ನಿಷ್ಪಾಪಿ ಸಸ್ಯಗಳು : ಸಂಚಿಕೆ - 37
Wednesday, February 14, 2024
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 37
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಹೇಗಿದ್ದೀರಿ? ಪರೀಕ್ಷೆಯ ತಯಾರಿಗಳು ನಡೆಯುತ್ತಿವೆಯೇ?
ನಾನು ಕಳೆದ ಭಾನುವಾರ ಪುಟ್ಟ ಹೊರಸಂಚಾರಕ್ಕೆ ಹೋಗಿದ್ದೆ. ಅದು ಬ್ರಹ್ಮಾವರದ King of King's ಎಂಬ ಪಿಕ್ನಿಕ್ ಪಾಯಿಂಟ್ ಗೆ. ಅದು ಸೀತಾನದಿ ಅರಬೀ ಸಮುದ್ರ ಸೇರಲು ಧಾವಿಸಿ ಬರುವಂತಹ ಒಂದು ಅಳಿವೆ ಪ್ರದೇಶ. ಅಲ್ಲಿಂದ ಮುಂದೆ ಸೀತಾನದಿ ಸುವರ್ಣಾ ನದಿಯ ಜೊತೆ ಸೇರಿ ಸಂಗಮವಾಗಿ ಸಾಗರ ಸೇರುವುದಂತೆ. ನದಿಯೊಂದು ಸಮುದ್ರಕ್ಕೆ ಸೇರುವ ಜಾಗವನ್ನು ಅಳಿವೆ ಪ್ರದೇಶವೆನ್ನುವರು. ಅಲ್ಲಿ ಹಲವಾರು ದ್ವೀಪಗಳು ಸೃಷ್ಟಿಯಾಗಿದ್ದವು. ಅದರಲ್ಲಿ ನಾವು ಎರಡು ಎಕರೆಯಷ್ಟಿರುವ ಒಂದು ದ್ವೀಪಕ್ಕೆ ಕಾಲಿರಿಸಿದ್ದೆವು. ಅಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ನಾನಾ ರೀತಿಯ ಕಸರತ್ತುಗಳನ್ನು ನಡೆಸಿದ್ದರು. ಅಲ್ಲಿ ನನ್ನ ಗಮನ ಸೆಳೆದುದು ಕಾಂಡ್ಲಾ ಎಂಬ ಸಸ್ಯಗಳು ಹಾಗೂ ಸಮುದ್ರದ ಉಬ್ಬರ ಇಳಿತದ ಆಟಗಳು.
ಕಾಂಡ್ಲಾ, ಮ್ಯಾಂಗ್ರೋವ್ ಅಥವಾ ಕ್ಷಾರ ಸಸ್ಯಗಳೆಂದು ಹೆಸರು ಪಡೆದಿರುವ ಈ ಸಸ್ಯಗಳು ನದಿಯ ದಂಡೆ, ದ್ವೀಪದ ಸುತ್ತಮುತ್ತ, ಜೌಗು ಪ್ರದೇಶ ಹಾಗೂ ಅಳಿವೆ ಬಾಗಿಲಲ್ಲಿ ಮಾತ್ರವೇ ಬೆಳೆಯಬಲ್ಲ ಪರಿಸರದ ಶಿಶು. ನಮ್ಮ ಪಿಕ್ನಿಕ್ ಪಾಯಿಂಟಲ್ಲಿ ಗಿಡಗಳ ಮೇಲೆ ಏಳೆಂಟು ಅಡಿಗಳೆತ್ತರದಲ್ಲಿ ಸಣ್ಣ ಕಟ್ಟಿಗೆಗಳನ್ನು ಒಂದಕ್ಕೊಂದು ಹಗ್ಗದ ಮೂಲಕ ಜೋಡಿಸಿ ಸೇತುವೆಗಳನ್ನು ನಿರ್ಮಾಣ ಮಾಡಿದ್ದರು. ಎಲ್ಲಿ ಹೆಜ್ಜೆ ತಪ್ಪುವುದೋ ಎಂಬ ಭಯವಿದ್ದರೂ ಹಸಿರು ಗಿಡಗಳ ಹೆಗಲೇರಿ ಅವುಗಳ ಕೊಂಬೆ ರೆಂಬೆಗಳ ಆಧಾರ ಹಿಡಿದು ಈ ಗಿಡಗಳ ನಡುವೆ ನಡೆಯುವುದೇ ಒಂದು ಸೊಗಸು...!
