ನಿಷ್ಪಾಪಿ ಸಸ್ಯಗಳು : ಸಂಚಿಕೆ - 38
Thursday, February 22, 2024
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 38
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಪಾಠಗಳು ಮುಗಿದು ಪುನರಾವರ್ತನೆ ನಡೆಸುತ್ತಿರುವ ನಡುವೆ ನಾನು ನನ್ನ ಮೂರನೇ ತರಗತಿಯ ಮಕ್ಕಳಿಗೆ ಒಂದು ಸವಾಲನ್ನು ನೀಡಿದ್ದೆ. ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್ ರವರ ಪ್ರಭಾವಲಯಕ್ಕೆ ಸಿಲುಕಿ ಮಕ್ಕಳಿಗೆ ಏನು ಹೊಸತು ನೀಡೋಣ ಅಂತ ಯೋಚಿಸಿದಾಗ ದಿನವೂ ಐದೈದು ಸಸ್ಯಗಳನ್ನು ಗುರುತಿಸಿ ಎಲೆಗಳನ್ನು ತಂದು ಹೆಸರು ಹೇಳಿದಾಗ ಹತ್ತತ್ತು ಅಂಕಗಳನ್ನು ನೀಡುವುದಾಗಿ ತಿಳಿಸಿ ಗೋಡೆಗೆ ಮಕ್ಕಳ ಹೆಸರು ಬರೆದು ಅಂಟಿಸಿದ್ದೆ. ಮಕ್ಕಳು ಉಲ್ಲಾಸದಿಂದ ಪಾಲ್ಗೊಳ್ಳುತ್ತಿದ್ದಾಗ ಒಂದು ದಿನ ಮಹಮ್ಮದ್ ಹಾಶಿರ್ ಎಂಬ ಹುಡುಗ "ಮುಳ್ಳು ಗುಜ್ಜೆ" ಯ ಎಲೆ ಎಂದು ಒಂದು ಎಲೆಯನ್ನು ತಂದಿದ್ದ. ನನಗೆ ಕೇಳದ ಹೆಸರೊಂದನ್ನು ಕೇಳಿಸಿಕೊಂಡಂತಾಯ್ತು. ಕೆಲ ದಿನಗಳ ಹಿಂದೆ ಪಾಣೆಮಂಗಳೂರಿನ ಶಾರದಾ ಹೈಸ್ಕೂಲ್ ನ ಅಂಗಳದಲ್ಲಿ ನೋಡಿದ್ದ ಗಿಡವನ್ನು ನನ್ನ ಮೆದುಳು ತಾಳೆ ಹಾಕಿತು. ಶಾರದಾ ಹೈಸ್ಕೂಲ್ ನಲ್ಲಿ ಇದ್ದ ಆ ಗಿಡದ ಬಗ್ಗೆ ಪ್ರಶ್ನಿಸಿದಾಗ ವಿದ್ಯಾರ್ಥಿನಿಯೊಬ್ಬಳು ತಂದು ನೆಟ್ಟದ್ದೆಂದು ಅಲ್ಲಿನ ಶಿಕ್ಷಕಿ ಸುಧಾನಾಗೇಶ್ ಕಾಯಿ ತುಂಬಿದ ಸಣಕಲು ಗಿಡವೊಂದನ್ನು ಪರಿಚಯಿಸಿದ್ದರು. ನನಗದು ಲಕ್ಷ್ಮಣ ಫಲವೆಂದು ಅರ್ಥವಾಗಿತ್ತು. ಈಗ ಈ ಮುಳ್ಳು ಗುಜ್ಜೆಯ ಗಿಡದ ಫೋಟೋ ತೆಗೆದು ಕಳಿಸಲು ಹಾಶಿರ್ ನ ಅಮ್ಮನನ್ನು ಕೇಳಿಕೊಂಡೆ. ಹತ್ತು ನಿಮಿಷದೊಳಗೆ ಗಿಡದ ಫೋಟೋ ಕಳಿಸಿದರು.
ಹೌದು, ಅದೂ ಲಕ್ಷ್ಮಣಫಲವೇ ಆಗಿತ್ತು. ಈ ಗಿಡವನ್ನು ಈಗೀಗ ಎಲ್ಲರೂ 'ತಮ್ಮ ಹಿತ್ತಲಲ್ಲಿ ಒಂದು ಗಿಡವಿರಲಿ' ಎಂದು ನೆಡುತ್ತಿದ್ದಾರೆ. ಯಾಕೆಂದು ಬಲ್ಲಿರಾ? 'ಈ ಲಕ್ಷ್ಮಣ ಫಲ ಕ್ಯಾನ್ಸರ್ ಕಾಯಿಲೆಗೆ ರಾಮಬಾಣ' ಎಂಬ ಪ್ರಚಾರ !.
