ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 14
Tuesday, February 6, 2024
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 14
ಲೇಖಕರು : ದಿವಾಕರ ಶೆಟ್ಟಿ ಎಚ್
ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಇರುವಂತಾ ಸ್ಥಳ..?
ಜೀವ ಜಗತ್ತಿನ ಶಕ್ತಿ ಮೂಲ ಯಾರಂತ ಕೇಳಿದ್ದೀರಿ...?
ಶರ್ಕರ ಪಿಷ್ಟಗಳು ಎಂದು ಕೇಳಿದ್ದೇವೆ...
ನಾವೇ ಸರಿ....
ಓಹೋ ಸಿಹಿ ಮೂತ್ರದ ಹೆಸರಿನಲ್ಲಿ ಮನುಜ ಕುಲವನ್ನೇ ಕಂಟಕಕ್ಕೆ ದೂಡಿರುವವರು ದೂಡುತ್ತಿರುವವರು ನೀವೆಯೋ....?
ಏನೆಂದಿರಿ ಸ್ವಾಮಿ? ನಾವು ಸಕ್ಕರೆ ರೋಗವನ್ನುಂಟು ಮಾಡುವವರಲ್ಲ. ನಮ್ಮ ನಿರ್ವಹಣೆ ಸರಿಯಾಗಿ ಮಾಡದೇ ಸಕ್ಕರೆ ರೋಗ ಬರಿಸಿಕೊಂಡವರು ನೀವು. ನಾವು ಜೀವ ಜಾಲದ ಪ್ರಧಾನ ಶಕ್ತಿಯ ಮೂಲಗಳು. ನಮ್ಮನ್ನು ಬಿಟ್ಟರೆ ಕೊಬ್ಬು ಮತ್ತು ಎಣ್ಣೆಗಳು ಮಾತ್ರ ನಿಮಗೆ ಶಕ್ತಿಯನ್ನು ಕೊಡುತ್ತಾರೆ. ಆದರೆ ನಾವು ಬರಿಯ ಶಕ್ತಿಯ ಮೂಲಗಳು ಮಾತ್ರವಲ್ಲ ಜೀವಜಾಲದ ಮೂಲದ್ರವ್ಯ ನ್ಯೂಕ್ಲಿಯಿಕ್ ಆಮ್ಲಗಳು. ನಾವಿಲ್ಲದಿದ್ದರೆ ರಚನೆಯಾಗುವುದು ಸಾಧ್ಯವೇ ಇಲ್ಲ. ಆದ್ದರಿಂದ ಜೀವ ಪ್ರಪಂಚದ ಹುಟ್ಟಿಗೆ ನಾವೇ ಮೂಲಾಧಾರ ಎಂಬ ಸತ್ಯವನ್ನರಿಯದ ನಿಮ್ಮಂತಹ ಮಂದಮತಿಗಳು ಮಧು ಮೇಹದೊಂದಿಗೆ ನಮ್ಮನ್ನು ಜೋಡಿಸಿ ನನ್ನ ಕುಟುಂಬದ ಒಬ್ಬ ಸದಸ್ಯನನ್ನು ಬಿಳಿ ವಿಷ ಎಂದು ನಾಮಕರಣ ಮಾಡಿಬಿಟ್ಟಿದ್ದೀರಿ. ನಾನು ಈಗಲಾದರೂ ಬಂದು ನಮ್ಮವರ ಬಗ್ಗೆ ಹೇಳದೇ ಹೋದರೆ ಜೀವ ಉಗಮದ ಹಾದಿಯಲ್ಲಿ ನಮ್ಮ ಅನನ್ಯತೆಯನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಆದ್ದರಿಂದ ನಮ್ಮ ಬಗ್ಗೆ ತಿಳಿ ಹೇಳಲು ಒಡ್ಡೋಲಗ ನೀಡಿದ್ದೇನೆ. ನಮ್ಮ ವಂಶದಲ್ಲಿ ನಾನೊಬ್ಬನೇ ಅಲ್ಲ ಸ್ವಾಮಿ. ನನ್ನಂತಹ ಪ್ರೌಢರು ಮಕ್ಕಳು ಮರಿಗಳ ಒಂದು ಪರಿವಾರವೇ ಇದೆ. ಇವತ್ತು ಎಲ್ಲರನ್ನೂ ಕರೆದು ಮುಖತಃ ಪರಿಚಯ ಮಾಡಬೇಕೆಂದಿದ್ದೆ. ಅದಕ್ಕೆ ಎಲ್ಲರನ್ನೂ ಕರೆದೆ. ಆದರೆ ಜೀವ ಜಗತ್ತಿನ ಆಧಾರವಾದ ನಾವು ಹಾಳು ಹರಟೆಯಲ್ಲಿ ಸಮಯ ಕಳೆದರೆ ಜೀವ ಜಾಲದ ಉಸಿರೇ ನಿಂತು ಹೋದೀತು ಎಂದು ಬರಲೊಪ್ಪದೇ ಇರುವುದರಿಂದ ನಾನೊಬ್ಬನೇ ಬರಬೇಕಾಯಿತು. ನಮ್ಮವರ ಬದ್ಧತೆಯನ್ನಾದರೂ ನೋಡಿ ನೀವು ಕಲಿಯಿರಿ.
