-->
ಮೆಕ್ಕೆಕಟ್ಟು (ಮರದ ವಿಗ್ರಹ)

ಮೆಕ್ಕೆಕಟ್ಟು (ಮರದ ವಿಗ್ರಹ)

ಮಕ್ಕಳ ಜಗಲಿಯಲ್ಲಿ ಕಲಾಕೃತಿ - ಉಪಸ್ಮರಣೆ
ಲೇಖನ : ಮೆಕ್ಕೆಕಟ್ಟು (ಮರದ ವಿಗ್ರಹ)
ಬರಹ : ಉಜ್ವಲ್
ಅಂತಿಮ ಬಿ.ವಿ.ಎ
ಸಿ.ಕೆ.ಎಮ್. ಕಾಲೇಜು
ವಿಶುವಲ್ ಆರ್ಟ್ಸ್
ಉಡುಪಿ ಜಿಲ್ಲೆ
ಮೊ: 9731913551


         
ಕುಂದಾಪುರ ಪಟ್ಟಣದಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಮೆಕ್ಕೆಕಟ್ಟು ದೇವಾಲಯವು ಅತ್ಯಂತ ಪುರಾತನವಾದ ಮತ್ತು ಐತಿಹಾಸಿಕ ಸ್ಥಳವಾಗಿದೆ. ಈ ಕ್ಷೇತ್ರವು ಪರಶುರಾಮನಿಂದ ನಿರ್ಮಿಸಲ್ಪಟ್ಟಿದೆ ಎಂದು ಪ್ರತೀತಿ ಇದೆ. ಇದು ಕರ್ನಾಟಕದ ಕರಾವಳಿ ಪ್ರದೇಶದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಶತ ಶತಮಾನಗಳಿಗೂ ಹಳೆಯದಾದುದು ಎಂದು ಪರಿಗಣಿಸಲಾಗಿದೆ. ಸಂಕ್ರಾಂತಿ ಹಬ್ಬದ ಸಮಯದಲ್ಲಿ ಇಲ್ಲಿ ನಡೆಯುವ ಜಾತ್ರೆ ಸುತ್ತಮುತ್ತಲಿನ ಎಲ್ಲಾ ಜನರನ್ನು ಆಕರ್ಷಿಸುತ್ತದೆ.
ನಾನು ನನ್ನ ಕಲಾಕೃತಿಯನ್ನು ಕ್ಯಾನ್ವಸ್ ಬೋರ್ಡ್‌ನಲ್ಲಿ ರಚಿಸಿದ್ದು, ಅದಕ್ಕೆ ಅಕ್ರಿಲಿಕ್ (ಕೃತಕ) ಬಣ್ಣವನ್ನು ಉಪಯೋಗಿಸಿರುತ್ತೇನೆ. ನಾನು ಸುಮಾರು 20 ಗಂಟೆ ಕಾಲವನ್ನು ತೆಗೆದುಕೊಂಡಿರುತ್ತೇನೆ. ನನ್ನ ಕಲಾಕೃತಿಯಲ್ಲಿ ಮೆಕ್ಕೆಕಟ್ಟು ಶಿರಿಯಾರ, ಸಾಲಿಗ್ರಾಮ ಮತ್ತು ಬಾರ್ಕೂರಿನ ಆಸುಪಾಸಿನಲ್ಲಿ ಇರುವುದನ್ನು ಸೂಚಿಸುವುದಕ್ಕಾಗಿ ನಾನು ತೆಂಕುತಿಟ್ಟು ಯಕ್ಷಗಾನದ ಪ್ರಖ್ಯಾತ ಕೆಂಪು ಹಳದಿ ಚೌಕುಳಿಯ ಸೀರೆ ಮತ್ತು ಕಿರೀಟವನ್ನು ಸಾಂಕೇತಿಕವಾಗಿ ಚಿತ್ರಿಸಿರುತ್ತೇನೆ. ಹಾಗೂ ಈ ಕಲಾಕೃತಿಯನ್ನು ರಚಿಸುವಾಗ ಮೆಕ್ಕೆಕಟ್ಟುವಿನ ದೇವಾಲಯದ ಬಗ್ಗೆ ಹಾಗೂ ಅಲ್ಲಿಯ ಆಚಾರ-ವಿಚಾರಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶ ಸಿಕ್ಕಿರುತ್ತದೆ. ಮಹೋನ್ನತ ಆಕರ್ಷಣೆ ಎಂದರೆ ಮೆಕ್ಕೆಕಟ್ಟು ದೇವಾಲಯವು ಮರದಿಂದ ಮಾಡಿದ ಬಣ್ಣ ಬಣ್ಣದ ಮೂರ್ತಿಗಳ ಬೃಹತ್  ಸಂಗ್ರಹವನ್ನು ಹೊಂದಿರುತ್ತದೆ. ಅಲ್ಲಿ ಸುಮಾರು 156ಕ್ಕೂ ಹೆಚ್ಚು ಮೂರ್ತಿಗಳಿವೆ. ಅವುಗಳಲ್ಲಿ ಹಲವು 10 ಅಡಿಗಳಿಗೂ ಮಿಕ್ಕಿ ಎತ್ತರವನ್ನು ಹೊಂದಿದೆ. ಇದರಿಂದಾಗಿ ಈ ದೇವಾಲಯದಲ್ಲಿ ಅಭಿಷೇಕ ಹಾಗೂ ನೈವೇದ್ಯ ನಡೆಯುವುದಿಲ್ಲ. ಈ ಮೂರ್ತಿಗಳನ್ನು ಕಾಡಿನಲ್ಲಿ ದೊರೆಯುವ ಹಲಸಿನ ಮರಗಳಿಂದ ಕೆತ್ತಲ್ಪಟ್ಟಿರುತ್ತದೆ. ಹಾಗೆಯೇ ಮೂರ್ತಿಗಳು ನೈಸರ್ಗಿಕ ಬಣ್ಣಗಳಿಂದ ವರ್ಣ ರಂಜಿತವಾಗಿ ಕಾಣಿಸುತ್ತದೆ. 
ಈ ಮೂರ್ತಿಗಳು ಸುಮಾರು 150-200 ವರ್ಷಗಳ ನಂತರ ಅವುಗಳನ್ನು ಪುನಃ ಜೀಣೋದ್ಧಾರ ಗೊಳಿಸಲಾಗಿತ್ತು. ಇತಿಹಾಸದ ಪ್ರಕಾರ ಪರಶುರಾಮನಿಗೆ ಈ ದೇವಾಲಯವು ನೇರ ಸಂಬಂಧವನ್ನು ಹೊಂದಿದೆ. ಮತ್ತು ದಂತಕಥೆಗಳ ಪ್ರಕಾರ ಬಾರ್ಕೂರಿನ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಬರಗಾಲ ಬಂದಾಗ ಅಗಸ್ತ್ಯ ಋಷಿಗಳು ಮಳೆಯ ದೇವರಾದ ವರುಣನನ್ನು ಮೆಚ್ಚಿಸಲು ಯಜ್ಞ-ಯಾಗ ಮಾಡುವುದಕ್ಕಾಗಿ ಈ ಪ್ರದೇಶಕ್ಕೆ ಬಂದಿದ್ದರು. ಹಾಗೂ ಯಜ್ಞ ಸಮಯದಲ್ಲಿ ಅಸುರ ಕುಂಭನು ಋಷಿಗಳಿಗೆ ತೊಂದರೆಯನ್ನು ಕೊಟ್ಟು ಪೀಡಿಸಿದನು. ಆಗ ಋಷಿಗಳು ಭೀಮನಿಗೆ ಗಣೇಶನು ವರವಾಗಿ ನೀಡಿದ ಖಡ್ಗದ ಸಹಾಯದಿಂದ ಕುಂಭನನ್ನು ಕೊಲ್ಲಿಸಿದನು ಎನ್ನುವ ಪ್ರತೀತಿ ಇದೆ. ನಮ್ಮ ದೇಶದಲ್ಲಿ ಶಿವನಿಗಾಗಿ ಕಟ್ಟಿದ ಹತ್ತು ಹಲವು ದೇವಾಲಯಗಳನ್ನು ಭಾರತಾದ್ಯಂತ ನಾವು ಕಾಣಬಹುದು. ಆದರೆ ಶಿವನ ಅಚ್ಚುಮೆಚ್ಚಿನ ವಾಹನವಾದ ನಂದಿಗೆ ಕಟ್ಟಿರುವ ದೇಗುಲವನ್ನು ನಮ್ಮ ಕರಾವಳಿಯ ಶಿರಿಯಾರದಲ್ಲಿ ಮಾತ್ರ ಕಾಣಬಹುದಾಗಿದೆ. ಭೂತಗಣಗಳಿಗೆಂದೆ ಮುಡಿಪಾದ ಈ ದೇವಸ್ಥಾನ ಶ್ರೀ ಮೆಕ್ಕೆಕಟ್ಟು ದೇಗುಲವೆಂದೇ ಪ್ರಖ್ಯಾತವಾಗಿದೆ. ನಾವು ಈ ದೇಗುಲದಲ್ಲಿ ಎಲ್ಲಿ ನೋಡಿದರಲ್ಲಿಯೂ ಮರದ ಮೂರ್ತಿಗಳನ್ನೇ ಕಾಣಬಹುದಾಗಿದೆ. ಮತ್ತು ಇದರ ಕೆಂಪು ಮಿಶ್ರಿತ ರಕ್ತವರ್ಣ ಮತ್ತು ಅದರಿಂದ ಹೊರಹೊಮ್ಮುವ ಸಕಾರಾತ್ಮಕ ಅನುಭವವನ್ನು ನಾವು ದೇಗುಲದೊಳಗೆ ಅನುಭವಿಸಬಹುದು. ಈ ದೇವಾಲಯದ ಪ್ರಧಾನ ದೇವರಾದ ಶ್ರೀ ನಂದಿಕೇಶ್ವರನ ದರ್ಶನವನ್ನು ಪಡೆಯುವುದೇ ಒಂದು ಸೌಭಾಗ್ಯದ ಕೆಲಸ. ಈ ದೇವರು, ಸತ್ಯ, ನ್ಯಾಯ, ಧರ್ಮಕ್ಕೆ ಹೆಸರುವಾಸಿಯಾಗಿದ್ದಾರೆ. ಅಧರ್ಮ, ಅನೀತಿಯಿಂದ ಬಂದ ಜನರಿಗೆ ಈ ದೇವಾಲಯದ ಒಳಗೆ ಪ್ರವೇಶ ದೊರೆಯುವುದಿಲ್ಲ. ಸಂತಾನ ಸಮಸ್ಯೆ ಉದ್ಯೋಗ ಸಮಸ್ಯೆ, ವೈವಾಹಿಕ ಸಮಸ್ಯೆಗಳಿಂದ
ಬಳಲುವವರು ಈ ದೇವರಿಗೆ ಕೆಂಡಸೇವೆಯನ್ನು ಸಲ್ಲಿಸುವ ಹರಕೆಯನ್ನು ಹೊತ್ತುಕೊಂಡರೆ ಅವರ
ಮನೋಭಿಲಾಷೆ ನೆರೆವೇರಿ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಮತ್ತೆ ಈ ದೇವರು ಜನರಿಗೆ ಸದಾ ಸನ್ಮಾರ್ಗದಲ್ಲಿ ನಡೆಯುವಂತೆ ಅನುಗ್ರಹವನ್ನು ನೀಡುತ್ತಾನೆ. ಈ ದೇವಾಲಯ ಕಾಷ್ಠ ಮೂರ್ತಿಗಳ ಮಹಾಮಂದಿರವೆಂದೇ ಪ್ರಸಿದ್ಧಿಯನ್ನು ಪಡೆದ ಏಕೈಕ ದೇವಾಲಯ. ಇದು ಶಿವ ಗಣಗಳ ಆವಾಸ ಸ್ಥಾನ ಎಂದೇ ಹೇಳಲಾಗುತ್ತದೆ. ಈ ದೇವಾಲಯದಲ್ಲಿ ಸಂಜೆ 6ರ ನಂತರ ಸುತ್ತ-ಮುತ್ತಲ ಜನರು ಬರಲು ಅಂಜುತ್ತಾರೆ. ಕಾರಣ ಅಲ್ಲಿ ನಡೆಯುವ ವಿಸ್ಮಯಗಳು ಮತ್ತು ವಿಚಿತ್ರ ಶಕ್ತಿಗಳ ಅನುಭೂತಿ. ಇಂತಹ ವಿಶೇಷ ದೇವಾಲಯ ನಮ್ಮ ಉಡುಪಿ ಜಿಲ್ಲೆಯಲ್ಲಿ ಇರುವುದೇ ಹೆಮ್ಮೆಯ ವಿಷಯವಾಗಿದೆ.
.................................................... ಉಜ್ವಲ್
ಅಂತಿಮ ಬಿ.ವಿ.ಎ
ಸಿ.ಕೆ.ಎಮ್. ಕಾಲೇಜು
ವಿಶುವಲ್ ಆರ್ಟ್ಸ್
ಉಡುಪಿ ಜಿಲ್ಲೆ
ಮೊ: 9731913551
*****************************************


Ads on article

Advertise in articles 1

advertising articles 2

Advertise under the article