-->
ಹಕ್ಕಿ ಕಥೆ : ಸಂಚಿಕೆ - 138

ಹಕ್ಕಿ ಕಥೆ : ಸಂಚಿಕೆ - 138

ಹಕ್ಕಿ ಕಥೆ : ಸಂಚಿಕೆ - 138
ಲೇಖಕರು : ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

              
ಎಲ್ಲರಿಗೂ ನಮಸ್ಕಾರ... ಹಕ್ಕಿ ಕಥೆಗೆ ಸ್ವಾಗತ.. ಮೊದಲು ಈ ಒಗಟು ಬಿಡಿಸುತ್ತೀರಾ… 

ಕಪ್ಪು ಬಿಳುಪು ಬಣ್ಣವೆನಗೆ
ಉದ್ದನೆಯ ಬಾಲವೆನಗೆ
ನೆಲದ ಮೇಲೆ ನಡೆವೆನಾನು
ಬಾಲವನ್ನು ಕುಣಿಸುತಿರುವೆನು
ನನ್ನವರಲ್ಲೇ ನಾದೊಡ್ಡವನು
ವಲಸೆಯ ನಾನು ಹೋಗೆನು
ಹೇಳಬಲ್ಲಿರಾ ನಾನ್ಯಾವ ಹಕ್ಕಿ
ಒಂದು ದಿನ ಬೆಳಗ್ಗೆ ನಮ್ಮ ಶಾಲೆಯಲ್ಲಿ ತರಗತಿಗಳು ನಡೆಯುತ್ತಿದ್ದವು. ನಾನು ಆಫೀಸ್ ಕೆಲಸ ಮಾಡ್ತಾ ಶಿಕ್ಷಕರ ಕೊಠಡಿಯಲ್ಲಿ ಕೂತಿದ್ದೆ. ಏನೋ ನೆನಪಾಗಿ ಹೊರಗೆ ಬಂದಾಗ ಶಾಲೆಯ ಮಾಡಿನ ಮೇಲಿಂದ ಯಾವುದೋ ಹಕ್ಕಿ ಕೂಗಿದಂತೆ ಶಬ್ದ ಕೇಳಿತು. ಎಲ್ಲಿಂದ ಇರಬಹುದು ಅಂತ ಹುಡುಕಲು ಪ್ರಾರಂಭಿಸಿದೆ. ಹಂಚಿನ ಮಾಡಿನ ಮೇಲೆ ಒಂದು ತುದಿಯಲ್ಲಿ ಕುಳಿತುಕೊಂಡು ಕೂಗುತ್ತಾ ಇತ್ತು. ನೋಡಿದರೆ ಮಡಿವಾಳ ಇರಬಹುದು ಅನಿಸಿತು. ಆದರೆ ಸ್ವಲ್ಪ ಹೊತ್ತಿನಲ್ಲಿ ಶಾಲೆಯ ಅಂಗಳದಲ್ಲಿ ನೆಲದ ಮೇಲೆ ಅದೇನೋ ಹುಡುಕುತ್ತಾ ಆ ಕಡೆ ಈ ಕಡೆ ಓಡಾಡಲು ಪ್ರಾರಂಭ ಮಾಡಿತು. ಓಡಾಡುವಾಗ ತನ್ನ ಬಾಲವನ್ನು ಕೀಲು ಕುದುರೆ ಕುಣಿತದ ಹಾಗೆ ಡಾನ್ಸ್ ಮಾಡುತ್ತಾ ಓಡಾಡುತ್ತಿತ್ತು. ಇನ್ನೊಂದು ದಿನ ಮತ್ತೆ ಅದೇ ಹಕ್ಕಿ ಕಾಣಲಿಕ್ಕೆ ಸಿಕ್ತು. ಒಂದಿನ ಅಂತೂ ಎರಡು ಹಕ್ಕಿಗಳು ಎರಡು ಪುಟಾಣಿ ಮರಿಗಳ ಜೊತೆ ಶಾಲೆ ಅಂಗಳಕ್ಕೆ ಬಂದಿದ್ದವು. ಅದು ಹೇಗೆ ಅವುಗಳಿಗೆ ಆ ಹೊತ್ತಿನಲ್ಲಿ ಮಕ್ಕಳು ಅಂಗಳದಕ್ಕೆ ಇಳಿಯೋದಿಲ್ಲ ಅಂತ ತಿಳಿಯಿತೋ, ನನಗಂತೂ ಗೊತ್ತಿಲ್ಲ. ಅವತ್ತು ನನ್ನ ಕೈಯಲ್ಲಿ ಕ್ಯಾಮೆರಾನು ಇತ್ತು. ನಿಧಾನಕ್ಕೆ ಅವುಗಳ ಫೋಟೋವನ್ನು ದೂರದಿಂದಲೇ ತಗೊಂಡೆ. ನಾನು ಫೋಟೋ ತೆಗೆಯೋದನ್ನ ನೋಡಿ ಆಮೇಲೆ ಬಂದ ಮಕ್ಕಳು ಸಾರ್ ಅದು ಯಾವ ಹಕ್ಕಿ ಫೋಟೋ ತೆಗೆದಿದ್ದು ತೋರಿಸಿ ಅಂತ ಕೇಳಿದರು. ಅವರಿಗೆ ಹಕ್ಕಿ ಫೋಟೋ ತೋರಿಸಿದೆ. ಹೋ ಇದು ಕುಂಡೆಕುಸ್ಕ ಸಾರ್ ಅಂತ ಹೇಳಬೇಕೇ. ಹುಳುಗಳನ್ನು ಹುಡುಕಿ ತಿನ್ನುವ ಈ ಹಕ್ಕಿ ಸಾಧಾರಣವಾಗಿ ಪೇಟೆ, ಹಳ್ಳಿ, ಕಾಡು ಎಲ್ಲ ಕಡೆ ಕಾಣಲಿಕ್ಕೆ ಸಿಗುತ್ತದೆ. ಈ ಜಾತಿಯ ಉಳಿದ ಹಕ್ಕಿಗಳಿಗಿಂತ ಈ ಹಕ್ಕಿ ಸ್ವಲ್ಪ ದೊಡ್ಡದು. ರೆಕ್ಕೆ ಬಾಲ ತಲೆ ಎಲ್ಲ ಕಪ್ಪು ಬಣ್ಣ, ಹೊಟ್ಟೆಯ ಭಾಗ ಮಾತ್ರ ಬಿಳಿ ಬಣ್ಣ ರೆಕ್ಕೆಯಲ್ಲಿ ಬಾಲದಲ್ಲೂ ಬಿಳಿ ಗರಿಗಳು ಇರುತ್ತವೆ. ವಿಶೇಷ ಅಂದ್ರೆ ಈ ಹಕ್ಕಿಗೆ ಬಿಳಿ ಬಣ್ಣದ ಹುಬ್ಬು ಇದೆ. ಈ ಜಾತಿಯ ಉಳಿದ ಹಕ್ಕಿಗಳೆಲ್ಲ ಮಳೆಗಾಲ ಬಂತು ಅಂದ್ರೆ ಹಿಮಾಲಯದ ತಪ್ಪಲಿಗೆ ವಲಸೆ ಹೋಗಿ ಅಲ್ಲಿ ಸಂತಾನವೃದ್ಧಿ ಮಾಡುತ್ತದೆ. ಆದರೆ ಈ ಹಕ್ಕಿ ವಲಸೆ ಹೋಗುವುದಿಲ್ಲ. ಮಾರ್ಚ್ ನಿಂದ ಸಪ್ಟೆಂಬರ್ ತಿಂಗಳ ನಡುವೆ ಕಲ್ಲಿನ ಸಂಧಿಯಲ್ಲಿ, ಇಲ್ಲ ಕಟ್ಟಡದ ಸಂಧಿಗಳಲ್ಲಿ, ಹಂಚಿನ ಮಾಡಿನ ಸಂಧಿಗಳಲ್ಲಿ ಹುಲ್ಲು ಕೂದಲು ಜೇಡರ ಬಲೆ ಕಸ ಮೊದಲಾದ ವಸ್ತುಗಳನ್ನು ಸೇರಿಸಿ ಪುಟಾಣಿ ಬಟ್ಟಲಿನ ಆಕಾರದ ಗೂಡನ್ನು ಮಾಡಿ ಮೂರರಿಂದ ನಾಲ್ಕು ಮೊಟ್ಟೆ ಇಟ್ಟು ತಮ್ಮ ಮರಿಗಳನ್ನು ಬೆಳೆಸುತ್ತವೆ. ಬಾಲವನ್ನು ಸದಾ ಕುಣಿಸುತ್ತಾ ಓಡಾಡುವ ಈ ಪುಟಾಣಿ ಹಕ್ಕಿಗೆ ನಿಮ್ಮ ಊರಿನಲ್ಲಿ ಏನು ಹೇಳುತ್ತಾರೆ ನಮಗೂ ತಿಳಿಸ್ತೀರಲ್ಲ. ಮುಂದಿನ ವಾರ ಮತ್ತೆ ಸಿಗೋಣ.. 
ಕನ್ನಡದ ಹೆಸರು: ಕಪ್ಪು ಬಿಳಿ ಸಿಪಿಲೆ
ಇಂಗ್ಲಿಷ್ ಹೆಸರು: White-browed Wagtail
ವೈಜ್ಞಾನಿಕ ಹೆಸರು: Motocilla maderaspatensis
ಚಿತ್ರ : ಅರವಿಂದ ಕುಡ್ಲ
ಮುಂದಿನ ವಾರ ಹೊಸತೊಂದು ಹಕ್ಕಿ ಕಥೆಯೊಂದಿಗೆ ಭೇಟಿ ಮಾಡೋಣ. 
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************

Ads on article

Advertise in articles 1

advertising articles 2

Advertise under the article