-->
ಹೃದಯದ ಮಾತು : ಸಂಚಿಕೆ - 31

ಹೃದಯದ ಮಾತು : ಸಂಚಿಕೆ - 31

ಹೃದಯದ ಮಾತು : ಸಂಚಿಕೆ - 31
ಲೇಖಕರು : ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ


ನನಗೊಂದು ಮಾರ್ಮಿಕ ಬರಹ ಗೀಚಬೇಕೆಂದು ಮನಸ್ಸಿಗೆ ಹುಚ್ಚಾಸೆ. ಅದು ನನ್ನನ್ನು ಅನ್ವಯಿಸಿ ಜೀವನದ ಮರ್ಮಗಳ ಬಗ್ಗೆ ಅದುಮಿಡಲಾಗದ ಭಾವನೆಗಳು. ಭಗವಂತನ ಸೃಷ್ಠಿಯಲ್ಲಿ ಶ್ರೇಷ್ಠ ಸೃಷ್ಠಿಯೆಂದು ಧರ್ಮ ಗ್ರಂಥಗಳು ಉದಾರವಾಗಿ ವ್ಯಾಖ್ಯಾನಿಸಲ್ಪಟ್ಟ ಮನುಷ್ಯ ಕುಲ ನಮ್ಮದು. ಆದರೆ ನಮಗೇನಾಗಿದೆ?..... ನಾವು ನಮ್ಮ ಸ್ವಾರ್ಥವೇ ಪ್ರಧಾನವಾಗಿ ಬದುಕ ತೊಡಗಿದೆವು. ಅದರ ಪರಾಕಾಷ್ಠೆಯಲ್ಲಿ ಪ್ರಕೃತಿ ಮಾತೆಯ ಒಡಲನ್ನು ತಿವಿದೆವು.... ಗರ್ಭವನ್ನು ಸೀಳಿದೆವು.... ಒಟ್ಟಾರೆಯಾಗಿ ನಾನು, ನನಗೆ... ಎಂದು ಬಗೆದು ಬದುಕಿದೆವು. ಭವಿಷ್ಯದ ಜನಾಂಗ ನಮ್ಮ ಕಣ್ಣಮುಂದೆ ಹಾಯಲೇ ಇಲ್ಲ.... ಇರಲಿ ಅಷ್ಟಕ್ಕಾದರೂ ಸುಮ್ಮನಾಗಲಿಲ್ಲ... ಮುಂದುವರಿದು ಅಧಿಕಾರ, ಅಂತಸ್ತು, ಆಸ್ತಿ... ಇವುಗಳ ಬೆನ್ನು ಹತ್ತಿದೆವು. ಹತ್ತಾರು ತಲೆಮಾರಿಗಾಗುವ ಸಂಪತ್ತು ಕೂಡಿಬಂದರೂ ತೃಪ್ತಿ ಇಲ್ಲವಾಯಿತು... ಬೀದಿಯಲ್ಲಿ ಎಸೆದ ಎಂಜಲೆಲೆಯಲ್ಲಿ ತನ್ನ ಹಸಿವೆಯ ಅನ್ನ ಹುಡುಕುತ್ತಿರುವ ಜನಾಂಗ ನಮ್ಮ ಕಣ್ಣ ಮುಂದೆನೇ ಇರುವಾಗ, ಒಂದು ಚಾ.. ಕುಡಿಯಲು ಲಕ್ಷ ಖರ್ಚು ಮಾಡಲು ಮನಸ್ಸು ಹಿಂಜರಿಯಲಿಲ್ಲ. ದಿನದ ಖರ್ಚಿಗೆ ಒಂದು ರೂಪಾಯಿಗಾಗಿ ಪರದಾಟುತ್ತಿರುವಾಗಲೂ, ದಿನದ ಸಂಪಾದನೆ ನೂರು ಕೋಟಿಗಳಿದ್ದರೂ ತೃಪ್ತಿ ಇಲ್ಲವಾಯಿತು..

ಹೌದು ಒಂದೆಡೆ ಹಣ ನಮ್ಮನ್ನು ಭ್ರಾಂತಿಯಲ್ಲಿ ಮುಳುಗಿಸಿದೆ. ಇನ್ನೊಂದೆಡೆ ಅಧಿಕಾರ ಮದವೇರಿಸಿದೆ. ಮತ್ತೊಂದೆಡೆ ಪ್ರಶಸ್ತಿಗಳು ನಮ್ಮಲ್ಲಿ ಅಹಂ ತುಂಬಿಸುತ್ತಿದೆ. ಇವೆಲ್ಲವೂ ನಮ್ಮಹೆಜ್ಜೆಗಳು ನೆಲಬಿಡುವಂತೆ ಮಾಡುತ್ತಿದೆ. ಇವೆಲ್ಲವೂ ಕ್ಷಣಿಕ ಎಂಬ ಕಿಂಚಿತ್ತೂ ಭಾವನೆ ನಮಗುಂಟಾಗದಿರುವುದು ವಿಪರ್ಯಾಸ. ಜಗತ್ತಿನಲ್ಲಿ 84 ಲಕ್ಷ ಜೀವಿಗಳಿವೆ. ಇವುಗಳಲ್ಲಿ ಮನುಷ್ಯನೂ ಒಬ್ಬ. ಪ್ರತಿಯೊಂದು ಜೀವಿಗೂ ಅಲಿಖಿತ ಧರ್ಮವಿದೆ. ಇರುವೆಗಳ ಸಾಲಿನಲ್ಲಿ ಬದುಕುವ ಕಲೆಯಿದೆ. ಅವೆಂದೂ ಬಂದೂಕು, ಲಾಠಿ ಹಿಡಿದು ಪರಸ್ಪರ ಕಚ್ಚಾಡಿಲ್ಲ. ಮುಂದೆಯೂ ಕಚ್ಚಾಡಲ್ಲ. ಏಕೆಂದರೆ ಅದು ತಮ್ಮ ಧರ್ಮವಲ್ಲವೆಂಬ ಅರಿವು ಅವುಗಳಿಗಿದೆ. ಕಾಗೆ ಆಹಾರ ಸಿಕ್ಕಾಗ, ತಾನೊಂದೇ ತಿನ್ನದೇ, ತನ್ನ ಬಳಗವೆಲ್ಲವನ್ನೂ ಕೂಗಿ ಕರೆಯುತ್ತದೆ. ಏಕೆಂದರೆ ಅದು ಅದರ ಧರ್ಮ. ಕೋಳಿ ಒಂದಗುಳ ಕಂಡರೆ ತನ್ನ ಕುಲವನ್ನೆಲ್ಲಾ ಗುಟುರು ಹಾಕಿ ಕರೆಯುತ್ತದೆ. ಹಂಚಿ ತಿನ್ನುವುದು ಅದರ ಧರ್ಮ. ಸಾಕಿದ ಯಜಮಾನನಿಗೆ ಪ್ರೀತಿಯಿಂದ ಹಾಲು ಕೊಡುವುದು ಗೋವಿನ ಧರ್ಮ. ಸಾಕಿದ ಮನೆಯನ್ನು ಎಚ್ಚರದಿಂದ ಕಾವಲು ಕಾಯುವುದು ನಾಯಿ ಪಾಲಿಸಿಕೊಂಡು ಬಂದ ಧರ್ಮ. ಹಾಗಾದರೆ ನಾವು ಮನುಜರು ಪಾಲಿಸುತ್ತಿರುವ ಧರ್ಮ ಯಾವುದು?... ನಮಗೆ ಎಷ್ಟೊಂದು ಧರ್ಮ ಗ್ರಂಥಗಳಿವೆ. ಅವುಗಳ ಮೂಲಕ ವಿವರಿಸದ ವಿಚಾರಗಳಿಲ್ಲ. ನಮ್ಮ ಒಳಿತಿಗಾಗಿ ಅದೆಷ್ಟು ಅವತಾರಗಳಾಯಿತು. ಅಗಣಿತ ಪ್ರವಾದಿಗಳು ಬೋಧನೆ ಮಾಡಿದರು. ಸಂತರು, ಋಷಿಮುನಿಗಳು, ಸೂಪಿವರ್ಯರು, ಮಹಾತ್ಮರು... ಹೀಗೇ ಇವರೆಲ್ಲಾ ನಾವು ಪಾಲಿಸಬೇಕಾದ ಧರ್ಮ, ಬದುಕ ಬೇಕಾದ ರೀತಿಗಳನ್ನು ಎಳೆ ಎಳೆಯಾಗಿ ನಮ್ಮ ಮುಂದೆ ವಿವರಿಸಿದರು. ಆದರೂ ನಾವು ಬದಲಾಗುತ್ತಿಲ್ಲವೇಕೆ...!! ನಮ್ಮ ಮನಸ್ಸಿನ ಕ್ರೂರತೆ ಏಕೆ ವಿಜ್ರಂಭಿಸುತ್ತಿದೆ. ಪ್ರತಿಯೊಂದು ಧರ್ಮವೂ ತಮ್ಮ ಒಳಿತಿಗಾಗಿ, ಜಗತ್ತಿನ ಕಲ್ಯಾಣಕ್ಕಾಗಿ ದೇವರನ್ನು ಆರಾಧಿಸುತ್ತಿದ್ದೇವೆ. ಅದಕ್ಕಾಗಿಯೇ ಮಂದಿರ, ಮಸೀದಿ, ಚರ್ಚ್, ಬಸದಿ.. ಗಳನ್ನೆಲ್ಲಾ ನಿರ್ಮಿಸಿದೆವು. ಆದರೆ ಜಗತ್ತನ್ನು ಕೋವಿಡ್19 ಭಾದಿಸಿದಾಗ, ಇವುಗಳಿಗೆಲ್ಲಾ ಬೀಗ ಜಡಿದೆವಲ್ಲಾ... ಇದು ದೇವರ ಮೇಲಿರುವ ನಮ್ಮ ನಂಬಿಕೆಯ ಕೊರತೆ ಎಂದಾಗಲಾರದೇ....? ಇವುಗಳಿಲ್ಲದೆಯೂ ನಾವು ರಕ್ಷಣೆ ಹೊಂದಬಹುದೆಂಬ ಧೈರ್ಯವಲ್ಲವೇ....? ಬರ ಬಂದು ಬೆಂಡಾದ ಊರಿನ ಜನ ಒಟ್ಟು ಸೇರಿ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಒಟ್ಟು ಸೇರಲು ಧಾವಿಸಿ ಬರುವಾಗ, ಕನಿಷ್ಠ ಪಕ್ಷ ಕೊಡೆಯೊಂದು ಒಟ್ಟಿಗೆ ತರುವಷ್ಟು ನಂಬಿಕೆ ಇರುವುದೇ?.... ಇವುಗಳೆಲ್ಲಾ ಸತ್ವ ಹೀನವಾಗುತ್ತಿದೆ. ಸತ್ವಭರಿತ ಪ್ರಾರ್ಥನೆ ಬಂಡೆಕಲ್ಲನ್ನು ಛಿದ್ರ ಮಾಡಬಲ್ಲದು. ಆದರೆ ಆ ನಂಬಿಕೆ ನಮ್ಮಲ್ಲಿರ ಬೇಕಲ್ವಾ?.... ಹರಿದಾಸರೊಬ್ಬರು ದೇವನಾಮ ಸ್ಮರಿಸುತ್ತಾ ನೀರಿನ ಮೇಲೆ ನಡೆದಾಗ ಮುಳುಗಲಾರೆವು ಅಂದರು. ಅದು ಬೋಧನೆ. ಅದನ್ನು ಕೇಳಿದ ಹಾಲು ಮಾರುವ ಹೆಂಗಸು ಅದನ್ನು ನಂಬಿ ಬಿಟ್ಟಳು. ದೇವನಾಮ ಹೇಳುತ್ತಾ ನೀರಿನ ಮೇಲೆ ನಡೆದೇ ಬಿಟ್ಟಳಂತೆ. ಇದು ನಂಬಿಕೆ. ಬೋಧನೆ ಮತ್ತು ನಂಬಿಕೆ ಒಂದೇ ಅಲ್ಲ. ಏಕೆಂದರೆ ಹೆಂಗಸು, ತನ್ನ ಬೋಧನೆ ಕೇಳಿ ನೀರಿನ ಮೇಲೆ ನಡೆದ ವಿಷಯ ತಿಳಿದು, ತಾನೂ ಅದೇ ಮಂತ್ರ ಉಚ್ಚರಿಸಿ ನೀರಿನ ಮೇಲೆ ನಡೆಯಲು ಪ್ರಯತ್ನಿಸಿದ ಹರಿದಾಸರು, ನೀರಲ್ಲಿ ಜಲಸಮಾಧಿಯಾದರು.... ನಾವೆಲ್ಲಾ ಇಂದು ನಂಬಿಕೆ ಕಳೆದುಕೊಂಡು ಬದುಕುತ್ತಿದ್ದೇವೆ. ನಮಗೆ ನಂಬಿಕೆಗಿಂತ ಬೋಧನೆಯೇ ಪ್ರಧಾನ. ಬರಹ ದೀರ್ಘವಾದರೂ ಇನ್ನಷ್ಟು ಉದಾಹರಣೆ ನೀಡಬೇಕಿದೆ. ಕ್ಷಣಿಕ ಜಗತ್ತಿನ ನೆನಪು ನಮಗೆ ಬರುತ್ತನೇ ಇಲ್ಲ. ಜಗತ್ತಿನಲ್ಲಿ ಸಂಭವಿಸುತ್ತಿರುವ ನಾಶ, ನಷ್ಟಗಳ, ನೋವು, ದುಃಖಗಳ ಅರಿವಿದ್ದರೂ, ಅದು ನಮಗಲ್ಲ ಎಂಬ ನಿರ್ಲಿಪ್ತತೆ ನಮ್ಮದು. ನಮ್ಮ ಮನಸ್ಸಿನ ವಿಕಾರತೆ ಅದರ ಸೀಮೆಯನ್ನು ದಾಟಿಹೋಗಿದೆ. ಇನ್ನು ಅಂತ್ಯವೊಂದೇ ಪರಿಹಾರ. ಒಂದು ಹೆಣ್ಣು ಮಗಳನ್ನು ಸಾಮೂಹಿಕ ಅತ್ಯಾಚಾರಕ್ಕೆ ಒಳಪಡಿಸಿದ ಸುದ್ದಿ ಕೇಳಿದೆವು. ಅಷ್ಟೇ ಅಲ್ಲ ಕಾಮ ತೃಷೆ ತೀರಿದರೂ ನಮಗೆ ತೃಪ್ತಿಯಾಗಲಿಲ್ಲ. ಆ ಮಗಳ ನಾಲಗೆ ಕತ್ತರಿಸಿದೆವು. ಕತ್ತನ್ನು ತಿರುಚಿದೆವು. ಬೆನ್ನೆಲುಬನ್ನು ಮುರಿದೆವು. ಕಾಲನ್ನು ತಿರುಗಿಸಿ ಬಿಟ್ಟೆವು. ಇವೆಲ್ಲಾ ಮಾಡುತ್ತಿರಬೇಕಾದರೆ ಆ ಮಗು ಅದೆಷ್ಟು ಕಿರುಚಾಡಿರಬಹುದು?... ಅದೆಷ್ಟು ಬಾರಿ ಅಮ್ಮನನ್ನು ಕರೆದಿರಬಹುದು?.... ಆ ನೋವಿನ ಆಕ್ರಂದನದಲ್ಲಿ ಅರೆ ಕ್ಷಣ ನಮ್ಮ ಅಮ್ಮ, ಸಹೋದರಿ... ಇವರ್ಯಾರದ್ದಾರೂ ನೆನಪು ಮನದಲ್ಲಿ ಹಾದು ಬರಲಿಲ್ಲವೇಕೆ?..... ಇಲ್ಲ ನಾವು ಅಷ್ಟೊಂದು ಕ್ರೂರವಾಗಿದ್ದೇವೆ ಕಣ್ರೀ... ಆ ಹೆಣ್ಣು ಮಗಳ ಕಣ್ಣಿಂದ ಹರಿದ ಸಾವಿರಾರು ಕಣ್ಣೀರ ಹನಿಗಳು ಭೂಸ್ಪರ್ಶ ಮಾಡಿಲ್ಲವೇ?.... ಮೂರು ದಿನಗಳ ಆಕ್ರಂದನ ನೋವುಗಳ ಮಧ್ಯೆ 19ರ ಹರೆಯದ ಹೆಣ್ಣು ಮಗಳು ಈ ಜಗತ್ತಿಗೆ ವಿದಾಯ ಹೇಳಿದ್ದರೆ, ಭೂಮಿ ಮೇಲೆ ಬದುಕಿರುವ ನಾವೆಲ್ಲರೂ ಪಾಪದ ಕೊಡ ಹೊತ್ತವರಲ್ಲವೇ?...
