-->
ಹೃದಯದ ಮಾತು : ಸಂಚಿಕೆ - 29

ಹೃದಯದ ಮಾತು : ಸಂಚಿಕೆ - 29

ಹೃದಯದ ಮಾತು : ಸಂಚಿಕೆ - 29
ಲೇಖಕರು : ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
             

ಶಾಲೆಯಲ್ಲಿ ಎಂದಿನಂತೆ ತರಗತಿಗಳು ನಡೆಯುತ್ತಿವೆ. ರಮ್ಯ ಮೇಡಂ ಗಣಿತ ಶಿಕ್ಷಕಿ. ಹತ್ತನೇಯ ತರಗತಿ ಪಾಠದಲ್ಲಿದ್ದಾರೆ. ಇದ್ದಕ್ಕಿದ್ದಂತೆ ಹೊರಗಡೆ ಕಿರುಚಾಟ, ಚೀರಾಟದ ಶಬ್ಧ. ರಮ್ಯ ಸ್ವಲ್ಪ ಹೊರಗಡೆ ಇಣುಕಿ ನೋಡಿದಾಗ ಎಲ್ಲರೂ ತನ್ನತ್ತಲೇ ನುಗ್ಗುತ್ತಿದ್ದಾರೆ. ವಿಷಯ ಇನ್ನೂ ತಿಳಿದಿಲ್ಲ. ಅವಾಚ್ಯ ಪದಗಳ ಪದಪುಂಜಗಳೇ ಬರುತ್ತಿದೆ. ಪ್ರತಿಯೊಬ್ಬರೂ ನೋಟದಲ್ಲೇ ಭಯ ಉಂಟು ಮಾಡುವಂತಿದ್ದರು. ಪ್ರತಿಯೊಬ್ಬರೂ ಆರ್ಭಟಿಸುತ್ತಿದ್ದಾರೆ. ಕಿರುಚುತ್ತಿದ್ದಾರೆ. ಅವರೇನು ಮಾಡುತ್ತಿದ್ದಾರೆ? ಏನು ಹೇಳುತ್ತಿದ್ದಾರೆ? ಯಾಕೆ ಕಿರುಚುತಿದ್ದಾರೆ?... ಯಾವುದೂ ಅರ್ಥವಾಗುತ್ತಿಲ್ಲ. ಮಕ್ಕಳೆಲ್ಲಾ ಭಯದಿಂದ ನಡುಗುತ್ತಿದ್ದಾರೆ. ಮುಖ್ಯೋಪಾಧ್ಯಾಯರಾದಿಯಾಗಿ ಯಾವೊಬ್ಬ ಶಿಕ್ಷಕನೂ ಹೊರಬರುತ್ತಿಲ್ಲ. ಅವರೆಲ್ಲಾ ಭಯಭೀತರಾಗಿದ್ದಾರೆ. ಬಂದವರಲ್ಲಿ ಯಾರೊಬ್ಬರೂ ಪರಿಚಯಸ್ಥರಂತೆ ಕಾಣಿಸುತ್ತಿಲ್ಲ. ಅವರ ಪೋಷಕರೋ, ಅಥವಾ ಹೊರಗಿನವರೋ ಗೊತ್ತಾಗುತ್ತಿಲ್ಲ. ಪೋಷಕರ ಸಭೆಯಿಂದ ಹಿಡಿದು ಪ್ರತಿಯೊಂದು ವಿಷಯಕ್ಕೂ ಬಹುತೇಕ ಅಮ್ಮಂದಿರೇ ಬರುವುದರಿಂದ ಇವರುಗಳ ಪರಿಚಯ ಯಾರೊಬ್ಬರಿಗೂ ಇದ್ದಂತಿಲ್ಲ. ಅದರಲ್ಲಿ ಒಬ್ಬ ಮುನ್ನುಗ್ಗಿ ಬಂದು ರಮ್ಯ ಟೀಚರ್ ಗೆ ಗದರಿಸ ತೊಡಗಿದ. ಅವನು 10ನೇ ತರಗತಿ ಸಂದೇಶನ ಅಪ್ಪ ಅಂತ ರಮ್ಯನಿಗೆ ಗೊತ್ತಾಯಿತು. ರಮ್ಯ ಟೀಚರಿಗೆ ಎಲ್ಲವೂ ಮನದಟ್ಟಾಯಿತು. ಸಂದೇಶ 10ನೇ ತರಗತಿ ವಿದ್ಯಾರ್ಥಿ.‌ ಅವನು ಶಾಲೆಯ ಒಬ್ಬ ಗಣ್ಯ ಅತಿಥಿ ಇದ್ದಂತೆ. ಇಷ್ಟ ಬಂದಾಗ ಬರುತ್ತಾನೆ. ಶಾಲೆಯಲ್ಲಿ ಆಟೋಟ ಮುಂತಾದ ಕಾರ್ಯಕ್ರಮ ಇದ್ದರೆ ತಪ್ಪಿಸಲಾರ. ಅವನು ರಜೆ ಮಾಡಿದಾಗ ಕೊಟ್ಟ ಕಾರಣಗಳನ್ನು ಪಟ್ಟಿ ಮಾಡಿದರೆ, ಕುಟುಂಬದಲ್ಲಿ ಬಹುತೇಕ ಮಂದಿಯನ್ನು ಈಗಾಗಲೇ ಸಾಯಿಸಿಬಿಟ್ಟಿದ್ದ. ತಲೆನೋವು, ಹೊಟ್ಟೆನೋವು, ಕೈ, ಕಾಲು ಹೀಗೇ.... ಎಲ್ಲವೂ ಶಾಲೆ ತಪ್ಪಿಸಿರುವುದಕ್ಕೆ ಕಾರಣಗಳು. ಮನೆಯವರಲ್ಲಿ ವಿಚಾರಿಸಿದರೆ ಅವನ ಪರವಾಗಿ ವಕಾಲತ್ತು ಬೇರೆ. ಅದೆಲ್ಲಾ ಬದಿಗಿರಲಿ ಈತ ಕಲಿಯುವುದರಲ್ಲಾದರೂ ಏನಾದರೂ ಇದ್ದಾನಾ? ನೋಡಿದರೆ, ಅವನ ಹೆಸರನ್ನೇ ಸದೇಸ ಅಂತ ಬರೆಯುತ್ತಾನೆ. ಲೆಕ್ಕ, ಇಂಗ್ಲೀಷ್ ಬದಿಗಿರಲಿ, ಕನ್ನಡದ ಒಂದೇ ಒಂದು ವಾಕ್ಯವನ್ನೂ ಸರಿಯಾಗಿ ಓದಲಾರ. ಹಾಗಂತ ಶಿಕ್ಷಕರು ಪ್ರಯತ್ನಿಸಿಲ್ಲವೇ...? ಕಲಿಸುವುದು ಶಿಕ್ಷಕರ ಕರ್ತವ್ಯ ಅಲ್ಲವೇ? ಅನ್ನುವವರಿಗೇನೂ ಕಡಿಮೆಯಿಲ್ಲ. ಹೌದು ಎಂಟನೇ ತರಗತಿಗೆ ಅವನ ಪ್ರವೇಶವೇ ವಿಚಿತ್ರವಾಗಿತ್ತು. ಅವನ ಹೇರ್ ಕಟ್ ತಲೆಯ ಒಂದು ಬದಿ ಸಂಪೂರ್ಣ ಕೆತ್ತಿದ್ದರೆ, ಮತ್ತೊಂದು ಬದಿ ಕತ್ತರಿ ತಾಗಿಸದೆ ವರ್ಷ ಕಳೆದಂತಿತ್ತು. ಅವನ ಪ್ಯಾಂಟ್ಸ್ ಇನ್ನೇನು ಅದ್ಯಾವಾಗ ಕೆಳಗೆ ಜಾರಿ ಬೀಳುತ್ತೋ ಎಂಬಂತಿತ್ತು. ದಾಖಲಾತಿಗಾಗಿ ಅಮ್ಮನೊಂದಿಗೆ ಬಂದಿದ್ದ. ಅಮ್ಮನೇ ಮಗನಿಗೆ ಹೆದರಿದಂತೆ ತೋರುತ್ತಿತ್ತು. ಆದರೆ ದಾಖಲಾತಿ ಅನಿವಾರ್ಯ. ಅವನ ಅವಸ್ಥೆ ನೋಡಿ ಅವಕಾಶ ನಿರಾಕರಿಸುವಂತಿಲ್ಲ. ಗದರಿಸುವಂತಿಲ್ಲ. ಕಣ್ಣು ದೊಡ್ಡದು ಮಾಡಿ ನೋಡುವಂತಿಲ್ಲ. ಒಬ್ಬ ವಿದ್ಯಾರ್ಥಿಯನ್ನು ನೋಡಿ ಶಿಕ್ಷಕರೆಲ್ಲಾ ಹೆದರಿದಂತೆ ತೋರುತ್ತಿದ್ದರು. ಅವನನ್ನು ಬದಲಾಯಿಸಲು ಪ್ರತಿಯೊಬ್ಬರೂ, ತಮ್ಮ ಪರಮಾವಧಿ ಪ್ರಯತ್ನಪಟ್ಟರು. ಶಾಲಾ ಪೂರ್ವ ಮತ್ತು ಶಾಲಾ ನಂತರದ ಅವಧಿಯಲ್ಲಿ ಹೇಳಿಕೊಡುತ್ತೇವೆ ಎಂದು ಬೇಡಿಕೊಂಡರು. ಆದರೆ ಆತ ಶಾಲೆಯ ಆವರಣ ಪ್ರವೇಶಿಸುವುದೇ ಪ್ರಾರ್ಥನೆ ಆರಂಭಗೊಂಡ ನಂತರ. ಶಾಲೆ ಬಿಡುವ ಗಂಟೆ ಹೊಡೆದರೆ ಅವನು ಕಣ್ಣಿಗೆ ಕಾಣಿಸದಷ್ಟು ವೇಗವಾಗಿ ಶಾಲೆಯಿಂದ ಓಡುತ್ತಿದ್ದ. ಅವನನ್ನು ಸಹಿಸಿಕೊಂಡದ್ದಾಯಿತು. ಯಾವ ಕೆಲಸವೂ ಮಾಡದೆ 10ನೇ ತರಗತಿ ಬಂದದ್ದೂ ಆಯಿತು. 100% ಫಲಿತಾಂಶ ತರಬೇಕೆಂದು ಶಾಲೆಯ ಶಿಕ್ಷಕರೆಲ್ಲರ ಬಹುವರ್ಷಗಳ ಕನಸು. ಈ ವರ್ಷ ಅದು ಈಡೇರುವ ಎಲ್ಲಾ ಸಾಧ್ಯತೆಗಳಿತ್ತು. ಆದರೆ ಅದಕ್ಕೆ ಅಡ್ಡಿ ಸಂದೇಶ ಒಬ್ಬನೇ. ಅವನನ್ನು ಎಷ್ಟೇ ಪ್ರಯತ್ನ ಪಟ್ಟರೂ ತಿದ್ದಲು ಸಾಧ್ಯವಾಗಲಿಲ್ಲ.

