-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 15

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 15

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 15
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203

              
ಪ್ರೀತಿಯ ಮಕ್ಕಳೇ....
  ಚಟ್ಟಂಬಡೆ ಚಹಾ ಕುಡಿದು ಮರಳಿ ಬಂದಿದ್ದೀರಿ ಎಂದರೆ ನಮ್ಮ ಹುಟ್ಟಿನ ಬಗ್ಗೆ ತಿಳಿಯಲು ಆಸಕ್ತರಾಗಿದ್ದೀರಿ ಎಂದಾಯಿತು. ಮೊದಲ ಅಮಿನೋ ಆಮ್ಲಗಳ ಹುಟ್ಟು ಹೇಗಾಯಿತು ಎಂಬುದನ್ನು ಯೂರೇ - ಮಿಲ್ಲರ್ ತಮ್ಮ ಪ್ರಯೋಗಗಳ ಮೂಲಕ ಸಾಬೀತು ಪಡಿಸಿದರು. ಎರಡು ವಾರಗಳ ಅವರ ಪ್ರಯೋಗದ ನಂತರ ಅಮಿನೋ ಆಮ್ಲಗಳ ಶೇಷಗಳು ದೊರೆತವು. ಆದರೆ ನಮ್ಮ ಹುಟ್ಟಿನ ವಿಷಯದಲ್ಲಿ ಎರಡು ವಾದಗಳಿದ್ದಾವೇಯೇ ಹೊರತು ಅಂದಿನ ವಾತಾವರಣದ ಮರು ಸೃಷ್ಟಿ ಮಾಡಿ ನಮ್ಮ ಸೃಷ್ಟಿ ಇನ್ನೂ ಸಾಧ್ಯವಾಗಿಲ್ಲ. ಅಲ್ಲದೇ ಆಗ ಅಸ್ತಿತ್ವದಲ್ಲಿದ್ದ ವ್ಯವಸ್ಥೆಯಲ್ಲಿ ಇದು ಸಾಧ್ಯವಾಗುತ್ತಿರಲಿಲ್ಲ ಎಂಬ ತೀವ್ರ ವಿರೋಧ ವಾದವೂ ಇದೆ. ತೀರಾ ಇತ್ತೀಚೆಗೆ ಅಂದರೆ ಎಪ್ರಿಲ್ 2023 ರಲ್ಲಿ ಇನ್ನೊಂದು ವಾದವನ್ನೂ ಮಂಡಿಸಲಾಗಿದೆಯೇ ಹೊರತು ಒಂದು ಒಮ್ಮತಕ್ಕೆ ಬರುವುದು ಸಾಧ್ಯವಾಗಿಲ್ಲ. ಈ ವಾದಗಳನ್ನು ಒಂದೊಂದಾಗಿ ನೋಡೋಣ.