ಸಸ್ಯ ಪ್ರಪಂಚದಲ್ಲಿ ಕಾಂಡ್ಲಾ ಸಸ್ಯ ವರ್ಗ ವಿಸ್ಮಯಕಾರಿಯಾಗಿದ್ದು ತುಂಬಾ ವಿಶೇಷವಾದುವುಗಳು. ಸಮುದ್ರದ ಉಪ್ಪುನೀರು ಹಾಗೂ ನದಿಯ ಸಿಹಿನೀರು ಕೂಡುವ ಅಳಿವೆ ಪ್ರದೇಶಗಳಲ್ಲಿ ಇವು ಕಾಣಿಸುವುದು ಹೆಚ್ಚಾಗಿದ್ದು ಇಲ್ಲಿನ ಮಣ್ಣಿನಲ್ಲಿ ಆಕ್ಸಿಜನ್ ಪ್ರಮಾಣ ಕಡಿಮೆಯಿರುತ್ತದೆ. ಇಲ್ಲಿನ ಮಣ್ಣು ಹಾಗೂ ನೀರಿನಲ್ಲಿ ಅಧಿಕಪ್ರಮಾಣದಲ್ಲಿ ಉಪ್ಪಿನಂಶ ಹೊಂದಿದ್ದು ಗಿಡವು ಸಿಹಿನೀರನ್ನು ಬೇರುಗಳಿಂದ ಪಡೆಯಲು ಬೇರುಗಳನ್ನು ಮಾರ್ಪಾಟು ಗೊಳಿಸಿಕೊಂಡಿದೆ. ತಾನು ಪಡೆದ ಲವಣಾಂಶವನ್ನು ತನ್ನ ಎಲೆಗಳ ಹಿಂಭಾಗದಿಂದ ಹರಳುಗಳ ರೂಪದಲ್ಲಿ ಬಿಡುಗಡೆಗೊಳಿಸುತ್ತದೆ. ಇಂಗಾಲದ ಡೈಆಕ್ಸೈಡ್ ನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆದು ಆಕ್ಸಿಜನ್ ಬಿಡುಗಡೆಗೊಳಿಸುತ್ತದೆ.
ಅಳಿವೆ ಹಾಗೂ ಜೌಗಿನಲ್ಲಿ ಬೆಳೆಯುವ ಈ ಸಸ್ಯದ ಬೇರುಗಳು ಮಣ್ಣನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತಾ ಮುಂದಕ್ಕೆ ಸಾಗುತ್ತವೆ. ಇತರ ಸಸ್ಯಗಳಂತೆ ಮಣ್ಣಿನೊಳಗೆ ಬೇರು ಹಾಗೂ ಭೂಮಿಯ ಮೇಲೆ ಕಾಂಡ ಬೆಳೆಯುವ ಸಸ್ಯವಿದಲ್ಲ. ಇದರ ಬೇರುಗಳು ಭೂಮಿಯ ಮೇಲೆಯೇ ನಾಲ್ಕಾರು ಅಡಿಗಳೆತ್ತರವಿದ್ದು ಬೆರಳುಗಳಂತೆ ಗಿಡವನ್ನು ಸುತ್ತುವರಿದು ಆಧಾರ ನೀಡುತ್ತವೆ. ಸಮುದ್ರದ ಉಬ್ಬರ ಇಳಿತ ಗಳಿಂದ ಈ ಬಲಿಷ್ಟ ಬೇರುಗಳು ಗಿಡವನ್ನು ರಕ್ಷಿಸುವುದಲ್ಲದೆ ಮಣ್ಣಿನ ಸವೆತವನ್ನು ತಡೆಯುತ್ತದೆ. ಬಿರುಗಾಳಿ, ಸುನಾಮಿಯಿಂದಲೂ ರಕ್ಷಣೆ ನೀಡುವ ಕಾಂಡ್ಲಾ ಸಸ್ಯವನ್ನು 'ಕರಾವಳೀ ತೀರದ ರಕ್ಷಣಾ ಕವಚ', 'ಕಡಲ ತಡಿಯ ರಕ್ಷಕ' ಎಂದೇ ಪರಿಗಣಿಸಲಾಗಿದೆ.