ನಿನ್ನೆಯ ದಿನ ಅವನು ಗಣಿತ ಅವಧಿ ರಮ್ಯ ಟೀಚರ್ ಪಾಠ ಮಾಡುತ್ತಿರುವಾಗ ಎದುರಿನ ಬೆಂಚಿನಲ್ಲಿದ್ದ ರಾಜೇಶನ ಸಮವಸ್ತ್ರ ಬಟ್ಟೆಯ ಮೇಲೆ ಪೂರ್ತಿ ಶಾಯಿ ಹಾಕಿದ್ದಾನೆ. ರಾಜೇಶ ಸೌಮ್ಯ ಹುಡುಗ. ತರಗತಿಯಲ್ಲಿ ಬುದ್ಧಿವಂತ ಹುಡುಗ. ಆದರೆ ತೀರಾ ಬಡವ. ಅವನಿಗೆ ಮತ್ತೊಂದು ಸಮವಸ್ತ್ರ ಹೊಲಿಸುವ ಶಕ್ತಿ ಇರಲಿಲ್ಲ. ಸಂದೇಶ ಆತನಿಗೆ ದಿನಾಲೂ ಒಂದಲ್ಲ ಒಂದು ಕಿರುಕುಳ ನೀಡುತ್ತಿದ್ದ. ಇಂದು ರಾಜೇಶ ತುಂಬಾನೇ ಅಳತೊಡಗಿದ. ರಮ್ಯ ಮೇಡಂ ಯಾವತ್ತೂ ಸಿಟ್ಟುಗೊಂಡವರಲ್ಲ. ಪಕ್ಕದಲ್ಲೇ ಇದ್ದ ಒಂದು ಕೋಲು ತೆಗೆದು ಸಂದೇಶನಿಗೆ ಎರಡು ಬಿಗಿದೇ ಬಿಟ್ಟರು. ಹೊಡೆದದ್ದೂ ಹೇಗೋ ಆಗಿತ್ತು. ಆದರೆ ರಮ್ಯ ಸಂಪೂರ್ಣ ಭಯಗೊಂಡಿದ್ದರು. ಮರುದಿನ ಸಂದೇಶನ ಮುಖ ನೋಡುವ ತನಕ ಅವರಿಗೆ ಸಮಾಧಾನವಿಲ್ಲ. ಆದರೆ ರಮ್ಯ ತರಗತಿಗೆ ಬಂದಾಗ ಸಂದೇಶ ಬಂದಿರಲಿಲ್ಲ. ಅದೇ ಸಮಯಕ್ಕೆ ಹೊರಗಡೆ ಕಿರುಚಾಟ ಕೇಳಿಸಿದ್ದು. ಅದರಲ್ಲಿ ಮುಂದೆ ಬಂದ ವ್ಯಕ್ತಿ ಸಂದೇಶನ ಅಪ್ಪ ಎಂಬುವುದು ದೃಢವಾಯಿತು. ಅವನೊಬ್ಬ ಚಿಕ್ಕ ಮಟ್ಟಿನ ರೌಡಿ ಎಂಬ ಬಗ್ಗೆ ರಮ್ಯನಿಗೆ ಯಾರೋ ಹೇಳಿದ್ದರು. ಈಗಂತೂ ಟೀಚರ್ ಸಂಪೂರ್ಣ ಭಯಗೊಂಡಿದ್ದರು. ಸುಮಾರು 20 ವರ್ಷ ಮಕ್ಕಳಿಗಾಗಿ ಏನೆಲ್ಲಾ ಸಾಧ್ಯವೋ! ಅದನ್ನೆಲ್ಲಾ ನಿರಂತರ ಮಾಡುತ್ತಿದ್ದ ರಮ್ಯನ ಕೈ ಕಾಲು ನಡುಗುತ್ತಿದೆ. ಅಷ್ಟೊತ್ತಿಗೆ ಮುಖ್ಯಶಿಕ್ಷಕರು ಮತ್ತು ಇತರ ಶಿಕ್ಷಕರು ಸಮಾಧಾನ ಪಡಿಸುವ ಪ್ರಯತ್ನ ಪಟ್ಟರೂ ಅದು ನಿಷ್ಪ್ರಯೋಜಕವಾಯಿತು. ಬಂದವರು ಕಿರುಚಾಡುತ್ತಾ ಇರುವಂತೆ, ಕೆಲವರು ಸಿಕ್ಕ ಸಿಕ್ಕವರಿಗೆ ಕರೆ ಮಾಡುತ್ತಿದ್ದರು. ಜನರ ಸಂಖ್ಯೆ ಮತ್ತಷ್ಟು ಹೆಚ್ಚುತ್ತಿದ್ದು. ಕೆಲವೇ ಹೊತ್ತಿನಲ್ಲಿ ಮೇಲಾಧಿಕಾರಿಗಳು ಬಂದರು. ಅವರನ್ನೂ ಸುತ್ತುವರಿಯಲಾಯಿತು. ನಂತರ ಕೆಲವೇ ಹೊತ್ತಿನಲ್ಲಿ ಪೋಲೀಸರ ಪ್ರವೇಶನೂ ಆಯಿತು. ಮೇಲಾಧಿಕಾರಿಗಳು, ಪೋಲೀಸ್ ಮುಖ್ಯಸ್ಥರು ಹಾಗೂ ಗುಂಪಿನ ಮುಖ್ಯಸ್ಥರು ಮುಖ್ಯ ಶಿಕ್ಷಕರನ್ನು ಕರೆಸಿ ಯಾವುದೋ ಚರ್ಚೆ ನಡೆಸಿದರು. ಒಂದು ದಿನದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿ ಮೇಲಾಧಿಕಾರಿಗಳು ಗುಂಪನ್ನು ವಾಪಾಸ್ದು ಕಳುಹಿಸುವಲ್ಲಿ ಯಶಸ್ವಿಯಾದರು. ನಂತರ ರಮ್ಯ ಟೀಚರ್ ಕರೆಸಿ ವಿಚಾರಿಸಲಾಯಿತು. ರಮ್ಯ ಮೇಡಂಗೆ ಅನೇಕ ಸಲ ತಲೆ ಸುತ್ತಿದಂತೆ, ಕಣ್ಷು ಮಂಜಾದಂತೆ ಅನುಭವವಾಗುತ್ತಿತ್ತು. ತನ್ನ ವೃತ್ತಿಯಲ್ಲಿ ಒಂದೇ ಒಂದು ಚ್ಯುತಿ ಇಲ್ಲದ ರಮ್ಯ ಎಲ್ಲರ ಮುಂದೆ ಅಧೀರರಾಗಿದ್ದರು. ಎಲ್ಲರೂ ನೀವು ಹೊಡೆಯಬಾರದಿತ್ತು ಟೀಚರ್ ಅನ್ನುವವರೇ. ಅದು ರಮ್ಯ ಮೇಡಂಗೂ ಗೊತ್ತು. ಆದರೆ ಘಟನೆ ನಡೆದು ಹೋಗಿತ್ತು. ಇನ್ನೇನೂ ಮಾಡುವಂತಿಲ್ಲ. ಹಾಗಂತ ಕೊಟ್ಟದ್ದು ಕೇವಲ ಎರಡೇ ಪೆಟ್ಟು. ಅದೂ ಸಾಧಾರಣ. ಆದರೆ ರಮ್ಯ ಮೇಡಂ ತಲೆತಗ್ಗಿಸಲು ಅದು ಸಾಕಿತ್ತು. ನಾಳೆ ತೀರ್ಮಾನ ನೀಡುವುದಾಗಿ ಮೇಲಾಧಿಕಾರಿ ತಿಳಿಸಿ ಹೊರಟರು. ರಮ್ಯ ಮೇಡಂಗೆ ಧೈರ್ಯ ತುಂಬುವವರು ಯಾರೂ ಇರಲಿಲ್ಲ. ಮರುದಿನ ಸುದ್ದಿಯೆಲ್ಲಾ ಊರಿಗೆ ಹರಡಿತ್ತು ರಮ್ಯ ಮೇಡಂ ರನ್ನು ಇಷ್ಟಪಡುವ ಬಹಳಷ್ಟು ಮಂದಿ ಊರಲ್ಲಿದ್ದರು. ಅವರೆಲ್ಲಾ ರಮ್ಯ ಟೀಚರ್ ಬೆಂಬಲಕ್ಕೆ ಒಬ್ಬೊಬ್ಬರಾಗಿ ಬರತೊಡಗಿದರು. ಬೆಳಿಗ್ಗೆ 9 ಗಂಟೆಯ ಬ್ರೇಕಿಂಗ್ ನ್ಯೂಸ್ ರಮ್ಯ ಟೀಚರ್ ಬಗ್ಗೆನೇ ಬರುತ್ತಿತ್ತು. "ಮುಗ್ಧ ಮಗುವಿನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಶಿಕ್ಷಕಿ" ಎಂಬ ತಲೆಬರಹ. ಅದರೊಂದಿಗೆ "ಮಗುವಿನ ಮೇಲೆ ಹಲ್ಲೆ ನಡೆಸಿದ ರಾಕ್ಷಸಿ ಶಿಕ್ಷಕಿಯ ಅಮಾನತು" ಎಂಬ ವರದಿ. ಎಲ್ಲಾ ಶಿಕ್ಷಕರು, ಬಹುತೇಕ ಪೋಷಕರು ಶಾಲೆಯಲ್ಲಿ ರಮ್ಯ ಟೀಚರಿಗಾಗಿ ಕಾಯುತ್ತಿದ್ದಾರೆ. ರಮ್ಯ ಟೀಚರ್ ಮೊಬೈಲ್ ಆಫ್ ಆಗಿತ್ತು. ಆದರೆ ರಮ್ಯ ಟೀಚರ್ ಬರಲೇ ಇಲ್ಲ. ಅಷ್ಟೊತ್ತಿಗೆ ಒಬ್ಬ ಏದುಸಿರು ಬಿಡುತ್ತಾ ಬಂದ. ವಿಷಯ ತಿಳಿದಾಗ ಎಲ್ಲರೂ ಆಘಾತಗೊಂಡಿದ್ದರು. ಸೌಮ್ಯ ಸ್ವಭಾವದ, ಕಾಯಕವೇ ಕೈಲಾಸ ವೆಂದು ಬಗೆದು ತನ್ನ ಶಾಲೆ ಮತ್ತು ವೃತ್ತಿಯನ್ನು ಅಗಾಧವಾಗಿ ಪ್ರೀತಿಸುತ್ತಿದ್ದ ರಮ್ಯ ಬೆಳಿಗ್ಗೆ ಹಾಸಿಗೆಯಿಂದ ಎದ್ದೇಳಲೇ ಇಲ್ಲ. ಒತ್ತಡ, ವೇದನೆ, ನಿಂದನೆ ಸಹಿಸಿಕೊಳ್ಳುವ ಶಕ್ತಿಯಿಲ್ಲದ ರಮ್ಯಮೇಡಂ ಹೃದಯ ಶಾಂತಗೊಂಡಿತ್ತು. ಅವರು ಮತ್ತೆಂದೂ ಬಾರದ ಲೋಕಕ್ಕೆ ಮರಳಿದ್ದರು..... ರಮ್ಯ ಮೇಡಂರ ಚಿರನದ್ರೆಗೆ ಕಳುಹಿಸಲು ಕಾರಣವಾದವರು ಯಾರು.....? ಯೋಚಿಸಿ.
...................... ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************
ನನ್ನ ಲೇಖನಗಳ ಸಂಗ್ರಹ (ಒಟ್ಟು62) ಪುಸ್ತಕದ ರೂಪದಲ್ಲಿ ಲಭ್ಯವಿದೆ. ಆಸಕ್ತಿಯುಳ್ಳ ಓದುಗರು ಸಂಪರ್ಕಿಸಬಹುದು....... ಯಾಕೂಬ್ ಎಸ್ ಕೊಯ್ಯೂರು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ 
ಮುಖ್ಯ ಶಿಕ್ಷಕರು, 
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************

Ads on article

Advertise in articles 1

advertising articles 2

Advertise under the article