ನಮ್ಮ ರಚನೆ ಅತ್ಯಂತ ಸರಳವಾದದ್ದು. ನಾವು ಕೇವಲ ಇಂಗಾಲ, ಜಲಜನಕ ಮತ್ತು ಆಮ್ಲಜನಕಗಳಿಂದ ರಚಿತವಾಗುವವರು. ನಮ್ಮಲ್ಲಿ ಇರುವ ಇಂಗಾಲದ ಪರಮಾಣುಗಳ ಸಂಖ್ಯೆಯ ಆಧಾರದ ಮೇಲೆ ನಮ್ಮನ್ನು ಗುಂಪು ಸೇರಿಸುತ್ತಾರೆ.
◾3 ಇಂಗಾಲದ ಪರಮಾಣುಗಳಿರುವವ ಟ್ರೈಯೋಸ್ (triyoses)
◾4 ಇದ್ದರೆ ಟೆಟ್ರೋಸಸ್ (tetroses),
◾5 ಇದ್ದರೆ ಪೆಂಟೋಸ್ (pentoses) ಮತ್ತು
◾6 ಇದ್ದರೆ ಹೆಕ್ಸೋಸ್ ಸಕ್ಕರೆ (hexoses). ಜೀವ ಜಾಲದ ನಿರ್ವಹಣೆಯಲ್ಲಿ ಪ್ರಧಾನರಾದವರು 5 ಮತ್ತು 6 ರವರು. ನ್ಯೂಕ್ಲಿಯಿಕ್ ಆಮ್ಲಗಳನ್ನು ರಚಿಸುವ ರೈಬೋಸ್ ಮತ್ತು ಡಿ ಆಕ್ಸಿ ರೈಬೋಸ್ಗಳು ಪೆಂಟೋಸ್ಗಳು ಅದೇ ನಿಮಗೆ ಶಕ್ತಿ ನೀಡುವ ಹಣ್ಣಿನ ಸಕ್ಕರೆ ಫ್ರಕ್ಟೋಸ್, ಧಾನ್ಯದ ಸಕ್ಕರೆ ಗ್ಲುಕೋಸ್, ಹಾಲಿನಲ್ಲಿ ಕಂಡುಬರುವ ಗ್ಯಾಲೆಕ್ಟೋಸ್, ಕಬ್ಬಿನ ಸಕ್ಕರೆ ಸುಕ್ರೋಸ್, ಹಾಲಿನ ಸಕ್ಕರೆ ಲ್ಯಾಕ್ಟೋಸ್, ಸಸ್ಯಗಳಲ್ಲಿ ಸಂಗ್ರಹಗೊಳ್ಳುವ ಪಿಷ್ಟ, ಪ್ರಾಣಿಗಳಲ್ಲಿ ಸಂಚಯಗೊಳ್ಳುವ ಗ್ಲೈಕೋಜನ್, ಬರೆಯುವ ಕಾಗದದ ಮೂಲವಾದ ಸೆಲ್ಯುಲೋಸ್ ಇತ್ಯಾದಿಗಳು ಹೆಕ್ಸೋಸ್ ಗಳು.