ಹಿಂದಿನಿಂದ ಒಪ್ಪಿಕೊಂಡು ಬಂದಿದ್ದ ಒಂದು ವಾದದ ಪ್ರಕಾರ ಜೀವ ಪೂರ್ವ ಜಗತ್ತಿನಲ್ಲಿ ಪ್ರತ್ಯಾಮ್ಲೀಯ ನೀರಿನ ದ್ರಾವಣದಲ್ಲಿ (basic aqueous solutions) ಲಭ್ಯವಿದ್ದ ಫಾರ್ಮಾಲ್ಡಿಹೈಡ್, ಗ್ಲಿಸೆರಾಲ್ಡಿಹೈಡ್ ಮತ್ತು DL-ಗ್ಲಿಸೆರಾಲ್ಡಿಹೈಡ್ ಗಳ ವೇಗವರ್ಧಿತ (catalytic) ಮತ್ತು ಶಕ್ತಿಯೂಡುವ ಕ್ರಿಯೆಯ (mechanochemical reactions) ಮೂಲಕ ಇಂಗಾಲದ C1 C2 ಮೂಲದಿಂದ ನಡೆಯುವ ಪ್ರೋಮೋಸ್ (promise network) ಜಾಲದಿಂದ ಆರಂಭಿಕ ಮಾನೋಸ್ಯಾಕರೈಡ್ಗಳು ಹುಟ್ಟಿರಬಹುದು ಎನ್ನುವುದು. ಇದಕ್ಕೆ ಅಪಾರ ಪ್ರಮಾಣದ ಚಲನ ಶಕ್ತಿ ಬೇಕಾಗುವುದರಿಂದ ಇವುಗಳನ್ನು ಚಲನಶಕ್ತಿ ವರ್ಧಿತ ರಾಸಾಯನಿಕ ಕ್ರಿಯೆಗಳು (mechanochemical) ಎನ್ನುವುದು. ಈ ಶಕ್ತಿ ಲಭ್ಯವಾಗುವುದು ಭೂ ಕವಚಗಳ ಚಲನೆಯಿಂದ (lithosheric activities) ಎನ್ನಲಾಗಿದೆ. ಈ ಭೂ ಕವಚಗಳ ಚಲನೆಯಿಂದ ಪರ್ವತಗಳ ಉಗಮ, ಸಾಗರ, ಸಾಗರ ಕಂದಕಗಳ ನಿರ್ಮಾಣ ಇತ್ಯಾದಿಗಳು ಸಾಧ್ಯವಾಗಿವೆ. ಆದರೆ ಇವುಗಳ ದಾಖಲೆ ಸಿಗುವುದು ಜೀವ ಉಗಮದ ನಂತರವೇ ಎನ್ನುವುದು ತಳ್ಳಿ ಹಾಕಲಾಗದ ವಾದ. ಆದ್ದರಿಂದ ಈ ರೀತಿ ಆರಂಭಿಕ ಮೂಲ ದ್ರವ್ಯ ಲಭ್ಯವಾಯಿತು ಎಂದು ಸಮರ್ಥಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಅಲ್ಲದೇ ಆಗ ಇವರು ಹೇಳುವ ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಮಾಧ್ಯಮದಲ್ಲಿ ಈ ಕ್ರಿಯೆ ನಡೆಯಲು ಸೊನ್ನೆಗಿಂತ ಕೆಳಗಿನ ಉಷ್ಣತೆ ಬೇಕು ಆದರೆ ಜೀವ ಪೂರ್ವ ಭೂಮಿ ಬಿಸಿಯಾಗಿಯೇ ಇತ್ತು ಮತ್ತು ಭೂಮಿ ಹಿಮಯುಗವನ್ನು ದಾಟಿ ಬಂದಿರುವುದು ಜೀವಾಂಕುರದ ನಂತರವೇ ಎನ್ನುವುದು ಕೂಡಾ ಈ ವಾದಕ್ಕೆ ತೀವ್ರ ಹಿನ್ನಡೆಯಾಯಿತು.

