-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 36

ನಿಷ್ಪಾಪಿ ಸಸ್ಯಗಳು : ಸಂಚಿಕೆ - 36

ನಿಷ್ಪಾಪಿ ಸಸ್ಯಗಳು : ಸಂಚಿಕೆ - 36
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

        
ಪ್ರೀತಿಯ ಮಕ್ಕಳೇ,
      ಹೇಗಿದ್ದೀರಿ? ಪರೀಕ್ಷೆಯ ಒತ್ತಡ ಆವರಿಸುತ್ತಿದೆಯೇ? ಈ ಸಮಯದಲ್ಲಿ ನಾವು ನಮ್ಮ ಆರೋಗ್ಯದ ಕಡೆಗೂ ಗಮನ ನೀಡಬೇಕಲ್ಲವೆ? ಆಯುರ್ವೇದವು ಅಭ್ಯಂಗ ಸ್ನಾನದಿಂದ ದೇಹ ಹಾಗೂ ಮನಸ್ಸಿಗೆ ಅಹ್ಲಾದ, ಚೈತನ್ಯ ತುಂಬಲು ಸಾಧ್ಯವೆನ್ನುತ್ತದೆ. ತಲೆ ಹಾಗೂ ದೇಹಕ್ಕೆ ಎಣ್ಣೆ ಹಚ್ಚಿ ಸ್ನಾನ ಮಾಡಿದರೆ ಆಯಾಸ ಪರಿಹಾರವಾಗಿ ಹೊಸ ಹುರುಪು ಮೂಡುತ್ತದೆ. ಓದಲು ಸಹಾಯಕವಾಗುತ್ತದೆ. ನಮ್ಮ ಹಿರಿಯರು ಇದಕ್ಕಾಗಿ ತೆಂಗಿನೆಣ್ಣೆ, ಎಳ್ಳೆಣ್ಣೆ, ಔಡಲದೆಣ್ಣೆ ಬಳಸುತ್ತಿದ್ದರು.
        ನೀವು ತೆಂಗಿನೆಣ್ಣೆ ಮತ್ತು ಎಳ್ಳೆಣ್ಣೆ ನೋಡಿರುತ್ತೀರಿ. ಆದರೆ ಔಡಲದೆಣ್ಣೆ ನೋಡಿದ್ದೀರಾ? ಔಡಲ ನೀವು ಮಾರ್ಗದ ಬದಿಗಳಲ್ಲಿ, ಪಾಳು ಬಿದ್ದ ಜಾಗ, ಬಂಜರು ಭೂಮಿಯಲ್ಲಿ ನೋಡುತ್ತಿರುವ ಒಂದು ಸಾಮಾನ್ಯ ಸಸ್ಯ. ಗಾಢವಾದ ಹಸಿರು ಬಣ್ಣದಲ್ಲಿ ಪಪ್ಪಾಯಿ ಎಲೆಯಾಕಾರದಲ್ಲಿ ಪರ್ಯಾಯ ಜೋಡಣೆಯ ಸಣ್ಣ ಎಲೆಗಳು. ಅಂಚುಗಳಲ್ಲಿ ಗರಗಸದ ಹಲ್ಲುಗಳಂತೆ ರಚನೆ. ಕೆಲವು ತಳಿಗಳಲ್ಲಿ ಕಾಂಡದ ಮೇಲೆ ಬಿಳಿ ಮೇಣದಂತೆ ಲೇಪವಿದೆ. ಗಿಡ ಟೊಳ್ಳಾಗಿರುತ್ತದೆ. ನೋಡಲು ಒರಟಾಗಿ ಕಾಣಿಸುವ ಈ ಸಸ್ಯ ಪೊದರಿನಂತೆ ನಮ್ಮೂರಲ್ಲಿ ಬೆಳೆಯುತ್ತದಾದರೂ 10ಮೀಟರಿಗೂ ಹೆಚ್ಚು ಎತ್ತರ ಬೆಳೆಯಬಲ್ಲದು. ನಮಗಿದು ಯಾವುದಕ್ಕೂ ಪ್ರಯೋಜನ ಇಲ್ಲದ ಸಸ್ಯವೆಂದೆನಿಸಿದರೂ ಭಾರತ, ಚೀನಾ, ಬ್ರೆಜಿಲ್, ಈಜಿಪ್ಟ್‌, ಸೂಡಾನ್, ಆಫ್ರಿಕಾ, ಅಮೇರಿಕಾ ಗಳಲ್ಲಿ ಇದೊಂದು ಬೆಳೆ. ಭಾರತದ ಆಂದ್ರಪ್ರದೇಶ, ಕರ್ನಾಟಕ, ತಮಿಳುನಾಡಿನಲ್ಲಿ ಅತ್ಯಧಿಕವಾಗಿ ಈ ಕೃಷಿ ನಡೆಸುವ ಮೂಲಕ ಪ್ರಪಂಚದಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ.