ನಾವು ಜಗತ್ತಿನ ಸಾಮ್ರಾಟನಾಗಿ ಮೆರೆದ ಅಲೆಕ್ಸಾಂಡರ್ ಚಕ್ರವರ್ತಿಯ ಕೊನೆಯ ಮಾತುಗಳಿಂದ ಬದುಕಿನ ಪಾಠ ಕಲಿಯಬಹುದಿತ್ತೇನೋ?... "ನಾನು ಸತ್ತರೆ ಶವ ಪೆಟ್ಟಿಗೆಯಿಂದ ನನ್ನ ಎರಡೂ ಅಂಗೈಗಳನ್ನು ಆಕಾಶದತ್ತ ತೆರೆದು ಜನರಿಗೆ ಕಾಣುವಂತೆ ಅಂತಿಮ ಯಾತ್ರೆ ಮಾಡಿ. ಜಗತ್ತಿನ ಸಾಮ್ರಾಟ ಅಲೆಗ್ಸಾಂಡರ್ ಸಾಯುವಾಗ ಮಸಣಕ್ಕೆ ಬರಿಗೈನಲ್ಲಿ ತೆರಳಿದ್ದು ಎಂದು ಎಲ್ಲರಿಗೂ ತಿಳಿಯಲಿ" ಎಂಬುವುದು ಅಲೆಕ್ಸಾಂಡರ್ ಸಾವಿನಲ್ಲಿ ಜಗತ್ತಿಗೆ ನೀಡಿದ ಪಾಠ. ನಮಗೆ ಖ್ಯಾತ ಹಿಂದಿ ನಟ ಇರ್ಫಾನ್ ಖಾನ್ ಆಸ್ಪತ್ರೆಯಿಂದ ಬರೆದ ಪತ್ರ ಬದುಕಿನ ವಾಸ್ತವತೆಯ ಬಗ್ಗೆ ಅರಿವು ಮೂಡಿಸಬೇಕಿತ್ತು. "ಆಕಾಂಕ್ಷೆ, ಗುರಿ ಇವೇ ಮೊದಲಾದವುಗಳನ್ನು ತುಂಬಿಕೊಂಡು, ಪ್ರಯಾಣಿಕನಂತೆ ಸಂಚರಿಸುತ್ತಿರುವಾಗ ಟಿಸಿ ಬಂದು ನೀನು ಇಳಿಯುವ ಸ್ಟೇಷನ್ ಬಂತು.... ಅಂದಾಗ ಬೆಚ್ಚಿ ಬಿದ್ದರೂ ವಾಸ್ತವತೆಯನ್ನು ಅರಗಿಸಿಕೊಳ್ಳಲೇ ಬೇಕಾಯಿತು". ಎಂಬ ಪದಗಳು ನಮ್ಮ ಹೃದಯಕ್ಕೆ ತಾಗುತ್ತಿಲ್ಲವಲ್ಲ?... ಕ್ರಿಕೆಟ್ ಮಕ್ಕಾ ಲಾರ್ಡ್ಸ್ ನಲ್ಲಿ ಕುಳಿತು ಕ್ರಿಕೆಟ್ ನೋಡಬೇಕೆಂಬ ಅವರಾಸೆ ಈಡೇರಲಿಲ್ಲ. ಲಂಡನ್ ಆಸ್ಪತ್ರೆಯ ಬಾಲ್ಕನಿಯಲ್ಲಿ ನಿಂತು ಸಹಿಸಲಸಾಧ್ಯವಾದ ನೋವು ದೇಹಕ್ಕೆ ಅನುಭವವಾಗತ್ತಿದ್ದು, ರಸ್ತೆಯ ಇನ್ನೊಂದು ಬದಿಯಲ್ಲಿ ಲಾರ್ಡ್ಸ್ ಮೈದಾನ, ಅದರಲ್ಲಿ ನಗುತ್ತಿರುವ ವಿವಿಯನ್ ರಿಚರ್ಡ್ಸ್.... ಆದರೂ ರಸ್ತೆ ದಾಟಲು ಸಾಧ್ಯವಿಲ್ಲ. ಇರ್ಫಾನ್ ಖಾನ್ ಗೆ ಹಣದ ಕೊರತೆಯಿರಲಿಲ್ಲ. ಹೆಸರು ಪದವಿಗಳಿಗೆ ಕಡಿಮೆ ಇರಲಿಲ್ಲ. ಆದರೂ ಕಾಲನ ಕರೆ ಸಮೀಪಿಸುತ್ತಿರುವಾಗ ಯಾವುದೂ ನೆರವಿಗೆ ಬಾರದೆ, ಕೇವಲ ವೈದ್ಯರ ಪ್ರಯೋಗದ ವಸ್ತುವಾದದ್ದು ಇತಿಹಾಸ. ನನಗೆ ಗೋವಾದ ಮುಖ್ಯಮಂತ್ರಿಗಳಾಗಿದ್ದು, ಸಮರ್ಥ ಮುಖ್ಯಮಂತ್ರಿಗಳಲ್ಲಿ ಒಬ್ಬರೆನಿಸಿದ್ದ ಮನೋಹರ್ ಪರಿಕ್ಕರ್ ಆಸ್ಪತ್ರೆಯ ಬೆಡ್ ನಿಂದ ಬರೆದ ಮಾತುಗಳು ಮನವನ್ನು ಆಗಾಗ ಕುಟ್ಟುತ್ತಿದೆ. ಬದುಕು ಇಷ್ಟೇನಾ?.. ಜೀವನ ಕೊನೆಯಾಗುತ್ತಿರುವಾಗ ಅಧಿಕಾರ, ಅಂತಸ್ತು, ಹಣ... ಎಲ್ಲವೂ ಕೇವಲವಲ್ಲವಾ?..... ಆಸ್ಪತ್ರೆಯಲ್ಲಿ ಏಕಾಂತದ ಕೋಣೆಯಲ್ಲಿ , ಕಣ್ಣ ಮುಂದೆ ಬೆಳಗುತ್ತಿರುವ ಹಸಿರು ಬಣ್ಣದ ದೀಪವನ್ನೇ ದಿಟ್ಟಿಸಿಕೊಂಡು ಬದುಕುತ್ತಿರುವಾಗ, ಅದು ಕೆಂಪು ಬಣ್ಣಕ್ಕೆ ಬದಲಾದರೆ..... ಎಲ್ಲವೂ ಶೂನ್ಯವಲ್ಲವೇ?.. ಎಂಬರ್ಥದ ಪರಿಕ್ಕರ್ ಭಾವನೆಗಳು ನಮಗೆ ಪಾಠವಾಗುತ್ತಿಲ್ಲವಲ್ಲಾ... ಇಂದು ಹೀಗೆ ನೋಡುತ್ತಿರುವಾಗ ವಿಶ್ವ ವಿಖ್ಯಾತ ಫ್ಯಾಷನ್ ಡಿಸೈನರ್ ಕಿರ್ಸಿಡಾ ರಾಡ್ರಿಗಸ್.. ಕಣ್ಣ ಮುಂದೆ ಸುಳಿದು ಹೋದರು. ಇಲ್ಲಾರಿ....ಜೀವನ ಇಷ್ಟೇ... ಕಿರ್ಸಿಡಾ ರೋಡ್ರಿಗಸ್ ಕ್ಯಾನ್ಸರ್ ಬಂದು ಸಾಯುವ ಮುಂಚೆ ಬರೆದ ಪತ್ರ... ಸಾಮಾನ್ಯನ ಬದುಕನ್ನೂ ಬದಲಿಸಬಹುದು. ಆದರೆ ಹೃದಯ ಬೇಕಷ್ಟೆ.....