ಇಲ್ಲಿ ಬೇಕಾದ ಚಲನಶಕ್ತಿ ಭೂಕವಚಗಳ ಚಲನೆಯಿಂದಲ್ಲದಿದ್ದರೆ ಭೂಮಿಗೆ ಅಪ್ಪಳಿಸುತ್ತಿದ್ದ ಉಲ್ಕೆಗಳು ಮತ್ತು ಇತರ ಕಾಯಗಳಿಂದ ಉಂಟಾಗಿರಬಹುದು ಎಂಬ ವಾದ ಮುಂದಿಡಲಾಗಿದೆ. ಆದರೂ ಇಲ್ಲಿ ಶೂನ್ಯದಾಚೆಗಿನ ಉಷ್ಣತೆ ವಿವರಣೆಗೆ ಸಿಲುಕಿಲ್ಲ. ಏಕೆಂದರೆ ಸಾಗರಗಳಲ್ಲಿ ಸಮೃದ್ಧವಾಗಿದ್ದ ದ್ರವರೂಪಿ ನೀರು ಬಿಸಿಯಾಗಿಯೇ ಇತ್ತು. ಆದರೆ ಇದು ಹೊಸ ಸಾಧ್ಯತೆಯೊಂದಕ್ಕೆ ದಾರಿ ಮಾಡಿಕೊಟ್ಟಿತು. ಇದಕ್ಕೆ ಸರಿಯಾಗಿ ಈ ಭೂಮಿಯ ಆಚೆಗಿನ ಕಾಯಗಳಲ್ಲಿ (extra terrestrial) ನಾವು ಹುಡುಕಾಡುತ್ತಿರುವ ಸಕ್ಕರೆಯ ಕಣಗಳು ಕಂಡು ಬಂದಿವೆ. ಅಂದರೆ ಈ ಪರ ಕಾಯಗಳ ತಾಡನೆಯಿಂದ ಬಿಡುಗಡೆಯಾದಾಗ ಚಲನಶಕ್ತಿ ಸಕ್ಕರೆ ಸಂಶ್ಲೇಷಣೆಗೆ ಹೇತುವಾಗುವುದಕ್ಕಿಂತ ಅಲ್ಲಿಂದಲೇ ಈ ಮೂಲ ಸಕ್ಕರೆಯ ಅಣುಗಳು ಬಂದು ಬಿದ್ದಿರಬಹುದು ಎನ್ನುವುದು. ಅಂದರೆ ಜೀವ ಮೂಲದ್ರವ್ಯ ಅಂತರಿಕ್ಷದಿಂದ (extra terrestrial) ಲಭ್ಯವಾಯಿತು ಎನ್ನುವುದು ಎರಡನೆಯ ವಾದ. ಅಂದರೆ ಭಾರತೀಯ ಪುರಾಣಗಳಲ್ಲಿ ಇಂತಹ ತತ್ಸಮಾನ ಹೇಳಿಕೆಗಳಿವೆ ಎಂದು ನಿಮಗೆ ಅನ್ನಿಸುತ್ತದೆಯೇ? ಪಾಶ್ಚಿಮಾತ್ಯ ವಿಜ್ಞಾನದ್ದಾದರೆ ವಾದ ಭಾರತೀಯ ಮೂಲದ್ದಾದರೆ ಕಥೆ ಅಥವಾ ಮೂಢನಂಬಿಕೆ ಎನ್ನುವ ತಿಳಿದವರ ವಾದವೊಂದಿದೆ.

ಮೊನ್ನೆ ಮೊನ್ನೆ ಅಂದರೆ ಎಪ್ರಿಲ್ 13, 2023 ರಲ್ಲಿ ಜಾರ್ಜಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ಹೊಸ ವಾದವನ್ನು ಮುಂದಿಟ್ಡಿದೆ‌. ಅವರು formaldehyde ನ ಬದಲಾಗಿ ಗ್ಲೈಆಕ್ಸಿಲೇಟ್ (glyoxylate) ಅನ್ನು ಬಳಸಿಕೊಳ್ಳುತ್ತಾರೆ. ಈ ತಂಡದಲ್ಲಿ ಪ್ರಮುಖರಾಗಿರುವವರು ಭಾರತೀಯ ಮೂಲದ ಶ್ರೀ ರಾಮನಾರಾಯಣ ಕೃಷ್ಣಮೂರ್ತಿ. ಇವರ ಪ್ರಕಾರ ಈ ವರೆಗಿದ್ದ ಪ್ರೋಮೋಸ್ ಜಾಲಕ್ಕಿಂತ ಗ್ಲೈಆಕ್ಸಿಲೋಸ್ ಕ್ರಿಯೆಗಳು ಹೆಚ್ವು ಸರಳ ಮತ್ತು ಆಗಿನ ವಾತಾವರಣದ ಲಭ್ಯ ರಚನೆಗಳು ಹೆಚ್ಚು ಪೂರಕವಾಗಿವೆ ಎನ್ನುತ್ತಾರೆ. ಅಂದಿನ ವಾತಾವರಣದ ಮರು ಸೃಷ್ಟಿ ಮಾಡಿ ಗ್ಲೈಆಕ್ಸಿಲೋಸ್ ಕ್ರಿಯೆಗಳ ಮೂಲಕ ಜೀವನಾವಲಂಬಿ ವಸ್ತುಗಳನ್ನು ನಾವು ಪಡೆಯಬಹುದು ಎಂಬ ಆಶಾವಾದ ಕೃಷ್ಣಮೂರ್ತಿ ಅವರದು.

ಆದ್ದರಿಂದ ಜೀವಿಗಳ ಉಗಮ ಎಂಬುವುದು ಸರಳವಾದ ಪ್ರಕ್ರಿಯೆ ಏನೂ ಅಲ್ಲ.
.................................... ದಿವಾಕರ ಶೆಟ್ಟಿ ಎಚ್
ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 


Ads on article

Advertise in articles 1

advertising articles 2

Advertise under the article