-->
ಹಕ್ಕಿ ಕಥೆ : ಸಂಚಿಕೆ - 137

ಹಕ್ಕಿ ಕಥೆ : ಸಂಚಿಕೆ - 137

ಹಕ್ಕಿ ಕಥೆ : ಸಂಚಿಕೆ - 137
ಲೇಖಕರು : ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
             

ಎಲ್ಲರಿಗೂ ನಮಸ್ಕಾರ ಈ ವಾರದ ಹಕ್ಕಿ ಕಥೆಗೆ ಸ್ವಾಗತ.... ನಾನು ಪಕ್ಷಿ ವೀಕ್ಷಣೆ ಮತ್ತು ಫೋಟೋಗ್ರಫಿ ಶುರು ಮಾಡಿದ ಪ್ರಾರಂಭದ ದಿನಗಳು. ನಾನಾಗ ಕುದುರೆಮುಖ ಕಾಡಿನ ಪಕ್ಕದ ಸಂಸೆ ಎನ್ನುವ ಹಳ್ಳಿಯಲ್ಲಿ ಅಧ್ಯಾಪಕನಾಗಿ ಕೆಲಸ ಮಾಡುತ್ತಿದ್ದೆ. ವನ್ಯಜೀವಿಗಳಿಂದ ಸಮೃದ್ಧವಾದ ಮಲೆನಾಡು ಪ್ರದೇಶ ಅದು. ಹಲವಾರು ಬಗೆಯ ಪಕ್ಷಿಗಳು ಅಲ್ಲಿ ನಮಗೆ ನೋಡಲು ಸಿಗುತ್ತಿತ್ತು. ಪಕ್ಷಿ ವೀಕ್ಷಣೆಗಾಗಿ ಸಂಜೆ ಶಾಲೆ ಬಿಟ್ಟ ನಂತರ ಶಾಲೆಯ ಆಸು ಪಾಸಿನಲ್ಲಿ ಅಡ್ಡಾಡುವುದು ನನಗೆ ರೂಢಿಯಾಗಿತ್ತು. ಜೊತೆಗೆ 10ನೇ ತರಗತಿಯ ವಾರ್ಷಿಕ ಪರೀಕ್ಷೆಗಳು ಹತ್ತಿರ ಬರುತ್ತಿದ್ದವು. ಕೆಲವು ಮಕ್ಕಳ ಮನೆಗೆ ಹೋಗಿ ಪೋಷಕರಿಗೆ ಮಕ್ಕಳ ಪರೀಕ್ಷಾ ತಯಾರಿಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಮಕ್ಕಳ ಮನೆ ಭೇಟಿ ಕಾರ್ಯಕ್ರಮ ನಡೆಸುತ್ತಿದ್ದೆವು. ಸಂಸೆಯಿಂದ ಎಳನೀರು ಎಂಬ ಹಳ್ಳಿಗೆ ಹೋಗುವ ಮಾರ್ಗದಲ್ಲಿ ನಮ್ಮ ಶಾಲೆಗೆ ಬರುತ್ತಿದ್ದ ಹಲವು ಮಕ್ಕಳ ಮನೆಗಳಿದ್ದವು. ಒಬ್ಬ ಹುಡುಗನ ಮನೆಗೆ ಭೇಟಿ ಮಾಡಿ ಇನ್ನೂ ಸ್ವಲ್ಪ ದೂರದ ಇನ್ನೊಂದು ಮನೆಗೆ ಹೊರಡುವಾಗ, ನೆಲದ ಮೇಲೆ ಕುಪ್ಪಳಿಸುತ್ತಾ ಕೇಸರಿ ಬಣ್ಣದ ಹೊಟ್ಟೆ, ನೀಲಿ ಬಣ್ಣದ ತಲೆ, ರೆಕ್ಕೆಯ ಮೇಲೆಲ್ಲ ವಿಚಿತ್ರವಾದ ಗೆರೆಗಳನ್ನು ಹೊಂದಿದ ಒಂದು ವಿಶೇಷ ಹಕ್ಕಿ ನಮ್ಮ ಮುಂದೆ ಸ್ವಲ್ಪ ಹೊತ್ತು ಕುಳಿತು ಅಲ್ಲಿಂದ ಹಾರಿ ಮಾಯವಾಯಿತು. ಅಷ್ಟರೊಳಗೆ ಅದರ ಒಂದೆರಡು ಚಿತ್ರಗಳನ್ನು ತೆಗೆಯುವುದು ನನಗೆ ಸಾಧ್ಯವಾಯಿತು.