       ಔಡಲದಲ್ಲಿ ಗಂಡು ಮತ್ತು ಹೆಣ್ಣು ಹೂಗಳು ಒಂದೇ ಸಂಕೀರ್ಣದಲ್ಲಿ ರಚನೆಗೊಂಡಿದೆ. ಹೂಗಳಿಗೆ ದಳಗಳ ಬದಲು ಬರಿಯ ಪುಷ್ಪಪತ್ರಗಳಿವೆ. ಗಂಡು ಹೂವಿನಲ್ಲಿ ಕವಲೊಡೆದ ಕೇಸರಗಳು. ಅಂಡಾಶಯದಲ್ಲಿ ಮೂರು ಕೋಣೆಗಳಿದ್ದು ಮೂರು ಬೀಜಗಳ ಬೆಳವಣಿಗೆ. ಬೀಜಗಳ ಮೇಲೆ ತೆಳುವಾದ ಸಿಪ್ಪೆ. ಸಿಪ್ಪೆಯ ಮೇಲೆ ಸುಂದರವಾದ ವರ್ಣವಿನ್ಯಾಸವಿದೆ. ಬೀಜದ ಹೊರಭಾಗ ಮುಳ್ಳಿನ ರಚನೆ ಹೊಂದಿದೆ. ಕೊಂಬೆಗಳ ತುದಿಗಳಲ್ಲಿ ನೇರವಾಗಿ ಬೆಳೆಯುವ ಹೂ ಗೊಂಚಲು ನಸು ಹಳದಿ ಬಣ್ಣದಲ್ಲಿರುತ್ತದೆ. ಇದು ಕೆಲವು ದಿನಗಳ ವರೆಗೆ ಅರಳುತ್ತಾ ಇದ್ದು ಕಾಯಿಯೂ ಹಾಗೆಯೇ ಮೂಡುತ್ತಾ ಸಾಗುತ್ತದೆ. ಔಡಲದಲ್ಲಿ ದೊಡ್ಡ ಬೀಜವಾಗುವ ತಳಿ ಇದ್ದರೂ ಅದಕ್ಕಿಂತಲೂ ಬೀಜದ ಗಾತ್ರ ಸಣ್ಣದಾಗಿದ್ದ ತಳಿಯಲ್ಲಿ ಎಣ್ಣೆ ಅಧಿಕವಾಗಿರುತ್ತದೆ.