ಭೂಮಿಯ ಮೇಲಿನ ಶ್ರೇಷ್ಠ ಸಸ್ಯ ಸಂಪತ್ತುಗಳಲ್ಲಿ ಒಂದಾದ ಈ ಕಾಂಡ್ಲಾ ಎಂಬ ನಿಷ್ಪಾಪಿ ಸಸ್ಯದ ಬೇರುಗಳ ನಡುವೆ ಏಡಿ, ಚಿಪ್ಪು, ಕಪ್ಪೆ, ಹಾವು, ಆಮೆ, ಮೀನುಗಳು ಶತ್ರುಕಾಟದಿಂದ ಮುಕ್ತವಾಗಿ ಸದಾ ಕಾಲ ವಿಹರಿಸುತ್ತಾ ತಮ್ಮ ಸಂತಾನೋತ್ಪತ್ತಿ ಯ ವೇದಿಕೆಯನ್ನಾಗಿ ಆಶ್ರಯಿಸಿರುತ್ತವೆ. ಮಾತ್ರವಲ್ಲದೆ ಈ ಸಸ್ಯಗಳ ಸೊಂಪಾದ ಎಲೆ ಹಾಗೂ ರೆಂಬೆಗಳನ್ನು ಬಳಸಿ ವಲಸೆ ಹಕ್ಕಿಗಳು ಸಂಸಾರ ಕಟ್ಟುತ್ತವೆ. ಈ ಹಕ್ಕಿ ಹಿಕ್ಕೆ ಹಾಗೂ ಈ ಮರದ ಎಲೆಗಳು ಗೊಬ್ಬರವಾಗುವುದಲ್ಲದೇ ಜಲಚರಗಳಿಗೆ ಆಹಾರವಾಗುತ್ತವೆ. ಈ ಸಸ್ಯದ ಹಳದಿ ಹೂಗಳು ಜೇನುನೊಣಗಳ ಆಕರ್ಷಣೆಯ ತಾಣಗಳಾಗಿವೆ. ಇದರ ಎಲೆಗಳೆಂದರೆ ಜಾನುವಾರುಗಳಿಗೆ ಬಲು ಪ್ರೀತಿ. ಹೀಗೆ ಜೀವ ವೈವಿಧ್ಯತೆ ರಕ್ಷಣೆಗೆ ಹಾಗೂ ನೈಸರ್ಗಿಕ ವಿಕೋಪ ರಕ್ಷಣೆಗೆ ಪ್ರಕೃತಿಯೇ ರೂಪಿಸಿದ ಈ ವಿಶೇಷ ಸಸ್ಯವನ್ನು ನಾವು ಮನೆಗಳಲ್ಲಿ ಸಾಕಲಾರೆವು. ಉದ್ಯಾನವನಗಳಲ್ಲಿ ಕಾಣಲಾರೆವು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಕಾಂಡ್ಲಾ ಹೇರಳವಾಗಿದೆ. ಬಂಗಾಳದ ಸುಂದರಬನ್ ನಲ್ಲಿರುವ ಕಾಂಡ್ಲಾ ಕಾಡುಗಳನ್ನು ಯುನೆಸ್ಕೋ ಸಂಸ್ಥೆ ಜಾಗತಿಕ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸಿದೆ ಎಂದರೆ ಇದರ ಮಹತ್ವ ಅರ್ಥವಾಗಬಹುದು.
ಆಲದ ಮರದಂತೆ ಕಾಂಡ್ಲಾ ಸಸ್ಯದ ರೆಂಬೆಗಳಲ್ಲಿ ಮೂಡಿದ ಬಿಳಲುಗಳು ಸಸ್ಯದ ಮುಂಚಾಚುವಿಕೆಗೆ ಸಹಾಯಕವಾಗಿದೆ. ಸಸ್ಯವು ವಿಸ್ತಾರವಾಗಿ ಬೆಳೆಯಲು ಸಹಾಯವಾಗುವುದಲ್ಲದೆ ಬೀಜಗಳ ಮೂಲಕವೂ ವಂಶಾಭಿವೃದ್ಧಿ ನಡೆಸುತ್ತದೆ. ಮಕ್ಕಳೇ ಈ ಸಸ್ಯದ ವಂಶಾಭಿವೃದ್ಧಿಯ ಕತೆ ಅದೆಷ್ಟು ರೋಚಕವಾಗಿದೆ ಗೊತ್ತಾ? ತಾಯಿ ಸಸ್ಯದಲ್ಲಿ ಮೂಡುವ ಹಳದಿ ಹೂವಿನಲ್ಲಿ ಕಾಯಿಯೊಂದು ಮೂಡಿ ಬೆಳೆಯುತ್ತದೆ. ಇದು ಬೆಳೆದು ಕೆಳಗೆ ಬಿದ್ದರೆ ನೀರು, ಕೆಸರಿನಲ್ಲಿ ಸಿಕ್ಕಿಕೊಳ್ಳುತ್ತದೆ. ನದಿಯ ಹರಿವಿನಲ್ಲಿ ಬಂದ ಫಲವತ್ತಾದ ಮಣ್ಣು ಬುಡದಲ್ಲಿ ನಿಂತಿದ್ದರೂ ಗಿಡದಿಂದ ಬೀಜ ನೀರಿಗೆ ಬಿದ್ದರೆ ಕೊಳೆಯುವುದು ನಿಶ್ಚಿತ. ಮಾತ್ರವಲ್ಲದೆ ಉಬ್ಬರವಿಳಿತದ ನೀರಿನಾಟದಲ್ಲಿ ಬೀಜಗಳು ಕೊಚ್ಚಿ ಹೋಗಲೂ ಬಹುದು. ಇದನ್ನು ನಿವಾರಿಸಲು ಈ ವಿಸ್ಮಯಕಾರಿ ಗಿಡವು ಬೇಗನೆ ಕಾಯಿಯನ್ನು ಉದುರಿಸುವುದೇ ಇಲ್ಲ. ಮರವನ್ನೇ ಅಪ್ಪಿ ಹಿಡಿದ ಕಾಯಿ ಅಲ್ಲೇ ಚಿಗುರುತ್ತದೆ. ನುಗ್ಗೆ ಕೋಡಿನಂತೆ ಕಾಣಿಸುವ ಗಿಡಗಳು ಕೆಳಗೆ ನೀರಿಗೆ ಬಿದ್ದರೂ ತನ್ನ ಭಾರ ದ ದೆಸೆಯಿಂದ ಬೀಜ ಕೆಳಕ್ಕೆ ಮಣ್ಣಿನಾಳಕ್ಕೆ ಒತ್ತಿ ನಿಂತು ಚಿಗುರು ಮೇಲ್ಮುಖವಾಗುತ್ತದೆ. ಈ ರೀತಿ ಬೀಜ ಮೊಳೆಯುವಿಕೆಯನ್ನು 'ವೈವಿಪರಿ' ಎನ್ನುವರು. ನಡೆದಾಡುವ ಮರಗಳು ಅಥವಾ ವಾಕಿಂಗ್ ಟ್ರೀಸ್ ಎಂದು ಕರೆಸಿಕೊಳ್ಳವ ಕಾಂಡ್ಲಾದ ಮರಿ ಸಸ್ಯಗಳು ಕೆಲವೇ ದಿನಗಳೊಳಗೆ ಬೇರುಗಳನ್ನು ಹರಡಿಸಿ ಆಳಕ್ಕಿಳಿದು ಗಿಡವನ್ನು ಗಾಳಿಗೆ ಬಾಗದಂತೆ, ಇಳಿತಕ್ಕೆ ಜಾರದಂತೆ ರಕ್ಷಿಸಿಕೊಳ್ಳುತ್ತವೆ. ಈ ರೀತಿಯಲ್ಲಿ ಅರಣ್ಯ ಇಲಾಖೆಯೂ ಕೂಡ ಕಾಂಡ್ಲಾ ಸಸಿಗಳನ್ನು ನೆಟ್ಟು ಅದರ ಕಾಡು ಹೆಚ್ಚಿಸುವ ಪ್ರಯತ್ನ ಮಾಡುತ್ತಿದೆ. ಪರಿಸರ ಸಮತೋಲನ ಕಾಯ್ದುಕೊಳ್ಳುವ ಕಾಂಡ್ಲಾ ಮಾನವನಿಗೆ ಪ್ರವಾಸೋದ್ಯಮ ನಡೆಸಲು ಸಹಾಯಕವಾಗಿರುವುದೇ ಅಲ್ಲದೆ ನಿಸರ್ಗಾಧ್ಯಯನ, ಸಸ್ಯ ವೀಕ್ಷಣೆ, ಪಕ್ಷಿ ವೀಕ್ಷಣೆ, ದೋಣಿಯಾನ, ಮೀನು ಹಿಡಿಯಲು ಕೂಡ ಸಹಾಯಕವಾಗಿದೆ. ಸಮುದ್ರ ಕೊರೆತ ತಡೆಗಟ್ಟಲೂ ಕಲ್ಲುಗಳನ್ನು ಸುರಿಯುವ ಬದಲು ಕಾಂಡ್ಲಾ ಬೆಳೆಸಿ ನೈಸರ್ಗಿಕ ತಡೆಗೋಡೆ ನಿರ್ಮಿಸಬಹುದು. ನಾವು