ಈ ಚಿತ್ರವನ್ನು ರಾತ್ರಿ ಬೇರೆ ಪಕ್ಷಿ ವೀಕ್ಷಕ ಮಿತ್ರರ ಜೊತೆ ಹಂಚಿಕೊಂಡೆ ಅರೆ ಈ ಹಕ್ಕಿ ನಿಮಗೆಲ್ಲಿ ಸಿಕ್ಕಿತು ಎಂದು ಹಲವರು ಕೇಳಿದರು. ನಾನು ನಮ್ಮ ಶಾಲೆಯ ಹತ್ತಿರದ ಮಕ್ಕಳ ಮನೆಗೆ ಹೋಗುವಾಗ ಅಲ್ಲಿ ಸಿಕ್ಕಿದ ವಿಷಯವನ್ನು ಅವರಿಗೆ ಹೇಳಿದೆ. ಇದು ಚಳಿಗಾಲದಲ್ಲಿ ಮಾತ್ರ ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳಿಗೆ ವಲಸೆ ಬರುವ ಚಂದದ ಹಕ್ಕಿ. ಬೇಸಿಗೆ ಕಾಲ ಬಂತು ಎಂದರೆ ಹಿಮಾಲಯದ ತಪ್ಪಲಿನಲ್ಲಿ ಇರುವ ಕಾಡುಗಳಿಗೆ ಮರಳಿ ಸಂತಾನೋತ್ಪತ್ತಿ ಮಾಡುತ್ತದೆ. ಗಂಡು ಹಕ್ಕಿ ಎಷ್ಟು ವರ್ಣಮಯವಾಗಿದ್ದರೆ ಹೆಣ್ಣು ಬಹುಪಾಲು ಕಂದು ಬಣ್ಣ. ಗೂಡಿನಲ್ಲಿ ಕುಳಿತು ಕಾವು ಕೊಡುವಾಗ ಇವುಗಳನ್ನು ಗುರುತಿಸುವುದೇ ಕಷ್ಟ. ಹಿಮಾಲಯದ ತಪ್ಪಲಿನ ಪುಟ್ಟ ತೊರೆಗಳ ಬದಿಯ ಬಂಡೆಗಳ ಸಂಧಿಯಲ್ಲಿ ಎಪ್ರಿಲ್ ನಿಂದ ಜೂನ್ ತಿಂಗಳ ನಡುವೆ ಗೂಡು ಕಟ್ಟಿ ಸಂತಾನಾಭಿವೃದ್ಧಿ ಮಾಡುತ್ತವೆಯಂತೆ. ಚಳಿಗಾಲ ಇನ್ನೇನು ಮುಗೀತಾ ಇದೆ. ಪಶ್ಚಿಮ ಘಟ್ಟದ ಆಸುಪಾಸಿನಲ್ಲಿ ನೀವೆಂದಾದರೂ ಈ ಹಕ್ಕಿ‌ ನೋಡಿದ್ದೀರಾ ? …
ಕನ್ನಡದ ಹೆಸರು: ನೀಲಿ ತಲೆಯ ಬಂಡೆಸಿಳ್ಳಾರ
ಇಂಗ್ಲಿಷ್ ಹೆಸರು: Blue-capped Rock thrush
ವೈಜ್ಞಾನಿಕ ಹೆಸರು: Monticola cinclorhynchus
ಚಿತ್ರ : ಅರವಿಂದ ಕುಡ್ಲ
ಮುಂದಿನ ವಾರ ಹೊಸತೊಂದು ಹಕ್ಕಿ ಕಥೆಯೊಂದಿಗೆ ಭೇಟಿ ಮಾಡೋಣ. 
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************



Ads on article

Advertise in articles 1

advertising articles 2

Advertise under the article