      ಔಡಲವೆಂಬ ಈ ನಿಷ್ಪಾಪಿ ಸಸ್ಯ ಯಾವುದೇ ವಾತಾವರಣದಲ್ಲಿ, ಯಾವುದೇ ಮಣ್ಣಿನಲ್ಲಿ ಬೆಳೆಯಬಲ್ಲ ತಾಕತ್ತು ಇರುವ ಸಸ್ಯ ! ಬೇರೇನೂ ಬೆಳೆಯಲಾಗದಿದ್ದರೆ ಔಡಲ ಬೆಳೆಯಲು ಯೋಗ್ಯವೆಂದೇ ಅರ್ಥ. ಕೇವಲ 280 ದಿನಗಳಲ್ಲಿ ಹುಟ್ಟಿ ಸಾಯುವ ಈ ಗಿಡವೀಗ ಮಾನವನ ಯತ್ನದಿಂದ ಬಹುವಾರ್ಷಿಕ ಸಸ್ಯವಾಗುತ್ತಿದೆ. ಗೊಂಚಲುಗಳಲ್ಲಿ ಬೆಳೆಯುವ ಬೀಜಗಳೂ ಒಮ್ಮೆಲೆ ಒಣಗುವುದಿಲ್ಲ. ಎರಡು ಮೂರು ಬಾರಿ ಕೊಯ್ಲು ಮಾಡಬೇಕಾಗುತ್ತದೆ. ಅದನ್ನೂ ಮಾನವ ಒಮ್ಮೆಲೇ ಒಣಗುವಂತೆ ಮಾಡಿಕೊಂಡಿದ್ದಾನೆ. ಒಣಗಿದಾಗ ಅವು ಒಡೆದು ಬೀಜಗಳು ದೂರ ಸಿಡಿಯುವುದೇ ಸಹಜ ಗುಣ. ಆದರೆ ಗಿಡದ ಈ ಆಟಗಳನ್ನೆಲ್ಲ ಮಾನವ ತನ್ನ ಹಿಡಿತದಿಂದ ಪಳಗಿಸಿ ಗೆದ್ದಿದ್ದಾನೆ.
     ಕ್ಯಾಸ್ಟರ್ ಆಯಿಲ್, ಹರಳೆಣ್ಣೆ ಗಿಡ, ಔಡಲವೆಂದು ಹೆಸರಿರುವ ಈ ಸಸ್ಯವನ್ನು ತುಳುವಿನಲ್ಲಿ ಅಲ್ಂಬುಡು ಎನ್ನುತ್ತಾರೆ. ಯೂಪೋರ್ಬೀಯೇಸಿ (Euphorbiaceae) ಕುಟುಂಬದ ಔಡಲದ ವೈಜ್ಞಾನಿಕ ಹೆಸರು ರಿಸಿನಸ್ ಕಮ್ಯೂನಿಸ್. ಅದರ ಕುಲದಲ್ಲಿರುವ ಏಕೈಕ ಜಾತಿಯ ಸಸ್ಯ ಇದೊಂದೇ ಆದರೂ ನೂರಾರು ನೈಸರ್ಗಿಕ ರೂಪಗಳು, ತೋಟಗಾರಿಕಾ ಪ್ರಭೇದಗಳಿವೆ. ಹಸಿರು ಹಾಗೂ ತಿಳಿ ಕೆಂಪುವರ್ಣದ ಸಸ್ಯಗಳು ನಮ್ಮ ನಡುವೆಯೇ ಪ್ರಕೃತಿಯಲ್ಲಿವೆ. ಕೊಪ್ಪಳ, ಕುಷ್ಟಗಿಯಂತಹ ಕೆಲವೆಡೆ ಹತ್ತಿ ಹಾಗೂ ಕಡಲೆಯ ಜೊತೆ ಮಿಶ್ರ ಬೆಳೆಯಾಗಿಯೂ ಬೆಳೆಯುತ್ತಾರೆ. ಪ್ರತಿ ಗಿಡದಲ್ಲಿ 8 ರಿಂದ10 ಕವಲುಗಳಿದ್ದು ಪ್ರತಿ ಕವಲಿನಲ್ಲಿ 50 ರಿಂದ 60 ಕಾಯಿಗಳಿರುತ್ತವೆ. ಒಂದು ಎಕರೆಗೆ 5 ಸಾವಿರ ರುಪಾಯಿ ಖರ್ಚಾದರೆ ಸರಾಸರಿ 6 ಕ್ವಿಂಟಾಲ್ ಬೆಳೆ ಬರುತ್ತದೆ. ಒಂದು ಕ್ವಿಂಟಾಲ್ ಗೆ 4500.00 ದಿಂದ 5500.00 ರೂಪಾಯಿ ಆದಾಯ ಬರುತ್ತದೆಂದು ರೈತರ ಸಾಮಾನ್ಯ ಲೆಕ್ಕಾಚಾರ.