"ವಿಶ್ವದಲ್ಲಿನ ಐಷಾರಾಮಿ ಕಾರುಗಳು ನನ್ನ ಮನೆಯಲ್ಲಿದೆ ಆದರೆ ನನ್ನ ಯಾತ್ರೆ ಮಾತ್ರ ವೀಲ್ ಚೈಯರ್' ನಲ್ಲಾಗಿದೆ..! 
ನನ್ನ ಮನೆಯಲ್ಲಿ ಎಲ್ಲಾ ರೀತಿಯ ಬಟ್ಟೆಬರೆಗಳು ಮತ್ತು ಚಪ್ಪಲಿಗಳು ತುಂಬಿಕೊಂಡಿದೆ. ಆದರೆ ಆಸ್ಪತ್ರೆಯಲ್ಲಿ ಸಣ್ಣ ತುಂಡು ವಸ್ತ್ರದೊಂದಿಗೆ ನನ್ನ ಶರೀರ ಸುತ್ತಿ ಮಲಗಿಸಿದ್ದಾರೆ..! 
ಬ್ಯಾಂಕ್'ನಲ್ಲಿ ಅಗತ್ಯವಿರುವಷ್ಟು ಹಣವಿದೆ ಆದರೆ ನನಗೆ ಪ್ರಯೋಜನ ಬರುತ್ತಿಲ್ಲ..!
ನನ್ನ ಮನೆ ಎಂಬುದು ಅರಮನೆಯಂತಿದೆ ಆದರೆ ನಾನು ಆಸ್ಪತ್ರೆಯ ಸಣ್ಣ ಕಬ್ಬಿಣದ ಮಂಚದಲ್ಲಿ ಮಲಗಿದ್ದೇನೆ..! 
ಒಂದು 5 star ಹೋಟೆಲ್'ನಿಂದ ಇನ್ನೊಂದು 5'star ಹೋಟೆಲ್'ಗೆ ನಾನು ಯಾತ್ರೆ ಮಾಡುತ್ತಿದ್ದೆ, ಆದರೆ ಈಗ ಒಂದು ಲ್ಯಾಬ್'ನಿಂದ ಇನ್ನೊಂದು ಲ್ಯಾಬ್'ಗೆ ಮಾತ್ರ ನನ್ನ ಯಾತ್ರೆ..!
ನಾನು ನೂರಕ್ಕಿಂತ ಹೆಚ್ಚು ಜನರಿಗೆ ಆಟೋಗ್ರಾಫ್ ನೀಡುತ್ತಿದ್ದೆ, ಈಗ ನನ್ನ ಆಟೋಗ್ರಾಫ್ ಡಾಕ್ಟರ್ ಬರಹ ಮಾತ್ರ..!
ನನ್ನ ತಲೆ ಕೂದಲು ಅಲಂಕಾರ ಮಾಡಲು ಏಳು ಜನ ಬ್ಯೂಟಿಷಿಯನ್ ಇದ್ದರು, ಆದರೆ ಈಗ ನನ್ನ ತಲೆಯಲ್ಲಿ ಒಂದೇ ಒಂದು ಕೂದಲಿಲ್ಲ..!