ಬೆಳಗ್ಗೆ10 ಗಂಟೆಗೆ ತಲುಪಿದಾಗ ದ್ವೀಪದ ಸುತ್ತಲಿದ್ದ ಕಾಂಡ್ಲಾ ಗಿಡಗಳ ಅಡಿಯಲ್ಲಿ ಒಂದೆರಡು ಅಡಿಗಳಷ್ಟು ನೀರಿದ್ದರೆ ಸಂಜೆ 4 ಗಂಟೆಯ ವೇಳೆಗೆ ನೀರು ಇಳಿತವಾಗಿ ಗಿಡಗಳ ಬೇರಿನೆಡೆಗಳಲ್ಲಿ ಚಿಪ್ಪುಗಳು, ಬಣ್ಣದ ಸುಂದರವಾದ ಪುಟಾಣಿ ಏಡಿಗಳೂ ನಲಿದಾಡುತ್ತಿದ್ದವು. ದಿನಕ್ಕೆರಡು ಬಾರಿ ಉಬ್ಬರ ಇಳಿತವನ್ನು ಕಾಣುವ ಈ ಅಳಿವೆ ಬಾಗಿಲು ಪ್ರತಿ ಅಮವಾಸ್ಯೆ ಹುಣ್ಣಿಮೆಗೆ ವಿಶೇಷ ಉಬ್ಬರಕ್ಕೆ ಒಳಗಾಗುತ್ತದೆ. ಅಮವಾಸ್ಯೆಯಿಂದ ದಿನ ಕ್ಕೆ 45 ನಿಮಿಷಗಳ ಅಂತರದಲ್ಲಿ ಇಳಿತ ಮುಂದುವರಿಯುತ್ತಾ ಸಾಗಿ ಹುಣ್ಣಿಮೆ ತಲುಪುವ ಈ ಸಾಗರದಾಟವೂ ಕಾಂಡ್ಲಾ ಗಿಡಗಳಿಗೆ ಚಿರಪರಿಚಿತ!
ರೈಸೊಪೊರಸಿಯ ಕುಟುಂಬದ ಮ್ಯಾಂಗ್ರೋವ್ ಸಸ್ಯ ರೈಸೊಪೊರ ಪ್ರಭೇದವಾಗಿದೆ. ಮಾನ್ಯತೆ ಪಡೆದ 110 ಜಾತಿಗಳಲ್ಲಿ 16 ಕುಟುಂಬಗಳಿವೆ. ಪಶ್ಚಿಮ ಬಂಗಾಳವು ಪ್ರಪಂಚದ ಹೆಚ್ಚು ಭಾಗ ಕಾಂಡ್ಲಾ ಕಾಡು ಹೊಂದಿದೆ. ದಕ್ಷಿಣಕನ್ನಡ ಜಿಲ್ಲೆಯ ಬೈಕಂಪಾಡಿ ಪ್ರದೇಶದಲ್ಲಿ ಹಿಂದೆ ಯಥೇಚ್ಛವಾಗಿದ್ದ ಕಾಂಡ್ಲಾ ಬೃಹತ್ ಉದ್ಯಮಗಳ ತ್ಯಾಜ್ಯದಿಂದ ವಿನಾಶದತ್ತ ಸಾಗಿದೆ ಎನ್ನಲು ವಿಷಾದಪಡುವಂತಾಗಿದೆ. ಕಾಂಡ್ಲವನ ಸಮೃದ್ಧವಾಗಿದ್ದರೆ ಕಡಲ ಜೀವ ಸಂಪತ್ತಿನ ರಕ್ಷಣೆಯಾಗುವುದು ಎಂಬುದನ್ನೂ ಮರೆತಿದ್ದೇವೆ. ನಾಲ್ಕು ಗೋಡೆಗಳ ನಡುವಿನ ಉಪನ್ಯಾಸಕ್ಕಿಂತ ಇಂತಹ ಹೊರಸಂಚಾರ ನಿಸರ್ಗದ ಶಕ್ತಿಯನ್ನೂ, ವೈಶಿಷ್ಟ್ಯಗಳನ್ನೂ ತಿಳಿದುಕೊಳ್ಳಲು ಒಂದಿಷ್ಟು ಸಹಾಯ ಮಾಡುತ್ತದೆಯಲ್ಲವೇ?
ಸರಿ ಮಕ್ಕಳೇ, ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.... ನಮಸ್ಕಾರ
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************