿಲ್ಲ ಎಂಬುದು ಸಿದ್ಧವಾಯಿತು. ಆದ್ದರಿಂದ ಕೋಳಿ ಮೊದಲು ಎಂಬುದು ಖಾತ್ರಿ. ಪ್ರೋಟೀನ್‌ ಜಾಡು ಹಿಡಿದು ಹೊರಟ ವಿಜ್ಞಾನಿಗಳು ತಾರ್ಕಿಕ ಪ್ರಶ್ನೆಗೆ ಉತ್ತರವೊಂದನ್ನು ಕಂಡು ಹಿಡಿದಿರುವುರಿಂದ ಇನ್ನು ಮುಂದೆ ಕೋಳಿ ಮೊದಲೋ ಮೊಟ್ಟೆ ಮೊದಲೋ ಎಂಬುದು ಬುದ್ಧಿವಂತಿಕೆಯ ಪ್ರಶ್ನೆಯಾಗುಳಿಯುದಿಲ್ಲ.

ಈ ಪ್ರೋಟೀನ್‌ಗಳು ಕೋಶದ (ಜೀವಿ) ರಚನೆಯ ಮೂಲ ಘಟಕಗಳು. ಉದಾಹರಣೆಗೆ ಮೊಟ್ಟೆಯ ಪೊರೆಯ 94% ಪ್ರೋಟೀನ್. ಜೀವ ರಾಸಾಯನಿಕ ಕ್ರಿಯೆಗಳಲ್ಲಿ ಭಾಗವಹಿಸುವ ಎಲ್ಲಾ ಕಿಣ್ವಗಳೂ ಪ್ರೋಟೀನ್‌ಗಳು. ಎಲ್ಲಾ ಹಾರ್ಮೋನುಗಳು, ಚೋದಕಗಳು ಪ್ರೋಟೀನ್‌ಗಳೇ. ಆದ್ದರಿಂದ ಪ್ರೋಟೀನ್‌ಗಳಿಲ್ಲದೇ ಜೀವಿ ಕಾರ್ಯನಿರ್ವಹಿಸುವುದು ಸಾಧ್ಯವಿಲ್ಲ. ಇಷ್ಟೊಂದು ಮುಖ್ಯವಾದ ಪ್ರೋಟೀನ್‌ಗಳ ತಯಾರಿಕೆ ಹೇಗೆ?

ನೀವು ಆಹಾರದ ಬಗ್ಗೆ ಕಲಿಯುವಾಗ ಪ್ರೋಟೀನ್ ಸಮೃದ್ಧ ಆಹಾರದ ಬಗ್ಗೆ ತಿಳಿದಿದ್ದೀರಿ. ಈ ಪ್ರೋಟೀನ್‌ಗಳು ಬೃಹತ್ ಅಣುಗಳು. ಇವುಗಳನ್ನು ಯಥಾವತ್ತಾಗಿ ಹೀರಿಕೊಳ್ಳುವ ಸಾಮರ್ಥ್ಯ ಕೋಶಗಳಿಗಿಲ್ಲ. ಜೀರ್ಣಕ್ರಿಯೆಯಲ್ಲಿ ಇವುಗಳನ್ನು ಸರಳ ಅಣುಗಳಾಗಿ ಒಡೆದು ದೇಹಗತ ಮಾಡಿಕೊಳ್ಳಲಾಗುತ್ತದೆ. ಪ್ರೋಟೀನ್‌ಗಳ ಸರಳ ಘಟಕಗಳನ್ನು ಅಮೈನೋ ಆಮ್ಲಗಳು ಎನ್ನುತ್ತೇವೆ. ಪ್ರಕೃತಿಯಲ್ಲಿ ಇರುವ ಅಮೈನೋ ಆಮ್ಲಗಳು ಬರಿಯ 20 ಅಥವಾ 22. ಇವುಗಳಿಂದ ಸಂಶ್ಲೇಷಿತವಾಗುವ ಪ್ರೋಟೀನ್‌ಗಳ ಸಂಖ್ಯೆ 20,000. 50 ಕ್ಕಿಂತ ಕಡಿಮೆ ಅಮೈನೋ ಆಮ್ಲಗಳಿರುವ ಪ್ರೋಟೀನ್‌ಗಳಿದ್ದರೆ ಟೈಟಿನ್ (Titin) ವರ್ಗದ ಪ್ರೋಟೀನ್‌ಗಳಲ್ಲಿ 27,000 ದಿಂದ 35,000 ಅಮೈನೋ ಆಮ್ಲಗಳಿರುತ್ತವೆ. 
ಈ ರೀತಿಯ ಪ್ರೋಟೀನ್‌ಗಳು ಎಲ್ಲಿ ಮತ್ತು ಹೇಗೆ ತಯಾರಾಗುತ್ತವೆ ಎಂದು ಗೊತ್ತಿದೆಯೇ?

ಜೀವಕೋಶದ ಒಳಗೆ ರೈಬೋಸೋಮ್‌‌ಗಳು ಎಂಬ ಪ್ರೋಟೀನ್ ತಯಾರಿಸುವ ಕಾರ್ಖಾನೆಗಳಿವೆ. ಈ ರೈಬೋಸೋಮ್‌ಗಳು ಬಹುಪಾಲು ರೈಬೋಸ್ ನ್ಯೂಕ್ಲಿಯಿಕ್ ಆಮ್ಲಗಳಿಂದ (RNA) ಮಾಡಲ್ಪಟ್ಟಿವೆ. ಈ ರೈಬೋಸೋಮ್ಗಳನ್ನು ನಿರ್ಮಿಸುವ RNA ಗಳನ್ನು rRNA ಗಳೆನ್ನುತ್ತೇವೆ. ಹಾಗಾದರೆ ಬೇರೆ ವಿಧದ RNA ಗಳು ಇವೆಯೇ? ಅವು ಯಾವುವು? ಅವುಗಳ ಕೆಲಸಗಳೇನು? ಎಂಬ ಪ್ರಶ್ನೆ ಕೇಳಲು ಹೊರಟಿದ್ದೀರಿ ಎಂದು ನನಗೆ ಗೊತ್ತು. ಅದನ್ನು ಮುಂದಿನ ಸಂಚಿಕೆಯಲ್ಲಿ ತಿಳಿಯುವುದರೊಂದಿಗೆ ಜೀವಿಗಳ ಉಗಮಕ್ಕೆ ಇದು ಹೇಗೆ ಸಂಬಂಧಿಸಿದೆ ನೋಡೋಣ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 



Ads on article

Advertise in articles 1

advertising articles 2

Advertise under the article