ನನಗೆ ಅಗತ್ಯವಿರುವಲ್ಲಿಗೆ ಸ್ವಂತ 'ಜೆಟ್ ವಿಮಾನ'ದಲ್ಲಿ ಬೇಕೆಂದಾಗ ಹೋಗಿ ಬರುತ್ತಿದ್ದೆ, ಆದರೆ ಈಗ ಆಸ್ಪತ್ರೆಯ ವೆರಾಂಡಕ್ಕೆ ಬರಬೇಕಾದರೆ ಇಬ್ಬರು ಸ್ಟಾಫ್ ನರ್ಸ' ಗಳ ಸಹಾಯದ ಅಗತ್ಯವಿದೆ..!
ಮನೆಯಲ್ಲಿ ನಾನಾಬಗೆಯ ಭಕ್ಷ್ಯ ಭೋಜನ ವ್ಯವಸ್ಥೆಯಿದೆ. ಆದರೆ ಈಗ ನನ್ನ ಆಹಾರ ಕ್ರಮ ಎರಡು ಮಾತ್ರೆ ಮತ್ತು ಉಪ್ಪು ನೀರು ಮಾತ್ರ..!
ಈ ಮನೆ, ಕಾರು, ಜೆಟ್ ವಿಮಾನ, ಹಲವಾರು ಬ್ಯಾಂಕ್ ಅಕೌಂಟ್, ದೊಡ್ಡ ಸ್ಥಾನಮಾನ, ಪ್ರಶಸ್ತಿ ಇದು ಯಾವುದು ನನಗೆ ಪ್ರಯೋಜನವಿಲ್ಲ, ಸಮಾಧಾನಕರವೂ ಅಲ್ಲ, ಸಮಾಧಾನ ನೀಡುತ್ತಿರುವುದು ಜನರ ಮುಖ ಮತ್ತು ಅವರ 
ಸ್ಪರ್ಶಗಳು ಮಾತ್ರ...
"ಮರಣಕ್ಕಿಂತ ದೊಡ್ಡ ಸತ್ಯವೊಂದಿಲ್ಲ"...!!
ಎಷ್ಟೊಂದು ಮಾರ್ಮಿಕವಾದ ಬರಹ. ನಾವು ಬದಲಾಗೋಣ. ಬದಲಾದ ಬದುಕಿನಲ್ಲಿ ಪ್ರೀತಿ, ಮಮತೆ ತುಂಬಿರಲಿ. ಅಸಹಾಯಕರ ಕಣ್ಣೀರು ಒರೆಸೋಣ. ಹೆಣ್ಣುಮಕ್ಕಳ ಮಾನ ಮರ್ಯಾದೆಗಳಿಗೆ ಕಾವಲಾಗೋಣ... ಅವರ ಮನದ ನೋವಿಗೆ ಶಮನ ನೀಡೋಣ. ಹಣ, ಅಂತಸ್ತು, ಅಧಿಕಾರ.... ಬದಿಗಿರಲಿ. ದ್ವೇಷ, ಅಸೂಯೆ, ಕ್ರೌರ್ಯ.... ಗಳಿಗೆ ವಿದಾಯ ಹೇಳೋಣ.... ಆರಂಭ ಸರಿಯಾಗಿಲ್ಲದಿದ್ದರೂ, ನಮ್ಮ ಅಂತ್ಯ ಚೆನ್ನಾಗಿರಲಿ. ನಮ್ಮ ಸುತ್ತಮುತ್ತ ಸಾವಿರಾರು ಮಂದಿ ಸೇರಿದ ವೇದಿಕೆಯಲ್ಲಿ ಈ ಜಗತ್ತಿಗೆ ವಿದಾಯ ಹೇಳೋಣ...
...................... ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************




ನನ್ನ ಲೇಖನಗಳ ಸಂಗ್ರಹ (ಒಟ್ಟು62) ಪುಸ್ತಕದ ರೂಪದಲ್ಲಿ ಲಭ್ಯವಿದೆ. ಆಸಕ್ತಿಯುಳ್ಳ ಓದುಗರು ಸಂಪರ್ಕಿಸಬಹುದು....... ಯಾಕೂಬ್ ಎಸ್ ಕೊಯ್ಯೂರು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ 
ಮುಖ್ಯ ಶಿಕ್ಷಕರು, 
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************

Ads on article

Advertise in articles 1

advertising articles 2

Advertise under the article