ನಮ್ಮಲ್ಲಿ ಇರುವುದು ಕೇವಲ ಮೂರು ಮೂಲವಸ್ತುಗಳಾದರೂ ಅವುಗಳ ಜೋಡಣೆಯ ಆಧಾರದ ಮೇಲೆ ನಮ್ಮ ಗುಣ ಬದಲಾಗುತ್ತಾ ಹೋಗುತ್ತದೆ. ಇದು ಸಾವಯವ ಸಂಯುಕ್ತಗಳ (organic compounds) ಒಂದು ಪ್ರಧಾನ ಲಕ್ಷಣ. ಒಂದು ಅಣುಸೂತ್ರವನ್ನು ಹೊಂದಿದ್ದು ಬೇರೆ ಬೇರೆ ಅಣು ರಚನೆಯನ್ನು ಹೊಂದಿರುವ ಈ ಸಂಯುಕ್ತಗಳನ್ನು ಐಸೋಮರ್ ಗಳೆನ್ನುತ್ತಾರೆ. ಆದ್ದರಿಂದಲೇ ಸಾವಯವ ರಸಾಯನ ಶಾಸ್ತ್ರ (organic chemistry) ಒಂದು ಸಂಕೀರ್ಣ ಕಲಿಕಾ ಶಾಖೆಯಾಗಿರುವುದು. ಉದಾಹರಣೆಗೆ ಗ್ಲುಕೋಸ್ ಮತ್ತು ಫ್ರಕ್ಟೋಸ್ ಗಳ ಅಣು ಸೂತ್ರ C6H12O6 ಆದರೂ ಅವುಗಳ ರಚನೆ ಬೇರೆ. ಆದ್ದರಿಂದ ಅವುಗಳ ಗುಣಗಳೇ ಬೇರೆ ಬೇರೆ.
ನಮ್ಮಲ್ಲಿರುವ ಕ್ರಿಯಾತ್ಮಕ ಗುಂಪುಗಳ (functional groups) ಆಧಾರದ ಮೇಲೆ ಕೂಡಾ ನಮ್ಮ ಗುಣಗಳು ನಿರ್ಧಾರವಾಗುತ್ತವೆ. ನಮ್ಮಲ್ಲಿ ಆಲ್ಡಿಹೈಡ್ ಗುಂಪುಗಳಿದ್ದರೆ (-CHO) ಅಲ್ಡೋಸ್ ಎಂತಲೂ ಕೀಟೋನ್ ಗುಂಪುಗಳಿದ್ದರೆ (-C=O) ಕೀಟೋಸಸ್ ಗಳು ಎನ್ನುವರು. ಗ್ಲುಕೋಸ್ ಒಂದು ಆಲ್ಡೋಸ್ ಆದರೆ ಫ್ರಕ್ಟೋಸ್ ಒಂದು ಕೀಟೋಸ್. ನಮ್ಮಲ್ಲಿ ಸಣ್ಣವರು ಅನೇಕರು ಸೇರಿ ನಮ್ಮಂತಹ ದೊಡ್ಡವರಿಗೆ ಜನ್ಮ ನೀಡುತ್ತಾರೆ. ಅಂದರೆ ಇಲ್ಲಿ ಅಪ್ಪನಿಂದ ಮಕ್ಕಳು ಅಲ್ಲ ಮಕ್ಕಳಿಂದ ಅಪ್ಪ ಅನ್ನುವ ಹಾಗೆ. ಜಲ ವಿಶ್ಲೇಷಣೆಯ (hydrolysis) ಮೂಲಕ ಇನ್ನೂ ಸರಳವಾಗಿ ಒಡೆಯಲಾಗದ ಸದಸ್ಯರನ್ನು ನಾವು ಏಕ ಶರ್ಕರಿಗಳೆನ್ನುತ್ತೇವೆ (manosaccharides). ಗ್ಲುಕೋಸ್, ಫ್ರಕ್ಟೋಸ್ ಮತ್ತು ಗ್ಯಾಲೆಕಟೋಸ್ ಗಳು. ಎರಡು ಏಕಶರ್ಕರಿಗಳು ಜಲಜನಕದ ಬಂಧದ ಮೂಲಕ ಒಂದಾದರೆ ಆಗ ದ್ವಿ ಶರ್ಕರಿಗಳು (disaccharides) ಹುಟ್ಟುತ್ತವೆ. ಅಂದರೆ ಸುಕ್ರೋಸ್ (glucose + fructose), ಲ್ಯಾಕ್ಟೋಸ್(glucose + galactose) ಮತ್ತು ಮಾಲ್ಟೋಸ್ (glucose +glucose) ಗಳು. ಮತ್ತೆ ನಮ್ಮಂತಹ ಅಂದರೆ ಪಿಷ್ಟ (starch), ಗ್ಲೈಕೋಜನ್, ಸೆಲ್ಯುಲೋಸ್ ಗಳಂತಹ ಹೆವಿ ವೇಟ್ ಗಳಲ್ಲಿ ಇಂತಹ ಬಹು ಸಂಖ್ಯೆಯ ಮರಿ ಮಕ್ಕಳಿರುತ್ತಾರೆ. ಒಂದು ಮುತ್ತಿನ ಸರದಲ್ಲಿ ಸಾವಿರಾರು ಮುತ್ತುಗಳಿರುರುತ್ತವಲ್ಲ ಹಾಗೆ. ಆದ್ದರಿಂದ ನಾವು ಬಹು ಶರ್ಕರಿಗಳು (oligosaccharides). ಏಕ ಶರ್ಕರಿಗಳು ಏಕ ಘಟಕಗಳಾದರೆ (manomers) ದ್ವಿ ಶರ್ಕರಿಗಳು ದ್ವಿ ಘಟಕಗಳು (dimers) ಮತ್ತು ನಾವು ಬಹು ಘಟಕಗಳು (polymers). ಈ ಸಣ್ಣ ಸಣ್ಣ ಘಟಕಗಳು ಸೇರಿ ದೊಡ್ಡ ಅಣುಗಳಾಗುವ ಕ್ರಿಯೆಯನ್ನು ಪಾಲಿಮರೀಕರಣ (polymerization) ಎನ್ನುವುದು. ನಿಮಗೆ ತೀರಾ ಪರಿಚಿತವಾದ ಪಾಲಿಥೀನ್, PVC ಗಳೂ ಪಾಲಿಮರ್ ಗಳೇ. ಪಿಷ್ಟ ಮತ್ತು ಸೆಲ್ಯುಲೋಸ್ ಸಸ್ಯ ಮೂಲವಾದರೆ ಗ್ಲೈಕೋಜನ್ ಪ್ರಾಣಿ ಮೂಲದ್ದು. ಈ ಅಣಬೆಗಳು ಗ್ಲೈಕೋಜನ್ ರೂಪದಲ್ಲಿ ಆಹಾರ ಸಂಗ್ರಹಿಸುವುದರಿಂದ ಅವುಗಳನ್ನು ಮಾಂಸಾಹಾರ ಎಂದು ಪರಿಗಣಿಸಲಾಗುತ್ತದೆ.
ಏನೇ ಇರಲಿ ನಮ್ಮ ಏಕ ಶರ್ಕರಿಗಳ ಮೂಲ ಮಾತ್ರ ಸಸ್ಯಗಳೇ. ಸಸ್ಯಗಳಲ್ಲದೇ ನಮ್ಮ ಹುಟ್ಟು ಸುಲಭ ಸಾಧ್ಯವಲ್ಲ. ಹಾಗಾದರೆ ನಿರ್ಜೀವ ಭೂಮಿಯಲ್ಲಿ ನಮ್ಮ ಹುಟ್ಟು ಹೇಗಾಯಿತು ಎಂಬುದೇ ಒಂದು ದೊಡ್ಡ ಪ್ರಶ್ನೆ. ಇದಕ್ಕೆ ಹಲವು ವಾದಗಳಿವೆ. ಆದರೆ ನಿಜ ಯಾವುದು ಯಾರಿಗೂ ಗೊತ್ತಿಲ್ಲ. ಎಲ್ಲಾ ಊಹಾಪೋಹಗಳು.
ಎಲ್ಲರೂ ಚಟ್ಟಂಬಡೆ ಚಹಾ ಕುಡಿದು ಬನ್ನಿ ಒಡ್ಡೋಲಗ ಮುಂದುವರೆಸೋಣ.
ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
********************************************