ಸ್ವಲ್ಪ ದಪ್ಪನೆಯ ಗಾಢ ಹಸುರಾದ ಎಲೆಗಳಿರುವ ಲಕ್ಷ್ಮಣ ಫಲ ಬ್ರೆಜಿಲ್ ದೇಶಕ್ಕೆ ಸ್ಥಳೀಯ ಸಸ್ಯವಾದರೂ ಭಾರತದ ಮಹಾರಾಷ್ಟ್ರ, ತಮಿಳುನಾಡುಗಳ ಕಾಡುಗಳಲ್ಲಿ ಬೆಳೆಯುವ ಸಾಮಾನ್ಯ ಸಸ್ಯವಾಗಿದೆ. 20 ರಿಂದ 30 ಅಡಿ ಬೆಳೆಯುವ ಈ ಸಸ್ಯ ವರ್ಷವಿಡೀ ಹೂ, ಮಿಡಿ, ಕಾಯಿ, ಹಣ್ಣುಗಳಿಂದ ಕೂಡಿರುತ್ತದೆ. ಹಣ್ಣು ಸೀತಾಫಲ, ರಾಮಫಲ ಗಳ ಗುಂಪಿಗೆ ಸೇರಿದೆ. ಹಣ್ಣು ಹಸಿರಾಗಿದ್ದು ಮುಳ್ಳು ಗಳಿಂದ ಕೂಡಿದ್ದು ಹೃದಯದಾಕಾರದಲ್ಲಿರುತ್ತದೆ. ಹಣ್ಣೊಂದು ಅರ್ದ ಕಿಲೋ ದಿಂದ ಎರಡು ಮೂರು ಕಿಲೋ ತೂಕವಿರುವುದು ಸಾಮಾನ್ಯವಾದರೂ ಇತ್ತೀಚೆಗೆ ಸಿಗುತ್ತಿರುವ ಕಸಿ ಗಿಡಗಳಲ್ಲಿ 8 ಕಿಲೋ ತೂಗುವ ಹಣ್ಣೂ ದೊರೆಯುತ್ತಿದೆ ಎಂದರೆ ವಿಸ್ಮಯವಲ್ಲವೇ! ಹುಳಿ ಮತ್ತು ಸಿಹಿ ರುಚಿಯ ಹಣ್ಣುಗಳನ್ನು ನೀಡುವ ಎರಡು ಜಾತಿಯಿದೆ. ಸಿಪ್ಪೆ ತೆಳುವಾಗಿದ್ದು ಮುಳ್ಳು ಗಳು ದೂರವಾಗುತ್ತಾ ಹೋಗುವುದು ಬೆಳವಣಿಗೆಯ ಹಂತವಾಗಿದೆ. ಹಸಿರಾಗಿಯೇ ಇರುವುದರಿಂದ ಮೆತ್ತಗಾಗುವುದೇ ಹಣ್ಣಾಗಿದೆ ಎಂಬ ಲಕ್ಷಣವಾಗಿದೆ. ಹಲಸಿನ ಹಣ್ಣಿನ ನಡುವೆ ದಿಂಡು ಇರುವಂತೆ ಇದರೊಳಗೂ ದಿಂಡು ಇದ್ದು ತಿರುಳು ಕೆನೆ ಬಿಳುಪಾಗಿದೆ. ಸೀತಾಫಲದ ಬೀಜಗಳಂತೆ ಕಪ್ಪು, ಕಂದು ಬೀಜಗಳಿರುತ್ತವೆ.
ಇತ್ತೀಚಿನ ಸುಮಾರು ಹತ್ತು ವರ್ಷಗಳಿಂದ ಈ ಹಣ್ಣಿನಲ್ಲಿ ವಿಶೇಷ ಗುಣಗಳಿವೆ ಎಂದು ಜನ ಕಂಡುಕೊಂಡಿದ್ದಾರೆ. ಇದರ ಎಲೆ, ಕಾಯಿ, ತೊಗಟೆಗಳೂ ಔಷಧವಾಗಿದೆ ಮಾತ್ರವಲ್ಲದೆ ಕ್ಷಯ, ಏಡ್ಸ್, ಕ್ಯಾನ್ಸರ್ ನಂತಹ ಕಾಯಿಲೆಗಳಿಗೆ ಔಷಧಿ ಎಂದು ಸ್ವಯಂ ಜನರಿಂದಲೇ ನೇರವಾಗಿ ಬಳಕೆಯಾಗುತ್ತಿದೆ.