        ಹಿಂದೆ ಹಸಿ ಕಾಯಿ ಕುಟ್ಟಿ ಎಣ್ಣೆ ತೆಗೆಯುತ್ತಿದ್ದರು. ಬಳಿಕ ಗಾಣದಿಂದ ಈಗಂತೂ ಯಂತ್ರಗಳ ಮೂಲಕ ಔಡಲದಿಂದ ಎಣ್ಣೆ ತೆಗೆಯುತ್ತಾರೆ. ಹಸಿ ಬೀಜದೆಣ್ಣೆಗೆ ಬಣ್ಣವಿಲ್ಲ, ವಾಸನೆ ಕಡಿಮೆ. ಔಷಧಿಗೆ ಹಸೀ ಬೀಜದೆಣ್ಣೆ ಬಳಸುತ್ತಾರೆ. ಯಂತ್ರಗಳಿಂದ ಎಣ್ಣೆ ತೆಗೆದು ಶುದ್ಧೀಕರಿಸಿ ಅದರ ಸ್ನಿಗ್ಧತೆ ಕಡಿಮೆ ಮಾಡಿ ಸುಗಂಧ ಸೇರಿಸಿ ಬಣ್ಣ ಸೇರಿಸಿ ಕೇಶತೈಲವಾಗಿ ಬಳಸುತ್ತಾರೆ. ಔಡಲವನ್ನು ಬೇಯಿಸಿ ಎಣ್ಣೆ ತೆಗೆದರೆ ಬಣ್ಣ ಕೆಂಪಾಗಿರುತ್ತದೆ. ಆಯುರ್ವೇದ, ಸಿದ್ಧ, ಯುನಾನಿ ಪದ್ಧತಿಯಲ್ಲಿ ಹಿಂದಿನಿಂದಲೂ ಔಡಲ ಬಳಕೆಯಲ್ಲಿದೆ. ಹಿಂದಿನಿಂದಲೂ ಹರಳೆಣ್ಣೆ ಸುಖರೇಚಕವಾಗಿ ಬಳಕೆಯಲ್ಲಿದೆ. ಜಠರ ರಸದ ಜೊತೆ ವರ್ತಿಸಿ ಮಲಬದ್ಧತೆ ಹೋಗಲಾಡಿಸಲು ಆಯುರ್ವೇದ ವೈದ್ಯರ ಮೊದಲ ಶಿಫಾರಸು ಔಡಲದೆಣ್ಣೆಗೆ. ಸೊಂಟನೋವು, ಬೆನ್ನುನೋವಿಗೆ ನಮ್ಮ ಹಿರಿಯರು ಔಡಲದ ಬೇರಿನ ಕಷಾಯವನ್ನೇ ಬಳಸಿ ಪರಿಹಾರ ಕಾಣುತ್ತಿದ್ದರು. ಅತಿಸಾರ, ಮೂಲವ್ಯಾಧಿ, ಸಂಧಿವಾತ, ಕಟಿವಾಯು, ಹೊಟ್ಟೆನುಲಿತ, ಕಣ್ಣಿನ ಊತ, ಮಲಬದ್ಧತೆ ಗಳಿಗೆ ಪರಿಹಾರ ನೀಡುವ ಸಸ್ಯ ಈ ಔಡಲ. ಸುಗಂಧ ದ್ರವ್ಯ, ಕೃತಕ ಗೋಂದು, ಮೆರುಗೆಣ್ಣೆ (ವಾರ್ನಿಶ್), ಮುದ್ರಣ ಬಣ್ಣ, ನೈಲಾನ್ ದಾರ ತಯಾರಿಕೆಯಲ್ಲೂ ಔಡಲ ಬಳಕೆಯಲ್ಲಿದೆ. ಹೆಚ್ಚು ಉಷ್ಣತೆಯಲ್ಲೂ ಸ್ನಿಗ್ಧತೆ ಉಳಿಸಿಕೊಳ್ಳುವ ಕಾರಣ ಇತರ ಕಾರಣಗಳಿಗೂ ಕೈಗಾರಿಕೆಗಳಲ್ಲಿ ಬಳಕೆಯಾಗುತ್ತಿದೆ. ಎಣ್ಣೆ ತೆಗೆದ ಬಳಿಕ ಔಡಲದ ಹಿಂಡಿ ಗೊಬ್ಬರವಾಗುತ್ತದೆ. ಇದರಲ್ಲಿ ರಿಸಿನ್ ಎಂಬ ರಕ್ತಹೆಪ್ಪುಗಟ್ಟಿಸುವ ವಿಷವಸ್ತು ಇರುವುದರಿಂದ ದನಕರುಗಳಿಗೆ ಬಳಕೆ ಮಾಡಲಾಗದು. ಔಡಲ ಸಸ್ಯದ ಕಾಂಡವು ಕಾಗದ ತಯಾರಿಕೆಗೆ ಬಳಸಲ್ಪಡುತ್ತದೆ. ರೇಷ್ಮೆ ಹುಳಗಳಿಗೆ ಎಲೆಗಳು ಆಹಾರವಾಗಿವೆ.
       ಮಕ್ಕಳೇ, ಯಾವುದೇ ದೃಷ್ಟಿಯಲ್ಲೂ ಔಡಲ ತಾತ್ಸಾರ ಮಾಡಿಬಿಡಬಹುದಾದ ಸಸ್ಯವಲ್ಲ. ಕೂಲಿಕಾರ್ಮಿಕರ ಸಮಸ್ಯೆ, ಔಷಧ, ಗೊಬ್ಬರಗಳ ದುಬಾರಿ ಕ್ರಯ ಇರುವ ಈ ಕಾಲದಲ್ಲಿ ಖಾಲಿ ಇರುವ ಜಮೀನಿನಿಂದಲೂ ದುಡ್ಡು ಕೈಗೆ ತಂದಿಡುವ ಸಸ್ಯ ಔಡಲ. ಹಲವು ರೋಗಗಳು, ಕೀಟ ಬಾಧೆಗಳು ಇವಕ್ಕಿದ್ದರೂ ಮುಂಗಾರಿನಲ್ಲಿ ಬೀಜ ಬಿತ್ತಿದರೆ ಜನವರಿಯೊಳಗೆ ಎರಡು ಬಾರಿ ಕಟಾವು ಮುಗಿಯುತ್ತದೆ. ಹರಳೆಣ್ಣೆ ನಾನಾ ರೂಪದಲ್ಲಿ ಎಲ್ಲರ ಬದುಕಿಗೂ ಸಹಾಯಕವಾಗಿ ಬಂದೇ ಬರುತ್ತದೆ ಎಂದೆನ್ನಬಹುದಲ್ಲವೇ?
      ಸರಿ ಮಕ್ಕಳೇ, ನೀವು ಈ ಗಿಡವನ್ನು ಗುರುತಿಸಲು ಪ್ರಯತ್ನಿಸುವಿರಲ್ಲವೇ? ಅನಾಮಧೇಯವಾಗಿ ಕಾಣಿಸುವ ಸಸ್ಯಗಳೂ ತೆಂಗಿನ ಮರದಂತೆ ಹಲವಾರು ವಿಧದಲ್ಲಿ ಸಹಕಾರಿ ಎಂದರೆ ತಪ್ಪಲ್ಲ, ಅಲ್ಲವೇ?
     ಸರಿ ಮಕ್ಕಳೇ, ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.... ನಮಸ್ಕಾರ
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************


Ads on article

Advertise in articles 1

advertising articles 2

Advertise under the article