ಉತ್ಕರ್ಷಣ ನಿರೋಧ ಗುಣ ಇರುವುದರಿಂದ ರೋಗ ಹರಡಿದ ಜೀವಕೋಶಗಳನ್ನು ನಾಶಪಡಿಸಿ ಆರೋಗ್ಯ ಯುತ ಜೀವಕೋಶದ ರಚನೆಗೆ ಪ್ರಯತ್ನಿಸುವುದರಿಂದ ಮದ್ದಿಗಾಗಿ ಜನ ಹುಡುಕಿಕೊಂಡು ಹೋಗುವಂತಾಗಿದೆ. ಬಾಯಿ ಹುಣ್ಣು, ಮೂತ್ರನಾಳದ ಸೋಂಕು, ರಕ್ತದ ಏರು ಒತ್ತಡ, ಮಧುಮೇಹ, ಸ್ನಾಯುಗಳ ಸೆಳೆತ, ಕೀಲು ನೋವು, ಸುಸ್ತು, ನಿದ್ರಾಹೀನತೆ, ಕೊಲೆಸ್ಟರಾಲ್, ಮೈಗ್ರೇನ್ ಗಳ ಹಿಡಿತಕ್ಕೂ ಈ ಸಸ್ಯದ ಬಳಕೆಯಾಗುತ್ತಿದೆ.
ಹಣ್ಣುಗಳನ್ನು ನೇರವಾಗಿ ಸೇವನೆ ಮಾಡಿದರೆ ಎಲೆಗಳ ಕಷಾಯ, ಲೇಪವನ್ನೂ ಮಾಡುತ್ತಾರೆ. ಎಳೆಯ ಎಲೆಗಳಿಂದ ತಂಬುಳಿ, ಎಲೆಗಳನ್ನು ನೆರಳಿನಲ್ಲಿ ಒಣಗಿಸಿ ಪುಡಿಮಾಡಿಟ್ಟು ಚಹ ದಂತೆಯೂ ಬಳಸುತ್ತಾರೆ. ಕಾಯಿಯಿಂದ ಸಾಂಬಾರು, ಪಲ್ಯ, ದೋಸೆ, ಪೋಡಿ, ಜ್ಯೂಸ್ ಗಳನ್ನೂ ಮಾಡಬಹುದು. ಬೆಂಗಳೂರಿನಲ್ಲಿ ಒಂದು ಗ್ಲಾಸ್ ಜ್ಯೂಸ್ ಗೆ 150.00 ರೂಪಾಯಿ ಗಳಿದ್ದರೆ ಒಂದು ಕೆ.ಜಿ. ಹಣ್ಣಿಗೆ 200.00 ರಿಂದ 300.00 ರುಪಾಯಿ ಗಳಿದೆ. ಬೀಜದಿಂದ ಆಗುವ ಗಿಡದಲ್ಲಿ ಮೂರು ವರ್ಷಗಳು ತುಂಬಿದರೆ ಕಾಯಿಯಾದರೆ ಕಸಿಗಿಡದಲ್ಲಿ ಒಂದೂವರೆ ವರ್ಷಕ್ಕೇ ಕಾಯಿಯಾಗುತ್ತದೆ. ಗಿಡಗಳಿಗೆ ರೋಗ ಬಾಧೆ ಕಡಿಮೆ. ನೀರಿನ ಅವಶ್ಯಕತೆಯೂ ಹೆಚ್ಚೇನಿಲ್ಲ. ವಿಟಮಿನ್ C, ಸೋಡಿಯಂ, ಮೆಗ್ನೀಸಿಯಂ, ಕ್ಯಾಲ್ಸಿಯಂ ಹೆಚ್ಚಾಗಿದ್ದು ಮನುಷ್ಯನಿಗೆ ವರ ರೂಪವಾಗಿ ಕಾಣಿಸಿಕೊಳ್ಳುತ್ತಿರುವ ಈ ನಿಷ್ಪಾಪಿ ಸಸ್ಯವು ಬ್ಯಾಕ್ಟೀರಿಯಾ ನಾಶಕ, ಶಿಲೀಂದ್ರ ನಾಶಕವಾಗಿ ವರ್ತಿಸುವ ಬಗ್ಗೆ ಹೈದರಾಬಾದ್ ಯೂನಿವರ್ಸಿಟಿ ಯಲ್ಲಿ ಹೆಚ್ಚಿನ ಸಂಶೋಧನೆಗಳಾಗುತ್ತಿವೆ. ಇದರ ವೈಜ್ಞಾನಿಕ ಹೆಸರು Annona muricata ಆಗಿದ್ದು Annonaceae. ಕುಟುಂಬಕ್ಕೆ ಸೇರಿದೆ.
ಮಕ್ಕಳೇ, ನೀವೂ ನರ್ಸರಿಯಿಂದ ಒಂದು ಗಿಡ ತಂದು ನೆಟ್ಟು ಬೆಳೆಸಬಹುದು. ಬಲು ಸರಳವಾದ, ಯಾವುದೇ ತೊಂದರೆ ನೀಡದ, ಉಳಿವಿಗಾಗಿ ಅಂಗೈಯಗಲ ಜಾಗವನ್ನು ಮಾತ್ರ ಕೇಳುವ ಹಣ್ಣಿನ ಗಿಡವದು. ಮದ್ದಿಗಲ್ಲವಾದರೂ ಹಣ್ಣು ತಿನ್ನಬಹುದಲ್ಲವೇ?
ಸರಿ ಮಕ್ಕಳೇ, ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.... ನಮಸ್ಕಾರ
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************